ಗಾಂಬಿಯಾ ಫುಟ್ಬಾಲ್ ಆಟಗಾರರಿದ್ದ ವಿಮಾನ ತುರ್ತು ಭೂಸ್ಪರ್ಶ; ಎಲ್ಲರೂ ಸೇಫ್
ಕನ್ನಡ ಸುದ್ದಿ  /  ಕ್ರೀಡೆ  /  ಗಾಂಬಿಯಾ ಫುಟ್ಬಾಲ್ ಆಟಗಾರರಿದ್ದ ವಿಮಾನ ತುರ್ತು ಭೂಸ್ಪರ್ಶ; ಎಲ್ಲರೂ ಸೇಫ್

ಗಾಂಬಿಯಾ ಫುಟ್ಬಾಲ್ ಆಟಗಾರರಿದ್ದ ವಿಮಾನ ತುರ್ತು ಭೂಸ್ಪರ್ಶ; ಎಲ್ಲರೂ ಸೇಫ್

Africa Cup of Nations: ಗಾಂಬಿಯಾದ ಫುಟ್ಬಾಲ್‌ ಆಟಗಾರರನ್ನು ಹೊತ್ತು ಸಾಗುತ್ತಿದ್ದ ವಿಮಾನವು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ಗಾಂಬಿಯಾ ಫುಟ್ಬಾಲ್‌ ಆಟಗಾರರು
ಗಾಂಬಿಯಾ ಫುಟ್ಬಾಲ್‌ ಆಟಗಾರರು (REUTERS)

ಗಾಂಬಿಯಾದ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು (Gambia National Football team) ಹೊತ್ತೊಯ್ಯುತ್ತಿದ್ದ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ. ಆಫ್ರಿಕಾ ಕಪ್ ಆಫ್ ನೇಷನ್ಸ್ ಪಂದ್ಯಾವಳಿಯಲ್ಲಿ (Africa Cup of Nations) ಸ್ಪರ್ಧಿಸಲು ಪ್ರಯಾಣಿಸುತ್ತಿದ್ದ ಆಟಗಾರರಿದ್ದ ವಿಮಾನವು ಹಾರಾಟದ ಸಮಯದಲ್ಲಿ ಹಠಾತ್ ಆಮ್ಲಜನಕದ ಕೊರತೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿತು.

ಆಟಗಾರರನ್ನು ಹೊತ್ತ ಚಾರ್ಟರ್ಡ್ ಫ್ಲೈಟ್ ಬುಧವಾರ (ಜನವರಿ 10) ಗಾಂಬಿಯಾದ ರಾಜಧಾನಿ ಬಂಜುಲ್‌ನಿಂದ ಹಾರಿ ಒಂಬತ್ತು ನಿಮಿಷಗಳ ನಂತರ ಮತ್ತೆ ಬಂಜುಲ್‌ಗೆ ಮರಳಿತು. ತಾಂತ್ರಿಕ ಸಮಸ್ಯೆಗಳಿರುವುದನ್ನು ಅರಿತುಕೊಂಡ ವಿಮಾನ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಮತ್ತೆ ಲ್ಯಾಂಡಿಂಗ್ ಮಾಡಿದ್ದಾರೆ. ಈ ಕುರಿತು ಗಾಂಬಿಯಾದ ಫುಟ್‌ಬಾಲ್ ಫೆಡರೇಶನ್ ಫೇಸ್‌ಬುಕ್‌ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಫುಟ್ಬಾಲ್ ಹುಡುಕಿದರೆ ನಿಮ್ಮಷ್ಟು ಬುದ್ದಿವಂತರು ಯಾರಿಲ್ಲ!

“ಲ್ಯಾಂಡಿಂಗ್ ನಂತರ, ಕ್ಯಾಬಿನ್ ಪ್ರೆಷರ್ ಮತ್ತು ಆಮ್ಲಜನಕದ ಕೊರತೆಯಾಗಿದೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ” ಎಂದು ಫೆಡರೇಶನ್ ಹೇಳಿದೆ. ವಿಮಾನದ ಆಪರೇಟಿಂಗ್ ಕಂಪನಿಯಾಗಿರುವ ಏರ್ ಕೋಟ್ ಡಿ ಐವೊರ್, ಆಮ್ಲಜನಕದ ಕೊರತೆ ಮತ್ತು ಕ್ಯಾಬಿನ್ ಒತ್ತಡಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚುತ್ತಿದೆ.

ಐವರಿ ಕೋಸ್ಟ್‌ನಲ್ಲಿ ಆರಂಭವಾಗಲಿರುವ ಆಫ್ರಿಕಾ ಕಪ್‌ನಲ್ಲಿ ಸ್ಪರ್ಧಿಸಲು ಆಟಗಾರರು ತೆರಳುತ್ತಿದ್ದರು. ದ್ವೈವಾರ್ಷಿಕ ಪಂದ್ಯಾವಳಿಯ 34ನೇ ಆವೃತ್ತಿ ಇದಾಗಿದ್ದು, ಕಳೆದ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಬೇಕಾಗಿತ್ತು. ಆದರೆ ಐವರಿ ಕೋಸ್ಟ್‌ನ ಉಷ್ಣವಲಯದ ಮಳೆಗಾಲವನ್ನು ತಪ್ಪಿಸುವ ಸಲುವಾಗಿ ಟೂರ್ನಿಯನ್ನು ಮುಂದೂಡಲಾಯಿತು.

ಇದನ್ನೂ ಓದಿ | Franz Beckenbauer: ವಿಶ್ವಕಪ್ ವಿಜೇತ ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕೆನ್‌ಬೌರ್ ನಿಧನ

ವಿಮಾನದಲ್ಲಿದ್ದ ಗಾಂಬಿಯಾ ತಂಡದ ತರಬೇತುದಾರ ಟಾಮ್ ಸೇಂಟ್‌ಫೀಟ್, ನಮ್ಮ ತಂಡವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿಸಿದ್ದಾರೆ. “ನಾವೆಲ್ಲರೂ ಕಾರ್ಬನ್ ಮಾನಾಕ್ಸೈಡ್ ವಿಷಾನಿಲ ಉಸಿರಾಡುತ್ತಿದ್ದೆವು. ಕೆಲವು ಆಟಗಾರರು ಲ್ಯಾಂಡಿಂಗ್‌ ಆದ ತಕ್ಷಣ ಎಚ್ಚೆತ್ತುಕೊಳ್ಳಲಿಲ್ಲ,” ಎಂದು ಅವರು ಹೇಳಿದ್ದಾರೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.