ICC New Rules: ನಿಧಾನಗತಿ ಓವರ್ ರೇಟ್ ದಂಡದಲ್ಲಿ ಬದಲಾವಣೆ; ಆಟಗಾರ್ತಿಯರ ಬಹುಮಾನ ತಾರತಮ್ಯಕ್ಕೂ ತೆರೆ; ಐಸಿಸಿಯಿಂದ ಮಹತ್ವದ ನಿರ್ಧಾರ
ಕನ್ನಡ ಸುದ್ದಿ  /  ಕ್ರೀಡೆ  /  Icc New Rules: ನಿಧಾನಗತಿ ಓವರ್ ರೇಟ್ ದಂಡದಲ್ಲಿ ಬದಲಾವಣೆ; ಆಟಗಾರ್ತಿಯರ ಬಹುಮಾನ ತಾರತಮ್ಯಕ್ಕೂ ತೆರೆ; ಐಸಿಸಿಯಿಂದ ಮಹತ್ವದ ನಿರ್ಧಾರ

ICC New Rules: ನಿಧಾನಗತಿ ಓವರ್ ರೇಟ್ ದಂಡದಲ್ಲಿ ಬದಲಾವಣೆ; ಆಟಗಾರ್ತಿಯರ ಬಹುಮಾನ ತಾರತಮ್ಯಕ್ಕೂ ತೆರೆ; ಐಸಿಸಿಯಿಂದ ಮಹತ್ವದ ನಿರ್ಧಾರ

International Cricket Council: ಸೌತ್​ ಆಫ್ರಿಕಾದ ಡರ್ಬನ್​ನಲ್ಲಿ ಜರುಗಿದ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಮಹಿಳಾ ಕ್ರಿಕೆಟರ್​ಗಳಿಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಐಸಿಸಿ ಟೂರ್ನಮೆಂಟ್​ಗಳಲ್ಲಿ ಪುರುಷರಿಗೆ ಸಿಗುತ್ತಿದ್ದ ಬಹುಮಾನದ ಮೊತ್ತವು ಇನ್ಮುಂದೆ ಮಹಿಳೆಯರಿಗೂ ಸಿಗಲಿದೆ.

ಐಸಿಸಿಯಿಂದ ಮಹತ್ವದ ನಿರ್ಧಾರ
ಐಸಿಸಿಯಿಂದ ಮಹತ್ವದ ನಿರ್ಧಾರ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ICC World Test Championship) ಮೂರನೇ ಆವೃತ್ತಿಯ ಅದ್ಧೂರಿಯಾಗಿ ಆರಂಭಗೊಂಡಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಿನ ಪ್ರತಿಷ್ಠಿತ ಆ್ಯಷಸ್ (Ashes) ಟೆಸ್ಟ್​ ಸರಣಿಯೊಂದಿಗೆ 3ನೇ ಆವೃತ್ತಿಯ ಡಬ್ಲ್ಯುಟಿಸಿ ಪ್ರಾರಂಭವಾಯಿತು. ಹಾಗೆಯೇ ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವೆಯೂ ಟೆಸ್ಟ್ ಸರಣಿಯೂ ನಡೆಯುತ್ತಿದೆ.

ಮಹತ್ವದ ನಿರ್ಧಾರ ಕೈಗೊಂಡ ಐಸಿಸಿ

ಮೊದಲೆರಡು ಆವೃತ್ತಿಗಳು ಅದ್ಭುತ ಯಶಸ್ಸು ಸಾಧಿಸಿದ ಪರಿಣಾಮ, ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಹಲವು ಪ್ರಮುಖ ಬದಲಾವಣೆಗೆ ಐಸಿಸಿ ಹೆಜ್ಜೆ ಇಟ್ಟಿದೆ. ಇದರಿಂದ ಇಷ್ಟು ದಿನದಿಂದ ಖಾಲಿಯಾಗುತ್ತಿದ್ದ ಆಟಗಾರರ ಜೇಬು ಇನ್ಮುಂದೆ ಭರ್ತಿಯಾಗಲಿದೆ. ಹೌದು, ನಿಧಾನಗತಿಯ ಓವರ್​ಗಳಿಂದ ದಂಡದ ಶಿಕ್ಷೆಗೆ ಗುರಿಯಾಗುತ್ತಿದ್ದ ಆಟಗಾರರಿಗೆ ನಿಟ್ಟುಸಿರು ಬಿಡಬಹುದು.

ಸೌತ್​ ಆಫ್ರಿಕಾದ ಡರ್ಬನ್​ನಲ್ಲಿ ಜರುಗಿದ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಸ್ಲೋ ಓವರ್​ ರೇಟ್​ಗೆ ಸಂಬಂಧಿಸಿ ವಿಧಿಸುತ್ತಿದ್ದ ದಂಡದ ಶಿಕ್ಷೆಯನ್ನು ಬದಲಿಸುವ ನಿರ್ಧಾರಕ್ಕೆ ಮುಂದಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲೂ ಉಲ್ಲೇಖಿಸಿದೆ. ಸ್ಲೋ ಓವರ್ ರೇಟ್​ ವಿಚಾರದಲ್ಲಿ ತಂಡಗಳ ಖಾತೆಯಿಂದ ಕಡಿತವಾಗುವ ಅಂಕಗಳಲ್ಲಿ ಬದಲಾವಣೆಯಾಗಲ್ಲ ಎಂಬುದಾಗಿ ಐಸಿಸಿ ಸ್ಪಷ್ಟಪಡಿಸಿದೆ.

ಬೌಲರ್​​ಗಳ ನಿಯಮ ಕೊಂಚ ಮಾರ್ಪಾಡು

ಆದರೆ ಆಟಗಾರರ ಶುಲ್ಕವನ್ನು ಕಡಿತಗೊಳಿಸುವ ನಿಯಮವನ್ನು ಮಾರ್ಪಡು ಮಾಡಿದೆ. ನೂತನ ನಿಯಮದ ಪ್ರಕಾರ, ನಿಧಾನಗತಿ ಓವರ್​ ರೇಟ್​ಗೆ ವಿಧಿಸಲಾಗುತ್ತಿದ್ದ ದಂಡದಲ್ಲಿ ಪ್ರತಿ ಆಟಗಾರನ ಪಂದ್ಯದ ಶುಲ್ಕದಲ್ಲಿ (Match Fee) ಶೇ. 5ರಷ್ಟು ಕಡಿತ ಮಾಡಲಾಗಿದೆ. ಇನ್ಮಂದೆ ನಿಧಾನಗತಿ ಓವರ್​ ರೇಟ್​​ಗೆ ದಂಡದ ತಮ್ಮ ಪಂದ್ಯ ಶುಲ್ಕದ ಶೇ 5ರಷ್ಟು ಮಾತ್ರ ಪಾವತಿಸಬೇಕು. ಈ ಹಿಂದೆ ಶೇಕಡ 10ರಷ್ಟು ಹಣವನ್ನು ದಂಡವಾಗಿ ಪಾವತಿಸಬೇಕಿತ್ತು.

ಮಹಿಳೆಯರಿಗೂ ಸಮಾನ ನಗದು ಬಹುಮಾನ

ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟರ್​​ಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಸಿಹಿ ಸುದ್ದಿ ನೀಡಿದ್ದು, ಮಹತ್ವದ ಘೋಷಣೆ ಹೊರಡಿಸಿದೆ. ಐಸಿಸಿ ಟೂರ್ನಮೆಂಟ್​ಗಳಲ್ಲಿ ಪುರುಷರು ಮತ್ತು ಮಹಿಳಾ ತಂಡಗಳಿಗೆ ಇನ್ಮುಂದೆ ಸಮಾನ ನಗದು ಬಹುಮಾನ ಹಣ ನೀಡುವ ಐತಿಹಾಸಿಕ ಪ್ರಕಟಣೆ ಹೊರಡಿಸಿದೆ.

ಐಸಿಸಿ ಟೂರ್ನಮೆಂಟ್​ಗಳಲ್ಲಿ ಪುರುಷರಷ್ಟೇ ಮಹಿಳೆಯರೂ ಸಮಾನ ನಗದು ಬಹುಮಾನ ಪಡೆಯಲಿದ್ದಾರೆ ಎಂಬ ಕ್ರಾಂತಿಕಾರಕ ಘೋಷಣೆಯನ್ನು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೊರಡಿಸಿದ್ದಾರೆ. ಆ ಮೂಲಕ ಬಹುಮಾನದ ತಾರತಮ್ಯಕ್ಕೆ ಪೂರ್ಣವಿರಾಮ ಇಡಲು ಮುಂದಾಗಿದ್ದಾರೆ. ಪುರುಷರ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್‌ನಲ್ಲಿ ವಿಜೇತರು, ರನ್ನರ್ ಅಪ್ ಹಾಗೂ ಇತರ ತಂಡಗಳು ಪಡೆಯುತ್ತಿದ್ದ ಬಹುಮಾನದ ಮೊತ್ತವನ್ನೂ ಮಹಿಳಾ ಟೂರ್ನಿಗಳಲ್ಲಿ ತಂಡಗಳಿಗೂ ನೀಡಲು ನಿರ್ಧರಿಸಲಾಗಿದೆ.

ಐತಿಹಾಸಿಕ ಕ್ಷಣ ಎಂದ ಬಾರ್ಕ್ಲೇ

ಇದೊಂದು ನಿರ್ಧಾರವು ನಮ್ಮ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕ್ಷಣ. ಐಸಿಸಿ ಜಾಗತಿಕ ಟೂರ್ನಿಗಳಲ್ಲಿ ಕಣಕ್ಕಿಳಿಯುವ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳಿಗೆ ಇನ್ಮುಂದೆ ಸಮಾನ ವೇತನ ಸಿಗಲಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ. 2017ರಿಂದಲೂ ಐಸಿಸಿ ಮಹಿಳಾ ಟೂರ್ನಿಗಳಲ್ಲಿ ಸ್ಪಷ್ಟವಾಗಿ ಬಹುಮಾನದ ಮೊತ್ತವನ್ನು ಹೆಚ್ಚಿಸುತ್ತಾ ಬಂದಿದ್ದೇವೆ. ಆದರೆ ಇನ್ಮುಂದೆ ಅದರ ಚಿತ್ರ ಬದಲಾಗಿದೆ ಎಂದು ಅಧ್ಯಕ್ಷ ಗ್ರೆಗ್ ಬಾರ್ಕ್ಲೆ (Greg Barclay) ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.