Archery: ಬಿಲ್ಲುಗಾರಿಕೆ ನಿಯಮಗಳೇನು; ಒಲಿಂಪಿಕ್ಸ್‌ನಲ್ಲಿ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ?
ಕನ್ನಡ ಸುದ್ದಿ  /  ಕ್ರೀಡೆ  /  Archery: ಬಿಲ್ಲುಗಾರಿಕೆ ನಿಯಮಗಳೇನು; ಒಲಿಂಪಿಕ್ಸ್‌ನಲ್ಲಿ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ?

Archery: ಬಿಲ್ಲುಗಾರಿಕೆ ನಿಯಮಗಳೇನು; ಒಲಿಂಪಿಕ್ಸ್‌ನಲ್ಲಿ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ?

ಭಾರತೀಯ ಪುರಾಣಗಳಲ್ಲೇ ಬಿಲ್ಲುಗಾರಿಕೆಯ ಬಗ್ಗೆ ಹೇಳಲಾಗಿದೆ. ಇದೇ ಬಿಲ್ಲುಗಾರಿಕೆಯು ಆರ್ಚರಿ ಕ್ರೀಡೆಯ ರೂಪದಲ್ಲಿ ಒಲಿಂಪಿಕ್ಸ್‌ನಲ್ಲಿಯೂ ಆಡಲಾಗುತ್ತದೆ. ಹಾಗಿದ್ದರೆ ಬಿಲ್ಲುಗಾರಿಕೆಯ ನಿಯಮಗಳೇನು? ಅಂಕಗಳನ್ನು ನೀಡುವ ಬಗೆ ಹೇಗೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

ಬಿಲ್ಲುಗಾರಿಕೆ ನಿಯಮಗಳೇನು; ಒಲಿಂಪಿಕ್ಸ್‌ನಲ್ಲಿ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬಿಲ್ಲುಗಾರಿಕೆ ನಿಯಮಗಳೇನು; ಒಲಿಂಪಿಕ್ಸ್‌ನಲ್ಲಿ ವಿಜೇತರನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯುವುದಕ್ಕೂ ಮುನ್ನವೇ ಆರ್ಚರಿ ಶ್ರೇಯಾಂಕ ಸುತ್ತುಗಳು ಆರಂಭವಾಗಿವೆ. ಈಗಾಗಲೇ ಭಾರತ ವನಿತೆಯರ ತಂಡವು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಆರ್ಚರಿ ಕ್ರೀಡೆಗೆ ಕನ್ನಡದಲ್ಲಿ ಬಿಲ್ಲುಗಾರಿಕೆ ಎಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಬಿಲ್ಲು ಮತ್ತು ಬಾಣವನ್ನು ಬಳಸಿ ಈ ಗೇಮ್‌ ಆಡಲಾಗುತ್ತದೆ. ನಿಗದಿತ ಗುರಿಗೆ ಬಾಣ ಹೊಡೆದು ಹೆಚ್ಚು ಅಂಕಗಳನ್ನು ಕಲೆ ಹಾಕುವವರು ವಿಜೇತರಾಗುತ್ತಾರೆ. ಹಾಗಿದ್ದರೆ ಒಲಿಂಪಿಕ್ಸ್‌ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಬಿಲ್ಲುಗಾರಿಕೆಯ ನಿಯಮಗಳೇನು? ಅಂಕಗಳನ್ನು ಹೇಗೆ ನೀಡಲಾಗುತ್ತದೆ? ಎಷ್ಟು ಸುತ್ತುಗಳಲ್ಲಿ ಆಡಿಸಲಾಗುತ್ತದೆ ಎಂಬುದನ್ನು ನೋಡೋಣ.

ಒಲಿಂಪಿಕ್ಸ್‌ನಲ್ಲಿ ಆರ್ಚರಿ ನಿಯಮಗಳೇನು?

ಒಲಂಪಿಕ್ ಸ್ಪರ್ಧೆಯಲ್ಲಿ ಆರಂಭದಲ್ಲಿ ಶ್ರೇಯಾಂಕ ಸುತ್ತನ್ನು ಆಡಿಸಲಾಗುತ್ತದೆ. ಕ್ರೀಡಾಪಟುಗಳು ಒಟ್ಟು 12 ಹಂತಗಳಲ್ಲಿ 72 ಬಾಣಗಳನ್ನು ಹೂಡಲು ಅವಕಾಶ ನೀಡಲಾಗುತ್ತದೆ. ಪ್ರತಿ ಬಿಲ್ಲುಗಾರರು ತಲಾ 36ರಂತೆ ಎರಡು ಹಂತದಲ್ಲಿ ಬಾಣಗಳನ್ನು ಹೂಡಬೇಕು. ಒಂದು ಹಂತದಲ್ಲಿ 6 ಸೆಟ್‌ಗಳಿರುತ್ತವೆ. ಅಂದರೆ 36 ಸಲ ಬಾಣ ಹೊಡೆಯಲು ಅವಕಾಶ ಸಿಕ್ಕಂತಾಯ್ತು. ಒಂದು ಸೆಟ್‌ನಲ್ಲಿ ಒಬ್ಬರು ಆರು ಬಾಣಗಳನ್ನು ಗುರಿಯತ್ತ ಹೊಡಯಬಹುದಾಗಿದೆ. ಅಂತಿಮವಾಗಿ ಒಟ್ಟು 12 ಹಂತಗಳಲ್ಲಿ 72 ಬಾಣಗಳನ್ನು ಹೊಡೆದ ಬಳಿಕ ಒಟ್ಟಾರೆ ಸ್ಕೋರ್ ಮೂಲಕ ಆಟಗಾರರ ಶ್ರೇಯಾಂಕ ನಿರ್ಧರಿಸಲಾಗುತ್ತದೆ.

ಶ್ರೇಯಾಂಕ ಸುತ್ತಿನಲ್ಲಿ ತಂಡಗಳ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತವೆ. ಉಳಿದಂತೆ 5ರಿಂದ 12ನೇ ಸ್ಥಾನ ಪಡೆಯುವ ತಂಡಗಳು ರೌಂಡ್ ಆಫ್ 16 ಸುತ್ತಿನಲ್ಲಿ ಆಡುತ್ತವೆ. ಅಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳುತ್ತವೆ. ಆ ಬಳಿಕ ನಾಕೌಟ್ ಹಂತದಲ್ಲಿ ತಮ್ಮ ಎದುರಾಳಿಗಿಂತ ಹೆಚ್ಚು ಸ್ಕೋರ್ ಮಾಡಬೇಕು. ಹೆಚ್ಚು ಅಂಕಗಳನ್ನು ಗಳಿಸುವ ತಂಡದ ಆಟಗಾರರು ಆಯಾ ಸುತ್ತಿನಲ್ಲಿ ಗೆಲುವು ಸಾಧಿಸುತ್ತಾರೆ.

ಅಂಕಗಳನ್ನು ನೀಡುವುದು ಹೇಗೆ

ಬಿಲ್ಲುಗಾರನು ತನ್ನ ಬಾಣಗಳನ್ನು ಎದುರಿಗಿರುವ ಗುರಿಗೆ ಹೊಡೆಯಬೇಕು. ಅದರ ಆಧಾರದ ಮೇಲೆ ಅಂಕಗಳನ್ನೂ ನೀಡಲಾಗುತ್ತದೆ. ಒಂದು ಬಾಣಕ್ಕೆ ಗರಿಷ್ಠ 10 ಅಂಕಗಳನ್ನು ಪಡೆಯಬಹುದು. ಗುರಿಯ ರಿಂಗ್‌ನ ಒಳಗಿನ ಚಿನ್ನದ ಉಂಗುರದ ವೃತ್ತಕ್ಕೆ ಹೊಡೆದರೆ 10 ಅಂಕ ಸಿಗುತ್ತದೆ. ಕನಿಷ್ಠ ಅಂಕವೆಂದರೆ ಒಂದು ಪಾಯಿಂಟ್. ಗುರಿಯ ಬೋರ್ಡ್‌ನ ಹೊರಗಿನ ಅಥವಾ ಕೊನೆಯ ಬಿಳಿ ವೃತ್ತಕ್ಕೆ ಹೊಡೆದರೆ ಒಂದು ಅಂಕ ನೀಡಲಾಗುತ್ತದೆ. ಗುರಿ ತಪ್ಪಿದ ಅಥವಾ ಈ ಗುರಿಯ ಬೋರ್ಡ್‌ನ ಹೊರಕ್ಕೆ ಹೊಡೆದ ಬಾಣಗಳಿಗೆ ಸ್ಕೋರ್ ಸಿಗುವುದಿಲ್ಲ. ಋಣಾತ್ಮಕ ಅಂಕಗಳು ಕೂಡಾ ಇರುವುದಿಲ್ಲ.

ಬಿಲ್ಲುಗಾರಿಕೆಯ ಸಾಮಾನ್ಯ ನಿಯಮಗಳು

  • ಬಿಲ್ಲುಗಾರರು ಕ್ರೀಡೆಯ ಅಧಿಕೃತ ನಿಯಮಗಳಿಗೆ ಬದ್ಧರಾಗಿರಬೇಕು. ಆಟಗಾರರು ಬಳಸುವ ಸಲಕರಣೆಗಳು ನಿಯಮಕ್ಕೆ ಅನುಗುಣವಾಗಿರಬೇಕು.
  • ಒಂದು ವೇಳೆ ಆಟಗಾರರು ನಿಯಮಗಳ ಉಲ್ಲಂಘಿಸಿದರೆ, ಅಂತಹ ಅಥ್ಲೀಟ್‌ಗಳನ್ನು ಅನರ್ಹಗೊಳಿಸಬಹುದು, ಅಂಕಗಳನ್ನು ಕಡಿತಗೊಳಿಸಬಹುದು ಅಥವಾ ವಿವಿಧ ಸ್ಪರ್ಧೆಯಿಂದ ನಿಷೇಧಿಸಬಹುದು.
  • ಒಂದು ವೇಳೆ ಬಿಲ್ಲು ಮತ್ತು ಬಾಣ ಸೇರಿದಂತೆ ಆಟಗಾರರ ಉಪಕರಣಗಳು ಹಾನಿಗೊಳಗಾದರೆ, ಅಂತಹ ಸಲಕರಣೆಗಳನ್ನು ಬದಲಾಯಿಸಲು ಅಥವಾ ಸರಿಪಡಿಸಲು ತೀರ್ಪುಗಾರರಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬಹುದು. ಆದರೆ, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
  • ಪ್ರತಿ ಸೆಟ್‌ನಲ್ಲಿ 6 ಬಾಣಗಳನ್ನು ಗುರಿಯತ್ತ ಹೊಡೆಯಲು ಅವಕಾಶವಿದೆ. ಇದರಲ್ಲಿ ಪ್ರತಿ ಮೂರು ಬಾಣಗಳನ್ನು ಶೂಟ್ ಮಾಡಲು ಅನುಮತಿಸುವ ಗರಿಷ್ಠ ಸಮಯ ಎರಡು ನಿಮಿಷಗಳು. ಎಲ್ಲಾ ಆರು ಬಾಣಗಳನ್ನು ನಾಲ್ಕು ನಿಮಿಷಗಳ ಒಳಗೆ ಗುರಿ ಸೇರಿಸಬೇಕು.
  • ಬಾಣ ಹೂಡಲು ಸಿಗ್ನಲ್ ನೀಡುವವರೆಗೆ ಕ್ರೀಡಾಪಟುಗಳು ಬಿಲ್ಲು ಹಿಡಿದ ತೋಳನ್ನು ಎತ್ತುವಂತಿಲ್ಲ. ಒಂದು ವೇಳೆ ಎತ್ತಿದರೆ ಪೆನಾಲ್ಟಿ ನೀಡಬಹುದು. ಆಗ ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
  • ಯಾವುದೇ ಸಂದರ್ಭದಲ್ಲಿ ಬಾಣವನ್ನು ಮತ್ತೊಮ್ಮೆ ಹೂಡಲು ಅವಕಾಶ ಸಿಗುವುದಿಲ್ಲ. ಒಂದು ವೇಳೆ ಬಾಣವು ಬಿಲ್ಲಿನಿಂದ ಬಿದ್ದರೆ ಅಥವಾ ಗುರಿ ಇರುವ ಬೋರ್ಡ್‌ ಬಿದ್ದರೆ ಮಾತ್ರ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ.
  • ಒಂದು ವೇಳೆ ಗುರಿ ತಲುಪಿದ ಬಾಣವು ಗುರಿಯ ಬೋರ್ಡ್‌ನಿಂದ ಕೆಳಗೆ ಬಿದ್ದರೆ, ಅಥವಾ ನೇತಾಡುತ್ತಿದ್ದರೆ, ಬಾಣವು ಗುರಿಯ ಬೋರ್ಡ್‌ ಮೇಲೆ ಮಾಡುವ ಗುರುತುಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.

ಇನ್ನಷ್ಟು ಒಲಿಂಪಿಕ್ಸ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಒದಿ | ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ: ದಿನಾಂಕ, ಸ್ಥಳ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.