Guinness World Records: ಹೈ ಹೀಲ್ಸ್ ಧರಿಸಿ ವೇಗವಾಗಿ 100 ಮೀಟರ್ ಓಡಿ ಗಿನ್ನೆಸ್ ದಾಖಲೆ ಬರೆದ ವ್ಯಕ್ತಿ; ವಿಡಿಯೋ ನೋಡಿ
Guinness World Records: ಸ್ಪೇನ್‌ನ ವ್ಯಕ್ತಿಯೊಬ್ಬರು ಹೈ ಹೀಲ್ಸ್ ಧರಿಸಿ 100 ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಹೀಲ್ಸ್ ಧರಿಸಿ ನಡೆಯುವುದೇ ಕಷ್ಟ. ಅದರಲ್ಲೂ ಸಮತಟ್ಟಿಲ್ಲದ ಜಾಗದಲ್ಲಿ ನಡೆಯುವುದೆಂದರೆ ಮಹಿಳೆಯರು ಕಷ್ಟಪಡುತ್ತಾರೆ. ಸಾಮಾನ್ಯವಾಗಿ ಪಾರ್ಟಿ, ಗೆಟ್ ಟುಗೆದರ್ ಇರುವಂತಹ ಸಾಮಯದಲ್ಲಿ ಮಾತ್ರ ಸ್ತ್ರೀಯರು ಹೈ ಹೀಲ್ಸ್ ಧರಿಸುತ್ತಾರೆ. ಆದರೆ, ಪ್ರತಿ ಹೆಜ್ಜೆಯನ್ನು ಕೂಡಾ ಸೂಕ್ಷ್ಮವಾಗಿರಿಸಿ ಕೆಳಗೆ ಬೀಳದಂತೆ ಸಮತೋಲನ ಕಾಪಾಡಿಕೊಂಡು ನಡೆಯಬೇಕಾಗುತ್ತದೆ. ಇನ್ನೂ ಕೆಲವು ಮಹಿಳೆಯರು ಹೈ ಹೀಲ್ಸ್ ಧರಿಸಿ ನಡೆಯಲು ಕಷ್ಟವಾಗುತ್ತದೆ ಎಂದು ಅದನ್ನು ಧರಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಪುರುಷ ಹೈ ಹೀಲ್ಸ್ ಧರಿಸಿ ವೇಗವಾಗಿ ಓಡಿ ದಾಖಲೆ ಮಾಡಿದ್ದಾರೆ.
ಹೌದು, ಹೈ ಹೀಲ್ಸ್ ಧರಿಸಿ ವೇಗದ ಓಟದ ಸಾಧನೆ ಮಾಡಿರುವುದು ಮಹಿಳೆಯಲ್ಲ. ಒಬ್ಬ ಪುರುಷ. ಈ ವ್ಯಕ್ತಿಯ ಹೆಸರು ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೋಡ್ರಿಗಸ್ (Christian Roberto López Rodríguez). ಸ್ಪೇನ್‌ನ 34 ವರ್ಷದ ಈ ವ್ಯಕ್ತಿ ಹೈ ಹೀಲ್ಸ್ ಧರಿಸಿ 100 ಮೀಟರ್ ಓಡಿ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡಾ ಗಿನ್ನೆಸ್ ದಾಖಲೆ.
ಬರಿಗಾಲಿನಲ್ಲಿ ಅಥವಾ ಶೂ ಧರಿಸಿ ವೇಗವಾಗಿ ಓಡಿ ಗುರಿ ಮುಟ್ಟುವುದು ಕಷ್ಟ. ಆದರೆ, ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೋಡ್ರಿಗಸ್, ಹೈ ಹೀಲ್ಸ್ ಧರಿಸಿಕೊಂಡು ಕೇವಲ 12.82 ಸೆಕೆಂಡುಗಳಲ್ಲಿ ನೂರು ಮೀಟರ್ ಕ್ರಮಿಸಿ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಜಗತ್ತಿನ ವೇಗದ ಓಟಗಾರ ಎಂಬ ದಾಖಲೆ ಬರೆದಿರುವ ಉಸೇನ್ ಬೋಲ್ಟ್ ಅವರ 100 ಮೀಟರ್ ಸ್ಪ್ರಿಂಟ್ ವಿಶ್ವ ದಾಖಲೆಗಿಂತ ಕೇವಲ 3.24 ಸೆಕೆಂಡುಗಳಷ್ಟು ಮಾತ್ರ ಕ್ರಿಶ್ಚಿಯನ್ ಹಿಂದಿದ್ದಾರೆ ಎಂಬುದು ಅಚ್ಚರಿಯ ವಿಷಯ. ಹೈ ಹೀಲ್ಸ್ ಧರಿಸಿ ಓಡಿರುವ ಕ್ರಿಶ್ಚಿಯನ್ ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ಪುಟ ಸೇರಿದ್ದಾರೆ.
ಕ್ರಿಶ್ಚಿಯನ್ ಅವರ ವೇಗದ ಓಟದ ವಿಶ್ವ ದಾಖಲೆಯ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. “ಹೈ ಹೀಲ್ಸ್ ಧರಿಸಿ ವೇಗವಾಗಿ 100 ಮೀಟರ್ (ಪುರುಷ) ಓಟ. 12.82 ಸೆಕೆಂಡುಗಳಲ್ಲಿ ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೋಡ್ರಿಗಸ್ ಅವರಿಂದ ದಾಖಲೆ" ಎಂದು ಕ್ಯಾಪ್ಷನ್ ಬರೆಯಲಾಗಿದೆ.
ವಿಡಿಯೋ ಇಲ್ಲಿದೆ :
ಗಿನ್ನೆಸ್ ವಿಶ್ವ ದಾಖಲೆ ಪ್ರಕಾರ, ಕ್ರಿಶ್ಚಿಯನ್ ಮಾಡಿರುವುದು ಈ ದಾಖಲೆ ಮಾತ್ರವಲ್ಲ. ಅವರ ಹೆಸರಿನಲ್ಲಿ ಈವರೆಗೆ ಒಟ್ಟು 57 ವಿಶ್ವ ದಾಖಲೆಗಳಿವೆ. ಒಬ್ಬ ವ್ಯಕ್ತಿ ಒಷ್ಟೊಂದು ದಾಖಲೆ ಮಾಡಿರುವುದು ನಿಜಕ್ಕೂ ಅಚ್ಚರಿಯ ವಿಷಯವೇ.
ಹೈ ಹೀಲ್ಸ್ ಧರಿಸಿ ಮಾಡಿದ ಸಾಧನೆಯ ಬಗ್ಗೆ ಮಾತನಾಡಿದ ಕ್ರಿಶ್ಚಿಯನ್, “ದಾಖಲೆ ಮಾಡಲು ಸಿದ್ಧತೆಯು ಅತ್ಯಂತ ಸಮಗ್ರ ಮತ್ತು ನಿರ್ದಿಷ್ಟವಾಗಿತ್ತು. ಹೀಲ್ಸ್ ಧರಿಸಿ ಹೆಚ್ಚು ವೇಗವಾಗಿ ಓಡುವುದು ನನ್ನ ಪಾಲಿಗೆ ತುಂಬಾ ಸವಾಲಿನ ಸಂಗತಿಯಾಗಿದೆ. ಸ್ಪೇನ್‌ನಲ್ಲಿ ಈ ರೀತಿಯ ರೇಸ್‌ಗಳಿವೆ. ಅದು ನನಗೆ ಅನುಕೂಲವಾಯ್ತು" ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಾಧನೆಯ ಬಗ್ಗೆ ಕಾಮೆಂಟ್ ಕೂಡಾ ಮಾಡಿದ್ದಾರೆ.