Winter Health: ಚಳಿಗಾಳಿಗೆ ಹಿತ ಎನಿಸುವ 10 ಕಷಾಯಗಳ ರೆಸಿಪಿ ಇಲ್ಲಿದೆ; ಆರೋಗ್ಯ ಜೋಪಾನ
ಚಳಿಗಾಲದಲ್ಲಿ ಶೀತ ವಾತಾವರಣದ ಕಾರಣಕ್ಕೆ ಜ್ವರ, ನೆಗಡಿ, ಕೆಮ್ಮು, ಗಂಟಲು ಕೆರೆತದಂತಹ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಯಾವುದೇ ಮಾತ್ರೆ, ಔಷಧಿ ತಿನ್ನದೇ ಇವು ಗುಣವಾಗಬೇಕು ಅಂದ್ರೆ ಕಷಾಯ ಕುಡಿಬೇಕು. ಚಳಿಗಾಲಕ್ಕೆ ಬೆಸ್ಟ್ ಎನ್ನಿಸುವ 10 ಕಷಾಯಗಳ ರೆಸಿಪಿ ಇಲ್ಲಿದೆ.
ಚಳಿಗಾಲ ಆರಂಭವಾದಾಕ್ಷಣ ಆರೋಗ್ಯ ಸಮಸ್ಯೆಗಳು ಒಂದೊಂದಾಗಿ ಆರಂಭವಾಗುತ್ತವೆ. ಬದಲಾಗುವ ವಾತಾವರಣವು ದೈಹಿಕ ಬದಲಾವಣೆಗೂ ಕಾರಣವಾಗುತ್ತದೆ. ಇದರಿಂದ ನೆಗಡಿ, ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ, ಮೂಗು ಸೋರುವುದು ಮುಂತಾದ ಸಮಸ್ಯೆಗಳು ಕಾಣಿಸುತ್ತವೆ. ಇದರ ನಿವಾರಣೆಗೆ ಕಷಾಯ ಕುಡಿಯುವುದು ಬೆಸ್ಟ್. ನಿರಂತರವಾಗಿ ಕಷಾಯ ಕುಡಿಯುವುದು ಆರೋಗ್ಯ ನಿವಾರಣೆಗೆ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಆರೋಗ್ಯಕ್ಕೆ ಬೆಸ್ಟ್ ಎನ್ನಿಸುವ 10 ಕಷಾಯಗಳ ರೆಸಿಪಿ ಇಲ್ಲಿದೆ.
ಶುಂಠಿ ಕಷಾಯ: ಶುಂಠಿ ಕಷಾಯ ಚಳಿಗಾಲದ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹೇಳಿ ಮಾಡಿಸಿದ್ದು. ಶುಂಠಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಶುಂಠಿ ಉರಿಯೂತ ನಿವಾರಕ ಗುಣಗಳನ್ನೂ ಹೊಂದಿದೆ. ಶುಂಠಿ ಕಷಾಯವು ಕೆಮ್ಮು, ನೆಗಡಿಯಂತಹ ಸಮಸ್ಯೆಗಳ ನಿವಾರಣೆಗೆ ರಾಮಬಾಣ.
ಕಾಳುಮೆಣಸಿನ ಕಷಾಯ: ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಿಗೆ ಒಂದೇ ಒಂದು ಮದ್ದು, ಅದು ಕಾಳುಮೆಣಸಿನ ಕಷಾಯ. ಕಾಳುಮೆಣಸಿನ ಕಷಾಯ ನಾಲಿಗೆಗೆ ಖಾರ ಖಾರ ಎನ್ನಿಸಿದರೂ ಆರೋಗ್ಯಕ್ಕೆ ಬೆಸ್ಟ್. ಇದು ಚಳಿಗಾಲದಲ್ಲಿ ದೇಹದ ಆಲಸ್ಯವನ್ನೂ ನಿವಾರಿಸುತ್ತದೆ. ಕಾಳುಮೆಣಸು, ಶುಂಠಿ, ಬೆಲ್ಲ, ಈರುಳ್ಳಿ ಸೇರಿಸಿ ತಯಾರಿಸುವ ಕಷಾಯವು ಎಲ್ಲಾ ವಯೋಮಾನದವರಿಗೂ ಉತ್ತಮ.
ಜೀರಿಗೆ ಕಷಾಯ: ಜೀರಿಗೆ ಕಷಾಯವನ್ನು ಕೂಡ ಚಳಿಗಾಲದಲ್ಲಿ ಪ್ರತಿನಿತ್ಯ ಕುಡಿಯುವುದರಿಂದ ಆರೋಗ್ಯ ಸಾಕಷ್ಟು ಪ್ರಯೋಜನಗಳಿವೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಚಳಿಗಾಲದಲ್ಲಿ ಕಾಡುವ ಅಜೀರ್ಣ, ಅಲರ್ಜಿಯಂತಹ ಸಮಸ್ಯೆಗಳ ನಿವಾರಣೆಗೂ ಇದು ಮದ್ದು.
ತುಳಸಿ ಕಷಾಯ: ಚಳಿಗಾಲದಲ್ಲಿ ಎದುರಾಗುವ ಕೆಮ್ಮು, ನೆಗಡಿಯಂತಹ ಸಮಸ್ಯೆ ನಿವಾರಣೆಗೆ ತುಳಸಿ ಕಷಾಯ ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದು. ನೀರಿಗೆ ತುಳಸಿ, ಶುಂಠಿ ಸೇರಿಸಿ ಕುದಿಸಿ ಆ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಗಂಟಲು ನೋವು, ಶೀತಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಒಂದೆಗಲ ಕಷಾಯ: ಚಳಿಗಾಲದಲ್ಲಿ ದೇಹದ ಒಳಭಾಗದಲ್ಲಿ ಜ್ವರವಿದ್ದು, ದೇಹಕ್ಕೆ ಸುಸ್ತು ಬಾಧಿಸುತ್ತಿದ್ದರೆ, ಒಂದೆಗಲ ಕಷಾಯ ಕುಡಿಯಬಹುದು. ಇದು ಜ್ಞಾಪಕಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.
ಒಣಶುಂಠಿ ಕಾಫಿ: ಚಳಿಗಾಲದಲ್ಲಿ ಯಾವುದೇ ರೀತಿಯ ಕೆಮ್ಮು, ಗಂಟಲು ನೋವು, ಮೈಕೈನೋವು ಕಾಣಿಸಿದರೆ ಒಣಶುಂಠಿ ಕಾಫಿ ಕುಡಿಯುವುದು ಉತ್ತಮ. ಒಣಶುಂಠಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಅದನ್ನು ಹಾಲು ಅಥವಾ ನೀರಿಗೆ ಹಾಕಿ ಶುಂಠಿ ಪುಡಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ.
ದಾಲ್ಚಿನ್ನಿ ಕಷಾಯ: ದಾಲ್ಚಿನ್ನಿ ಕಷಾಯವು ದೇಹವನ್ನು ಬೆಚ್ಚಗಿಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದು ಚಳಿಗಾಲದ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಸಹಕಾರಿ. ದಾಲ್ಚಿನ್ನಿ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ನಂತರ ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಬಹುದು.
ಈರುಳ್ಳಿ ಕಷಾಯ: ನೀವು ಗಂಟಲು ನೋವು, ಗಂಟಲು ಕೆರೆತದಂತಹ ಸಮಸ್ಯೆ ಎದುರಿಸುತ್ತಿದ್ದರೆ ಈರುಳ್ಳಿ ಕಷಾಯ ಹೇಳಿ ಮಾಡಿಸಿದ್ದು. ನೀರಿಗೆ ಹೆಚ್ಚಿದ ಈರುಳ್ಳಿ, ಕಾಳುಮೆಣಸು, ತುಳಸಿಎಲೆ, ಸ್ವಲ್ಪ ಬೆಲ್ಲ ಹಾಗೂ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಮೈಕೈ ನೋವು ನಿವಾರಣೆಗೂ ಉತ್ತಮ.
ಮಸಾಲಾ ಚಾಯ್ ಅಥವಾ ಕಷಾಯ: ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಮಾನವ ದೇಹಕ್ಕೆ ಅವಶ್ಯವಿರುವ ಹಲವು ಅಂಶಗಳಿರುತ್ತವೆ. ಜೀರಿಗೆ, ಕೊತ್ತಂಬರಿ, ಕಾಳುಮೆಣಸು, ಚಕ್ಕೆ, ಶುಂಠಿ ಹೀಗೆ ಹಲವು ಮಸಾಲೆಗಳನ್ನು ಸೇರಿಸಿ ತಯಾರಿಸಿರುವ ಮಸಾಲೆ ಚಾಯ್ ಅಥವಾ ಕಷಾಯ ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು.
ಅರಿಸಿನ ಕಧಾ: ಮಹಾರಾಷ್ಟ ಭಾಗದಲ್ಲಿ ವಿಶೇಷವಾಗಿ ಕಧಾ ಎಂಬ ಕಷಾಯವನ್ನು ತಯಾರಿಸುತ್ತಾರೆ. ಅರಿಸಿನ ಕಧಾ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹೇಳಿ ಮಾಡಿಸಿದ್ದು. ಅರಿಸಿನ, ಹಾಲು, ಚಕ್ಕೆ ಮುಂತಾದವುಗಳನ್ನು ಸೇರಿಸಿ ತಯಾರಿಸುವ ಕಧಾ ಆರೋಗ್ಯವನ್ನು ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ.
ಚಳಿಗಾಲದಲ್ಲಿ ಈ ಕಷಾಯವನ್ನು ನಿರಂತರವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಬಹುದು. ಇದು ಆರೋಗ್ಯಕ್ಕೆ ಬಹಳ ಉತ್ತಮ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಈ ರೀತಿಯ ಕಷಾಯ ಸೇವನೆಗೂ ಮುನ್ನ ತಜ್ಞರಿಂದ ಅಭಿಪ್ರಾಯ ಪಡೆಯುವುದು ಉತ್ತಮ.