ನಾನು ಆಡಿದ ಅತ್ಯಂತ ಕೆಟ್ಟ ಗ್ರ್ಯಾಂಡ್ ಸ್ಲಾಮ್ ಪಂದ್ಯ; ಆಸ್ಟ್ರೇಲಿಯನ್ ಓಪನ್‌ ಆಘಾತಕಾರಿ ಸೋಲಿನ ಬಳಿಕ ಜೊಕೊವಿಕ್‌
ಕನ್ನಡ ಸುದ್ದಿ  /  ಕ್ರೀಡೆ  /  ನಾನು ಆಡಿದ ಅತ್ಯಂತ ಕೆಟ್ಟ ಗ್ರ್ಯಾಂಡ್ ಸ್ಲಾಮ್ ಪಂದ್ಯ; ಆಸ್ಟ್ರೇಲಿಯನ್ ಓಪನ್‌ ಆಘಾತಕಾರಿ ಸೋಲಿನ ಬಳಿಕ ಜೊಕೊವಿಕ್‌

ನಾನು ಆಡಿದ ಅತ್ಯಂತ ಕೆಟ್ಟ ಗ್ರ್ಯಾಂಡ್ ಸ್ಲಾಮ್ ಪಂದ್ಯ; ಆಸ್ಟ್ರೇಲಿಯನ್ ಓಪನ್‌ ಆಘಾತಕಾರಿ ಸೋಲಿನ ಬಳಿಕ ಜೊಕೊವಿಕ್‌

Novak Djokovic: ಆಸ್ಟ್ರೇಲಿಯನ್‌ ಓಪನ್ ಸೋಲಿನ ಬಳಿಕ ಮಾತನಾಡಿದ ಜೊಕೊವಿಕ್, ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲೇ ತನ್ನ ಅತ್ಯಂತ ಕಳಪೆ ಪ್ರದರ್ಶನ ಎಂದು ಹೇಳಿಕೊಂಡರು. ಅಲ್ಲದೆ ತನ್ನ ಪ್ರದರ್ಶನದಿಂದ ಖುದ್ದು ಆಘಾತವಾಗಿರುವುದಾಗಿ ಹೇಳಿದರು.

ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೊವಾಕ್ ಜೊಕೊವಿಕ್‌
ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೊವಾಕ್ ಜೊಕೊವಿಕ್‌ (REUTERS)

ಆಸ್ಟ್ರೇಲಿಯನ್ ಓಪನ್‌ನಲ್ಲಿ (Australian Open) ದಾಖಲೆಯ 11ನೇ ಕಿರೀಟಕ್ಕೆ ಎದುರು ನೋಡುತ್ತಿದ್ದ ಬಲಿಷ್ಠ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‌ (Novak Djokovic), ಸೆಮಿಫೈನಲ್‌ನಲ್ಲಿ ಅಚ್ಚರಿಯ ಸೋಲು ಕಂಡು ಹೊರಬಿದ್ದಿದ್ದಾರೆ. 25ನೇ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿಗೆ ಮುತ್ತಿಡುವ ವಿಶ್ವಾಸದಲ್ಲಿದ್ದ ಸೆರ್ಬಿಯಾ ಆಟಗಾರನಿಗೆ, ಆಸ್ಟ್ರೇಲಿಯನ್ ಓಪನ್‌ ಸೆಮಿಫೈನಲ್ ಪಂದ್ಯದಲ್ಲಿ ಇಟಲಿಯ ಜಾನಿಕ್ ಸಿನ್ನರ್ ಸೋಲುಣಿಸಿದ್ದಾರೆ. ಇದು ಖುದ್ದು ಜೊಕೊವಿಕ್‌ ಅವರಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ.

ಆಸೀಸ್‌ ಓಪನ್‌ ಫೈನಲ್‌ನಲ್ಲಿ ಈವರೆಗೆ 10 ಫೈನಲ್‌ ಪಂದ್ಯಗಳನ್ನು ಆಡಿದ್ದ ಜೊಕೊವಿಕ್‌, ಎಲ್ಲಾ ಹತ್ತು ಬಾರಿ ಕೂಡಾ ಗೆದ್ದ ದಾಖಲೆ ಹೊಂದಿದ್ದಾರೆ. ಆ ದಾ ದಾಖಲೆಯನ್ನು ಅಜೇಯ 11ಕ್ಕೇ ಏರಿಸುವಲ್ಲಿ ವಿಫಲರಾಗಿದ್ದಾರೆ. 2018ರಲ್ಲಿ ಕೊನೆಯ ಬಾರಿಗೆ ನಾಲ್ಕನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದ ಸೆರ್ಬಿಯನ್ ಆಟಗಾರ, ಆ ನಂತರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಒಂದೇ ಒಂದು ಪಂದ್ಯ ಕೂಡಾ ಸೋತಿಲ್ಲ. ಆದರೆ, ರಾಡ್ ಲೇವರ್ ಅರೆನಾದಲ್ಲಿ ಜನವರಿ 26ರ ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಇಟಲಿಯ ಯುವ ಆಟಗಾರ ಜಾನಿಕ್ ಸಿನ್ನರ್ ವಿರುದ್ಧ ಮುಗ್ಗರಿಸಿದ ಜೊಕೊವಿಕ್‌ ಟೂರ್ನಿಯಿಂದ ನಿರ್ಗಮಿಸಿದರು. ಅತ್ತ ಐತಿಹಾಸಿಕ ಗೆಲುವು ಸಾಧಿಸಿದ ಸಿನ್ನರ್‌, ತಮ್ಮ ಚೊಚ್ಚಲ ಗ್ರಾಂಡ್‌ ಸ್ಲಾಮ್ ಫೈನಲ್ ತಲುಪಿದರು.

ಅತ್ಯಂತ ಕಳಪೆ ಪ್ರದರ್ಶನ

ಆಶ್ಚರ್ಯಕರ ಸೋಲಿನ ಬಳಿಕ ಮಾತನಾಡಿದ ಜೊಕೊವಿಕ್, ಇದು ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲೇ ತನ್ನ ಅತ್ಯಂತ ಕಳಪೆ ಪ್ರದರ್ಶನ ಎಂದು ಹೇಳಿಕೊಂಡರು. ತನ್ನ ಪ್ರದರ್ಶನದಿಂದ ಆಘಾತಕ್ಕೊಳಗಾಗಿರುವುದಾಗಿ ಒಪ್ಪಿಕೊಂಡರು. “ಸಿನ್ನರ್‌ ಅರ್ಹವಾಗಿ ಫೈನಲ್‌ ತಲುಪಿದ್ದಾರೆ. ಅವರು ನನ್ನನ್ನು ಸಂಪೂರ್ಣವಾಗಿ ಮೀರಿಸಿದರು” ಎಂದು ಜೊಕೊವಿಕ್ ಹೇಳಿದ್ದಾರೆ.

ಇದನ್ನೂ ಓದಿ | ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಫೈನಲ್ ಕಾಲಿಟ್ಟ ಜಾನಿಕ್ ಸಿನ್ನರ್

“ನಾನು ನನ್ನ ಆಟದ ಮಟ್ಟದಿಂದ ಆಘಾತಕ್ಕೊಳಗಾಗಿದ್ದೇನೆ. ಮೊದಲ ಎರಡು ಸೆಟ್‌ಗಳಲ್ಲಿ ನಾನು ಸರಿಯಾಗಿ ಆಡುತ್ತಿರಲಿಲ್ಲ. ಹೌದು, ಇದು ನಾನು ಆಡಿದ ಅತ್ಯಂತ ಕೆಟ್ಟ ಗ್ರ್ಯಾಂಡ್ ಸ್ಲಾಮ್ ಪಂದ್ಯಗಳಲ್ಲಿ ಒಂದು ಎಂದು ನನಗನಿಸುತ್ತಿದೆ,” ಎಂದು ಜೊಕೊವಿಕ್‌ ಹೇಳಿದ್ದಾರೆ.

“ಆ ಅಂಕಿಅಂಶಗಳೇ ಬಹಳಷ್ಟು ಹೇಳುತ್ತವೆ. ಆತ ಬಹಳ ನಿಖರವಾಗಿ ಸರ್ವ್‌ ಮಾಡುತ್ತಿದ್ದ. ನಾನು ಇಂದು ಅಂಗಣದಲ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿದೆ. ನನ್ನ ಆಟ ನನಗೆ ನಿಜಕ್ಕೂ ಸಂತೋಷ ಕೊಟ್ಟಿಲ್ಲ. ಕೋರ್ಟ್‌ನಲ್ಲಿ ಚಲನೆ, ಫೋರ್‌ಹ್ಯಾಂಡ್, ಬ್ಯಾಕ್‌ಹ್ಯಾಂಡ್ ಹೀಗೆ ಎಲ್ಲಾ ಹೊಡೆತಗಳು ಕೂಡಾ ಕೆಳಮಟ್ಟದ್ದಾಗಿತ್ತು,” ಎಂದು ಬಲಿಷ್ಠ ಟೆನಿಸ್‌ ಆಟಗಾರ ಹೇಳಿದ್ದಾರೆ.

ಆರಂಭಿಕ ಎರಡು ಸೆಟ್ ಗಳಲ್ಲಿ ಮುನ್ನಡೆ ಸಾಧಿಸಿದ ಸಿನ್ನರ್, 2-0 ಅಂತರದಲ್ಲಿ ಮುನ್ನಡೆ ಸಾಧಿಸಿದರು. ಮೂರನೇ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ಗೆದ್ದ ಜೊಕೊವಿಕ್‌ ಮತ್ತೆ ಟ್ರ್ಯಾಕ್‌ಗೆ ಮರಳಿದರು. ನಾಲ್ಕನೇ ಸೆಟ್‌ನಲ್ಲಿ ಮತ್ತೆ ನಿಯಂತ್ರಣ ಕಂಡುಕೊಂಡ ಸಿನ್ನರ್‌, 3-1 ಅಂತರದಿಂದ ಮುನ್ನಡೆ ಸಾಧಿಸಿದರು.

ಜಾನಿಕ್ ಸಿನ್ನರ್ ದಾಖಲೆ

ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸಿನ್ನರ್, ಹಾಲಿ ಚಾಂಪಿಯನ್ ವಿರುದ್ಧ 6-1, 6-2, 6-7 (6), 6-4 ಸೆಟ್‌ಗಳಿಂದ ರೋಚಕ ಜಯ ಸಾಧಿಸಿ 2024 ರ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟರು. ಇದರೊಂದಿಗೆ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರನನ್ನು ಸೋಲಿಸಿದ ಇಟಲಿಯ ಮೊದಲ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ 22 ವರ್ಷ 163 ದಿನಗಳ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಓಪನ್‌ ಫೈನಲ್‌ ಪ್ರವೇಶಿಸುವ ಮೂಲಕ, ಪುರುಷರ ಸಿಂಗಲ್ಸ್ ಫೈನಲಿಸ್ಟ್ ಆದ ಅತ್ಯಂತ ಕಿರಿಯ ಮತ್ತು ಮೊದಲ ಇಟಾಲಿಯನ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.