ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತೇ ಇರಾನ್; ಇಸ್ರೇಲ್ ಮೇಲೆ ಇರಾನ್ ದಾಳಿ ಪರಿಣಾಮಗಳೇನು? ಹೆಚ್ಚಿತು ಯುದ್ಧದ ಭೀತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತೇ ಇರಾನ್; ಇಸ್ರೇಲ್ ಮೇಲೆ ಇರಾನ್ ದಾಳಿ ಪರಿಣಾಮಗಳೇನು? ಹೆಚ್ಚಿತು ಯುದ್ಧದ ಭೀತಿ

ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತೇ ಇರಾನ್; ಇಸ್ರೇಲ್ ಮೇಲೆ ಇರಾನ್ ದಾಳಿ ಪರಿಣಾಮಗಳೇನು? ಹೆಚ್ಚಿತು ಯುದ್ಧದ ಭೀತಿ

ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವ ಇರಾನ್, ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ ಎಂದು ಹೇಳಲಾಗುತ್ತಿದೆ. ಇರಾನ್-ಇಸ್ರೇಲ್‌ ನಡುವಿನ ಯುದ್ಧ ಸನ್ನಿವೇಶವು ಈ 2 ದೇಶಗಳು ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮಹಾಯುದ್ಧದ ಭೀತಿ ಹೆಚ್ಚಿಸಿದೆ. ಇರಾನ್‌ ಮೇಲೆ ತಕ್ಕ ಪ್ರತೀಕಾರ ತೀರಿಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿರುವುದು ಆತಂಕ ಮೂಡಿಸಿದೆ.

ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತೇ ಇರಾನ್; ಇಸ್ರೇಲ್ ಮೇಲೆ ಇರಾನ್ ದಾಳಿ ಪರಿಣಾಮಗಳೇನು?
ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತೇ ಇರಾನ್; ಇಸ್ರೇಲ್ ಮೇಲೆ ಇರಾನ್ ದಾಳಿ ಪರಿಣಾಮಗಳೇನು? (AFP)

ಮಧ್ಯಪ್ರಾಚ್ಯದಲ್ಲಿ ಸದ್ಯ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇಸ್ರೇಲ್ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಯುದ್ಧದ ಆತಂಕ ಹೆಚ್ಚಿಸಿದೆ. ಇದೀಗ ಇರಾನ್ ಮೇಲೆ ಪ್ರತಿದಾಳಿಗೆ ಇಸ್ರೇಲ್ ತಯಾರಿ ನಡೆಸುತ್ತಿದ್ದು, ಇದು ಮೂರನೇ ಮಹಾಯುದ್ಧದ ಆರಂಭ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಮೂರನೇ ಮಹಾಯುದ್ಧ (World War 3) ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಜನರ ನಡುವೆ ಚರ್ಚೆ ಹೆಚ್ಚುತ್ತಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಕುರಿತಂತೆ ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳು ಪ್ರತಿಕ್ರಿಯಿಸಿವೆ.

ಲೆಬನಾನ್‌ನ ರಾಜಧಾನಿ ಬೈರುತ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಸಾವು, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಾಯಕರ ಹತ್ಯೆ ಮತ್ತು ದಾಳಿಗೆ ಪ್ರತೀಕಾರವಾಗಿ ಇರಾನ್ ಕೂಡಾ ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಆರಂಭಿಸಿತು. ಇದರಿಂದ ಮಧ್ಯಪ್ರಾಚ್ಯದಲ್ಲಿ ಅಕ್ಟೋಬರ್‌ 1ರ ಮಂಗಳವಾರ ರಾತ್ರಿ ಸಂಘರ್ಷ ತೀವ್ರಗೊಂಡಿದೆ. ಈ ದಾಳಿಯು ಇಸ್ರೇಲ್‌ನಾದ್ಯಂತ ವ್ಯಾಪಕ ಕೋಲಾಹಲಕ್ಕೆ ಕಾರಣವಾಯಿತು. ಜನಸಾಮಾನ್ಯರು ಜೀವಭಯದಲ್ಲಿದ್ದರೆ, ಹಲವು ನಾಗರಿಕರು ಸುರಕ್ಷಿತ ಬಂಕರ್‌ಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಇರಾನ್‌ನ ಕ್ಷಿಪಣಿ ದಾಳಿಯಿಂದಾಗಿ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಕೂಡ ಬಂಕರ್‌ನಲ್ಲಿ ಆಶ್ರಯ ಪಡೆದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಪ್ರತೀಕಾರದ ದಾಹ ಹೆಚ್ಚಿಸಿದೆ.

ಸೇಡು ತೀರಿಸಿಕೊಳ್ಳದೆ ಬಿಡಲ್ಲ

ಈ ದಾಳಿಗೆ ತಕ್ಕ ಪ್ರತೀಕಾರ ತೀರಿಸಿಯೇ ಬಿಡ್ತೇವೆ. ಪ್ರತಿ ದಾಳಿಯು ಸರಿಯಾದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಆಗಲಿದೆ. ಇರಾನ್‌ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಇಸ್ರೇಲ್ ಘೋಷಿಸಿದೆ. ಒಂದು ವೇಳೆ ದಾಳಿಗೆ ಪ್ರತೀಕಾರ ತೀರಿಸಿಕೊಂಡರೆ ಇಸ್ರೇಲ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಅನಿವಾರ್ಯ ಎಂದು ಇರಾನ್ ಕೂಡಾ ಎಚ್ಚರಿಕೆ ನೀಡಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಆರಂಭವಾದ ಉದ್ವಿಗ್ನತೆಯು ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವಾಗಿ ಪ್ರಾರಂಭವಾದರೂ, ಕ್ರಮೇಣ ಜಗತ್ತಿನಾದ್ಯಂತ ಹರಡಿ ಮೂರನೇ ಮಹಾಯುದ್ಧವಾಗಿ ಪರಿಣಮಿಸುತ್ತದೆ ಎಂಬ ಆತಂಕ ಶುರುವಾಗಿದೆ. ದಾಳಿ-ಪ್ರತಿದಾಳಿ ಎಂಬ ಕೂಗು ಜನಸಾಮಾನ್ಯರಲ್ಲಿ ಭೀತಿ ಹೆಚ್ಚಿಸಿದೆ.

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಪ್ರಸ್ತುತ ಇರಾನ್‌ನ ಕ್ಷಿಪಣಿ ದಾಳಿಯನ್ನು ಗಮನಿಸುತ್ತಿವೆ. ಅದಕ್ಕೆ ತಕ್ಕ ಉತ್ತರ ಸಿದ್ಧಪಡಿಸುತ್ತಿವೆ ಎಂದು ಭಾರತದಲ್ಲಿನ ಇಸ್ರೇಲಿ ರಾಯಭಾರ ಕಚೇರಿಯ ವಕ್ತಾರ ಗೈ ನಿರ್ ಹೇಳಿದ್ದಾರೆ. ಇರಾನ್ ಏನಾದರೂ ಇಸ್ರೇಲ್‌ನೊಂದಿಗೆ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಲು ಬಯಸಿದರೆ, ಅದು ಇರಾನ್‌ ದೇಶಕ್ಕೆ ಭಾರಿ ನಷ್ಟವನ್ನು ಉಂಟುಮಾಡುತ್ತದೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಅಲ್ಲದೆ ಇಸ್ರೇಲ್‌ನ ಮೇಲೆ ದಾಳಿ ನಡೆಸಲು ಇರಾನ್ ಜೊತೆ ಸೇರುವ ಇತರ ದೇಶಗಳಿಗೂ ನಿರ್ ಎಚ್ಚರಿಕೆ ನೀಡಿದ್ದಾರೆ. ಅವರಿಗೂ ಇದರ ಫಲಿತಾಂಶ ವಿನಾಶಕಾರಿಯಾಗಲಿದೆ ಎಂದು ಸಂದೇಶ ರವಾನಿಸಿದ್ದಾರೆ.

ಇಸ್ರೇಲ್‌ಗೆ ವಿಶ್ವದ ದೊಡ್ಡಣನ ನೆರವು

ಇರಾನ್ ಕ್ಷಿಪಣಿ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್‌ನ ಬಹುಕಾಲದ ಮಿತ್ರ ರಾಷ್ಟ್ರವಾಗಿರುವ ಅಮೆರಿಕ ಕೂಡಾ ದೇಶಕ್ಕೆ ಸೇನಾ ನೆರವು ನೀಡಲು ಸಿದ್ಧವಾಗಿದೆ. ಕ್ಷಿಪಣಿಗಳನ್ನು ನಾಶಪಡಿಸಲು ಸಹಾಯ ಮಾಡುವ ವ್ಯವಸ್ಥೆಯನ್ನು ಇಸ್ರೇಲ್‌ಗೆ ಒದಗಿಸಲು ಯುಎಸ್ ಮುಂದಾಗಿದೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ಅಮೆರಿಕದ ಶ್ವೇತಭವನ ತಿಳಿಸಿದೆ. ಇಸ್ರೇಲ್‌ಗೆ ಗುರಿಯಾಗಿಸಿರುವ ಕ್ಷಿಪಣಿಗಳನ್ನು ಹೊಡೆದುರುಳಿಸಲು ಅಧ್ಯಕ್ಷ ಬಿಡೆನ್ ಯುಎಸ್ ಮಿಲಿಟರಿಗೆ ಆದೇಶಿಸಿದ್ದಾರೆ ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್

ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ 'ಮೂರನೆಯ ಮಹಾಯುದ್ಧ' ಹ್ಯಾಷ್‌ಟ್ಯಾಗ್‌ಗಳು ಹೆಚ್ಚುತ್ತಿವೆ. ಮೂರನೇ ಮಹಾಯುದ್ಧ (World War 3) ನಡೆಯುವ ಸುಳಿವು ಸಿಕ್ಕಿದೆ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಮೂರನೇ ಯುದ್ಧಕ್ಕೆ ಆಹ್ವಾನ ನೀಡಿದೆ. ಇದಕ್ಕೆ ನೆತನ್ಯಾಹು ಶೀಘ್ರದಲ್ಲೇ ಉತ್ತರ ನೀಡಲಿದ್ದು, ಈ ಯುದ್ಧ ಮಾನವ ನಾಗರಿಕತೆಗೆ ಮಾರಕವಾಗಲಿದೆ ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದಾರೆ. ‘ಒಂದು ಕ್ಷಿಪಣಿ ದಾಳಿಯಿಂದ ಇಸ್ರೇಲ್ ದೇಶವನ್ನು ಸೋಲಿಸಬಹುದು ಎಂದು ಇರಾನ್ ಭಾವಿಸಿದರೆ ಅದು ಭ್ರಮೆಯಾಗುತ್ತದೆ. ಇಸ್ರೇಲ್ ಈಗ ಬಹಳ ದೊಡ್ಡ ಶಕ್ತಿಯಾಗಿದ್ದು, ಅದರ ಬೆನ್ನಿಗೆ ಅಮೆರಿಕ ನಿಂತಿದೆ’ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.