ಪ್ರೊ ಕಬಡ್ಡಿ ಲೀಗ್-11 ಕೊನೆಯ ಪಂದ್ಯದಲ್ಲೂ ಬೆಂಗಳೂರು ಬುಲ್ಸ್ಗೆ ಸೋಲು; ಎರಡೇ ಗೆಲುವು, 19 ಸೋಲು
Pro Kabaddi League-11: ಪ್ರೊ ಕಬಡ್ಡಿ ಲೀಗ್-11 ಕೊನೆಯ ಪಂದ್ಯದಲ್ಲೂ ಬೆಂಗಳೂರು ಬುಲ್ಸ್ಗೆ ಸೋಲು ಕಂಡಿದೆ. ಒಟ್ಟಾರೆ ಈ ಟೂರ್ನಿಯಲ್ಲಿ ಎರಡೇ ಗೆಲುವು, 19 ಸೋಲು ಕಂಡಿದೆ.
ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಲೀಗ್ ಹಂತಕ್ಕೆ ಡಿಸೆಂಬರ್ 24ರ ಮಂಗಳವಾರ ತೆರೆ ಬಿದ್ದಿತು. ಪಿಕೆಎಲ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತನ್ನ ಕೊನೆಯ ಪಂದ್ಯದಲ್ಲೂ ಹೀನಾಯ ಸೋಲಿಗೆ ಶರಣಾಗಿದೆ. ಇಂತಹ ಕಳಪೆ ಪ್ರದರ್ಶನ ನೀಡಿದ್ದು ಇದೇ ಮೊದಲು. ಯುಪಿ ಯೋಧಾಸ್ ವಿರುದ್ಧ 44-30 ಅಂಕಗಳ ಅಂತರದಿಂದ ಮಂಡಿಯೂರಿದ ಬುಲ್ಸ್, ಕೇವಲ 2 ಗೆಲುವು, 19 ಸೋಲು, 1 ಟೈನೊಂದಿಗೆ ಟೂರ್ನಿಯನ್ನು ಮುಗಿಸಿದೆ. 11ನೇ ಆವೃತ್ತಿಯ ಲೀಗ್ ಕರ್ನಾಟಕ ಅಭಿಮಾನಿಗಳ ಪಾಲಿಗೆ ಭಾರಿ ನಿರಾಸೆಯಾಯಿತು.
ಪುಣೆಯ ಬಾಲೆವಾಡಿಯಲ್ಲಿ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ತನ್ನ ಅಂತಿಮ ಅಥವಾ 22ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪರ ಸುಶೀಲ್ 12 ಅಂಕ ಗಳಿಸುವ ಮೂಲಕ ಅತ್ಯಧಿಕ ಸ್ಕೋರರ್ ಆದರು. ಬುಲ್ಸ್ ತಂಡಕ್ಕೆ ಆನೆಬಲ ಎಂದುಕೊಂಡಿದ್ದ ಪರ್ದೀಪ್ ನರ್ವಾಲ್ 6 ಅಂಕ ಪಡೆದರು. ಆದರೆ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ್ದು ಬೇಸರದ ಸಂಗತಿ. ಆದರೆ ಯುಪಿ ಯೋಧಾಸ್ ಪರ ಶಿವಂ ಚೌದರಿ 13 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸುರೇಂದರ್ ಗಿಲ್ 9 ಅಂಕ ಪಡೆದು ಸಾಥ್ ಕೊಟ್ಟರು.
2 ತಂಡಗಳು ಸೆಮಿಫೈನಲ್ಗೆ, 4 ತಂಡಗಳು ಎಲಿಮಿನೇಟರ್
11ನೇ ಆವೃತ್ತಿಯ ಲೀಗ್ನ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್ಗೆ ಲಗ್ಗೆ ಹಾಕಿವೆ. ಹರಿಯಾಣ ಸ್ಟೀಲರ್ಸ್, ದಬಾಂಗ್ ಡೆಲ್ಲಿ ತಂಡಗಳು ಡಿಸೆಂಬರ್ 27ರಂದು ಸೆಮೀಸ್ ಆಡಲಿವೆ. ಉಳಿದಂತೆ ಯುಪಿ ಯೋಧಾಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಯು ಮುಂಬಾ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಾಟ ನಡೆಸಲಿವೆ. ಎಲಿಮಿನೇಟರ್ ಪಂದ್ಯಗಳು ಡಿಸೆಂಬರ್ 26ರಂದು ನಡೆಯಲಿವೆ. ಉಳಿದಂತೆ ಬುಲ್ಸ್ ಜೊತೆಗೆ ತೆಲುಗು ಟೈಟಾನ್ಸ್, ಪುಣೇರಿ ಪಲ್ಟನ್ಸ್, ತಮಿಳ್ ತಲೈವಾಸ್, ಬೆಂಗಾಲ್ ವಾರಿಯರ್ಸ್, ಗುಜರಾತ್ ಜೈಂಟ್ಸ್ ತಂಡಗಳು ಲೀಗ್ನಿಂದಲೇ ಹೊರಬಿದ್ದವು.
ಪಿಕೆಎಲ್ 11 ಲೀಗ್ ಹಂತದ ಅಂತಿಮ ಅಂಕಪಟ್ಟಿ
- ಹರಿಯಾಣ ಸ್ಟೀಲ್ಸರ್ಸ್ - 22 ಪಂದ್ಯ, 16 ಗೆಲುವು, 6 ಸೋಲು, 84 ಅಂಕ
- ದಬಾಂಗ್ ಡೆಲ್ಲಿ - 22 ಪಂದ್ಯ, 13 ಗೆಲುವು, 5 ಸೋಲು, 4 ಡ್ರಾ, 81 ಅಂಕ
- ಯುಪಿ ಯೋಧಾಸ್ - 22 ಪಂದ್ಯ, 13 ಗೆಲುವು, 6 ಸೋಲು, 3 ಡ್ರಾ, 79 ಅಂಕ
- ಪಾಟ್ನಾ ಪೈರೇಟ್ಸ್ - 22 ಪಂದ್ಯ, 13 ಗೆಲುವು, 7 ಸೋಲು, 2 ಡ್ರಾ, 77 ಅಂಕ
- ಯು ಮುಂಬಾ - 22 ಪಂದ್ಯ, 12 ಗೆಲುವು, 8 ಸೋಲು, 2 ಡ್ರಾ, 71 ಅಂಕ
- ಜೈಪುರ ಪಿಂಕ್ ಪ್ಯಾಂಥರ್ಸ್ - 22 ಪಂದ್ಯ, 12 ಗೆಲುವು, 8 ಸೋಲು, 2 ಡ್ರಾ, 70 ಅಂಕ
- ತೆಲುಗು ಟೈಟಾನ್ಸ್ - 22 ಪಂದ್ಯ, 12 ಗೆಲುವು, 10 ಸೋಲು, 66 ಅಂಕ
- ಪುಣೇರಿ ಪಲ್ಟನ್ - 22 ಪಂದ್ಯ, 09 ಗೆಲುವು, 10 ಸೋಲು, 3 ಡ್ರಾ, 60 ಅಂಕ
- ತಮಿಳ್ ತಲೈವಾಸ್ - 22 ಪಂದ್ಯ, 08 ಗೆಲುವು, 13 ಸೋಲು, 1 ಡ್ರಾ, 50 ಅಂಕ
- ಬೆಂಗಾಲ್ ವಾರಿಯರ್ಸ್ - 22 ಪಂದ್ಯ, 05 ಗೆಲುವು, 14 ಸೋಲು, 3 ಡ್ರಾ, 41 ಅಂಕ
- ಗುಜರಾತ್ ಜೈಂಟ್ಸ್ - 22 ಪಂದ್ಯ, 05 ಗೆಲುವು, 14 ಸೋಲು, 3 ಡ್ರಾ, 38 ಅಂಕ
- ಬೆಂಗಳೂರು ಬುಲ್ಸ್ - 22 ಪಂದ್ಯ, 02 ಗೆಲುವು, 19 ಸೋಲು, 1 ಡ್ರಾ, 19 ಅಂಕ
ಇದನ್ನೂ ಓದಿ: ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್; ಮಿಥಾಲಿ ರಾಜ್, ಅಂಜುಮ್ ಚೋಪ್ರಾ ಪಟ್ಟಿಗೆ ಸೇರ್ಪಡೆ