Mahendra Singh Dhoni: ಎಂಎಸ್ ಧೋನಿ ಈಗ ವಯಾಕಾಮ್18 ಬ್ರಾಂಡ್ ಅಂಬಾಸಿಡರ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಕಾನ್ ಆಗಿರುವ ಮಾಹಿ ಜಿಯೋ ಸಿನಿಮಾ, ಸ್ಪೋರ್ಟ್ಸ್18 ಮತ್ತು ಸಂಸ್ಥೆಯ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ನೆಟ್ವರ್ಕ್‌ನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಹಾಗೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿಯ ಚಾಂಪಿಯನ್ ಆಗುವತ್ತ ಮುನ್ನಡೆಸಿದ ಎಂಎಸ್ ಧೋನಿ ಅವರನ್ನು 'ವಯಾಕಾಮ್18' ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ. ಡಿಜಿಟಲ್ ಮೂಲಕ ಕ್ರೀಡೆಯ ನೇರಪ್ರಸಾರ ವೀಕ್ಷಣೆಯನ್ನು ವರ್ಧಿಸುವ ಸಂಸ್ಥೆಯ ಧ್ಯೇಯವನ್ನು ಧೋನಿ ಪ್ರಚಾರ ರಾಯಭಾರಿಯಾಗಿ ಹೆಚ್ಚಿನ ಜನರಿಗೆ ತಲುಪಿಸಲಿದ್ದಾರೆ.
ಸದ್ಯ ವಯಾಕಾಮ್18 (Viacom18) ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಡಿಜಿಟಲ್ ಹಕ್ಕುಗಳನ್ನು ಹೊಂದಿದೆ. ವಿಶ್ವ ಕ್ರಿಕೆಟ್‌ನ ಅತ್ಯಂತ ಆಟಗಾರರಲ್ಲಿ ಒಬ್ಬರಾಗಿರುವ ಧೋನಿ, ಅಭಿಮಾನಿಗಳು ತಮ್ಮ ನೆಚ್ಚಿನ ಕ್ರೀಡೆಯನ್ನು ವೀಕ್ಷಿಸಲು ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಮಾಡಲು ವಯಾಕಾಮ್18 ಜತೆ ಧೋನಿ ಕಾರ್ಯನಿರ್ವಹಿಸಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಕಾನ್ ಆಗಿರುವ ಮಾಹಿ ಜಿಯೋ ಸಿನಿಮಾ, ಸ್ಪೋರ್ಟ್ಸ್18 ಮತ್ತು ಸಂಸ್ಥೆಯ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ನೆಟ್ವರ್ಕ್‌ನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಿಎಸ್‌ಕೆ ಅಭಿಮಾನಿಗಳಿಂದ 'ತಲಾ' ಎಂದೇ ಕರೆಯಲ್ಪಡುವ ಕೂಲ್ ಕ್ಯಾಪ್ಟನ್, ಜಿಯೋ ಸಿನಿಮಾದ ಮುಂಬರುವ ಟಾಟಾ ಐಪಿಎಲ್ ಅಭಿಯಾನದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
'ನೀವು ನಿಮ್ಮ ಮನೆಯಲ್ಲಿ ನೆಚ್ಚಿನ ಕ್ರೀಡೆಗಳನ್ನು ಆನಂದಿಸಲು ಬಯಸುತ್ತೀರಿ. ಆದರೆ, ನೀವು ಪ್ರಯಾಣದಲ್ಲಿರುವಾಗ ಡಿಜಿಟಲ್ ವೇದಿಕೆಗಳ ಮೂಲಕ ಮಾತ್ರ ಅದನ್ನು ವೀಕ್ಷಿಸಲು ಸಾಧ್ಯ. ಅಭಿಮಾನಿಗಳು ಎಂದಿಗೂ ಊಹಿಸದ ರೀತಿಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಜಿಯೋ ಸಿನಿಮಾ ಹೊಸ ಮಟ್ಟದ ಅವಕಾಶವನ್ನು ಕಲ್ಪಿಸುತ್ತಿದೆ. ಈ ಮಾದರಿಯ ಬದಲಾವಣೆಯ ಭಾಗವಾಗಲು ನಾನು ಅತ್ಯಂತ ಕಾತರಗೊಂಡಿದ್ದೇನೆ' ಎಂದು ಎಂಎಸ್ ಧೋನಿ ಹೇಳಿದ್ದಾರೆ.
'ಎಂಎಸ್ ಧೋನಿ ಅವರ ನಾಯಕತ್ವ ಮತ್ತು ಗೇಮ್-ಚೇಜಿಂಗ್ ಸಾಮರ್ಥ್ಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಅವರ ವಿನಮ್ರ ಮತ್ತು ಸರಳ ವ್ಯಕ್ತಿತ್ವವು ಡಿಜಿಟಲ್ ಮಾಧ್ಯಮದೊಂದಿಗೆ ಸಾಮ್ಯತೆ ಹೊಂದಿದೆ. ಅವರು ಪಾರದರ್ಶಕತೆಯನ್ನು ಗೌರವಿಸುತ್ತಾರೆ. ಇದು ಡಿಜಿಟಲ್ ವೇದಿಕೆಯಲ್ಲಿ ಕ್ರೀಡಾ ವೀಕ್ಷಣೆಯನ್ನು ಪ್ರತಿಪಾದಿಸುವ ನಮ್ಮ ದೃಷ್ಟಿಯೊಂದಿಗೂ ಸರಿಹೊಂದುತ್ತದೆ' ಎಂದು ವಯಾಕಾಮ್18-ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎಂ ಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎದುರಿಸುವುದರೊಂದಿಗೆ 2023ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಚಾಲನೆ ಸಿಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 31ರಂದು ಪಂದ್ಯ ಆರಂಭಗೊಳ್ಳಲಿದೆ.
ಈ ವರ್ಷದ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಯಾವುದೇ ಶುಲ್ಕ ಪಾವತಿಸದೆ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು. ಇದರೊಂದಿಗೆ, ಜಿಯೋ ಸಿನಿಮಾ 4ಕೆ ಫೀಡ್ಅನ್ನೂ ಪೂರೈಸಲಿದೆ. ವಿಡಿಯೋವನ್ನು ತಮಗಿಷ್ಠದ ಗುಣಮಟ್ಟದೊಂದಿಗೆ(ರೆಸೊಲ್ಯೂಷನ್) ಬಹುಭಾಷೆಯ ಆಯ್ಕೆಯೊಂದಿಗೆ ವೀಕ್ಷಿಸಬಹುದು. ಇದರೊಂದಿಗೆ 700 ದಶಲಕ್ಷಕ್ಕೂ ಅಧಿಕ ಇಂಟರ್ನೆಟ್ ಬಳಕೆದಾರರಿಗೆ 2023ರ ಟಾಟಾ ಐಪಿಎಲ್ ತಲುಪಲಿದೆ.
ಜಿಯೋ ಸಿನಿಮಾ ಈಗ ಜಿಯೋ, ಏರ್ಟೆಲ್ ಹಾಗೂ ಬಿಎಸ್ಎನ್ಎಲ್ ಸಬ್ಸ್‌ಸ್ಕ್ರೈಬರ್‌ಗಳಿಗೆ ಲಭ್ಯವಿದೆ. ಇದರಲ್ಲಿ ಐದು ಭಾಷೆಗಳಾದ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ವಿಮೆನ್ಸ್ ಪ್ರೀಮಿಯರ್ ಲೀಗ್‌ನ ಎಲ್ಲ ಪಂದ್ಯಗಳ ನೇರಪ್ರಸಾರವನ್ನೂ ವೀಕ್ಷಿಸಬಹುದಾಗಿದೆ.