Kohli-Rohit-Jadeja: ದಿಗ್ಗಜರ ದಾಖಲೆ ಮುರಿದು ನೂತನ ಮೈಲಿಗಲ್ಲು ನಿರ್ಮಿಸಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ
ಕನ್ನಡ ಸುದ್ದಿ  /  ಕ್ರೀಡೆ  /  Kohli-rohit-jadeja: ದಿಗ್ಗಜರ ದಾಖಲೆ ಮುರಿದು ನೂತನ ಮೈಲಿಗಲ್ಲು ನಿರ್ಮಿಸಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ

Kohli-Rohit-Jadeja: ದಿಗ್ಗಜರ ದಾಖಲೆ ಮುರಿದು ನೂತನ ಮೈಲಿಗಲ್ಲು ನಿರ್ಮಿಸಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ

Kohli-Rohit-Jadeja: ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರಿಂದ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ
ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ 3 ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಒಂದೆಡೆ ಟೆಸ್ಟ್​ ಸರಣಿ ಗೆದ್ದಿರುವ ಭಾರತ, ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಚಿತ್ತ ಹರಿಸಿದೆ. ಮತ್ತೊಂದೆಡೆ ಮುಖಭಂಗದಿಂದ ಪಾರಾಗಲು ವಿಂಡೀಸ್ ಸಿದ್ಧವಾಗಿದೆ.

ಈ ಸರಣಿಯು ಭಾರತದ ಪಾಲಿಗೆ ಮಹತ್ವವಾಗಿದ್ದು, ಏಕದಿನ ವಿಶ್ವಕಪ್ ಟೂರ್ನಿಗೆ ಇಲ್ಲಿಂದಲೇ ಚಾಲನೆ ಪಡೆಯಲಿದೆ. ಆದರೆ ವೆಸ್ಟ್ ಇಂಡೀಸ್​ ಮೆಗಾ ಟೂರ್ನಿಗೆ ಇದೇ ಮೊದಲ ಬಾರಿಗೆ ಅರ್ಹತೆ ಪಡೆಯಲಿಲ್ಲ. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿ ವಿಶ್ವಕಪ್​ನಿಂದ ಹೊರ ಬಿದ್ದಿರುವ ಕೆರಿಬಿಯನ್ನರು, ಹೊಸ ಆರಂಭ ಪಡೆಯಲು ತಯಾರಿಯಾಗುತ್ತಿದೆ. ಇನ್ನು ಈ ಪಂದ್ಯ ಅಥವಾ ಸರಣಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ ದಾಖಲೆ

ಟೆಸ್ಟ್​ ಸರಣಿಯಲ್ಲಿ ಶತಕ ಸಿಡಿಸಿ ಭರ್ಜರಿ ಫಾರ್ಮ್​ನಲ್ಲಿ ಇರುವುದಲ್ಲದೆ ಹಲವು ದಾಖಲೆಗಳನ್ನು ಮುರಿದ ವಿರಾಟ್ ಕೊಹ್ಲಿ, ಈಗ ಏಕದಿನ ಕ್ರಿಕೆಟ್​ನಲ್ಲೂ ನೂತನ ಮೈಲಿಗಲ್ಲು ತಲುಪಲು ಸಿದ್ಧರಾಗಿದ್ದಾರೆ. ಏಕದಿನ ಕ್ರಿಕೆಟ್​​ನಲ್ಲಿ ಇನ್ನು 102 ರನ್​ ಬಾರಿಸಿದರೆ ವಿರಾಟ್, ವೇಗದ 13 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಲಿರುವ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸಚಿನ್ 13 ಸಾವಿರ ರನ್​ಗಳನ್ನು ಪೂರೈಸಲು 321 ಪಂದ್ಯಗಳನ್ನು ಆಡಿದ್ದರು. ಕೊಹ್ಲಿ ಈವರೆಗೂ 274 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

ರೋಹಿತ್​ ಶರ್ಮಾ ದಾಖಲೆ

ಇನ್ನೂ ನಾಯಕ ರೋಹಿತ್​ ಶರ್ಮಾ ಕೂಡ ಈ ಸರಣಿಯಲ್ಲಿ ನೂತನ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ 3 ಪಂದ್ಯಗಳಲ್ಲಿ ಇನ್ನು 175 ರನ್ ಗಳಿಸಿದರೆ, ಏಕದಿನ ಕ್ರಿಕೆಟ್​​ನಲ್ಲಿ 10 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಲಿರುವ ವಿಶ್ವದ 15ನೇ ಆಟಗಾರ ಎಂಬ ದಾಖಲೆಗೂ ಪಾತ್ರರಾಗಲಿದ್ದಾರೆ. ಹಾಗೆಯೇ ಭಾರತದ ಪರ 6ನೇ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.

ರವೀಂದ್ರ ಜಡೇಜಾ ದಾಖಲೆ

ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಕ್ರಿಕೆಟ್​ನ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪೈಕಿ ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ 4 ವಿಕೆಟ್ ಕಬಳಿಸಿದರೆ ಅಗ್ರಸ್ಥಾನಕ್ಕೆ ಏರಲಿದ್ದಾರೆ. ವಿಂಡೀಸ್ ವಿರುದ್ಧ 29 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜಡೇಜಾ ಒಟ್ಟು 41 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಜೊತೆ ಸೇರಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ.

2ನೇ ಸ್ಥಾನದಲ್ಲಿರುವ ಕಪಿಲ್ ದೇವ್ ವಿಂಡೀಸ್ ವಿರುದ್ಧ 43 ವಿಕೆಟ್ ಉರುಳಿಸಿದ್ದರೆ, ಮೊದಲ ಸ್ಥಾನದಲ್ಲಿರುವ ಕರ್ಟ್ನಿ ವಾಲ್ಷ್, ಟೀಮ್ ಇಂಡಿಯಾ ವಿರುದ್ಧ 38 ಪಂದ್ಯಗಳಲ್ಲಿ 44 ವಿಕೆಟ್ ಪಡೆದಿದ್ದಾರೆ. ಜಡೇಜಾ ಇನ್ನು 4 ವಿಕೆಟ್ ಪಡೆದರೆ, ಈ ದಿಗ್ಗಜರ ದಾಖಲೆಯನ್ನು ಮುರಿಯಲಿದ್ದಾರೆ.

ತಂಡದ ದಾಖಲೆಗಳು

ವೆಸ್ಟ್​ ಇಂಡೀಸ್​-ಭಾರತ ತಂಡಗಳು ಒಟ್ಟು 139 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತವೇ ಹೆಚ್ಚು ಮೇಲುಗೈ ಸಾಧಿಸಿದೆ. ಟೀಮ್ ಇಂಡಿಯಾ 70 ಪಂದ್ಯ, ವಿಂಡೀಸ್ 63ರಲ್ಲಿ ಜಯಿಸಿದೆ. ಅಲ್ಲದೆ, ಭಾರತ ಈ ಸರಣಿ ಗೆದ್ದರೆ, ಸತತ 5ನೇ ಏಕದಿನ ಸರಣಿ ಗೆದ್ದು ದಾಖಲೆ ಬರೆಯಲಿದೆ. ದ್ವಿಪಕ್ಷೀಯ ಸರಣಿಗಳಲ್ಲಿ 2006/07ರಿಂದ ಹಿಡಿದು ಈವರೆಗೂ ವೆಸ್ಟ್​ ಇಂಡೀಸ್​ ಗೆಲುವು ಸಾಧಿಸಲೇ ಇಲ್ಲ. ಇದೀಗ ಯಾವ ರೀತಿ ಕಂಬ್ಯಾಕ್ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.