ಅಸ್ತಿತ್ವದಲ್ಲಿದ್ದ ನಿಯಮ ನಿರ್ಲಕ್ಷ್ಯ, ಭಾರತೀಯ ಕುಸ್ತಿ ಫೆಡರೇಷನ್ ಅಮಾನತು; ಕ್ರೀಡಾ ಸಚಿವಾಲಯ ಆದೇಶ
Wrestling Federation of India: ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಸಂಜಯ್ ಸಿಂಗ್ ನೇತೃತ್ವದ ಹೊಸ ಭಾರತೀಯ ಕುಸ್ತಿ ಫೆಡರೇಶನ್ ಅನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ.
ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ ಕಾರಣ ಭಾರತೀಯ ಕುಸ್ತಿ ಫೆಡರೇಷನ್ ಅನ್ನು (Wrestling Federation Of India) ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ. ರಾಷ್ಟ್ರೀಯ ಸ್ಪರ್ಧೆಗಳನ್ನು ತರಾತುರಿಯಲ್ಲಿ ಆಯೋಜಿಸಿ ಸರಿಯಾದ ಪ್ರಕ್ರಿಯೆ ಅನುಸರಿಸದ ಕಾರಣ ಅಮಾನತು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಇದು ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಆಪ್ತ ಸಂಜಯ್ ಸಿಂಗ್ಗೆ ಭಾರಿ ಹಿನ್ನಡೆಯಾಗಿದೆ.
ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಡಿಸೆಂಬರ್ 21ರಂದು ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳನ್ನು (ಅಂಡರ್-16 ಮತ್ತು ಅಂಡರ್-20 ರಾಷ್ಟ್ರೀಯ ಕುಸ್ತಿ) ಈ ವರ್ಷಾಂತ್ಯ ಸಂದರ್ಭದಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ.
ಸೂಚನೆ ನೀಡದೆ ತೆಗದುಕೊಂಡ ನಿರ್ಧಾರ
ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಕುಸ್ತಿಪಟುಗಳಿಗೆ ಸಾಕಷ್ಟು ಸೂಚನೆ ನೀಡದೆ ತೆಗೆದುಕೊಂಡಿರುವ ನಿರ್ಧಾರವು ಡಬ್ಲ್ಯುಎಫ್‌ಐನ ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ. ಸಂಸ್ಥೆಯ ನಿಯಮ ಮತ್ತು ನಿಬಂಧನೆಗಳನ್ನು ಗಾಳಿಗೆ ತೂರಿದ ಪರಿಣಾಮ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಸಂಜಯ್ ಸಿಂಗ್, ತಡವಾಗಿ ನಡೆದ ಚುನಾವಣೆಯಲ್ಲಿ ಸುಲಭವಾಗಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾದರು.
‘ಕಾರ್ಯಕಾರಿ ಸಮಿತಿ ಆಯೋಜನೆ ಮಾಡಬೇಕು’
ಡಬ್ಲ್ಯುಎಫ್‌ಐನ ಸಂವಿಧಾನದ ಪೀಠಿಕೆಯ ಷರತ್ತು 3 (ಇ) ಪ್ರಕಾರ, ಡಬ್ಲ್ಯುಎಫ್‌ಐನ ಉದ್ದೇಶ, ಯುಡಬ್ಲ್ಯುಡಬ್ಲ್ಯು ನಿಯಮಗಳ ಪ್ರಕಾರ ಹಿರಿಯ, ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಕಾರ್ಯಕಾರಿ ಸಮಿತಿಯು ಆಯ್ಕೆ ಮಾಡಿದ ಸ್ಥಳಗಳಲ್ಲಿ ಆಯೋಜಿಸಬೇಕಿದೆ. ರಾಷ್ಟ್ರೀಯ ಸ್ಫರ್ಧೆಗಳ ಆಯೋಜನೆಗೆ ಸಂಬಂಧಿಸಿ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿ ತೆಗೆದುಕೊಳ್ಳಬೇಕು. ಅದಕ್ಕೂ ಮುನ್ನ ಕಾರ್ಯಸೂಚಿಗಳ ಪರಿಗಣನೆಗೆ ತೆಗೆದುಕೊಳ್ಳಬೇಕು.
ಡಬ್ಲ್ಯುಎಫ್‌ಐ ಸಂವಿಧಾನದ ಆರ್ಟಿಕಲ್ 11ರ ಪ್ರಕಾರ ನೋಟಿಸ್‌ಗಳು ಮತ್ತು ಸಭೆಗಳಿಗೆ ಕೋರಂ ಶೀರ್ಷಿಕೆಯಡಿ ಸಭೆಗಳನ್ನು ನಡೆಸಿ ಕನಿಷ್ಠ 15 ದಿನಗಳಿಗೂ ಮುನ್ನ ಸ್ಫರ್ಧೆಗಳ ನಿರ್ಧಾರ ತೆಗೆದುಕೊಳ್ಳಬೇಕು. ಇದಲ್ಲದೆ, ಡಬ್ಲ್ಯುಎಫ್‌ಐನ ಸಂವಿಧಾನದ ಆರ್ಟಿಕಲ್ 10 (ಡಿ)ರ ಪ್ರಕಾರ, ಫೆಡರೇಶನ್‌ನ ಸಾಮಾನ್ಯ ವ್ಯವಹಾರ ನಿರ್ವಹಣೆ, ಸಭೆಗಳ ನಡಾವಳಿ ಇಟ್ಟುಕೊಳ್ಳುವುದು ಮತ್ತು ಎಲ್ಲಾ ದಾಖಲೆಗಳನ್ನು ನಿರ್ವಹಿಸುವ ಜವಾಬ್ದಾರಿ ಪ್ರಧಾನ ಕಾರ್ಯದರ್ಶಿಗಿದೆ.
ಪ್ರಧಾನ ಕಾರ್ಯದರ್ಶಿಯೇ ಭಾಗಿಯಾಗಿಲ್ಲ
ಫೆಡರೇಶನ್ ಜನರಲ್ ಕೌನ್ಸಿಲ್ ಮತ್ತು ಕಾರ್ಯಕಾರಿ ಸಮಿತಿಯ ಸಭೆಗಳನ್ನು ಕರೆಯಬೇಕಿದೆ. ಆದರೆ ಯಾವುದೇ ಸೂಚನೆ ಅಥವಾ ಕೋರಂ ಇಲ್ಲದೆ ನಡೆದ ಇಸಿಯ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಗಿಯಾಗಿಲ್ಲ ಎಂದು ತೋರುತ್ತಿದೆ. ಆ ಮೂಲಕ ಹೊಸದಾಗಿ ಚುನಾಯಿತ ಸಂಸ್ಥೆಯು ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣ ಸಾಧಿಸಿರುವುದು ತೋರುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.