Rohit Sharma: ವೆಸ್ಟ್​ ಇಂಡೀಸ್​ನಲ್ಲಿ ಮೊದಲ ಶತಕ, ಆರಂಭಿಕನಾಗಿ ಹಲವು ದಾಖಲೆ; ಸೆಹ್ವಾಗ್, ಗವಾಸ್ಕರ್​​ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ
ಕನ್ನಡ ಸುದ್ದಿ  /  ಕ್ರೀಡೆ  /  Rohit Sharma: ವೆಸ್ಟ್​ ಇಂಡೀಸ್​ನಲ್ಲಿ ಮೊದಲ ಶತಕ, ಆರಂಭಿಕನಾಗಿ ಹಲವು ದಾಖಲೆ; ಸೆಹ್ವಾಗ್, ಗವಾಸ್ಕರ್​​ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ

Rohit Sharma: ವೆಸ್ಟ್​ ಇಂಡೀಸ್​ನಲ್ಲಿ ಮೊದಲ ಶತಕ, ಆರಂಭಿಕನಾಗಿ ಹಲವು ದಾಖಲೆ; ಸೆಹ್ವಾಗ್, ಗವಾಸ್ಕರ್​​ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ

Rohit Sharma: ವೆಸ್ಟ್​ ಇಂಡೀಸ್​ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಶತಕ ಸಿಡಿಸಿ ಔಟಾಗಿರುವ ಭಾರತದ ಕ್ಯಾಪ್ಟನ್​ ರೋಹಿತ್​ ಶರ್ಮಾ ಹಲವು ದಾಖಲೆಗಳ ಒಡೆಯನಾಗಿದ್ದಾರೆ. ಹಾಗಾದರೆ ಆ ದಾಖಲೆಗಳು ಯಾವುವು ಬನ್ನಿ ನೋಡೋಣ.

ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮಾ
ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮಾ (BCCI)

ಅತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ಭಾರತವು (India vs West Indies) ಭರ್ಜರಿ ಬೇಟೆಗಿಳಿದಿದೆ. ಬೌಲಿಂಗ್​​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿದ ಭಾರತೀಯರು, ನಂತರ ಬ್ಯಾಟಿಂಗ್​ನಲ್ಲೂ ದರ್ಬಾರ್​ ನಡೆಸುತ್ತಿದ್ದಾರೆ. ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ತೋರುತ್ತಿದ್ದು, ಡೊಮಿನಿಕಾದ ವಿಂಡ್ಸನ್​ ಪಾರ್ಕ್​​ನಲ್ಲಿ ಮೊದಲ ಟೆಸ್ಟ್​​ನ 2ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ನಾಯಕ ರೋಹಿತ್​ ಶರ್ಮಾ (Rohit Sharma) ಅವರು ತಲಾ ಭರ್ಜರಿ ಶತಕ ಗಳಿಸಿ, ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​-ಜೈಸ್ವಾಲ್ ಅವರು 2ನೇ ದಿನದಾಟದಲ್ಲೂ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ ಮೊದಲ ವಿಕೆಟ್​ಗೆ 229 ರನ್​ಗಳ ದಾಖಲೆಯ ಜೊತೆಯಾಟವಾಡಿತು. ಸದ್ಯ 162 ರನ್​ಗಳ ಮುನ್ನಡೆ ಪಡೆದಿರುವ ಭಾರತ, ಬೃಹತ್ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದೆ. ಸದ್ಯ ರೋಹಿತ್​ ಶರ್ಮಾ ಅವರು 221 ಎಸೆತಗಳನ್ನು ಎದುರಿ 103 ರನ್​ ಸಿಡಿಸಿದ್ದಾರೆ. ಶತಕ ಸಿಡಿಸಿ ಔಟಾಗಿರುವ ರೋಹಿತ್​ ಶರ್ಮಾ ಕೆರಿಬಿಯನ್ನರ ನಾಡಿನಲ್ಲಿ ಹೊಸ ಸಾಧನೆ ಮಾಡಿದ್ದಾರೆ.

ವಿಂಡೀಸ್​​ನಲ್ಲಿ ಮೊದಲ ಶತಕ

ರೋಹಿತ್​ ಶರ್ಮಾಗೆ ಕೆರಿಬಿಯನ್ನರ ನಾಡಿನಲ್ಲಿ ಇದು ಮೊದಲ ಶತಕವಾಗಿದೆ. ಇದೇ ಮೊದಲ ಬಾರಿಗೆ ವೆಸ್ಟ್​ ಇಂಡೀಸ್​ನಲ್ಲಿ ಸೆಂಚುರಿ ಬಾರಿಸಿದ್ದಾರೆ. ಅಲ್ಲದೆ, 2023ರ ವರ್ಷದಲ್ಲಿ ಇದು ಎರಡನೇ ಶತಕವೂ ಆಗಿದೆ. ಫೆಬ್ರವರಿಯಲ್ಲಿ ನಡೆದ ಬಾರ್ಡರ್​ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರಂಕಿ ದಾಟಿದ್ದರು. ಶತಕದ ಮೂಲಕ ಹಲವು ದಾಖಲೆ ಬರೆದ ನಾಯಕ ರೋಹಿತ್​ಗೆ ಈ ಶತಕವು ತುಂಬಾ ವಿಶೇಷವಾಗಿದೆ.

ಏಕೆಂದರೆ ಅವರಿಗೆ ವಿದೇಶಿ ನೆಲದಲ್ಲಿ 2ನೇ ಟೆಸ್ಟ್​ ಶತಕವಾಗಿದೆ. ಅಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಟೀಮ್​ ಇಂಡಿಯಾ ಪರ ಅಧಿಕ (7) ಸೆಂಚುರಿ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್​ ಪಾತ್ರರಾಗಿದ್ದಾರೆ. ಓಪನರ್​ ಆಗಿಯೇ ಈ ಏಳೂ ಶತಕಗಳನ್ನು ಬಾರಿಸಿರುವುದು ವಿಶೇಷ. ಜೊತೆಗೆ ಆರಂಭಿಕನಾಗಿ ವಿದೇಶಿ ನೆಲದಲ್ಲಿ ಮೂರು ಫಾರ್ಮೆಟ್​​ನಲ್ಲೂ ಅಧಿಕ 100 ಬಾರಿಸಿದ ದಾಖಲೆಯೂ ರೋಹಿತ್​ ಹೆಸರಿಗೆ ದಾಖಲಾಗಿರುವುದು ವಿಶೇಷ.

2013ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಅದು ಕೂಡ ವೆಸ್ಟ್​ ಇಂಡೀಸ್​ ವಿರುದ್ಧವೇ ಎಂಬುದು ವಿಶೇಷ. ಅಂದು ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆ ಸಿರೀಸ್​ನ 2ನೇ ಪಂದ್ಯದಲ್ಲೂ ಮೂರಂಕಿ ದಾಟಿದರು. ಇದೀಗ 10 ವರ್ಷಗಳ ಬಳಿಕ ವಿಂಡೀಸ್​ ವಿರುದ್ಧ 3ನೇ ಶತಕ ದಾಖಲಿಸಿದ್ದಾರೆ. ಈ 10 ವರ್ಷಗಳ ಟೆಸ್ಟ್​​ ಕರಿಯರ್​ನಲ್ಲಿ ಹಿಟ್​ಮ್ಯಾನ್​ಗೆ 10ನೇ ಟೆಸ್ಟ್​ ಸೆಂಚುರಿಯಾಗಿದೆ.

ಸೆಹ್ವಾಗ್, ಗವಾಸ್ಕರ್ ದಾಖಲೆ ಮುರಿದ ರೋಹಿತ್​

ರೋಹಿತ್​ ಆರಂಭಿಕನಾಗಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಬಾರಿ 50+ ರನ್​ ಗಳಿಸಿದ ಟೀಮ್​​ ಇಂಡಿಯಾ ಎರಡನೇ ಆಟಗಾರ ಎಂಬ ಸಾಧನೆಗೂ ರೋಹಿತ್​ ಪಾತ್ರರಾಗಿದ್ದಾರೆ. ಆ ಮೂಲಕ ಬ್ಯಾಟಿಂಗ್​ ದಿಗ್ಗಜ ಸುನಿಲ್ ಗವಾಸ್ಕರ್​ ದಾಖಲೆಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಆರಂಭಿಕರಾಗಿ 308 ಇನ್ನಿಂಗ್ಸ್​ಗಳಲ್ಲಿ 102 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಮೊದಲ ಸ್ಥಾನದಲ್ಲಿರುವ ಸಚಿನ್​ ತೆಂಡ 342 ಇನ್ನಿಂಗ್ಸ್​ಗಳಲ್ಲಿ 120 ಬಾರಿ ಐವತ್ತರ ಗಡಿ ದಾಟಿದ್ದಾರೆ. ಇನ್ನು ಸುನಿಲ್ ಗವಾಸ್ಕರ್ 286 ಇನ್ನಿಂಗ್ಸ್​​ಗಳಲ್ಲಿ 101 ಸಲ, 4ನೇ ಸ್ಥಾನದಲ್ಲಿರುವ ಸೆಹ್ವಾಗ್ ಕೂಡ 101 ಬಾರಿ 50ಕ್ಕೂ ಅಧಿಕ ಸಿಡಿಸಿದ್ದು, ಅದಕ್ಕಾಗಿ 388 ಇನ್ನಿಂಗ್ಸ್​ಗಳನ್ನು ತೆಗೆದುಕೊಂಡಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.