Wimbledon: ಕ್ವಾರ್ಟರ್-ಫೈನಲ್​ ಗೆದ್ದು​​ ಸೆಮಿಫೈನಲ್​ಗೇರಿದ ರೋಹನ್ ಬೋಪಣ್ಣ ಜೋಡಿ; ಇಂದಿರಾನಗರ್​​ ಕಾ ಗೂಂಡಾ ಅಲ್ಲ, ಹೀರೋ ಎಂದ ವಿಂಬಲ್ಡನ್
ಕನ್ನಡ ಸುದ್ದಿ  /  ಕ್ರೀಡೆ  /  Wimbledon: ಕ್ವಾರ್ಟರ್-ಫೈನಲ್​ ಗೆದ್ದು​​ ಸೆಮಿಫೈನಲ್​ಗೇರಿದ ರೋಹನ್ ಬೋಪಣ್ಣ ಜೋಡಿ; ಇಂದಿರಾನಗರ್​​ ಕಾ ಗೂಂಡಾ ಅಲ್ಲ, ಹೀರೋ ಎಂದ ವಿಂಬಲ್ಡನ್

Wimbledon: ಕ್ವಾರ್ಟರ್-ಫೈನಲ್​ ಗೆದ್ದು​​ ಸೆಮಿಫೈನಲ್​ಗೇರಿದ ರೋಹನ್ ಬೋಪಣ್ಣ ಜೋಡಿ; ಇಂದಿರಾನಗರ್​​ ಕಾ ಗೂಂಡಾ ಅಲ್ಲ, ಹೀರೋ ಎಂದ ವಿಂಬಲ್ಡನ್

Wimbledon: ವಿಂಬಲ್ಡನ್​​ನ ಪುರುಷರ ಡಬಲ್ಸ್​ ವಿಭಾಗದಲ್ಲಿ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಮೂರು ಸೆಟ್‌ಗಳಲ್ಲಿ ಸ್ಟೀವನ್ಸ್-ಗ್ರೀಕ್ಸ್‌ಪೂರ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.

ರೋಹನ್ ಬೋಪಣ್ಣ-ಮ್ಯಥ್ಯೂ ಎಬ್ಡೆನ್‌
ರೋಹನ್ ಬೋಪಣ್ಣ-ಮ್ಯಥ್ಯೂ ಎಬ್ಡೆನ್‌

ವಿಂಬಲ್ಡನ್​​ನ ಪುರುಷರ ಡಬಲ್ಸ್​ ವಿಭಾಗದಲ್ಲಿ ಆಸ್ಟ್ರೇಲಿಯಾದ ಮ್ಯಥ್ಯೂ ಎಬ್ಡೆನ್‌ (Matthew Ebden) ಮತ್ತು ಭಾರತದ ರೋಹನ್‌ ಬೋಪಣ್ಣ ಜೋಡಿ ಕ್ವಾರ್ಟರ್-ಫೈನಲ್​ನಲ್ಲಿ ಅಮೋಘ ಗೆಲುವು ದಾಖಲಿಸಿ ಸೆಮಿಫೈನಲ್​ ಪ್ರವೇಶಿಸಿದೆ. ಬಾರ್ಟ್ ಸ್ಟೀವನ್ಸ್-ಟ್ಯಾಲನ್ ಗ್ರೀಕ್ಸ್‌ಪೂರ್ (Griekspoor T & Stevens B) ಜೋಡಿ ಎದುರು ಭರ್ಜರಿ ಜಯ ಸಾಧಿಸಿತು.

ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಮೂರು ಸೆಟ್‌ಗಳಲ್ಲಿ ಸ್ಟೀವನ್ಸ್-ಗ್ರೀಕ್ಸ್‌ಪೂರ್ ಅವರನ್ನು ಸೋಲಿಸಿದರು. 6ನೇ ಶ್ರೇಯಾಂಕದ ಭಾರತ-ಆಸ್ಟ್ರೇಲಿಯನ್ ಜೋಡಿಯು ಕ್ವಾರ್ಟರ್‌ನಲ್ಲಿ ಶ್ರೇಯಾಂಕ ರಹಿತ ಡಚ್ ತಂಡವಾದ ಬಾರ್ಟ್ ಸ್ಟೀವನ್ಸ್ ಮತ್ತು ಟ್ಯಾಲನ್ ಗ್ರೀಕ್ಸ್‌ಪೂರ್ ಅವರನ್ನು 6(3)-7(7), 7-5, 6-2 ಸೆಟ್‌ಗಳಿಂದ ಒಂದು ಗಂಟೆ 54 ನಿಮಿಷಗಳಲ್ಲಿ ಸೋಲಿಸಿದರು.

ಗೆದ್ದ ಜೋಡಿಯು ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ವೆಸ್ಲಿ ಕೂಲ್‌ಹೋಫ್ ಮತ್ತು ನೀಲ್ ಸ್ಕುಪ್ಸ್ಕಿ ಅವರನ್ನು ಎದುರಿಸಲಿದ್ದಾರೆ. ಎಟಿಪಿ ಶ್ರೇಯಾಂಕದಲ್ಲಿ ಕ್ರಮವಾಗಿ 12ನೇ ಮತ್ತು 16ನೇ ಶ್ರೇಯಾಂಕದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಮೊದಲ ಸೆಟ್‌ನಲ್ಲಿ ವಿಶ್ವದ ನಂ. 116 ಬಾರ್ಟ್ ಸ್ಟೀವನ್ಸ್ ಮತ್ತು ವಿಶ್ವದ ನಂ. 31 ಸಿಂಗಲ್ಸ್ ಆಟಗಾರ ಟ್ಯಾಲನ್ ಗ್ರೀಕ್ಸ್‌ಪೂರ್ ಸಮಬಲ ಸಾಧಿಸಿದರು.

ಮೊದಲ ಸೆಟ್‌ನಲ್ಲಿ ಉಭಯ ತಂಡಗಳು ತಮ್ಮ ಸರ್ವ್‌ಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು. ಆದಾಗ್ಯೂ, ಕಳೆದ ವರ್ಷ ಮ್ಯಾಕ್ಸ್ ಪರ್ಸೆಲ್ ಅವರೊಂದಿಗೆ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದ ಮ್ಯಾಥ್ಯೂ ಎಬ್ಡೆನ್ ಮತ್ತು ರೋಹನ್ ಬೋಪಣ್ಣ ಜೋಡಿ ಟೈ-ಬ್ರೇಕರ್‌ನಲ್ಲಿ ಎದುರಾಳಿಯ ಸರ್ವ್‌ಗಳನ್ನು ಮುರಿದು 1-0ರಲ್ಲಿ ಮುನ್ನಡೆ ಸಾಧಿಸಿತು.

ಬಳಿಕ ಉಳಿದ ಸೆಟ್​ಗಳಲ್ಲೂ ಗೆಲುವು ಸಾಧಿಸಿದರು. ಪಂದ್ಯ ಮುಂದುವರಿದಂತೆ ಬೋಪಣ್ಣ ಮತ್ತು ಎಬ್ಡೆನ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ಅವರು ತಮ್ಮ ಸರ್ವ್‌ಗಳನ್ನು ಹಿಡಿದಿಟ್ಟುಕೊಂಡರು. ಇದರೊಂದಿಗೆ ವಿಂಬಲ್ಡನ್‌ನ ಸೆಮಿ-ಫೈನಲ್‌ನಲ್ಲಿ ಸ್ಥಾನ ಪಡೆಯಲು ಯಶಸ್ವಿಯಾದರು.

ಇಂದು ಸೆಮಿಫೈನಲ್​

ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ಮಾರ್ಚ್‌ನಲ್ಲಿ ಇಂಡಿಯನ್ ವೆಲ್ಸ್ ಎಟಿಪಿ ಮಾಸ್ಟರ್ಸ್ 1000 ಫೈನಲ್‌ನಲ್ಲಿ ಸೋಲಿಸಿದ್ದ ಅಗ್ರ ಶ್ರೇಯಾಂಕದ ವೆಸ್ಲಿ ಕೂಲ್‌ಹೋಫ್ ಮತ್ತು ನೀಲ್ ಸ್ಕುಪ್ಸ್ಕಿ ಅವರನ್ನು ಇಂದು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ. ಇವತ್ತು ಸಂಜೆ 6.50ಕ್ಕೆ ಕೋರ್ಟ್​​ 1ರಲ್ಲಿ ಈ ಪಂದ್ಯ ನಡೆಯಲಿದೆ. ಗೆದ್ದವರು ಫೈನಲ್​ ಪ್ರವೇಶಿಸಲಿದ್ದಾರೆ.

ಇಂದಿರಾನಗರ್ ಕಾ ಹೀರೋ ಎಂದ ವಿಂಬಲ್ಡನ್

2ನೇ ಸುತ್ತಿನಲ್ಲಿ ಗೆದ್ದು 16ನೇ ಸುತ್ತಿಗೆ ಪ್ರವೇಶಿಸಿದ ಸಂದರ್ಭದಲ್ಲಿ ವಿಂಬಲ್ಡನ್​ ರೋಹನ್ ಬೋಪಣ್ಣ ಕುರಿತು ಭಾರತದ ಸೂಪರ್​ ಸ್ಟಾರ್ ಎಂದು ಕನ್ನಡದಲ್ಲಿ ಬರೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿತ್ತು. ಇದೀಗ ಸೆಮಿಫೈನಲ್ ಪ್ರವೇಶಿಸುತ್ತಿದ್ದಂತೆ ಮತ್ತೊಂದು ಪೋಸ್ಟ್ ಮಾಡಿರುವ ವಿಂಬಲ್ಡನ್​ ಇಂದಿರಾನಗರ್​​ ಕಾ ಗೂಂಡಾ ಅಲ್ಲ, ಹೀರೋ. ವಯಸ್ಸು ಎಂಬುದು ಕೇವಲ ಅಂಕಿಯಷ್ಟೇ ಎಂಬುದನ್ನು ಬೋಪಣ್ಣ ನಿರೂಪಿಸಿದ್ದಾರೆ ಎಂದು ಕ್ಯಾಪ್ಶನ್ ಬರೆದಿದೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.