Parag on Kohli: ಎಷ್ಟೇ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದರೂ ಕೊಹ್ಲಿಯೇ ನನ್ನ ದೈವ; ವಿರಾಟ್ ಸಲಹೆಯೇ ನನ್ನ ಯಶಸ್ಸಿಗೆ ಕಾರಣ ಎಂದ ರಿಯಾನ್ ಪರಾಗ್
Parag on Kohli: ವಿರಾಟ್ ಕೊಹ್ಲಿ ನನ್ನ ದೈವ. ನನಗೆ ಸ್ಪೂರ್ತಿ. ಜಗತ್ತಿನಲ್ಲಿ ಎಷ್ಟೇ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದರೂ ಉಳಿದವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಕೊಹ್ಲಿಯನ್ನೇ ಅನುಕರಿಸುತ್ತೇನೆ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ ಅಸ್ಸಾಂನ ಮೊದಲ ಕ್ರಿಕೆಟಿಗ ರಿಯಾನ್ ಪರಾಗ್. 16ನೇ ಆವೃತ್ತಿಯ ಐಪಿಎಲ್ನಲ್ಲಿ 7 ಪಂದ್ಯಗಳನ್ನಾಡಿದ ಪರಾಗ್, ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. 7 ಪಂದ್ಯಗಳಲ್ಲಿ ಕೇವಲ 78 ರನ್ಗಳಿಸಿ ಟ್ರೋಲ್ಗೆ ಗುರಿಯಾದರು. ಐಪಿಎಲ್ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ವಿಫಲರಾದ ಪರಾಗ್, ದೇಶೀಯ ಕ್ರಿಕೆಟ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದರು. ಆ ಮೂಲಕ ಆಯ್ಕೆದಾರರ ಗಮನ ಸೆಳೆದರು.
ಇತ್ತೀಚೆಗೆ ಮುಗಿದ ದೇವಧರ್ ಟ್ರೋಫಿಯಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ದಕ್ಷಿಣ ವಲಯ ತಂಡವು ಚಾಂಪಿಯನ್ ಪಟ್ಟಕ್ಕೇರಿತು. ಈ ಟೂರ್ನಿಯಲ್ಲಿ ಪರಾಗ್ 5 ಪಂದ್ಯಗಳಲ್ಲಿ 88.50ರ ಸರಾಸರಿಯಲ್ಲಿ 354 ರನ್ ಗಳಿಸಿ ಗರಿಷ್ಠ ಸ್ಕೋರರ್ ಎಂಬ ಹೆಗ್ಗಳಿಕೆಗೆ ಒಳಗಾದರು. ಫೈನಲ್ ಪಂದ್ಯಕ್ಕೂ ಮುನ್ನ 2 ಭರ್ಜರಿ ಶತಕ ಸಿಡಿಸಿದ್ದ ಬಲಗೈ ಆಟಗಾರ, ಫೈನಲ್ನಲ್ಲಿ 95 ರನ್ ಸಿಡಿಸಿ ಶತಕ ವಂಚಿತರಾದರು. ಒಂದು ವೇಳೆ ಪರಾಗ್ ಕ್ರೀಸ್ನಲ್ಲಿ ಇದ್ದಿದ್ದೇ ಆದರೆ, ಪೂರ್ವ ವಲಯ ತಂಡವು ಪ್ರಶಸ್ತಿ ಗೆಲ್ಲುತ್ತಿತ್ತು ಎಂಬುದರಲ್ಲಿ ಅನುಮಾನವೇ ಇರಲಿಲ್ಲ.
ಕೊಹ್ಲಿ ಸಲಹೆಗಳೇ ಯಶಸ್ಸಿಗೆ ಕಾರಣ
ಟೂರ್ನಿಯಲ್ಲಿ 23 ಸಿಕ್ಸರ್ ಬಾರಿಸಿರುವ ರಿಯಾನ್ ಪರಾಗ್, ಬೌಲಿಂಗ್ನಲ್ಲೂ 11 ವಿಕೆಟ್ ಪಡೆದಿದ್ದಾರೆ. ದೇವಧರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್, ಅತಿ ಹೆಚ್ಚು ಸಿಕ್ಸರ್ ಮತ್ತು ಅತಿ ಹೆಚ್ಚು ಶತಕ ಸಿಡಿಸಿದ ರಿಯಾನ್ ಪರಾಗ್, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಇನ್ನು ತನ್ನ ಯಶಸ್ಸಿಗೆ ಕಾರಣ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರು, ಸಲಹೆಗಳೇ ನನಗೆ ಯಶಸ್ಸು ತಂದುಕೊಟ್ಟಿವೆ ಎಂದು ತಿಳಿಸಿದ್ದಾರೆ.
ನನ್ನ ದೈವ ಎಂದ ಪರಾಗ್
ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಪರಾಗ್, ವಿರಾಟ್ ಕೊಹ್ಲಿ ನನ್ನ ದೈವ. ನನಗೆ ಸ್ಪೂರ್ತಿ. ಜಗತ್ತಿನಲ್ಲಿ ಎಷ್ಟೇ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದರೂ ಉಳಿದವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ವಿರಾಟ್ ಕೊಹ್ಲಿ ಮಾತ್ರ ನನ್ನ ಹೃದಯಕ್ಕೆ ಹತ್ತಿರವಾಗಿದ್ದಾರೆ ಎಂದು ನನಗೆ ತಿಳಿದಿದೆ ಎಂದು ಅಭಿಮಾನದ ಮಾತುಗಳನ್ನು ಆಡಿದರು.
ವಿರಾಟ್ ಸಲಹೆ ಹೀಗಿತ್ತು..
ವಿರಾಟ್ ಕೊಹ್ಲಿ ಅವರೊಂದಿಗೆ ಆಗಾಗ್ಗೆ ಮಾತನಾಡುತ್ತೇನೆ. ಅವರು ನನಗೆ ಅತ್ಯಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿಯಾಗಿ ಕೊಹ್ಲಿಯೊಂದಿಗೆ ನನಗೆ ಸಾಕಷ್ಟು ಸಾಮ್ಯತೆ ಇದೆ. ನಾನು ಹೇಳಿದರೂ ಅವರು ಅರ್ಥ ಮಾಡಿಕೊಂಡು ಪರಿಹಾರ ಕೊಡುತ್ತಾರೆ. ಅವರೊಂದಿಗೆ ಸಂಭಾಷಣೆಯನ್ನು ನಿಖರವಾಗಿ ಹೇಳಲಾರೆ. ಆದರೆ ಕೆಲಸದ ನೀತಿಯ ಮೇಲೆ ಕೇಂದ್ರಿಕರಿಸಲು ಪ್ರೋತ್ಸಾಹಿಸಿದರು. ವರ್ಷದುದ್ದಕ್ಕೂ ಸಾಧಿಸಿದ ಯಶಸ್ಸನ್ನು ಒಂದು ನಿರಾಶಾದಾಯಕ ಐಪಿಎಲ್ ಋತುವಿನಿಂದ ಅಳೆಯಲು ಸಾಧ್ಯವಾಗಲ್ಲ. ಸತತ ಪರಿಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ ಎಂದು ವಿರಾಟ್ ಹೇಳಿದ್ದರು ಎಂದು ಪರಾಗ್ ಈ ವೇಳೆ ನೆನೆದಿದ್ದಾರೆ.
‘ಕೊಹ್ಲಿ ಏನೇ ಹೇಳಿದರೂ ಅರ್ಥವಾಗುತ್ತೆ’
ಒಬ್ಬ ವ್ಯಕ್ತಿಯಾಗಿ ಕೊಹ್ಲಿಯೊಂದಿಗೆ ನನಗೆ ಸಾಕಷ್ಟು ಸಾಮ್ಯತೆ ಇದೆ. ನಾನು ಏನು ಹೇಳಿದರೂ ಅವನು ಅರ್ಥಮಾಡಿಕೊಳ್ಳುತ್ತಾನೆ, ಅವನು ಏನು ಹೇಳಿದರೂ ಅದು ನನಗೆ ತಟ್ಟುತ್ತದೆ. ಹಾಗೆಯೇ ಅವರು ನನಗೆ ಏನೇ ಹೇಳಿದರೂ, ಬೇಗನೇ ಅರ್ಥವಾಗಿಬಿಡುತ್ತದೆ. ನನಗೆ ಅತಿಯಾದ ಆತ್ಮವಿಶ್ವಾಸ ಮತ್ತು ಆ್ಯಟಿಟ್ಯೂಡ್ ಇದೆ ಎಂದು ಹಲವರು ಹೇಳುತ್ತಾರೆ. ಆದರೆ ನನ್ನ ಸಾಮರ್ಥ್ಯದಲ್ಲಿ ನನಗೆ ನಂಬಿಕೆ ಇದೆ ಎಂದು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.
‘ಅಶ್ವಿನ್ರಿಂದ ಬೌಲಿಂಗ್ ಸಲಹೆ ಪಡೆಯುತ್ತೇನೆ’
ವಯಸ್ಸು ಆದಂತೆಲ್ಲಾ ಪ್ರಬುದ್ಧತೆ ಹೆಚ್ಚುತ್ತದೆ. ಎರಡು ವರ್ಷಗಳ ಹಿಂದಿನ ನನ್ನ ಬ್ಯಾಟಿಂಗ್‌ಗೆ ಹೋಲಿಸಿದರೆ, ನನ್ನ ಬ್ಯಾಟಿಂಗ್ ಸಾಕಷ್ಟು ಸುಧಾರಿಸಿದೆ ಎಂದು ನಾನು ಭಾವಿಸುತ್ತೇನೆ. ಬೌಲಿಂಗ್ ವಿಷಯದಲ್ಲಿ ರವಿಚಂದ್ರನ್ ಅಶ್ವಿನ್ ಅವರಿಂದ ಸಲಹೆ ಪಡೆಯುತ್ತಿರುತ್ತೇನೆ ಎಂದು ಪರಾಗ್ ಹೇಳಿದ್ದಾರೆ. ಅಲ್ಲದೆ, ತನ್ನನ್ನು ಟ್ರೋಲ್ ಮಾಡುವವರಿಗೂ ತಿರುಗೇಟು ನೀಡಿದ್ದಾರೆ. ನಾನು ಏನೇ ಮಾಡಿದರೂ, ಅದನ್ನು ಟ್ರೋಲ್ ಮಾಡುತ್ತಾರೆ. ಅದು ಯಾಕೆ ಅಂತ ಗೊತ್ತಿಲ್ಲ ಎಂದಿದ್ದಾರೆ.