ಕನ್ನಡ ಸುದ್ದಿ  /  ಕ್ರೀಡೆ  /  ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗುಕೇಶ್ ಡಿ‌, ಇದೀಗ ವಿಶ್ವ ಚೆಸ್ ಚಾಂಪಿಯನ್‌ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಬಾಲ್ಯದಲ್ಲೇ ಕಂಡ ಕನಸನ್ನು ನನಸಾಗಿಸುವತ್ತ ಮುನ್ನಡೆಯುತ್ತಿದ್ದಾರೆ.

ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್
ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್ (PTI)

ಟೊರೊಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಮೆಂಟ್ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತದ 17 ವರ್ಷದ ಚೆಸ್ ಆಟಗಾರ ಡಿ ಗುಕೇಶ್ (Gukesh D ಪಾತ್ರರಾದರು. ಅಂತಿಮ ಸುತ್ತಿನಲ್ಲಿಅಮೆರಿಕದ ಹಿಕಾರು ನಕಮುರಾ ವಿರುದ್ಧ ಡ್ರಾ ಸಾಧಿಸಿದ ಅವರು ಅದ್ವಿತೀಯ ಸಾಧನೆ ಮಾಡಿದ್ದಾರೆ. ಅಲ್ಲದೆ, ಚೆಸ್‌ ಆಟದಲ್ಲಿ ಭಾರತೀಯ ಸಾಧಕರ ಪಟ್ಟಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಗೆಲುವಿನೊಂದಿಗೆ, ವಿಶ್ವ ಚಾಂಪಿಯನ್‌ಶಿಪ್ ಚಾಲೆಂಜರ್ ಆದ ವಿಶ್ವದ ಅತ್ಯಂತ ಕಿರಿಯ ಹಾಗೂ ವಿಶ್ವನಾಥನ್ ಆನಂದ್ ನಂತರ ಪಂದ್ಯಾವಳಿ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ಅವರ ಈ ಸಾಧನೆಗೆ ಬಾಲ್ಯದಿಂದಲೇ ಕಂಡ ಕನಸು ಹಾಗೂ ಗುರಿಯನ್ನು ಬೆನ್ನೇರಿದ ಛಲವೇ ಪ್ರಮುಖ ಕಾರಣ.

ಟ್ರೆಂಡಿಂಗ್​ ಸುದ್ದಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಕೇಶ್‌ ಸುದ್ದಿಯಾಗಿರುವ ಸಂದರ್ಭದಲ್ಲಿ, ಅವರ ಹಳೆಯ ವಿಡಿಯೋವೊಂದು ವೈರಲ್‌ ಆಗಿದೆ. ಬಾಲ್ಯದಲ್ಲಿಯೇ ಮಹತ್ತರ ಕನಸು ಕಂಡು ಹೊತ್ತು ಅದನ್ನು ಸಾಧಿಸುವುದರ ಕುರಿತು ಸ್ಪಷ್ಟ ಗುರಿ ಹೊಂದಿದ್ದ ಗುಕೇಶ್‌, ಇದೀಗ ಸಾಧಿಸಿ ತೋರಿಸಿದ್ದಾರೆ. 11 ವರ್ಷ ವಯಸ್ಸಿನ ಬಾಲಕನಾಗಿದ್ದಾಗಲೇ, ಕಿರಿಯ ಚೆಸ್ ಚಾಂಪಿಯನ್ ಆಗುವ ಬಯಕೆಯನ್ನು ವ್ಯಕ್ತಪಡಿಸುವ ಹಳೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ವೈರಲ್‌ ವಿಡಿಯೋದಲ್ಲಿ ಸಂದರ್ಶಕರು ಬಾಲಕ ಗುಕೇಶ್‌ ಅವರ ಬಳಿ ಪ್ರಶ್ನೆ ಕೇಳುವುದನ್ನು ಕೇಳಬಹುದು, “ನಿಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆ ಏನು? ನಿಮ್ಮ ವಯಸ್ಸು ಈಗ ಕೇವಲ 11 ವರ್ಷ 6 ತಿಂಗಳು. ನೀವು ದೊಡ್ಡವರಾದ ಮೇಲೆ ಏನು ಮಾಡಲು ಬಯಸುತ್ತೀರಿ?” ಎಂದು ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ | D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

ಈ ವೇಳೆ ಹಿಂದೆ ಮುಂದೆ ಯೋಚಿಸದೆ, ತಮ್ಮ ಗುರಿಯ ಕುರಿತು ಸ್ಪಷ್ಟವಾಗಿದ್ದ ಗುಕೇಶ್‌ ನೇರವಾಗಿ ಉತ್ತರ ಕೊಡುತ್ತಾರೆ. ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. “ನಾನು ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಲು ಬಯಸುತ್ತೇನೆ” ಎಂಬುದಾಗಿ ಹೇಳುತ್ತಾರೆ. ಇಂಟರ್‌ವ್ಯೂ ಮಾಡುತ್ತಿದ್ದ ವ್ಯಕ್ತಿ ಕೂಡಾ ಬಾಲಕ ಗುಕೇಶ್‌ ಮಾತನ್ನು ಪುನರಾವರ್ತಿಸುತ್ತಾರೆ. ಅಲ್ಲದೆ ಗುಕೇಶ್‌ ಕುರಿತು ಭವಿಷ್ಯ ನುಡಿದ ಅವರು, “ಈ ಹುಡುಗ ಚೆಸ್ ಅನ್ನು ಸಂಪೂರ್ಣವಾಗಿ ಪ್ರೀತಿಸುತ್ತಾನೆ. ಈತ ಭಾರತೀಯ ಚೆಸ್‌ನಲ್ಲಿ ನಾವು ಗಮನಿಸಬೇಕಾದ ಮುಂದಿನ ದೊಡ್ಡ ವ್ಯಕ್ತಿತ್ವ ಆಗುತ್ತಾನೆ,” ಎಂದು ಹೇಳುತ್ತಾರೆ.

ಅದಾಗಿ ಹೆಚ್ಚು ವರ್ಷಗಳೇನು ಕಳೆದಿಲ್ಲ. ಇನ್ನೂ ಗುಕೇಶ್‌ ಹದಿಹರೆಯದ ಯುವಕ. ಅಷ್ಟರಲ್ಲೇ ಅಮೋಘ ಸಾಧನೆ ಮಾಡಿ ದೇಶಕ್ಕೆ ಹೆಸರು ತಂದಿದ್ದಾನೆ. ತನ್ನ ಬಾಲ್ಯದ ಗುರಿ ಹಾಗೂ ಕನಸಿನಂತೆ ಗುಕೇಶ್ ಸುತ್ತಮುತ್ತ ಅಭಿಮಾನಿಗಳು ಸುತ್ತುವರೆದಿರುವ ವಿಡಿಯೋ ವೈರಲ್‌ ಆಗಿದೆ. ಅವರಿಂದ ಅಟೋಗ್ರಾಫ್‌ ಪಡೆಯುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.

ಸದ್ಯ ಕ್ಯಾಂಡಿಡೇಟ್ಸ್‌ ಟೂರ್ನಿ ಗೆಲುವಿನೊಂದಿಗೆ ತನ್ನ ಕನಸನ್ನು ನನಸಾಗಿಸುವತ್ತ ಗುಕೇಶ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಚೀನಾದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಡಿಂಗ್ ಲಿರೆನ್‌ ವಿರುದ್ಧ ಗೆದ್ದರೆ, ಗುಕೇಶ್ ತಮ್ಮ ಗುರಿ ಸಾಧಿಸಿದಂತಾಗುತ್ತದೆ. ಅಂದರೆ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಲಿದ್ದಾರೆ. ಈ ಹಿಂದೆ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ಗ್ಯಾರಿ ಕಾಸ್ಪರೋವ್ ಅವರು ತಮ್ಮ 22ನೇ ವರ್ಷ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ವಿಭಾಗ