ಕನ್ನಡ ಸುದ್ದಿ  /  Sports  /  Pro Kabaddi League 2024 Semi Final Schedule Pkl Season 10 Qualified Teams Dates And Timings Live Streaming Details Jra

ಪ್ರೊ ಕಬಡ್ಡಿ 2024 ಸೆಮಿಫೈನಲ್; ವೇಳಾಪಟ್ಟಿ, ಅರ್ಹತೆ ಪಡೆದ ತಂಡಗಳು ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

Pro Kabaddi League 2024: ಪ್ರೊ ಕಬಡ್ಡಿ ಲೀಗ್10ನೇ ಆವೃತ್ತಿಯ ಸೆಮಿಫೈನಲ್‌ ಪಂದ್ಯಗಳು ಫೆಬ್ರುವರಿ 28ರ ಬುಧವಾರ ನಡೆಯಲಿವೆ. ಆ ಬಳಿಕ ಪಿಕೆಎಲ್ ಫೈನಲ್ ಪಂದ್ಯವು ಮಾರ್ಚ್ 1ರ ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.‌ ನಾಲ್ಕು ತಂಡಗಳು ಒಂದು ಕಪ್‌ಗಾಗಿ ಜಿದ್ದಿಗೆ ಬಿದ್ದಿವೆ.

ಪ್ರೊ ಕಬಡ್ಡಿ 2024 ಸೆಮಿಫೈನಲ್ ವೇಳಾಪಟ್ಟಿ
ಪ್ರೊ ಕಬಡ್ಡಿ 2024 ಸೆಮಿಫೈನಲ್ ವೇಳಾಪಟ್ಟಿ

ಪ್ರೊ ಕಬಡ್ಡಿ ಲೀಗ್‌ (Pro Kabaddi League) 10ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ಎರಡು ಎಲಿಮನೇಟರ್‌ ಪಂದ್ಯಗಳು ನಡೆದಿದ್ದು, ಗೆದ್ದ ತಂಗಳು ಸೆಮಿಫೈನಲ್‌ ಪ್ರವೇಶಿಸಿವೆ. ಹೀಗಾಗಿ ಸೆಮಿ ಕದನದಲ್ಲಿ ತೊಡೆ ತಟ್ಟಿ ಕಾದಾಡಲಿರುವ ಎರಡು ತಂಡಗಳು ಯಾವುವು ಎಂಬುದು ಅಂತಿಮವಾಗಿದೆ. ಎಲಿಮಿನೇಟರ್‌ವರೆಗೆ ಆರು ತಂಡಗಳಿದ್ದವು. ಇದೀಗ ಎರಡು ತಂಡಗಳು ಪಂದ್ಯಾವಳಿಯಿಂದ ನಿರ್ಗಮಿಸಿದ್ದು, ಅಂತಿಮ ನಾಲ್ಕು ತಂಡಗಳು ಸೆಮಿಫೈನಲ್‌ ಆಡಲಿವೆ.

ಲೀಗ್‌ ಪಂದ್ಯಗಳು ಅಂತ್ಯಗೊಂಡ ಬಳಿಕ ಅಗ್ರ ಆರು ತಂಡಗಳಾದ ಪುಣೇರಿ ಪಲ್ಟಾನ್, ಜೈಪುರ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ ಕೆಸಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಪ್ಲೇ ಆಫ್‌ಗೆ ಲಗ್ಗೆ ಇಟಿದ್ದವು. ಮೊದಲ ಎಲಿಮಿನೇಟರ್‌ನಲ್ಲಿ ಪಟ್ನಾ ಪೈರೇಟ್ಸ್ ತಂಡವು 37-35 ಅಂತರದಿಂದ ದಬಾಂಗ್ ಡೆಲ್ಲಿಯನ್ನು ಸೋಲಿಸಿದರೆ, ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 42-25 ಅಂಕಗಳಿಂದ ಗೆದ್ದಿತು.

ಇದನ್ನೂ ಓದಿ | ಮುಂದಿನ ಸಲ ನಿಮ್ಮನ್ನು ತಲೆ ಎತ್ತಿ ಹೆಮ್ಮೆಯಿಂದ ಇರುವಂತೆ ಮಾಡುತ್ತೇವೆ; ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಭರವಸೆಯ ಮಾತು

ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪುಣೇರಿ ಪಲ್ಟನ್ ತಂಡವು ಸೆಮಿಫೈನಲ್ 1ರಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಆಡಲಿದೆ. ಇದೇ ವೇಲೆ ಎರಡನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ ತಂಡವು ಸೆಮಿಫೈನಲ್ 2ರಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಆಡಲಿದೆ. ಈ ಎರಡು ಸೆಮಿಫೈನಲ್‌ಗಳಲ್ಲಿ ಗೆದ್ದ ತಂಡವು ಪಿಕೆಎಲ್ 2024ರ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಜಿದ್ದಿಗೆ ಇಳಿಯಲಿವೆ.

ಇದನ್ನೂ ಓದಿ | ಮೊದಲ ಎಲಿಮಿನೇಟರ್​ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಪಾಟ್ನಾ; ಆಶು ಮಲ್ಲಿಕ್ ಹೋರಾಟದ ನಡುವೆಯೂ ಡುಮ್ಕಿ ಹೊಡೆದ ಡೆಲ್ಲಿ

ಎರಡೂ ಸೆಮಿಫೈನಲ್‌ ಪಂದ್ಯಗಳು 28ರ ಬುಧವಾರ ನಡೆಯಲಿವೆ. ಆ ಬಳಿಕ ಪ್ರೊ ಕಬಡ್ಡಿ 10ನೇ ಆವೃತ್ತಿಯ ಫೈನಲ್ ಪಂದ್ಯವು ಮಾರ್ಚ್ 1ರ ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.

ಪ್ರೊ ಕಬಡ್ಡಿ ಸೀಸನ್ 10ರ ಸೆಮಿಫೈನಲ್‌ ಮತ್ತು ಫೈನಲ್ ಪಂದ್ಯಗಳ ವೇಳಾಪಟ್ಟಿ

  • ಸೆಮಿಫೈನಲ್ 1: ಪುಣೇರಿ ಪಲ್ಟನ್ vs ಪಟ್ನಾ ಪೈರೇಟ್ಸ್, ಫೆಬ್ರುವರಿ 28ರ ಬುಧವಾರ ರಾತ್ರಿ 8 ಗಂಟೆ
  • ಸೆಮಿಫೈನಲ್ 2: ಜೈಪುರ ಪಿಂಕ್ ಪ್ಯಾಂಥರ್ಸ್ vs ಹರಿಯಾಣ ಸ್ಟೀಲರ್ಸ್, ಫೆಬ್ರುವರಿ 28ರ ಬುಧವಾರ ರಾತ್ರಿ 9 ಗಂಟೆ
  • ಫೈನಲ್: ಸೆಮಿಫೈನಲ್ 1ರ ವಿಜೇತ ತಂಡ vs ಸೆಮಿಫೈನಲ್ 2ರ ವಿಜೇತ ತಂಡ, ಮಾರ್ಚ್ 1ರ ಶುಕ್ರವಾರ ರಾತ್ರಿ 8 ಗಂಟೆ

ಲೈವ್ ಸ್ಟ್ರೀಮಿಂಗ್ ವಿವರ

ಪಿಕೆಎಲ್ 2024ರ ಈವರೆಗಿನ ಎಲ್ಲಾ ಪಂದ್ಯಗಳು ಹಾಗೂ ಮುಂದೆ ನಡೆಯಲಿರುವ ಪ್ಲೇಆಫ್‌ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 2 ಎಸ್‌ಡಿ, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಎಸ್‌ಡಿ ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಕನ್ನಡ ಸೇರಿದಂತೆ ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ಚಾನಲ್‌ಗಳ ಮೂಲಕ ತೋರಿಸಲಾಗುತ್ತದೆ. ಇದೇ ವೇಳೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.