ಕನ್ನಡ ಸುದ್ದಿ  /  ಕ್ರೀಡೆ  /  ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

Gukesh Dommaraju: ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದು ಮೊದಲ ಬಾರಿಗೆ ಡಿ ಗುಕೇಶ್‌ ಭಾರತಕ್ಕೆ ಮರಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಡಿ ಗುಕೇಶ್ ಬಂದಿಳಿದಾಗ ಕುಟುಂಬಸ್ಥರು, ಸ್ನೇಹಿತರು ಹಾಗೂ ಮಾಧ್ಯಮದವರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ
ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ (PTI)

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಚೆಸ್‌ ಗ್ರಾಂಡ್‌ ಮಾಸ್ಟರ್‌ ದೊಮ್ಮರಾಜು ಗುಕೇಶ್ (D Gukesh) ತವರು ನೆಲ ಭಾರತಕ್ಕೆ ಮರಳಿದ್ದಾರೆ. ಏಪ್ರಿಲ್‌ 25ರ ಗುರುವಾರ ಬೆಳಗ್ಗಿನ ಜಾವ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗುಕೇಶ್‌ ಅವರನ್ನು ನೂರಾರು ಜನ ಸ್ವಾಗತಿಸಿದರು. ಈ ವೇಳೆ ಗುಕೇಶ್‌ ಅವರ ವಿಡಿಯೋಗಾಗಿ ಮಾದ್ಯಮಗಳ ಹಲವಾರು ಕ್ಯಾಮರಾಗಳು ಜೂಮ್‌ ಹಾಕಿದವು. ಟೊರೊಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಮೆಂಟ್ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತದ 17 ವರ್ಷದ ಗುಕೇಶ್ ಪಾತ್ರರಾಗಿರುವುದು ವಿಶೇಷ. ವಿಶೇಷ ಸಾಧನೆಗಾಗಿ ದೇಶವೇ ಅವರನ್ನು ಕೊಂಡಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಗುಕೇಶ್ ಬಂದಿಳಿಯುತ್ತಿದ್ದಂತೆಯೇ‌, ಅವರ ಸ್ವಾಗತಕ್ಕಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರು ಸಜ್ಜಾಗಿದ್ದರು. ಕ್ಯಾಂಡಿಡೇಟ್ಸ್‌ ಟೂರ್ನಿಯ ಅಂತಿಮ ಸುತ್ತಿನಲ್ಲಿಅಮೆರಿಕದ ಹಿಕಾರು ನಕಮುರಾ ವಿರುದ್ಧ ಡ್ರಾ ಸಾಧಿಸುವ ಮೂಲಕ ಗುಕೇಶ್‌ ಐತಿಹಾಸಿಕ ಸಾಧನೆ ಮಾಡಿದ್ದಾರೆ.‌

ಡಿಂಗ್ ಲಿರೆನ್ ವಿರುದ್ಧ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಗೆಲ್ಲುವ ಭರವಸೆಯಲ್ಲಿ ಗುಕೇಶ್

ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ ಗೆಲ್ಲುವ ಮೂಲಕ ಮುಂದೆ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ಗೆ ಲಗ್ಗೆ ಹಾಕಿರುವ ಗುಕೇಶ್‌, ಅಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಚಿನಾದ ಎದುರಾಳಿ ಗ್ರ್ಯಾಂಡ್‌ ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು “ನಾನು ಸೋಲಿಸಬಲ್ಲೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಗುಕೇಶ್ ಭರವಸಯೆ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ | D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

ಗುಕೇಶ್‌ ತಾಯಿ ಪದ್ಮಾ ಪ್ರೀತಿಯ ಅಪ್ಪುಗೆ

17 ವರ್ಷದ ಗುಕೇಶ್‌ ಕೆನಡಾದ ಟೊರೊಂಟೊದಿಂದ ದುಬೈ ಮೂಲಕ 13,000 ಕಿಲೋಮೀಟರ್ ದೂರ ಪ್ರಯಾಣ ಮಾಡಿ ತಮಿಳುನಾಡಿನ ರಾಜಧಾನಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ತಮ್ಮ ತಂದೆ ರಜನಿಕಾಂತ್ ಜೊತೆಗೆ ಬಂದ ಗುಕೇಶ್‌ಗೆ ವಿಮಾನ ನಿಲ್ದಾಣದಲ್ಲಿ ತಾಯಿ ಪದ್ಮಾ ಬೆಚ್ಚನೆಯ ಅಪ್ಪುಗೆ ನೀಡಿದರು. ವಿಶ್ವ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿ ಬಂದ ಮಗನ್ನು ತಾಯಿ ಹೆಮ್ಮೆಯಿಂದ ತಬ್ಬಿಕೊಂಡು ಮಮತೆಯ ಮುತ್ತುಗಳ ಧಾರೆ ಎರೆದರು.

ಅದೃಷ್ಟ ನನ್ನೊಂದಿಗೆ ಇತ್ತು

ವಿಮಾನ ನಿಲ್ದಾಣದಲ್ಲಿ ಗುಕೇಶ್‌ಗೆ ಹಾರ ಹಾಕಿ ಸನ್ಮಾನಿಸಲಾಯ್ತು. ಅಲ್ಲದೆ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದರು. “ಇದು ನನ್ನ ಪಾಲಿಗೆ ವಿಶೇಷ ಸಾಧನೆ. ಟೂರ್ನಿಯುದ್ದಕ್ಕೂ ನಾನು ಉತ್ತಮ ಸ್ಥಿತಿಯಲ್ಲಿ ಆಡುತ್ತಿದ್ದೆ. ಏಳನೇ ಸುತ್ತಿನ ಸೋಲು ನನಗೆ ಪೆಟ್ಟು ನೀಡಿದ್ದರೂ, ನಾನು ಉತ್ತಮ ಮನಸ್ಥಿತಿಯಲ್ಲಿದ್ದ ಕಾರಣ ಅದರಿಂದ ಹೊರಬರಲು ಸಾಧ್ಯವಾಯಿತು. ಆರಂಭದಿಂದಲೂ ನಾನು ಕ್ಯಾಂಡಿಡೇಟ್ಸ್‌ ಗೆಲ್ಲಬಲ್ಲೆ ಎಂಬ ಸಂಪೂರ್ಣ ವಿಶ್ವಾಸವಿತ್ತು. ಅದೃಷ್ಟ ಕೂಡಾ ನನ್ನೊಂದಿಗೆ ಇದ್ದಿದ್ದರಿಂದ ಅದು ನೆರವೇರಿತು,” ಎಂದು ಗುಕೇಶ್‌ ಹೇಳಿದ್ದಾರೆ.

ಸದ್ಯ ವಿಶ್ವನಾಥನ್ ಆನಂದ್ ಬಳಿಕ ಕ್ಯಾಂಡಿಡೇಟ್ಸ್ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆಗೆ ಗುಕೇಶ ಪಾತ್ರರಾಗಿದ್ದಾರೆ. ಮುಂದೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ನಲ್ಲಿ, ಚೀನಾದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಗುಕೇಶ್ ಎದುರಿಸಲಿದ್ದಾರೆ.

ವಿಭಾಗ