US Open 2023: ಫೈನಲ್ನಲ್ಲಿ ವಿರೋಚಿತ ಸೋಲು ಕಂಡ ರೋಹನ್ ಬೋಪಣ್ಣ-ಎಬ್ಡೆನ್ ಜೋಡಿ, ರನ್ನರ್ಅಪ್ ಸ್ಥಾನಕ್ಕೆ ತೃಪ್ತಿ
US Open 2023 Rohan Bopanna-Matthew Ebden: ಯುಎಸ್ ಓಪನ್ನ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ, ವಿಶ್ವದ ಮೂರನೇ ಶ್ರೇಯಾಂಕದ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ನ ಜೋ ಸಾಲಿಸ್ಬರಿ ವಿರುದ್ಧ ಸೋಲನುಭವಿಸಿದರ.
ಯುಎಸ್ ಓಪನ್ ಫೈನಲ್ (US Open 2023) ಪ್ರವೇಶಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬರೆದಿರುವ ಕನ್ನಡಿಗ ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್ (Matthew Ebden) ಜೋಡಿ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಫೈನಲ್ಗೇರಿದ್ದ ಎರಡು ಬಾರಿಯೂ ರನ್ನರ್ಅಪ್ ಸ್ಥಾನ ಪಡೆದಿದ್ದಾರೆ.
ಸೆಪ್ಟೆಂಬರ್ 8ರಂದು ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಇಂಡೋ-ಆಸ್ಟ್ರೇಲಿಯನ್ ಜೋಡಿ, ವಿಶ್ವದ ಮೂರನೇ ಶ್ರೇಯಾಂಕದ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ನ ಜೋ ಸಾಲಿಸ್ಬರಿ ಎದುರು 6-2, 3-6, 4-6 ಸೆಟ್‌ಗಳ ಅಂತರದಲ್ಲಿ ಸೋಲನುಭವಿಸಿದರು. ಮೊದಲ ಸೆಟ್ನಲ್ಲಿ ಭರ್ಜರಿ ಗೆಲುವಿನೊಂದಿಗೆ ಐತಿಹಾಸಿಕ ದಾಖಲೆ ಬರೆಯುವ ಮುನ್ಸೂಚನೆ ನೀಡಿದ್ದರು. ಆದರೆ ಉಳಿದೆರಡು ಸೆಟ್ಗಳನ್ನು ಸೋಲುವ ಮೂಲಕ ಆ ನಿರೀಕ್ಷೆ ಹುಸಿಗೊಳಿಸಿದರು.
ಎದುರಾಳಿ ತಂಡದ ಅಮೆರಿಕ-ಬ್ರಿಟನ್ ಜೋರಿ, ಆಕ್ರಮಣಕಾರಿ ಆಟದ ಮೂಲಕ ತಿರುಗಿ ಬಿದ್ದರು. ಇದರೊಂದಿಗೆ ಸತತ ಎರಡು ಸೆಟ್ಗಳಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಮೇಲುಗೈ ಸಾಧಿಸಲು ವಿಫಲರಾದರು. ಬೋಪಣ್ಣ ಮತ್ತು ಪಾಕ್ನ ಐಸಾಮ್ ಉಲ್ ಹಕ್ ಖುರೇಷಿ ಜೊತೆಗೂಡಿ 2010ರಲ್ಲಿ ಯುಎಸ್ ಓಪನ್ ಫೈನಲ್ ಪ್ರವೇಶಿಸಿದ್ದರು. ಆದರೆ ಅಂದು 7–6(7–5), 7–6(7–4) ಅಂತರದಲ್ಲಿ ಸೋಲನುಭವಿಸಿ ರನ್ನರ್ಅಪ್ ಸ್ಥಾನ ಪಡೆದುಕೊಂಡಿದ್ದರು.
ಯುಎಸ್ ಓಪನ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಬೋಪಣ್ಣ, ಅದ್ಭುತ ಗೆಲುವುಗಳೊಂದಿಗೆ ಫೈನಲ್ ಪ್ರವೇಶಿಸಿದ್ದರು. ಯುವ ಆಟಗಾರರೇ ನಾಚಿಸುವಂತೆ ರಾಕೆಟ್ ಹಿಡಿದು ಅದ್ಭುತ ಆಟವಾಡುತ್ತಿದ್ದ 43 ವರ್ಷದ ಬೋಪಣ್ಣ ಜೋಡಿ, ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ 7-6 (3), 6-2 ನೇರ ಸೆಟ್‌ಗಳ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು.
ಬೋಪಣ್ಣ ವಿಶ್ವದಾಖಲೆ
ಇನ್ನು ಕ್ವಾರ್ಟರ್-ಫೈನಲ್ ಹೋರಾಟದಲ್ಲಿ ಇಂಡೋ-ಆಸೀಸ್ ಜೋಡಿ ಅಮೆರಿಕಾದ 15ನೇ ಶ್ರೇಯಾಂಕದ ಜೋಡಿಯಾದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಜೋಡಿಯನ್ನು ಮಣಿಸಿತ್ತು. ಅವರನ್ನು 7-6(10), 6-1 ನೇರ ಸೆಟ್‌ಗಳ ಅಂತರದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
43 ವರ್ಷದ ರೋಹನ್ ಬೋಪಣ್ಣ ಕರ್ನಾಟಕದ ಕೊಡಗಿನ ಮೂಲದವರು. ಅವರು ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. 2 ತಿಂಗಳ ಹಿಂದೆ ನಡೆದಿದ್ದ ವಿಂಬಲ್ಡನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು. ಆದರೆ ವಿಶ್ವದ ನಂಬರ್ ವನ್ ಜೋಡಿ ನೆದರ್ಲೆಂಡ್ಸ್-ಬ್ರಿಟಿಷ್ ಜೋಡಿಯಾದ ವೆಸ್ಲೆ ಕೂಲ್‌ಹೋಫ್ ಮತ್ತು ನೀಲ್ ಸ್ಕಾಪ್‌ಸ್ಕಿ ಎದುರು ಸೋತಿದ್ದರು.
ವಿಭಾಗ