ಕನ್ನಡ ಸುದ್ದಿ / ಕ್ರೀಡೆ /
Team India: ತಲಾ ಅರ್ಧಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ರೋಹಿತ್, ಜೈಸ್ವಾಲ್, ಕೊಹ್ಲಿ; ಯಾವೆಲ್ಲಾ ರೆಕಾರ್ಡ್ಸ್ ನಿರ್ಮಾಣವಾದವು ನೋಡಿ
India vs West Indies: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿದ್ದು ಯಾವುವು ಎಂಬುದನ್ನು ಈ ಕೆಳಕಂಡಂತೆ ನೋಡೋಣ.
ರೋಹಿತ್, ಜೈಸ್ವಾಲ್, ಕೊಹ್ಲಿ
ಟ್ರಿನಿಡಾಡ್ನ ಪೋರ್ಟ್ ಆಫ್ ಸ್ಪೇನ್ನಲ್ಲಿ ಜರುಗುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿದೆ. ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆ ಹಾಕುವ ಲೆಕ್ಕಾಚಾರದಲ್ಲಿದೆ. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 288 ರನ್ ಗಳಿಸಿದೆ.
ರೋಹಿತ್ ಶರ್ಮಾ 80, ಯಶಸ್ವಿ ಜೈಸ್ವಾಲ್ 57, ವಿರಾಟ್ ಕೊಹ್ಲಿ ಅಜೇಯ 87 ರನ್, ಜಡೇಜಾ ಅಜೇಯ 36 ರನ್ ಗಳಿಸಿದ್ದಾರೆ. ಅರ್ಧಶತಕ ಸಿಡಿಸಿದ ಜೈಸ್ವಾಲ್, ರೋಹಿತ್, ಕೊಹ್ಲಿ ದಾಖಲೆಗಳ ಜಾತ್ರೆ ನಡೆಸಿದ್ದಾರೆ. 2ನೇ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿದ್ದು ಯಾವುವು ಎಂಬುದನ್ನು ಈ ಕೆಳಕಂಡಂತೆ ನೋಡೋಣ.
- ಮೊದಲ ಇನಿಂಗ್ಸ್‌ನಲ್ಲಿ 80 ರನ್ ಸಿಡಿಸಿದ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ 5ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ರೋಹಿತ್ ಖಾತೆಯಲ್ಲಿ 17298 ರನ್‌ಗಳಿವೆ. ಆ ಮೂಲಕ ಎಂಎಸ್ ಧೋನಿ (17266) ಮತ್ತು ವೀರೇಂದ್ರ ಸೆಹ್ವಾಗ್ (17253 ) ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
- ವೆಸ್ಟ್ ಇಂಡೀಸ್ನ ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ 139 ರನ್ಗಳ ಜೊತೆಯಾಟವಾಡಿದ ರೋಹಿತ್-ಜೈಸ್ವಾಲ್ ಜೋಡಿ ಮತ್ತೊಂದು ದಾಖಲೆ ಬರೆದಿದೆ. ಈ ಮೈದಾನದಲ್ಲಿ ಅತ್ಯಧಿಕ ಆರಂಭಿಕ ಜೊತೆಯಾಟವಾಡಿದ ವಿಶ್ವದ 3ನೇ ಜೋಡಿ ಎಂಬ ದಾಖಲೆ ನಿರ್ಮಿಸಿದೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ನ ಜಿಯೋಫರಿ ಬಾಯ್ಕಾಟ್ ಮತ್ತು ಡೆನ್ನಿಸ್ ಅಮಿಸ್ ಜೋಡಿ ಇದ್ದು, 1974ರಲ್ಲಿ 209ರನ್ ಆರಂಭಿಕ ಜೊತೆಯಾಟವಾಡಿತ್ತು. ಆಸ್ಟ್ರೇಲಿಯಾದ ಆರ್ಥರ್ ಮೋರಿಸ್ ಮತ್ತು ಕಾಲಿನ್ ಮೆಕ್‌ಡೊನಾಲ್ಡ್ ಜೋಡಿ 2ನೇ ಸ್ಥಾನದಲ್ಲಿದೆ. ಇವರಿಂದ 191 ರನ್ಗಳ ಆರಂಭಿಕ ಜೊತೆಯಾ ಬಂದಿತ್ತು.
- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ರೋಹಿತ್ ಶರ್ಮಾ 2000 ರನ್ಗಳ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ. ಅವರ ಬ್ಯಾಟಿಂಗ್ ಸರಾಸರಿ 53. ರೋಹಿತ್ ಬೆನ್ನಲ್ಲೇ ಇದೇ ಪಂದ್ಯದಲ್ಲಿ ಅಜೇಯ 87 ರನ್ ಗಳಿಸಿರುವ ವಿರಾಟ್ ಕೊಹ್ಲಿ ಕೂಡ 2000 ರನ್ ಪೂರೈಸಿದರು. ಆ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎನಿಸಿದರು.
- ರೋಹಿತ್ ಶರ್ಮಾ ಮತ್ತೊಮ್ಮೆ ಸಿಕ್ಸರ್ ಕಿಂಗ್ ಎಂಬುದನ್ನು ನಿರೂಪಿಸಿದರು. ಈ ಪಂದ್ಯದಲ್ಲಿ 2 ಸಿಕ್ಸರ್ ಬಾರಿಸಿದ ಹಿಟ್ಮ್ಯಾನ್ ನಾಯಕನಾಗಿ 150 ಸಿಕ್ಸರ್ಗಳನ್ನು ಪೂರೈಸಿದರು.
- ವಿರಾಟ್ ಕೊಹ್ಲಿ 500ನೇ ಅಂತಾರಾಷ್ಟ್ರೀಯ ಪಂದ್ಯವಾಡುವ ಮೂಲಕ ಪಂದ್ಯದಲ್ಲಿ ದಾಖಲೆ ಬರೆದರು. ಈ ಸಾಧನೆ ಮಾಡಿದ 10ನೇ ಆಟಗಾರ ಎನಿಸಿದರು. ಭಾರತದ ಪರ 4ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ಅಂತಾರಾಷ್ಟ್ರೀಯ ಕ್ರಿಕೆಟ್ನ 500ನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ದಿಗ್ಗಜರಾಜ ಸಚಿನ್, ಪಾಟಿಂಗ್ ಸೇರಿದಂತೆ ಹಲವರು 500ನೇ ಪಂದ್ಯದಲ್ಲಿ 50ರ ಗಡಿ ದಾಟಿರಲಿಲ್ಲ.
- ಅಜೇಯ 87 ರನ್ ಸಿಡಿಸಿ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿರುವ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಅಧಿಕ ರನ್ ಗಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ನ 5ನೇ ಆಟಗಾರ ಎಂಬ ಹೆಗ್ಗೆಳಿಕೆಗೆ ಪಾತ್ರರಾಗಿದ್ದಾರೆ. 4ನೇ ಕ್ರಮಾಂಕದಲ್ಲಿ ಸಚಿನ್ ತೆಂಡೂಲ್ಕರ್ 13,492 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಲಾ ಜಯವರ್ಧನೆ 9509 ರನ್, ಜಾಕ್ ಕಾಲಿಸ್ 9033 ರನ್, ಬ್ರಿಯಾನ್ ಲಾರಾ 7535 ರನ್, ಕೊಹ್ಲಿ7097 ರನ್ ಗಳಿಸಿ 2, 3, 4, 5ನೇ ಸ್ಥಾನದಲ್ಲಿದ್ದಾರೆ.
- ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ನೇ ಆಟಗಾರ ಎಂಬ ದಾಖಲೆಗೂ ಒಳಗಾಗಿದ್ದಾರೆ. ಸಚಿನ್ 34357 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕಾರ 28016 ರನ್, ರಿಕಿ ಪಾಂಟಿಂಗ್ 27483 ರನ್, ಜಯವರ್ಧನೆ 25957 ರನ್, ಕೊಹ್ಲಿ 25548 ರನ್ ಗಳಿಸಿ ಕ್ರಮವಾಗಿ 2, 3, 4, 5ನೇ ಸ್ಥಾನದಲ್ಲಿದ್ದಾರೆ. ಜಾಕ್ ಕಾಲಿಸ್ ಅವರ ದಾಖಲೆ ಮುರಿದು ಈ ಸಾಧನೆ ಮಾಡಿದರು.
ವಿಭಾಗ
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.