Right To Abortion: ಗರ್ಭಪಾತದ ಹಕ್ಕು, ಸಂವಿಧಾನದ ಚೌಕಟ್ಟಿಗೆ ತಂದ ಜಗತ್ತಿನ ಮೊದಲ ದೇಶ ಫ್ರಾನ್ಸ್‌; 780 ಶಾಸನ ಪ್ರತಿನಿಧಿಗಳ ಬೆಂಬಲ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Right To Abortion: ಗರ್ಭಪಾತದ ಹಕ್ಕು, ಸಂವಿಧಾನದ ಚೌಕಟ್ಟಿಗೆ ತಂದ ಜಗತ್ತಿನ ಮೊದಲ ದೇಶ ಫ್ರಾನ್ಸ್‌; 780 ಶಾಸನ ಪ್ರತಿನಿಧಿಗಳ ಬೆಂಬಲ

Right To Abortion: ಗರ್ಭಪಾತದ ಹಕ್ಕು, ಸಂವಿಧಾನದ ಚೌಕಟ್ಟಿಗೆ ತಂದ ಜಗತ್ತಿನ ಮೊದಲ ದೇಶ ಫ್ರಾನ್ಸ್‌; 780 ಶಾಸನ ಪ್ರತಿನಿಧಿಗಳ ಬೆಂಬಲ

ಫ್ರಾನ್ಸ್ ತನ್ನ ಸಂವಿಧಾನದಲ್ಲಿ ಗರ್ಭಪಾತದ ಹಕ್ಕನ್ನು ಪ್ರತಿಪಾದಿಸಿದೆ, ಐತಿಹಾಸಿಕ ಕ್ರಮವನ್ನು ಗರ್ಭಪಾತ ವಿರೋಧಿ ಗುಂಪುಗಳು ತೀವ್ರವಾಗಿ ಟೀಕಿಸಿವೆ, ಜಂಟಿ ಮತದಾನದಲ್ಲಿ 72 ವಿರುದ್ಧ 780 ಮತಗಳಿಂದ ಬೆಂಬಲಿಸಲಾಗಿದೆ. ಈ ಕಾನೂನು ಮಹಿಳೆಯರಿಗೆ ಗರ್ಭಪಾತವನ್ನು ಆಶ್ರಯಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ.

ಫ್ರಾನ್ಸ್‌ ಸಂಸತ್ತಿನ ಜಂಟಿ ವಿಶೇಷ ಅಧಿವೇಶನದಲ್ಲಿ ಸದಸ್ಯರು ಗರ್ಭಪಾತದ ಹಕ್ಕು ಮಸೂದೆ ಅಂಗೀಕರಿಸಿದ ಸಂದರ್ಭ.
ಫ್ರಾನ್ಸ್‌ ಸಂಸತ್ತಿನ ಜಂಟಿ ವಿಶೇಷ ಅಧಿವೇಶನದಲ್ಲಿ ಸದಸ್ಯರು ಗರ್ಭಪಾತದ ಹಕ್ಕು ಮಸೂದೆ ಅಂಗೀಕರಿಸಿದ ಸಂದರ್ಭ. (AFP)

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women's Day) ಗೆ ಕೆಲವೇ ದಿನಗಳಿಗೆ ಮುನ್ನ, ಫ್ರಾನ್ಸ್ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಹೌದು, ಗರ್ಭಪಾತದ ಹಕ್ಕು (Right To Abortion) ಫ್ರಾನ್ಸ್‌ನಲ್ಲಿ ಇನ್ನು ಸಾಂವಿಧಾನಿಕ ಹಕ್ಕು. ಅಲ್ಲಿನ ಸಂಸತ್ತಿನ ಉಭಯ ಸದನಗಳ ವಿಶೇಷ ಜಂಟಿ ಮತದಾನದಲ್ಲಿ 780 ಸದಸ್ಯರು (ಸೆನೆಟರ್‌ಗಳು ಮತ್ತು ಸಂಸದರು) ಮಸೂದೆ ಪರವಾಗಿ ಮತದಾನ ಮಾಡಿದರೆ, 72 ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದರೊಂದಿಗೆ, ತನ್ನ ಸಂವಿಧಾನದಲ್ಲಿ ಗರ್ಭಪಾತದ ಹಕ್ಕು (Abortion a constitutional right) ಪ್ರತಿಪಾದಿಸಿದ ಜಗತ್ತಿನ ಮೊದಲ ದೇಶವಾಗಿ ಫ್ರಾನ್ಸ್ ಹೆಜ್ಜೆ ಗುರುತು ಮೂಡಿಸಿತು.

ಫ್ರಾನ್ಸ್‌ನ ಸಂಸತ್‌ನಲ್ಲಿ ಸಂವಿಧಾನದ 34ನೇ ವಿಧಿಯಲ್ಲಿ ಗರ್ಭಪಾತದ ಹಕ್ಕು ಸೇರಿಸುವ ಮಸೂದೆ ಕುರಿತು ಚರ್ಚೆಯ ಬಳಿಕ ಸೋಮವಾರ ಮತದಾನ ನಡೆಯಿತು. ಹೊಸದಾಗಿ ಸೇರ್ಪಡೆ ಮಾಡಿದ ಅಂಶಗಳಲ್ಲಿ, “ಗರ್ಭಪಾತವನ್ನು ಆಶ್ರಯಿಸಲು ಮಹಿಳೆಗೆ ಖಾತರಿಪಡಿಸಿದ ಸ್ವಾತಂತ್ರ್ಯವನ್ನು ಹೊಂದಿರುವ ಪರಿಸ್ಥಿತಿಗಳನ್ನು ಕಾನೂನು ನಿರ್ಧರಿಸುತ್ತದೆ” ಎಂಬ ಉಲ್ಲೇಖವಿದೆ ಎಂದು ವರದಿ ಹೇಳಿದೆ.

ಈ ಮತದಾನದಕ್ಕೆ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ, ಪ್ರಧಾನಿ ಗೇಬ್ರಿಯಲ್ ಅಟ್ಟಲ್‌, “ಮಹಿಳೆಯರೇ ನಿಮ್ಮ ಶರೀರ ನಿಮ್ಮ ಹಕ್ಕು. ನಿಮ್ಮ ಶರೀರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಬೇರೆ ಯಾರೋ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಸಂದೇಶವನ್ನು ಎಲ್ಲ ಮಹಿಳೆಯರಿಗೂ ರವಾನಿಸುತ್ತಿದ್ದೇವೆ” ಎಂದು ಹೇಳಿದ್ದರು.

ಫ್ರಾನ್ಸ್‌ 1974ರಲ್ಲೇ ಚಾಲ್ತಿಗೆ ತಂದಿದೆ ಗರ್ಭಪಾತದ ಕಾನೂನು ಹಕ್ಕು

ಗರ್ಭಪಾತದ ಹಕ್ಕಿಗೆ ಸಂಬಂಧಿಸಿದ ಕಾನೂನನ್ನು ಫ್ರಾನ್ಸ್ 1974ರಲ್ಲೇ ಜಾರಿಗೊಳಿಸಿತ್ತು. ಇದು ತೀವ್ರವಾದ ಟೀಕೆಗೂ ಗುರಿಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಅಮೆರಿಕದಲ್ಲಿ 1973ರಲ್ಲಿ ರೋ ವರ್ಸಸ್ ವೇಡ್ ಕೇಸ್‌ (Roe v. Wade Case)ನ ತೀರ್ಪು. ಇದು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಕಾನೂನು ಗರ್ಭಪಾತಕ್ಕೆ ಚೌಕಟ್ಟನ್ನು ಸ್ಥಾಪಿಸಿತು. ಆದರೆ 2022 ರಲ್ಲಿ, ಅಮೆರಿಕನ್‌ ನ್ಯಾಯಾಲಯವು 1973ರ ನಿರ್ಧಾರವನ್ನು ರದ್ದುಗೊಳಿಸಿತು, ದಶಕಗಳಿಂದ ನೀಡಲಾಗಿದ್ದ ಸಾಂವಿಧಾನಿಕ ರಕ್ಷಣೆಯನ್ನು ಹಿಂತೆಗೆದುಕೊಂಡಿತು.

ಈ ವಿದ್ಯಮಾನವು ಫ್ರಾನ್ಸ್‌ನಲ್ಲಿ ಗರ್ಭಪಾತದ ಹಕ್ಕು ಸಾಂವಿಧಾನಿಕವಾಗಿ ಮಹಿಳೆಯರಿಗೆ ಸಿಗಬೇಕು ಎಂಬ ಬೇಡಿಕೆ ಹೆಚ್ಚಾಗುವಂತೆ ಮಾಡಿತು. ಫ್ರಾನ್ಸ್‌ನ ಚುನಾಯಿತ ಜನಪ್ರತಿನಿಧಿಗಳ ಪೈಕಿ ಬಹುಪಾಲು ಸ್ಪಂದಿಸಿದರು. ಈ ಸ್ಪಂದನೆಯ ಫಲವೇ ಸೋಮವಾರ ಸಂಸತ್ತಿನ ಜಂಟಿ ವಿಶೇಷ ಮತದಾನದಲ್ಲಿ 782 ಸದಸ್ಯರು ಮಸೂದೆ ಪರವಾಗಿ ಮತ ಚಲಾಯಿಸಿದ್ದು.

ನನ್ನ ಶರೀರ ನನ್ನ ಆಯ್ಕೆ ಸಂದೇಶ ರವಾನೆ; ಪ್ಯಾರಿಸ್‌ನಲ್ಲಿ ಸಂಭ್ರಮಾಚರಣೆ

ಫ್ರಾನ್ಸ್ ಸಂಸತ್ತು ಐತಿಹಾಸಿಕ ತೀರ್ಮಾನ ಪ್ರಕಟಿಸುತ್ತಿದ್ದಂತೆ, ಗರ್ಭಪಾತ ಹಕ್ಕುಗಳ ಕಾರ್ಯಕರ್ತರು ಐಫೆಲ್ ಟವರ್ ಬಳಿ ಸೇರಿ ಹರ್ಷೋದ್ಗಾರ ಮಾಡಿದರು. ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಸಂಸತ್ತಿನ ವಿಶೇಷ ಜಂಟಿ ಮತದಾನ ವೀಕ್ಷಣೆಗೆ ಬೃಹತ್ ಪರದೆ ಹಾಕಲಾಗಿತ್ತು. ಅದರಲ್ಲಿ ಫಲಿತಾಂಶ ಪ್ರಕಟವಾಗುತ್ತಲೇ ಕಾರ್ಯಕರ್ತರು "ನನ್ನ ಶರೀರ ನನ್ನ ಆಯ್ಕೆ (MyBody MyChoice) ಸಂದೇಶ ಫಲಕಗಳನ್ನು ಪ್ರದರ್ಶಿಸಿದರು.

ಫಾಂಡೇಶನ್ ಡೆಸ್ ಫೆಮ್ಮೆಸ್ ಹಕ್ಕುಗಳ ಗುಂಪಿನ ಲಾರಾ ಸ್ಲಿಮಾನಿ ಇದೇ ಸಂದರ್ಭದಲ್ಲಿ ಮಾತನಾಡಿದ್ದು, “ಗರ್ಭಪಾತದ ಈ ಹಕ್ಕನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹಿಂಪಡೆಯಲಾಗಿದೆ. ಆದರೆ ಫ್ರಾನ್ಸ್‌ನಲ್ಲಿ ಹಾಗಿಲ್ಲ. ನಮಗೆ ಈಗ ಆ ಅಪಾಯವಿಲ್ಲ. ಈ ಹಿಂದೆ ಅಂತಹ ಅಧಿಕಾರ ನಮಗೆ ಇರಲಿಲ್ಲ. ಸ್ತ್ರೀವಾದಿ ಕಾರ್ಯಕರ್ತೆಯಾಗಿ, ಮಹಿಳೆಯಾಗಿ ನಮಗೂ ಸಾಕಷ್ಟು ಭಾವನೆಗಳಿವೆ. ಅದನ್ನು ಸರ್ಕಾರ ಗೌರವಿಸಿದೆ” ಎಂದು ಹೇಳಿದರು.

ಮಹಿಳಾ ಹಕ್ಕುಗಳ ಪ್ರತಿಪಾದನೆಯಲ್ಲಿ ಫ್ರಾನ್ಸ್ ಮುಂಚೂಣಿಯಲ್ಲಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾಗಿ ಅವರ ಪ್ರತಿನಿಧಿ ಕೆಳಮನೆಯ ಮುಖ್ಯಸ್ಥ ಯಾಯೆಲ್ ಬ್ರೌನ್ ಪಿವೆಟ್ ಹೇಳಿದ್ದಾಗಿ ರಾಯ್ಟರ್ಸ್ ವರದಿ ಹೇಳಿದೆ.

ಇದೇ ವೇಳೆ, ದೇಶದಲ್ಲಿ ಗರ್ಭಪಾತದ ಹಕ್ಕು ಪ್ರತಿಪಾದಿಸುವ ಜನರ ಸಂಖ್ಯೆ ಹೆಚ್ಚಿರುವ ಕಾರಣ ಮ್ಯಾಕ್ರನ್ ರಾಜಕೀಯ ಲಾಭ ಗಳಿಸಲು ಇದನ್ನು ಬಳಸುತ್ತಿದ್ದಾರೆ ಎಂದು ಬಲಪಂಥೀಯ ನಾಯಕ ಮರೀನ್ ಲೆ ಪೆನ್ ಟೀಕಿಸಿದು.

ಕ್ಯಾಥೊಲಿಕ್ ಕುಟುಂಬಗಳ ಸಂಘದ ಅಧ್ಯಕ್ಷ ಪಾಸ್ಕಲ್ ಮೊರಿನಿಯರ್ ಈ ಕ್ರಮವನ್ನು ಗರ್ಭಪಾತ ವಿರೋಧಿ ಪ್ರಚಾರಕರಿಗೆ ಸೋಲು ಎಂದು ಕರೆದಿದ್ದು, "ಇದು ಮಹಿಳೆಯರಿಗೆ ಮತ್ತು ದಿನವನ್ನು ನೋಡಲು ಸಾಧ್ಯವಾಗದ ಎಲ್ಲಾ ಮಕ್ಕಳಿಗೆ ಸೋಲು" ಎಂದು ಹೇಳಿದರು.

(ರಾಯಿಟರ್ಸ್ ಮಾಹಿತಿಯೊಂದಿಗೆ)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.