ಹವಾಮಾನ ಬದಲಾವಣೆ ಸಮಯದಲ್ಲಿ ಮುದ್ದು ಕಂದಮ್ಮನ ಮೇಲಿರಲಿ ವಿಶೇಷ ಕಾಳಜಿ: ಮಕ್ಕಳ ಕಟ್ಟಿದ ಮೂಗು ಸಮಸ್ಯೆಗೆ ಇಲ್ಲಿದೆ ಸುಲಭ ಮನೆಮದ್ದು
Oct 22, 2024 02:32 PM IST
ಹವಾಮಾನ ಬದಲಾವಣೆ ಸಮಯದಲ್ಲಿ ನಿಮ್ಮ ಮುದ್ದು ಕಂದಮ್ಮಗಳ ಮೇಲಿರಲಿ ವಿಶೇಷ ಕಾಳಜಿ: ಕಟ್ಟಿದ ಮೂಗು ಸಮಸ್ಯೆಗೆ ಇಲ್ಲಿದೆ ಸುಲಭದ ಮನೆಮದ್ದು
- Home Remedies: ಚಿಕ್ಕ ಮಕ್ಕಳು ಕಟ್ಟಿದ ಮೂಗು ಸಮಸ್ಯೆಯಿಂದ ಬಹಳಷ್ಟು ಕಿರಿಕಿರಿಯನ್ನು ಅನುಭವಿಸುತ್ತಾರೆ. ಉಸಿರಾಡಲು ಕಷ್ಟಪಡುತ್ತಾರೆ. ಈ ಹವಾಮಾನ ಬದಲಾವಣೆ ಸಮಯದಲ್ಲಿ ಮೂಗು ಕಟ್ಟುವಿಕೆ ಸಾಮಾನ್ಯ. ಅದಕ್ಕೆ ಸುಲಭದ ಪರಿಹಾರವಾಗಿ ಮನೆ ಮದ್ದುಗಳನ್ನು ಬಳಸಿ ನೋಡಿ. ಮಕ್ಕಳು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುತ್ತದೆ.
ಅಕ್ಟೋಬರ್–ನವೆಂಬರ್ ಬಂತೆಂದರೆ ಅದು ಋತುಮಾನದ ಬದಲಾವಣೆಯ ಕಾಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಬದಲಾಗುವ ಹವಾಮಾನದ ಕಾಲದಲ್ಲಿ ಮೊದಲು ತೊಂದರೆಗೀಡಾಗುವುದೇ ಮಕ್ಕಳು. ಅವರಲ್ಲಿ ಕಂಡುಬರುವ ರೋಗನಿರೋಧಕ ಶಕ್ತಿಯ ಕೊರತೆಯೇ ಇದಕ್ಕೆ ಕಾರಣ. ಈ ಚಳಿಗಾಲದಲ್ಲಿ ಚಿಕ್ಕ ಮಕ್ಕಳು ಶೀತ ಮತ್ತು ಕಟ್ಟಿದ ಮೂಗು ಸಮಸ್ಯೆಯಿಂದ ಹೆಚ್ಚಾಗಿ ಬಳಲುತ್ತಾರೆ. ಮೂಗಿನ ಒಳ ಪದರದ ಅಂಗಾಂಶಗಳಲ್ಲಿನ ಊತ ಮತ್ತು ಲೋಳೆಯಂತಹ ದ್ರವ ತುಂಬಿ ಮೂಗು ಕಟ್ಟಿದಂತಾಗುತ್ತದೆ. ಆಗ ಉಸಿರಾಟ ಕ್ರಿಯೆ ಸರಾಗವಾಗಿ ನಡೆಯುವುದಿಲ್ಲ. ಈ ಪರಿಸ್ಥಿತಿ ಮಕ್ಕಳ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ಸಮಸ್ಯೆಗೆ ಹಲವಾರು ಕಾರಣಗಳಿರಬಹುದು. ಆದರೆ ಪ್ರಮುಖವಾಗಿ ಇದು ವೈರಸ್‌ನ ಭಾದೆಯಿಂದ ಉಂಟಾಗುತ್ತದೆ. ಶೀತ ಮತ್ತು ಜ್ವರ ಉಂಟುಮಾಡುವ ವೈರಸ್‌ಗಳು ಮೂಗಿನ ಮೂಲಕ ದೇಹವನ್ನು ಪ್ರವೇಶಿಸುವಾಗ ಮೂಗಿನ ಒಳಪದರದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಎರಡನೇಯದಾಗಿ ಮೂಗು ಕಟ್ಟುವಿಕೆಯು ಧೂಳು, ಪರಾಗ, ಸಾಕುಪ್ರಾಣಿಗಳ ಕೂದಲು ಅಥವಾ ಹೊಟ್ಟು ಮುಂತಾದವುಗಳಿಂದ ಅಲರ್ಜಿಯುಂಟಾಗಿ ಮೂಗಿನ ಅಂಗಾಂಶಗಳು ಊದಿಕೊಳ್ಳುತ್ತವೆ. ಆಗ ಮೂಗು ಕಟ್ಟುವಿಕೆಯ ಸಮಸ್ಯೆ ಎದುರಾಗುತ್ತದೆ. ನಿಮ್ಮ ಮಕ್ಕಳು ಆಗಾಗ ಈ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿದ್ದರೆ ಈ ಮನೆಮದ್ದುಗಳು ಪರಿಹಾರ ಒದಗಿಸಲು ಸಹಾಯ ಮಾಡುತ್ತವೆ.
ಮೂಗು ಕಟ್ಟುವಿಕೆಗೆ ಸುಲಭದ ಮನೆಮದ್ದುಗಳು
ಸ್ಟೀಮ್: ನಿಮ್ಮ ಮಗು ಮೂಗು ಕಟ್ಟಿ ತೊಂದರೆ ಅನುಭವಿಸುತ್ತಿದ್ದರೆ ಅದಕ್ಕೆ ಸುಲಭದ ಪರಿಹಾರವೆಂದರೆ ಸ್ಟೀಮ್ (ಬಿಸಿ ಹಬೆ) ನೀಡುವುದು. ಇದು ಕಟ್ಟಿದ ಮೂಗನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಸ್ಟೀಮರ್ ಸಹಾಯದಿಂದ ಬಿಸಿ ಹಬೆಯನ್ನು ನೀಡಿ ಅಥವಾ ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು ಬಿಸಿ ಹಬೆಯನ್ನು ನೀಡಬಹುದು. ಬೇಕಿದ್ದರೆ ಬಿಸಿ ನೀರಿಗೆ ಸ್ವಲ್ಪ ವಿಕ್ಸ್ ಅಥವಾ ನೀಲಗಿರಿ ತೈಲ ಸೇರಿಸಿಕೊಳ್ಳಬಹುದು.
ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ: ಮಕ್ಕಳು ಸದಾ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ. ದೇಹವು ನಿರ್ಜಲವಾದರೆ ಮಗು ಆಯಾಸದಿಂದ ಇನ್ನಷ್ಟು ಬಳಲುತ್ತದೆ. ಆದಕಾರಣ ಆಗಾಗ ನೀರು, ಸೂಪ್, ಬಿಸಿ ಪಾನೀಯಗಳು ಅಥವಾ ಮನೆಯಲ್ಲಿ ತಯಾರಿಸಿದ ಕಷಾಯಗಳನ್ನು ನೀಡಿ. ಇದು ಮೂಗು ಕಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ.
ಶುಂಠಿ ನೀರು: ಒಂದು ಲೋಟ ನೀರಿಗೆ ಸಣ್ಣ ತುಂಡು ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಉಗುರುಬೆಚ್ಚಗಿರುವಾಗಲೇ ದಿನಕ್ಕೆ ಎರಡರಿಂದ ಮೂರು ಬಾರಿ ನಿಮ್ಮ ಮಗುವಿಗೆ ಕುಡಿಯಲು ಕೊಡಿ. ಶುಂಠಿಯಿಂದ ಕಟ್ಟಿದ ಮೂಗಿನ ಸಮಸ್ಯೆಗೆ ಬಹಳ ಬೇಗನೆ ಪರಿಹಾರ ಸಿಗುತ್ತದೆ.
ಶಾಖ ಕೊಡಿ: ಬೆಚ್ಚಗಿನ ನೀರಿನಲ್ಲಿ ಒಂದು ಸ್ವಚ್ಛವಾದ ಚಿಕ್ಕ ಟವಲ್ ಅದ್ದಿ. ಹೆಚ್ಚುವರಿ ನೀರನ್ನು ಒತ್ತಿ ತೆಗೆಯಿರಿ. ನಂತರ ಆ ಟವಲ್ ಅನ್ನು ಮೂಗಿನ ಮೇಲೆ ಇರಿಸಿ. ಬಿಸಿ ಶಾಖದಿಂದ ಮೂಗಿನ ಒಳಗಿರುವ ಲೋಳೆಗಳು ಸಡಿಲಗೊಂಡು, ಮೂಗು ತೆರೆದುಕೊಳ್ಳಲು ಸಹಾಯವಾಗುತ್ತದೆ.
ಸಲೈನ್ ಸ್ಪ್ರೇ: ಮಾರುಕಟ್ಟೆಯಲ್ಲಿ ಸಿಗುವ ಸಲೈನ್ ಸ್ಪ್ರೇಯ ಕೆಲವು ಹನಿಗಳನ್ನು ಬ್ಲಾಕ್ ಆಗಿರುವ ಮೂಗಿಗೆ ಹಾಕಿ. ಅದು ಮೂಗಿನಲ್ಲಿರುವ ಲೋಳೆ ಸಡಿಲಗೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಮಗು ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಕಟ್ಟಿದ ಮೂಗಿನ ಸಮಸ್ಯೆ ಹೆಚ್ಚು. ಹಾಗಾಗಿ ಆ ಸಮಯದಲ್ಲಿ ಸಲೈನ್ ಸ್ಪ್ರೇ ಮಾಡಿ.
ಇಷ್ಟೆಲ್ಲಾ ಮಾಡಿದರೂ ಕಟ್ಟಿದ ಮೂಗಿನ ಸಮಸ್ಯೆ ಪರಿಹಾರವಾಗಿಲ್ಲವಾದರೆ ನಿಮ್ಮ ಮಗುವನ್ನು ನುರಿತ ವೈದ್ಯರ ಬಳಿ ಖಂಡಿತ ಕರೆದುಕೊಂಡು ಹೋಗಿ. ಸರಿಯಾದ ಔಷಧ ಮತ್ತು ಆರೈಕೆ ಮಾಡಿ. ಈ ಚಳಿಗಾಲದಲ್ಲಿ ಬಿಸಿ ಆಹಾರಗಳನ್ನು ನೀಡಿ ಮತ್ತು ನಿಮ್ಮ ಮುದ್ದು ಮಕ್ಕಳನ್ನು ಬೆಚ್ಚಗಿರಿಸಿ. ಋತುಮಾನದ ಬದಲಾವಣೆಯ ಸಮಯದಲ್ಲಿ ಚಿಕ್ಕ ಮಕ್ಕಳಿಗೆ ಕಾಳಜಿಯ ಅವಶ್ಯಕತೆ ಸ್ವಲ್ಪ ಹೆಚ್ಚಿಗೆ ಬೇಕಾಗುತ್ತದೆ.