ಹೃದಯಾಘಾತದಿಂದ ನ್ಯೂಮೊನಿಯಾವರೆಗೆ, ಚಳಿಗಾಲದಲ್ಲಿ ಕಾಡುವ ಗಂಭೀರ ಆರೋಗ್ಯ ಸಮಸ್ಯೆಗಳಿವು; ರೋಗ ಬಾರದಂತೆ ದೇಹವನ್ನ ರಕ್ಷಿಸಲು ಈ ಸಲಹೆ ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯಾಘಾತದಿಂದ ನ್ಯೂಮೊನಿಯಾವರೆಗೆ, ಚಳಿಗಾಲದಲ್ಲಿ ಕಾಡುವ ಗಂಭೀರ ಆರೋಗ್ಯ ಸಮಸ್ಯೆಗಳಿವು; ರೋಗ ಬಾರದಂತೆ ದೇಹವನ್ನ ರಕ್ಷಿಸಲು ಈ ಸಲಹೆ ಪಾಲಿಸಿ

ಹೃದಯಾಘಾತದಿಂದ ನ್ಯೂಮೊನಿಯಾವರೆಗೆ, ಚಳಿಗಾಲದಲ್ಲಿ ಕಾಡುವ ಗಂಭೀರ ಆರೋಗ್ಯ ಸಮಸ್ಯೆಗಳಿವು; ರೋಗ ಬಾರದಂತೆ ದೇಹವನ್ನ ರಕ್ಷಿಸಲು ಈ ಸಲಹೆ ಪಾಲಿಸಿ

ಚಳಿಗಾಲ ಆರಂಭವಾಗಿದೆ. ಇದರೊಂದಿಗೆ ವಾತಾವರಣವೂ ಬದಲಾಗಿದೆ. ಚಳಿಯ ವಾತಾವರಣದಲ್ಲಿ ಬೇಡವೆಂದರೂ ಆರೋಗ್ಯ ಕೆಡುತ್ತದೆ. ಈ ಸಮಯದಲ್ಲಿ ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳು ಯಾವುವು, ರೋಗ ಬಾರದಂತೆ ದೇಹವನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂದು ಸರಳ ಸಲಹೆಗಳು ಇಲ್ಲಿವೆ. ಇದನ್ನು ತಿಳಿದುಕೊಂಡರೆ ನೀವು ಚಳಿಗಾಲದಲ್ಲೂ ಆರಾಮವಾಗಿ ಇರಬಹುದು.

ಚಳಿಗಾಲದಲ್ಲಿ ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳಿವು
ಚಳಿಗಾಲದಲ್ಲಿ ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳಿವು (PC: Canva)

ಚಳಿಗಾಲದಲ್ಲಿ ಶೀತ ವಾತಾವರಣದ ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಪ್ರಮಾಣ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ದೇಹವನ್ನು ಎಷ್ಟೇ ಬೆಚ್ಚಗಿಟ್ಟರೂ ಒಳಗಿನಿಂದ ಕಾಯಿಲೆಗಳು ಹೆಚ್ಚುತ್ತಲೇ ಇರುತ್ತವೆ. ಇದಕ್ಕಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಸೇವನೆ ಹಾಗೂ ಯೋಗ, ಪ್ರಾಣಾಯಮಕ್ಕೆ ಒತ್ತು ನೀಡಬೇಕು. ಇದರೊಂದಿಗೆ ಚಳಿಗಾಲದಲ್ಲಿ ಬರುವ ರೋಗಗಳ ಬಗ್ಗೆ ಒಂದಿಷ್ಟು ತಿಳಿದುಕೊಂಡಿರುವುದು ಹಾಗೂ ಇದರಿಂದ ಪಾರಾಗುವುದು ಹೇಗೆ ಎಂಬುದನ್ನೂ ತಿಳಿದುಕೊಂಡಿರಬೇಕು.

ಹಾಗಾದರೆ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳು ಯಾವುವು, ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ವಿವರ ಇಲ್ಲಿದೆ.

ಚಳಿಗಾಲದಲ್ಲಿ ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳು

ಸಾಮಾನ್ಯ ನೆಗಡಿ: ಚಳಿಗಾಲದಲ್ಲಿ ಬೇಡವೆಂದರೂ ಶೀತ, ನೆಗಡಿ ಕಾಣಿಸುತ್ತದೆ. ಇದು ವಿವಿಧ ವೈರಸ್‌ಗಳಿಂದ ಉಂಟಾಗಬಹುದು. ಆದರೆ ರೈನೋವೈರಸ್‌ಗಳು ಸಾಮಾನ್ಯ ಶೀತಕ್ಕೆ ಪ್ರಮುಖ ಕಾರಣವಾಗಿದೆ. ಚಳಿಗಾಲದಲ್ಲಿ, ಕಡಿಮೆ ಹಗಲು ಮತ್ತು ದೀರ್ಘ ರಾತ್ರಿಯ ಕಾರಣ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಹೀರಿಕೊಳ್ಳುವಿಕೆಯು ಕಡಿಮೆಯಾಗುತ್ತದೆ. ಇದು ರೋಗನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ. ಸಾಮಾನ್ಯ ಶೀತಕ್ಕೆ ಸಂಬಂಧಿಸಿದ ಲಕ್ಷಣಗಳು: ಮೂಗು ಸೋರುವುದು, ಮೂಗು ಕಟ್ಟುವುದು, ಕೆಮ್ಮ, ಸೀನು, ಜ್ವರ, ಮೈಕೈ ನೋವು, ಸಣ್ಣಗೆ ತಲೆ ನೋಯುವುದು

ಜ್ವರ: ಶೀತ ವಾತಾವರಣದಲ್ಲಿ ಜ್ವರ ಕೂಡ ಸಾಮಾನ್ಯವಾಗಿದೆ. ಜ್ವರವು ಇನ್ಫ್ಲುಯೆಂಜಾ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿದೆ. ಈ ರೋಗವು ಮೂಗು, ಗಂಟಲು ಮತ್ತು ಕೆಲವೊಮ್ಮೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುವುದು, ತಾಜಾ ಗಾಳಿ ಮತ್ತು ಸೂರ್ಯನ ಬೆಳಕನ್ನು ಕೋಣೆಗೆ ಪ್ರವೇಶಿಸಲು ಅನುಮತಿಸದಿರುವುದು ಸೂಕ್ಷ್ಮಜೀವಿಗಳು ಕೋಣೆಯಲ್ಲಿ ಉಳಿಯಲು ಕಾರಣವಾಗಬಹುದು. ಇದನ್ನು ಉಸಿರಾಡಿದಾಗ ಜ್ವರ ಹರಡುತ್ತದೆ. ಜ್ವರಕ್ಕೆ ಸಂಬಂಧಿಸಿದ ರೋಗಲಕ್ಷಣಗಳು: ಸಾಮಾನ್ಯ ಜ್ವರ, ಕೋಲ್ಡ್ ಸ್ವೆಟ್‌, ಇಡೀ ದೇಹ ನೋಯುವುದು, ನಿಶಕ್ತಿ, ವಾಂತಿ, ಅತಿಸಾರದಂತಹ ಜಠರಗರುಳಿನ ಸಮಸ್ಯೆ. 

ನ್ಯುಮೋನಿಯಾ: ದೊಡ್ಡ ಪ್ರಮಾಣದ ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳು ನ್ಯುಮೋನಿಯಾವನ್ನು ಉಂಟುಮಾಡಬಹುದು. ನ್ಯುಮೋನಿಯಾವು ಮಾರಣಾಂತಿಕ ಸ್ಥಿತಿಯಾಗಿದೆ. ವಯಸ್ಕರಲ್ಲಿ ವೈರಲ್ ನ್ಯುಮೋನಿಯಾಕ್ಕೆ ಹೆಚ್ಚು ಪ್ರಚಲಿತ ಕಾರಣವೆಂದರೆ ಇನ್ಫ್ಲುಯೆಂಜಾ ವೈರಸ್. ನ್ಯುಮೋನಿಯಾದ ಲಕ್ಷಣಗಳು: ತೀವ್ರ ಕೆಮ್ಮು, ಶ್ವಾಸಕೋಶದ ತೊಂದರೆ, ಅಧಿಕ ಜ್ವರ, ಉಸಿರಾಟದ ತೊಂದರೆ, ತೀವ್ರ ತಲೆನೋವು, ಅತಿಸಾರ, ವಾಂತಿ, ವಿಪರೀತ ಬೆವರುವುದು, ಸ್ನಾಯುಗಳಲ್ಲಿ ನೋವು, ಚರ್ಮದ ಬಣ್ಣ ಬದಲಾಗುವುದು.

ಗಂಟಲು ನೋವು: ಇದು ವೈರಲ್ ಸೋಂಕಿನಿಂದ ಉಂಟಾಗುವ ಚಳಿಗಾಲದ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಎ ಗುಂಪಿನ ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾವು ಗಂಟಲು ನೋವಿಗೆ ಕಾರಣವಾಗುವ ಅಂಶವಾಗಿದೆ. ಅಲರ್ಜಿಗಳು, ಧೂಳು ಮತ್ತು ಗಾಳಿಯಲ್ಲಿ ಶುಷ್ಕತೆ, ಮಾಲಿನ್ಯಕಾರಕಗಳು ಮತ್ತು ಗಂಟಲಿನ ಕ್ಯಾನ್ಸರ್ ಗಂಟಲು ನೋವಿಗೆ ಕಾರಣವಾಗುವ ಕೆಲವು ಅಂಶಗಳಾಗಿವೆ. ಗಂಟಲು ನೋವಿನ ಸಾಮಾನ್ಯ ಲಕ್ಷಣಗಳು: ತೀವ್ರವಾದ ಗಂಟಲು ನೋವು, ಗಂಟಲು ಊದಿಕೊಳ್ಳುವುದು, ಟಾನ್ಸಿಲ್‌ಗಳು

ಅಸ್ತಮಾ ಸಮಸ್ಯೆ: ಸಾಮಾನ್ಯ ಶೀತ, ಜ್ವರ ಮತ್ತು ನ್ಯುಮೋನಿಯಾ ಹೆಚ್ಚಾಗಿ ಚಳಿಗಾಲದ ತಿಂಗಳುಗಳಲ್ಲಿ ಸಂಭವಿಸುತ್ತದೆ. ಧೂಳು, ಹುಳಗಳು, ಫಂಗಸ್‌ ಮತ್ತು ಸಾಕುಪ್ರಾಣಿಗಳ ತಲೆಹೊಟ್ಟು,ಕೂದಲಿನ ಅಲರ್ಜಿ ಇರುವ ಜನರು ಚಳಿಗಾಲ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಅಲರ್ಜಿಗಳು ಅಸ್ತಮಾವನ್ನು ಪ್ರಚೋದಿಸುತ್ತವೆ. ಹೀಗಾಗಿ ಅಸ್ತಮಾ ಹೊಂದಿರುವ ವ್ಯಕ್ತಿ ಶೀತ, ಜ್ವರ ಅಥವಾ ನ್ಯುಮೋನಿಯಾದಿಂದ ಬಳಲುತ್ತಿದ್ದರೆ, ಉಸಿರಾಟದ ತೊಂದರೆಗಳು ಹೆಚ್ಚಾಗುತ್ತವೆ. ಅಸ್ತಮಾ ರೋಗಲಕ್ಷಣಗಳು: ಚಳಿಗಾಲದ ರಾತ್ರಿಗಳಲ್ಲಿ ನಿರಂತರ ಕೆಮ್ಮು, ಸಣ್ಣ ದೈಹಿಕ ವ್ಯಾಯಾಮದ ನಂತರ ಗಾಳಿಗಾಗಿ ಏದುಸಿರು, ಉಸಿರಾಡುವಾಗ ಶಿಳ್ಳೆ ಸದ್ದು, ಎದೆ ಬಿಗಿತದ ಅನುಭವ, ಉಸಿರಾಟದ ತೊಂದರೆ, ವಿಪರೀತ ಆಯಾಸ

ಹೃದಯಾಘಾತ: ಇತರ ಋತುಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು. ಚಳಿಗಾಲದ ಶೀತ ವಾತಾವರಣವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳ ಹೃದಯದಲ್ಲಿ ಹೆಚ್ಚು ಒತ್ತಡವನ್ನು ಉಂಟು ಮಾಡಬಹುದು. ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಉಳಿಸಿಕೊಳ್ಳಲು ಹೃದಯವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಚಳಿಗಾಲದಲ್ಲಿ ಎದುರಾಗುವ ಹೃದಯಾಘಾತದ ಪ್ರಮುಖ ಲಕ್ಷಣಗಳು: ಒತ್ತಡದ ಭಾವನೆ ಮತ್ತು ಎದೆಯಲ್ಲಿ ಹಿಸುಕಿದಂತಹ ಭಾವನೆ ಪದೇ ಪದೇ ಬರುವುದು, ಕುತ್ತಿಗೆ, ತೋಳುಗಳು, ದವಡೆ, ಬೆನ್ನು ಮತ್ತು ಹೊಟ್ಟೆಯಲ್ಲಿ ತೀವ್ರವಾದ ನೋವು, ಹಠಾತ್ ಉಸಿರಾಟದ ತೊಂದರೆ, ವಾಕರಿಕೆ ಮತ್ತು ತಲೆತಿರುಗುವಿಕೆ

ಕೀಲುನೋವು: ಚಳಿಗಾಲದಲ್ಲಿ ಸಂಧಿವಾತದ ಪ್ರಮಾಣ ಹೆಚ್ಚಾಗುವ ಕಾರಣ ಹಲವರು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಮೊಣಕಾಲಿನ ಕೀಲುಗಳಲ್ಲಿ ರಕ್ಷಣಾತ್ಮಕ ಇರುವ ಸೈನೋವಿಯಲ್ ದ್ರವವು ಚಳಿಗಾಲದಲ್ಲಿ ದಪ್ಪವಾಗುತ್ತದೆ. ಇದು ಸೈನೋವಿಯಲ್ ಕೀಲುಗಳ ನಡುವಿನ ಚಲನೆಗೆ ಕಷ್ಟವಾಗಿ ಒತ್ತಡ ಹೇರುವಂತೆ ಮಾಡುತ್ತದೆ. ಕೀಲುಗಳನ್ನು ಆವರಿಸಿರುವ ನರಗಳ ಮೇಲಿನ ಒತ್ತಡದಿಂದಾಗಿ ಕೀಲು ನೋವಿನ ಸಮಸ್ಯೆ ಉಲ್ಬಣವಾಗುತ್ತದೆ. ಚಳಿಗಾಲದಲ್ಲಿ ಧೂಮಪಾನವು ಕೂಡ ಕೀಲು ನೋವಿನ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಬಹುದು. ಕೀಲುನೋವಿನ ಸಾಮಾನ್ಯ ಲಕ್ಷಣಗಳು: ಚಲಿಸಲು ಕಷ್ಟವಾಗುವುದು, ವಿಶ್ರಾಂತಿ ಸಮಯದಲ್ಲೂ ಗಂಟು ನೋವು ಕಾಣಿಸುವುದು, ಕೆಲಸ ಮಾಡುವ ಸಮಯದಲ್ಲಿ ಅತಿಯಾಗಿ ನೋವು ಬರುವುದು, ದೈನಂದಿನ ಚಟುವಟಿಕೆಗೂ ಕಷ್ಟವಾಗುವುದು,

ಚರ್ಮದ ತುರಿಕೆ: ಚಳಿಗಾಲದಲ್ಲಿ ಚರ್ಮದ ತುರಿಕೆ ಸಹಜ. ಶುಷ್ಕ ಚರ್ಮವು ತುರಿಕೆಗೆ ಪ್ರಮುಖ ಕಾರಣವಾಗಿದೆ. ಬೇಸಿಗೆಯಷ್ಟು ಚಳಿಗಾಲದಲ್ಲಿ ದೇಹವು ಬೆವರುವುದಿಲ್ಲ. ಒಣ ಚರ್ಮ, ಮೊಡವೆ, ಎಸ್ಜಿಮಾ, ನೈಸರ್ಗಿಕ ತೈಲಗಳ ಉತ್ಪಾದನೆ ಮತ್ತು ತೇವಾಂಶದ ಕೊರತೆಯು ಚರ್ಮದ ತುರಿಕೆಗೆ ಕೊಡುಗೆ ನೀಡುತ್ತದೆ. ಚಳಿಗಾಲದಲ್ಲಿ ಕಾಣಿಸುವ ಚರ್ಮ ರೋಗದ ಲಕ್ಷಣಗಳು: ಚರ್ಮ ಒರಟಾಗುವುದು, ತುರಿಕೆ, ಸಿಪ್ಪೆ ಏಳುವುದು, ಚರ್ಮದಲ್ಲಿ ಬಿರುಕು ಮೂಡುವುದು, ಚರ್ಮ ಬೂದು ಬಣ್ಣಕ್ಕೆ ತಿರುಗುವುದು, ಬಿರುಕಿನಿಂದ ರಕ್ತಸ್ರಾವ.

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ಹೀಗೆ ಮಾಡಿ 

* ಚಳಿಗಾಲದಲ್ಲಿ ತಪ್ಪದೇ ಸ್ನಾನ ಮಾಡಬೇಕು. ಪ್ರತಿದಿನ ಸ್ನಾನ ಮಾಡುವ ಮೂಲಕ ನೈಮರ್ಲ್ಯ ಕಾಪಾಡಿಕೊಳ್ಳಬಹುದು. ಮುಂಜಾನೆಯ ಹೊತ್ತು ತಣ್ಣೀರಿನ ಸ್ನಾನ ಬೇಡ.

* ಕೆಮ್ಮುವಾಗ ಅಥವಾ ಸೀನುವಾಗ ಟಿಶ್ಯೂ ಪೇಪರ್ ಅಥವಾ ಕರವಸ್ತ್ರದಿಂದ ನಿಮ್ಮ ಬಾಯಿಯನ್ನು ಮುಚ್ಚಿಕೊಳ್ಳಿ.

* ತಿನ್ನುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ.

* ಮಾರುಕಟ್ಟೆಯಿಂದ ಮನೆಗೆ ಬಂದ ನಂತರ ನಿಮ್ಮ ಕೈಯನ್ನು ತೊಳೆದುಕೊಳ್ಳಿ. ಮನೆಯಿಂದ ಹೊರಗೆ ಕಾಲಿಡುವಾಗ ಯಾವಾಗಲೂ ಫೇಸ್ ಮಾಸ್ಕ್ ಧರಿಸಿ.

* ಸಾಕಷ್ಟು ನೀರು ಕುಡಿಯಿರಿ. ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ

* ಕರಿಮೆಣಸು, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ ಟೊಮೆಟೊ ಅಥವಾ ಮಿಶ್ರ ತರಕಾರಿ ಸೂಪ್ ತಯಾರಿಸಿ ಕುಡಿಯಿರಿ.

* ನಿಮ್ಮ ಆಹಾರದಲ್ಲಿ ಸೊಪ್ಪು ತರಕಾರಿ, ಒಣ ಹಣ್ಣುಗಳು, ಅರಿಸಿನ, ಬೆಲ್ಲ, ಶುಂಠಿ, ಬೆಳ್ಳುಳ್ಳಿ ಮತ್ತು ತುಪ್ಪ ಇರುವಂತೆ ನೋಡಿಕೊಳ್ಳಿ

* ಐಸ್ ಕ್ರೀಮ್ ತಿನ್ನುವುದನ್ನು ಮತ್ತು ತಂಪು ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ

* ಆದಷ್ಟು ಬೆಚ್ಚಗಿನ ಬಟ್ಟೆ ಧರಿಸಿ

* ಗಂಟಲು ನೋವಿನ ಸಮಸ್ಯೆ ಇದ್ದರೆ ಉಪ್ಪು ನೀರಿನಿಂದ ಬಾಯಿ ಮಕ್ಕಳಿಸಿ.

* ಜ್ವರ 2 ದಿನಕ್ಕೆ ಕಡಿಮೆಯಾಗದೇ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ

* ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿದರೆ ತಡ ಮಾಡದೇ ವೈದ್ಯರ ಬಳಿ ಹೋಗಿ.

Whats_app_banner