ಒಲಿಂಪಿಕ್ಸ್ ಅಥ್ಲಿಟ್‌ಗಳ ಸಮವಸ್ತ್ರದ ಬಗ್ಗೆ ಆಕ್ರೋಶ; ಮುಂಬೈ ಬೀದಿಗಳಲ್ಲಿ ಇದಕ್ಕಿಂತ ಉತ್ತಮ ಬಟ್ಟೆ ಸಿಗುತ್ತೆ ಎಂದ ಲೇಖಕಿ
Paris Olympics: 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಧರಿಸಿದ್ದ ಉಡುಪು ಡಿಸೈನ್ ಮಾಡಿದ್ದ ಖ್ಯಾತ ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಕುತೂಹಲದಿಂದ ಕಾಯುತ್ತಿದ್ದ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರ ಶುಕ್ರವಾರ ಅದ್ದೂರಿ ಮತ್ತು ವರ್ಣರಂಜಿತ ಆರಂಭ ಪಡೆದುಕೊಂಡಿದೆ. ಆದರೆ, ಖ್ಯಾತ ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ಅವರು ಕ್ರೀಡಾಪಟುಗಳಿಗೆ ಸಿದ್ಧಪಡಿಸಿದ ಡಿಸೈನ್ ಪ್ರಭಾವ ಬೀರಲು ವಿಫಲವಾಗಿದೆ. ಇಕಾತ್ ಪ್ರೇರಿತವಾಗಿ ತಿರಂಗಾ ಕಾನ್ಸೆಪ್ಟ್ನಡಿ ಅಥ್ಲೀಟ್ಗಳ ಡ್ರೆಸ್ಕೋಡ್ ವಿನ್ಯಾಸ ಮಾಡಿದ್ದರು. ಮುಂಬೈನ ಬೀದಿಗಳಲ್ಲಿ 200 ರೂಪಾಯಿಗೆ ಇದಕ್ಕಿಂತ ಚೆನ್ನಾಗಿರುವ ಉಡುಪುಗಳು ಸಿಗುತ್ತವೆ ಎಂದು ಟೀಕಿಸಲಾಗುತ್ತಿದೆ.
ಖ್ಯಾತ ಲೇಖಕಿ ಮತ್ತು ನಿರೂಪಕಿಯಾಗಿರುವ ನಂದಿತಾ ಅಯ್ಯರ್ ಅವರು ಬಟ್ಟೆಯ ಆಯ್ಕೆ, ವಿನ್ಯಾಸವನ್ನು ಟೀಕಿಸುವ ಮೂಲಕ ತಮ್ಮ ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ನೇರವಾಗಿ ತರುಣ್ ತಹಿಲಿಯಾನಿ ಅವರನ್ನೇ ಟೀಕಿಸಿದ್ದಾರೆ. 'ಹಲೋ ತರುಣ್ ತಹಿಲಿಯಾನಿ! ನೀವು ವಿನ್ಯಾಸಗೊಳಿಸಿದ ಈ ಸಾಂಪ್ರದಾಯಿಕ ಉಡುಪುಗಳಿಗಿಂತ ಮುಂಬೈ ಬೀದಿಗಳಲ್ಲಿ 200 ರೂಪಾಯಿಗೆ ಮಾರಾಟವಾಗುವ ಉತ್ತಮ ಸೀರೆಗಳನ್ನು ನಾನು ನೋಡಿದ್ದೇನೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇಕಟ್ ಪ್ರಿಂಟ್, ಪಾಲಿಸ್ಟರ್‌ನಂತಹ ಕಡಿಮೆ ಗುಣಮಟ್ಟದ ಫ್ಯಾಬ್ರಿಕ್ ಬಳಸಿ ತ್ರಿವರ್ಣ ಧ್ವಜ ಹೋಲುವ ಬಟ್ಟೆಗಳನ್ನು ವಿನ್ಯಾಸ ಮಾಡಿರುವುದು ವಿಷಾದನೀಯ. ಈ ವಿನ್ಯಾಸವನ್ನು ಇಂಟರ್ನೆಟ್ನಲ್ಲಿ ಆರ್ಡರ್ ಕೊಟ್ಟು ಮಾಡಿಸಿದ್ದೀರಾ ಅಥವಾ ಡೆಡ್ಲೈನ್ನ ಕೊನೆಯ 3 ನಿಮಿಷಗಳ ಮೊದಲು ಇದನ್ನು ಖರೀದಿಸಿದ್ರಾ? ಇದು ಭಾರತದ ಶ್ರೀಮಂತ ನೇಯ್ಗೆ ಸಂಸ್ಕೃತಿ ಮತ್ತು ಇತಿಹಾಸಕ್ಕೆ ನೀವು ಮಾಡಿದ ಅವಮಾನ ಎಂದು ನಂದಿತಾ ಅಯ್ಯರ್ ಕಿಡಿಕಾರಿದ್ದಾರೆ.
ಇನ್ನೂ ಕೆಲವರು ಇದೇ ರೀತಿ ಟೀಕೆ ವ್ಯಕ್ತಪಡಿಸಿ, ಜವಳಿ ಮತ್ತು ಕೈಮಗ್ಗದಲ್ಲಿ ಭಾರತದ ಶ್ರೀಮಂತ ಪರಂಪರೆಯನ್ನು ನೆನಪಿಸಿಕೊಂಡರು. ಆದರೆ ಜಾಗತಿಕ ವೇದಿಕೆಯಲ್ಲಿ ಭಾರತ ಕ್ರೀಡಾಪಟುಗಳು ಧರಿಸಿದ್ದ ಉಡುಪು ಏಕೆ ಅಷ್ಟು ಕಳಪೆಯಾಗಿತ್ತು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟಿ ತಾರಾ ದೇಶಪಾಂಡೆ ಪ್ರತಿಕ್ರಿಯಿಸಿ, ಆ ಡ್ರೆಸ್ನಲ್ಲಿ ನಿಜವಾಗಲೂ ಭಯಂಕರವಾಗಿ ಕಾಣುತ್ತಾರೆ. ನಾವು ಭಾರತದಲ್ಲಿ ಶ್ರೇಷ್ಠ ಜವಳಿ ಸಂಪ್ರದಾಯವನ್ನು ಹೊಂದಿದ್ದೇವೆ. ಈ ವಿನ್ಯಾಸವನ್ನು ಯಾರು ಪಾಸ್ ಮಾಡಿದರು? ಇದಕ್ಕಾಗಿ ಬಜೆಟ್ ಮಾಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಪುರುಷ ಕ್ರೀಡಾಪಟುಗಳು ತ್ರಿವರ್ಣ ಧ್ವಜದ ಕೇಸರಿ ಮತ್ತು ಹಸಿರು ಬಣ್ಣ ಹೊಂದಿರುವ ಜಾಕೆಟ್ನೊಂದಿಗೆ ಬಿಳಿ ಕುರ್ತಾ ಪೈಜಾಮಾ ಧರಿಸಿದ್ದರು. ಮಹಿಳಾ ಕ್ರೀಡಾಪಟುಗಳು ಸೀರೆ ಉಟ್ಟಿದ್ದರು. 'ತರುಣ್ ತಹಿಲಿಯಾನಿ ಅವರು ಫೋನ್ ಮಾಡಿ ಡಿಸೈನ್ ಮಾಡಿಸಿದಂತಿದೆ ಎಂದು ನೆಟ್ಟಿಗ ಅಜಯ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಫ್ಯಾಷನ್ ರಾಜಧಾನಿಯಲ್ಲಿ ಭಾರತೀಯ ಕ್ರೀಡಾಪಟು ಮಂದ ಮತ್ತು ಸಾಮಾನ್ಯ ರೀತಿಯಲ್ಲಿ ಕಾಣುತ್ತಿದ್ದರು. ತರುಣ್ ತಹಿಲಿಯಾನಿ ಅವರ ಪ್ಲಾಸ್ಟಿಕ್ ಶೀಟ್ ತರಹದ ಸೀರೆ, ಮುದ್ರಿತ ಇಕಾತ್ ಮತ್ತು ತ್ರಿವರ್ಣ ಧ್ವಜದ ಕಲ್ಪನೆಯಿಲ್ಲದ ಬಳಕೆಯು ಭಾರತೀಯ ಜವಳಿ ಜಗತ್ತಿಗೆ ಬಾಗಿಲು ಹಾಕುವಂತೆ ಮಾಡಿದ್ದೀರಿ ಎಂದು ಮಲಯಾಳಂ ಬರಹಗಾರ ಎನ್ ಎಸ್ ಮಾಧವನ್ ಹೇಳಿದ್ದಾರೆ. ಸಾಕಷ್ಟು ಟೀಕೆಗಳ ನಡುವೆಯೂ ಈ ಡ್ರೆಸ್ಕೋಡ್ ವಿನ್ಯಾಸಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ತಿರಂಗಾ ಕಾನ್ಸೆಪ್ಟ್ ಚೆನ್ನಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ತಹಿಲಿಯಾನಿ ಅವರ ಡಿಸೈನ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.