ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಫೈನಲ್ ಕಾಲಿಟ್ಟ ಜಾನಿಕ್ ಸಿನ್ನರ್
Jannik Sinner: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ಇಟಲಿಯ ಜಾನಿಕ್ ಸಿನ್ನರ್, 2024ರ ಆಸ್ಟ್ರೇಲಿಯನ್ ಓಪನ್ ಫೈನಲ್ ತಲುಪಿದ್ದಾರೆ. ಇದು ಅವರ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದೆ.
ಬರೋಬ್ಬರಿ 2195 ದಿನಗಳ ನಂತರ, ಟೆನಿಸ್ ದೈತ್ಯ ನೊವಾಕ್ ಜೊಕೊವಿಕ್ (Novak Djokovic) ಆಸ್ಟ್ರೇಲಿಯನ್ ಓಪನ್‌ನಲ್ಲಿ (Australian Open) ಮೊದಲ ಸೋಲು ಅನುಭವಿಸಿದ್ದಾರೆ. ತಮ್ಮ ವೈಭವೋಪೇರಿತ ವೃತ್ತಿಜೀವನದಲ್ಲಿ 10 ಬಾರಿ ಟ್ರೋಫಿ ತಮ್ಮದಾಗಿಸಿಕೊಂಡಿರುವ ಜೊಕೊವಿಕ್‌ಗೆ ಇಟಲಿಯ ಜಾನಿಕ್ ಸಿನ್ನರ್ (Jannik Sinner) ಶಾಕ್ ಕೊಟ್ಟಿದ್ದಾರೆ. 2019ರಿಂದ ಸತತ ನಾಲ್ಕು ಬಾರಿ ಆಸೀಸ್ ಓಪನ್ ಟೈಟಲ್ ಗೆದ್ದಿರುವ ಜೊಕೊವಿಕ್ ವಿರುದ್ಧ ಸಿನ್ನರ್ ತಮ್ಮ ವೃತ್ತಿಜೀವನದ ಅತಿದೊಡ್ಡ ಹಾಗೂ ಐತಿಹಾಸಿಕ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಬಹುನಿರೀಕ್ಷಿತ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸಿನ್ನರ್, ಹಾಲಿ ಚಾಂಪಿಯನ್ ವಿರುದ್ಧ 6-1, 6-2, 6-7 (6), 6-4 ಸೆಟ್‌ಗಳಿಂದ ರೋಚಕ ಜಯ ಸಾಧಿಸಿ 2024 ರ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇದು ಅವರ ಮೊಟ್ಟಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಲಿದೆ.
ಈ ಗೆಲುವಿನೊಂದಿಗೆ, ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರನನ್ನು ಸೋಲಿಸಿದ ಇಟಾಲಿಯ ಮೊದಲ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1973ರಲ್ಲಿ ಎಟಿಪಿ ಶ್ರೇಯಾಂಕಗಳನ್ನು ಪ್ರಕಟಿಸಿದ ನಂತರ ಸಿನ್ನರ್ ಈ ಸಾಧನೆ ಮಾಡಿದ ಮೊದಲ ಆಟಗಾರ. ಕೇವಲ 22 ವರ್ಷ 163 ದಿನಗಳ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಓಪನ್ ಫೈನಲ್ ಪ್ರವೇಶಿಸುವ ಮೂಲಕ, ಪುರುಷರ ಸಿಂಗಲ್ಸ್ ಫೈನಲಿಸ್ಟ್ ಆದ ಅತ್ಯಂತ ಕಿರಿಯ ಮತ್ತು ಮೊದಲ ಇಟಾಲಿಯನ್ ಆಟಗಾರ ಎಂಬ ಶ್ರೇಯಸ್ಸು ಸಿನ್ನರ್ ಅವರದ್ದು.
ಇದನ್ನೂ ಓದಿ | ಕನಸು ನನಸಾದ ಕ್ಷಣ; ಟೆನಿಸ್ ದಿಗ್ಗಜ ರೋಜರ್ ಫೆಡರರ್ ಭೇಟಿಯಾದ ಚಿನ್ನದ ಹುಡುಗ ನೀರಜ್ ಚೋಪ್ರಾ
ಆರಂಭಿಕ ಎರಡು ಸೆಟ್‌ಗಳಲ್ಲಿ ಜೊಕೊವಿಕ್ ಕಳಪೆ ಪ್ರದರ್ಶನ ನೀಡಿದ್ದರಿಂದ ಸಿನ್ನರ್ ತಮ್ಮ ಶಕ್ತಿಯುತ ಗ್ರೌಂಡ್ ಸ್ಟ್ರೋಕ್‌ಗಳಿಂದ ಪ್ರಬಲ ಪ್ರದರ್ಶನ ನೀಡಿದರು. 36 ವರ್ಷದ ಅನುಭವಿ ಆಟಗಾರ ಪ್ರತಿಬಾರಿಯೂ ನೀಡುವ ಪ್ರದರ್ಶನ ಇಂದು ಹೊರಬರಲಿಲ್ಲ. 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಸರದಾರ, ಶುಕ್ರವಾರ ತಡವಾಗಿ ಆಟದಲ್ಲಿ ಕಂಬ್ಯಾಕ್ ಮಾಡಿದರೂ ಮೇಲುಗೈ ಸಾಧಿಸುವಲ್ಲಿ ವಿಫಲರಾದರು.
ಜೊಕೊವಿಕ್ ವಿರುದ್ಧದ ಆರಂಭಿಕ ಎರಡು ಸೆಟ್ ಗಳಲ್ಲಿ ಮುನ್ನಡೆ ಸಾಧಿಸಿದ ಸಿನ್ನರ್, ಕೇವಲ ಒಂದು ಗಂಟೆ 13 ನಿಮಿಷಗಳಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದರು. ಮೂರನೇ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ಗೆದ್ದ ಜೊಕೊವಿಕ್ ಮತ್ತೆ ಟ್ರ್ಯಾಕ್‌ಗೆ ಮರಳಿದರು. ನಾಲ್ಕನೇ ಸೆಟ್‌ನಲ್ಲಿ ಮತ್ತೆ ನಿಯಂತ್ರಣ ಕಂಡುಕೊಂಡ ಸಿನ್ನರ್, 3-1 ಅಂತರದಿಂದ ಮುನ್ನಡೆ ಸಾಧಿಸಿದರು. ಆ ಮೂಲಕ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆ ಹಾಕಿದರು.
ಇದನ್ನೂ ಓದಿ | Padma Shri 2024: ರೋಹನ್ ಬೋಪಣ್ಣ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ; ಇಲ್ಲಿದೆ ಪಟ್ಟಿ
ಈ ಸೋಲಿನೊಂದಿಗೆ ಮೆಲ್ಬೋರ್ನ್‌ನಲ್ಲಿ ಜೊಕೊವಿಕ್ ಅವರ 33 ಪಂದ್ಯಗಳ ಗೆಲುವಿನ ಸರಣಿ ಕೊನೆಗೊಂಡಿತು. ಕೊನೆಯ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ 2018ರ ನಾಲ್ಕನೇ ಸುತ್ತಿನಲ್ಲಿ ಚುಂಗ್ ಹೈಯಾನ್ ವಿರುದ್ಧ ಅವರು ನೇರ ಸೆಟ್‌ಗಳಲ್ಲಿ ಸೋತಿದ್ದರು.