ಚದುರಂಗದ ಚತುರ ವಿಶ್ವನಾಥ್ ಆನಂದ್ರನ್ನೇ ಹಿಂದಿಕ್ಕಿದ ಪ್ರಜ್ಞಾನಂದ; ಭಾರತದ ನಂ.1 ಸ್ಥಾನ ಅಲಂಕರಿಸಿದ ಚೆಸ್ ಲೋಕದ ನವತಾರೆ!
R Praggnanandhaa: ಕಳೆದ ವರ್ಷ ಚೆಸ್ ವಿಶ್ವಕಪ್ನಲ್ಲಿ ರನ್ನರ್ಅಪ್ ಆಗಿದ್ದ ಭಾರತದ ಆರ್ ಪ್ರಜ್ಞಾನಂದ ಅವರು, 2024ರಲ್ಲಿ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಟಗಾರ ಡಿಂಗ್ ಲಿರೆನ್ ಅವರನ್ನು ಸೋಲಿಸಿ ದಾಖಲೆ ಬರೆದಿದ್ದಾರೆ.
ಭಾರತದ ಚೆಸ್ ಮಾಂತ್ರಿಕ ರಮೇಶಬಾಬು ಪ್ರಜ್ಞಾನಂದ ಅವರು (R. Praggnanandhaa) ಒಂದು ಗೆಲುವು ಸಾಧಿಸಿ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ನೆದರ್ಲೆಂಡ್ನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ (Tata Steel Masters 2024) ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನೇ ಸೋಲಿಸಿದರು. ಆ ಮೂಲಕ ವಿಶ್ವನಾಥನ್ ಆನಂದ್ ನಂತರ ಹಾಲಿ ಚಾಂಪಿಯನ್ ಆಟಗಾರರನ್ನು ಸೋಲಿಸಿದ 2ನೇ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಅಲ್ಲದೆ, ಈ ಗೆಲುವಿನೊಂದಿಗೆ ಅನುಭವಿ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಮೊದಲ ಬಾರಿಗೆ ಭಾರತದ ನಂಬರ್ 1 ಚೆಸ್ ಆಟಗಾರ ಎನಿಸಿದ್ದಾರೆ. ಚೀನಾದ ವಿಶ್ವ ಚಾಂಪಿಯನ್‌ನ ವಿರುದ್ಧ ಗೆದ್ದು ಆಶ್ಚರ್ಯಗೊಳಿಸಿದ ಪ್ರಗ್ನಾನಂದ, ತಮ್ಮ ಸಾಮರ್ಥ್ಯ ಏನೆಂಬುದನ್ನು ವಿಶ್ವಕ್ಕೆ ಸಾಬೀತುಪಡಿಸಿದ್ದಾರೆ. ಈಗಾಗಲೇ ವಿಶ್ವ ಮಟ್ಟದಲ್ಲಿ ತಮ್ಮ ಕೌಶಲ ಪ್ರದರ್ಶಿಸಿದ್ದಾರೆ.
ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ 4ನೇ ಮಾಸ್ಟರ್ ರೌಂಡ್ ಸುತ್ತಿನಲ್ಲಿ ನಡೆದ 64 ಸ್ಕ್ವೇಯರ್ಸ್ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಡಿಂಗ್ ಲಿರಿನ್ ಅವರನ್ನೇ ಸೋಲಿಸಿ ಸಂಭ್ರಮಿಸಿದ್ದಾರೆ. 2023ರಲ್ಲಿ ನಡೆದಿದ್ದ ಇದೇ ಟೂರ್ನಿಯಲ್ಲಿ ಲಿರಿನ್ ವಿರುದ್ಧವೇ (2780 ಅಂಕ) ಸೋತಿದ್ದ ಪ್ರಜ್ಞಾನಂದ (2743) ಈ ಬಾರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವು ಅತೀವ ಸಂತಸ ತಂದುಕೊಟ್ಟಿದೆ. ಹೀಗಂತ ಭಾರತದ ಯುವ ಚೆಸ್ ಪಟುವೇ ಹೇಳಿದ್ದಾರೆ.
‘ಗೆದ್ದಿದ್ದು ತುಂಬಾ ಖುಷಿ ನೀಡಿದೆ’
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಜ್ಞಾನಂದ, ಪ್ರಾರಂಭದಲ್ಲಿ ಪಂದ್ಯವನ್ನು ಸುಲಭವಾಗಿ ಸಮಬಲಗೊಳಿಸಬಹುದು ಎಂದು ನಾನು ಭಾವಿಸಿದ್ದೆ. ಆದರೆ, ಪಂದ್ಯ ಮುಂದುವರೆದರೆ ಪ್ರತಿಸ್ಪರ್ಧಿ ತಪ್ಪು ಹೆಜ್ಜೆ ಇಟ್ಟರು ಎಂಬುದು ನನಗೆ ಅನಿಸಿತು. ನಂತರ ನನ್ನ ಕಾಯಿಗಳನ್ನು ಮುನ್ನಡೆಸುವ ಸಂದರ್ಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದೇನೆ ಎಂದು ಅನಿಸಿತು. ಕೊನೆಯವರೆಗೂ ಅದನ್ನೇ ಕಾಪಾಡಿಕೊಳ್ಳಬೇಕು ಎನಿಸಿತು ಎಂದು ಚೆಸ್.ಕಾಮ್ಗೆ ಆರ್ ಪ್ರಜ್ಞಾನಂದ ತಿಳಿಸಿದ್ದಾರೆ.
ಯಾವುದೇ ದಿನವಾಗಲಿ, ಎಂತಹ ಚಾಂಪಿಯನ್ ಆಗಲಿ, ಅವರನ್ನು ನಾನು ಸೋಲಿಸುತ್ತೇನೆ ಎಂದು ಸದಾ ಯೋಚಿಸುತ್ತೇನೆ. ಈ ಪಂದ್ಯ ನನಗೆ ಅತ್ಯಂತ ನನಗೆ ತುಂಬಾ ವಿಶೇಷವಾಗಿತ್ತು. ಪ್ರತಿಸ್ಪರ್ಧಿ ಎದುರಾಳಿ ಚಾಂಪಿಯನ್ ಆಟಗಾರನನ್ನು ಸೋಲಿಸುವುದು ಸುಲಭದ ಮಾತಲ್ಲ. ಆದರೆ ಅಂತಹವರನ್ನೇ ಸೋಲಿಸಿದ್ದು ತುಂಬಾ ದೊಡ್ಡ ಅನುಭವ ತಂದುಕೊಟ್ಟಿದೆ ಎಂದು ಹೇಳಿದ್ದಾರೆ.
ಟೂರ್ನಿಯಲ್ಲಿ ಉತ್ತಮವಾದ ಪ್ರಾರಂಭವನ್ನು ಪಡೆದುಕೊಂಡಿದ್ದೇನೆ. ನಾನಾಡಿದ ಮೊದಲ 3 ಪಂದ್ಯಗಳು ಆಸಕ್ತಿದಾಯಕವಾಗಿದ್ದವು. 2023ರಲ್ಲೂ ಸಹ ಇದೇ ರೀತಿಯ ಅತ್ಯುತ್ತಮ ಪ್ರದರ್ಶನ ತೋರಿದ್ದೆ. ಆದರೆ ಈ ಹಿಂದೆ ಉತ್ತಮ ಹಾದಿಯಲ್ಲಿ ಸಾಗುತ್ತಿದ್ದೇನೆಂಬ ಭಾವನೆ ಬಂದಾಗಲೇ ಸೋತಿದ್ದೂ ಇದೆ. ಹಾಗಾಗಿ, ಈ ಬಾರಿ ಕೊನೆಯ ಕ್ಷಣದವರೆಗೂ ಹೋರಾಡಲು ಬಯಸುತ್ತೇನೆ. ನನ್ನ ಕೌಶಲಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆಡುತ್ತೇನೆ ಎಂದು ಹೇಳಿದ್ದಾರೆ.
ಚೆಸ್ ವಿಶ್ವಕಪ್ ಫೈನಲ್ನಲ್ಲಿ ಸೋಲು
2023ರ ಆಗಸ್ಟ್ನಲ್ಲಿ ನಡೆದಿದ್ದ ಚೆಸ್ ವಿಶ್ವಕಪ್ನ ಫೈನಲ್ನಲ್ಲಿ ಆರ್. ಪ್ರಜ್ಞಾನಂದ (R Praggnanandhaa ) ಸೋತು ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದ್ದರು. ಅಂದು ವಿಶ್ವದ ನಂ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ಎದುರಿನ ಈ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೊದಲ ಗೇಮ್ನಲ್ಲೇ ಡ್ರಾ ಸಾಧಿಸುವ ಮೂಲಕ ಕಾರ್ಲ್ಸೆನ್ಗೆ ಭಾರತ ಯುವ ಆಟಗಾರ ಆಘಾತ ನೀಡಿದ್ದರು. ಆದರೆ ಎರಡನೇ ಗೇಮ್ನಲ್ಲಿ ಕಾರ್ಲ್‌ಸೆನ್ ಡ್ರಾ ಮಾಡಿಕೊಂಡಿದ್ದರು. ಆದರೆ ಟೈ ಬ್ರೇಕ್ನಲ್ಲಿ ಗೆದ್ದು 1-0 ಅಂತರದಿಂದ ಕಾರ್ಲ್ಸನ್ ಗೆಲುವು ಸಾಧಿಸಲು ಯಶಸ್ವಿಯಾದರು.