PKL: ಬೆಂಗಳೂರು ಬುಲ್ಸ್‌ಗೆ ಕಿಚ್ಚನ ಬೆಂಬಲ; ಪ್ರೊ ಕಬಡ್ಡಿ ಲೀಗ್ ಪ್ರೊಮೋದಲ್ಲಿ ಮಿಂಚಿದ ಸುದೀಪ್
Pro kabaddi League: ಪಿಕೆಎಲ್ ಪ್ರಮೋಷನ್ ವಿಡಿಯೋದಲ್ಲಿ ಕಿಚ್ ಸುದೀಪ್ ಕಾಣಿಸಿಕೊಂಡಿದ್ದಾರೆ. ಸಹಜವಾಗಿ ಡೈನಾಮಿಕ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ, ಬೆಂಗಳೂರು ಬುಲ್ಸ್ ತಂಡದ ಸಾಮರ್ಥ್ಯ ಪ್ರದರ್ಶಿಸುವ ದೃಶ್ಯದಲ್ಲಿ ಜನರನ್ನು ಸೆಳೆದಿದ್ದಾರೆ.

ಪ್ರೊ ಕಬಡ್ಡಿ ಲೀಗ್ (PKL) 11ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡವು ಎರಡನೇ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಈ ನಡುವೆ ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು, ಹೊಸ ಸೀಸನ್‌ಗಾಗಿ ಜಾಹೀರಾತು ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ನಿರೀಕ್ಷೆಯಂತೆಯೇ ಕಿಚ್ಚ ಬೆಂಗಳೂರು ಬುಲ್ಸ್ ತಂಡಕ್ಕೆ ಬೆಂಬಲ ನೀಡುವ ಜಾಹೀರಾತು ವಿಡಿಯೋದಲ್ಲಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂದ್ದಾರೆ.
ಕಮಾಂಡಿಂಗ್ ಮಾತುಗಳು, ಖಡಕ್ ನೋಟ ಹಾಗೂ ಡೈನಾಮಿಕ್ ಪ್ರದರ್ಶನಗಳಿಗೆ ಕಿಚ್ಚ ಹೆಸರುವಾಸಿ. ಈ ಹಿಂದೆಯೂ ಸುದೀಪ್ ಪಿಕೆಎಲ್ ಟೂರ್ನಿ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದರು. ಬೆಂಗಳೂರು ಬುಲ್ಸ್ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ಮೈದಾನಕ್ಕೆ ಬಂದಿದ್ದರು. ಇದೀಗ ಪಿಕೆಎಲ್ ಆವೃತ್ತಿಗಾಗಿ ಸ್ಟಾರ್‌ಸ್ಪೋರ್ಟ್ ನಡೆಸುತ್ತಿರುವ ಕ್ಯಾಂಪೇನ್‌ನಲ್ಲಿಯೂ ಕಿಚ್ಚ ಸುದೀಪ್ ಮತ್ತೆ ಪಾಲ್ಗೊಂಡಿದ್ದಾರೆ.
ಪಿಕೆಎಲ್‌ನಲ್ಲಿ ಅತಿ ಹೆಚ್ಚು ಫಾಲೊವರ್‌ಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾದ ಬೆಂಗಳೂರು ಬುಲ್ಸ್ ತಂಡದ ಸಾಮರ್ಥ್ಯ, ಶಕ್ತಿ, ದೃಢತೆ ಮತ್ತು ಅದಮ್ಯ ಮನೋಭಾವವನ್ನು ಕಿಚ್ಚ ವಿಡಿಯೋದಲ್ಲಿ ವ್ಯಕ್ತಪಡಿಸಿದ್ದಾರೆ. ಪ್ರೋಮೋ ಆಕರ್ಷಕವಾಗಿದ್ದು, ಬೆಂಗಳೂರು ಬುಲ್ಸ್ ತಂಡದ ಟ್ರೇಡ್ ಮಾರ್ಕ್ ಆಗಿರುವ ಗೂಳಿಯಂತೆ ಕಿಚ್ಚ ಸುದೀಪ್ ಮುನ್ನುಗ್ಗುತ್ತಿರುವುದನ್ನು ನೋಡಬಹುದು. ಬುಲ್ಸ್ ಬಳಗವನ್ನು ಗೂಳಿಗಳ ಬಳಗವೆಂದೇ ಹೇಳುವುದು ಹೆಚ್ಚು. ಅದರಂತೆ ಪ್ರಬಲವಾದ ಆನೆಯನ್ನು ಕಿಚ್ಚ ಎದುರಿಸುತ್ತಾರೆ. ಎದುರಾಳಿ ತಂಡದ ಡಿಫೆಂಡರ್‌ಗಳು ಆನೆಯಂತೆ ಪ್ರಬಲರಾಗಿದ್ದರೂ, ಗೂಳಿಯಂತೆ ಹೋರಾಡಿ ಮುನ್ನುಗ್ಗಿ ಗೆಲ್ಲುವುದನ್ನು ಈ ದೃಶ್ಯ ತೋರಿಸುತ್ತದೆ. ಆನೆಯು ತನ್ನ ಸೊಂಡಿಲಿನಿಂದ ಕಿಚ್ಚನನ್ನು ಹಿಡಿದು ಹಿಂದಕ್ಕೆ ಎಳೆದರೂ, ಗೂಳಿಯಂಥಾ ಬಲದ ಕಿಚ್ಚ (ಬೆಂಗಳೂರು ಬುಲ್ಸ್) ತನ್ನ ಶಕ್ತಿ ಸಾಮರ್ಥ್ಯದೊಂದಿಗೆ ಮಧ್ಯದ ಗೆರೆಯನ್ನು ಮುಟ್ಟಿ ಗೆಲ್ಲುವ ಚಿತ್ರಣವನ್ನು ವಿಡಿಯೋ ಬಿತ್ತರಿಸುತ್ತದೆ.
ಈ ಪ್ರೊಮೋದ ಮೂಲಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಸ್ಥಳೀಯ ಸಂಸ್ಕೃತಿ ಮತ್ತು ಕಬಡ್ಡಿ ಕ್ರೀಡೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಸುಂದರವಾಗಿ ಹೆಣೆದಿದೆ. ಪ್ರೊ ಕಬಡ್ಡಿ ಲೀಗ್ ಹಾಗೂ ಬೆಂಗಳೂರು ಬುಲ್ಸ್ ತಂಡದೊಂದಿಗೆ ಕರ್ನಾಟಕದ ಜನರ ಆಳವಾದ ಬೇರೂರಿರುವ ಸಂಪರ್ಕವನ್ನು ಬಲಪಡಿಸುತ್ತದೆ.
ಕಿಚ್ಚನ ಮಾತು
ಪ್ರೋಮೋ ತುಣುಕಿನ ಕುರಿತು ಮಾತನಾಡಿರುವ ಕಿಚ್ಚ ಸುದೀಪ್, "ಪ್ರೊ ಕಬಡ್ಡಿ ಲೀಗ್‌ನೊಂದಿಗೆ ನನಗೆ ಹಲವು ವರ್ಷಗಳಿಂದ ನಂಟಿದೆ. ಈ ಕ್ರೀಡೆಯು ಹೇಗೆ ಶಕ್ತಿ, ದೃಢತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಒಳಗೊಂಡಿದೆ ಎಂಬುದನ್ನು ನಾನು ನೇರವಾಗಿ ನೋಡಿದ್ದೇನೆ. ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸುವ ಈ ಅಭಿಯಾನವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ ಇದು ಕನ್ನಡಿಗರಿಗೆ ಸ್ಫೂರ್ತಿ ನೀಡುವ ಮತ್ತು ತವರಿನ ತಂಡಕ್ಕೆ ಶಕ್ತಿಯ ಸಂಕೇತವಾಗಿದೆ. ಮತ್ತೊಮ್ಮೆ ಪಿಕೆಎಲ್ ಪ್ರಯಾಣದ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ. ಈ ಬಾರಿಯೂ ಬುಲ್ಸ್ ಚಂಡಮಾರುತವನ್ನು ನೋಡಲು ಕಾಯುತ್ತಿದ್ದೇನೆ," ಎಂದಿದ್ದಾರೆ.