Oliver Whitehouse: ಆರು ಎಸೆತಗಳಲ್ಲಿ ಆರು ವಿಕೆಟ್; ಡಬಲ್ ಹ್ಯಾಟ್ರಿಕ್ ಸಾಧನೆಯಿಂದ ರಾತ್ರೋರಾತ್ರಿ ಸುದ್ದಿಯಾದ 12ರ ಪೋರ
Cricket News: ಆಲಿವರ್ ವೈಟ್‌ಹೌಸ್ ಎಂಬ ಬಾಲಕ ಕ್ಲಬ್ ಪರ ಆಡುವಾಗ ಒಂದೇ ಓವರ್‌ನಲ್ಲಿ ಆರು ಬ್ಯಾಟರ್‌ಗಳ ವಿಕೆಟ್ ಪಡೆದಿದ್ದಾನೆ.
ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿರುವ ಉದಾಹರಣೆಗಳೇ ತೀರಾ ಕಡಿಮೆ. ಆದರೆ, ಇಲ್ಲೊಬ್ಬ 12 ವರ್ಷದ ಜೂನಿಯರ್ ಕ್ರಿಕೆಟಿಗ, ಒಂದು ಓವರ್‌ನ ಎಲ್ಲಾ ಆರು ಎಸೆತಗಳಲ್ಲಿ ಆರು ವಿಕೆಟ್ ಪಡೆದು ಸುದ್ದಿಯಾಗಿದ್ದಾನೆ. ಈ ಪಂದ್ಯ ನಡೆದಿದ್ದು ಭಾರತದಲ್ಲಿ ಅಲ್ಲ. ಈ ಸಾಧನೆ ಮಾಡಿದ ಬಾಲಕ ಕೂಡಾ ಭಾರತ ಮೂಲದವನು ಅಲ್ಲ.
ಸಣ್ಣ ವಯಸ್ಸಿನ ಬಾಲಕ ಆಲಿವರ್ ವೈಟ್‌ಹೌಸ್ (Oliver Whitehouse) ತಾನು ಪ್ರತಿನಿಧಿಸುವ ಕ್ಲಬ್ ಪರ ಆಡುವಾಗ ಒಂದೇ ಓವರ್‌ನಲ್ಲಿ 'ಡಬಲ್ ಹ್ಯಾಟ್ರಿಕ್' ಸಾಧನೆ ಮಾಡಿದ್ದಾನೆ. ಅಂದರೆ ಎಸೆದ ಆರು ಎಸೆತಗಳಲ್ಲಿ ಆರು ಬ್ಯಾಟರ್‌ಗಳ ವಿಕೆಟ್ ಪಡೆದಿದ್ದಾನೆ.
ಯುನೈಟೆಡ್ ಕಿಂಗ್‌ಡಮ್‌ನ ಬ್ರೋಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ (Bromsgrove Cricket Club) ಮತ್ತು ಕುಕ್ಹಿಲ್ (Cookhill) ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಬ್ರೋಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದ ವೈಟ್‌ಹೌಸ್ ಎಂಬ ಬಾಲಕ, ಆರು ಎಸೆತಗಳಲ್ಲಿ ಎದುರಾಳಿ ತಂಡದ ಆರು ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದಿದ್ದಾನೆ. ತಾನು ಎಸೆದ ಒಟ್ಟು ಎರಡು ಓವರ್‌ಗಳಲ್ಲಿ ಒಂದೇ ಒಂದು ರನ್ ಕೂಡಾ ಬಿಟ್ಟುಕೊಡದೆ ಬರೋಬ್ಬರಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾನೆ. ಬಾಲಕನ ಸಾಧನೆಗೆ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಾಲಕ ಯಾರು?
ಈ ಬಾಲಕನ ಸಾಧನೆಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ಬಾಲಕನ ರಕ್ತದಲ್ಲೇ ಕ್ರೀಡೆಯತ್ತ ಒಲವು ಇರುವುದಾಗಿ ಹಲವರು ಬಣ್ಣಿಸಿದ್ದಾರೆ. ಏಕೆಂದರೆ ಈ ವೈಟ್‌ಹೌಸ್ ಎಂಬ ಬಾಲಕನ ಅಜ್ಜಿಯ (ತಾಯಿಯ ತಾಯಿ) ಹೆಸರು ಆನ್ ಜೋನ್ಸ್. ಇವರು ಬೇರಾರೂ ಅಲ್ಲ. 1969ರಲ್ಲಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಆಗಿ ಹೊರಹೊಮ್ಮಿದವರು. ಹೀಗಾಗಿ ಅವರ ಮೊಮ್ಮಗನಾದ ವೈಟ್‌ಹೌಸ್ ಕೂಡಾ ಕ್ರೀಡಾ ಕ್ಷೇತ್ರದಲ್ಲಿ ಪರಾಕ್ರಮ ತೋರಿಸಲೇಬೇಕು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತಾಗಿ ಇಂಗ್ಲೆಂಡ್‌ನ ಸುದ್ದಿಸಂಸ್ಥೆ ಬಿಬಿಸಿ ಜೊತೆಗೆ ಮಾತನಾಡಿದ ಬ್ರೋಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್‌ನ ತಂಡದ ನಾಯಕ ಜೇಡನ್ ಲೆವಿಟ್, “ಒಂದು ಓವರ್‌ನಲ್ಲಿ ಡಬಲ್ ಹ್ಯಾಟ್ರಿಕ್ ಪಡೆಯುವುದು ನಿಜಕ್ಕೂ ಅದ್ಭುತ ಸಾಧನೆ. ಇದು ಅತ್ಯುತ್ತಮ ಪ್ರಯತ್ನ. ಆದರೆ, ಈ ಸಾಧನೆಯ ಮಹತ್ವವನ್ನು ಈಗಲೇ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅವನಿಗಿಲ್ಲ. ಸಾಕಷ್ಟು ವಯಸ್ಸಾಗುವವರೆಗೆ ಈ ಸಾಧನೆ ಎಷ್ಟು ದೊಡ್ಡದು ಎಂದು ಆತ ಅರಿತುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದ್ದಾರೆ.
ತನ್ನ ಸಾಧನೆಯನ್ನು ನಂಬಲಾಗುತ್ತಿಲ್ಲ ಎಂದು ಖುದ್ದು ಬಣ್ಣಿಸಿರುವ ಬಾಲಕ ವೈಟ್‌ಹೌಸ್, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ಷಣಮಾತ್ರದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಸಾವಿರಾರು ಜನ ವೀಕ್ಷಿಸುವುದರೊಂದಿಗೆ ಸಾಮಾಜಿಕ ಮಾಧ್ಯಮದ ಸಂಚಲನ ಸೃಷ್ಟಿಯಾಗಿದೆ.