ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಅಫ್ಘಾನಿಸ್ತಾನ; ಕಾಂಗರೂಗಳ ಮಣಿಸಿ ಇತಿಹಾಸ ನಿರ್ಮಿಸಿದ ಅಫ್ಘನ್ನರು

ಆಸ್ಟ್ರೇಲಿಯಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಅಫ್ಘಾನಿಸ್ತಾನ; ಕಾಂಗರೂಗಳ ಮಣಿಸಿ ಇತಿಹಾಸ ನಿರ್ಮಿಸಿದ ಅಫ್ಘನ್ನರು

ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದೆ. ಇದರೊಂದಿಗೆ ಆಸೀಸ್‌ ಸೆಮಿಫೈನಲ್‌ ಆಸೆಗೆ ಅಫ್ಘನ್ನರು ತಡೆ ಹಾಕಿದ್ದಾರೆ. ಮುಂದೆ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಭಾರಿ ಕುತೂಹಲ ಮೂಡಿಸಿದೆ.

ಆಸ್ಟ್ರೇಲಿಯಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಅಫ್ಘಾನಿಸ್ತಾನ; ಇತಿಹಾಸ ನಿರ್ಮಿಸಿದ ಅಫ್ಘನ್ನರು
ಆಸ್ಟ್ರೇಲಿಯಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಅಫ್ಘಾನಿಸ್ತಾನ; ಇತಿಹಾಸ ನಿರ್ಮಿಸಿದ ಅಫ್ಘನ್ನರು (AP)

ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅಫ್ಘಾನಿಸ್ತಾನ ರೋಚಕ 21 ರನ್‌ಗಳಿಂದ ಸೋಲಿಸಿದೆ. ಐತಿಹಾಸಿಕ ಜಯದೊಂದಿಗೆ ಅಫ್ಘನ್‌ ಕ್ರಿಕೆಟ್‌ ತಂಡವು ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚುಟುಕು ವಿಶ್ವಕಪ್‌ನಲ್ಲಿ ಅಜೇಯ ಓಟ ಮುಂದುವರೆಸಿದ್ದ ಆಸೀಸ್‌ ತಂಡದ ಸತತ 8 ಗೆಲುವಿನ ವೇಗಕ್ಕೆ ಅಫ್ಘಾನಿಸ್ತಾನ ಬ್ರೇಕ್‌ ಹಾಕಿದೆ. ಅತ್ತ ಪಂದ್ಯ ಗೆದ್ದು ಸೆಮಿಫೈನಲ್‌ ಪ್ರವೇಶ ಪಡೆಯುವ ಕನಸಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ನಿರಾಶೆ ಎದುರಾಗಿದ್ದು, ಭಾರತ ಕೂಡಾ ಸೆಮೀಸ್‌ ಪ್ರವೇಶಕ್ಕಾಗಿ ಕಾಯಬೇಕಾಗಿ ಬಂದಿದೆ. ಇದರೊಂದಿಗೆ ನಾಳೆ (ಜೂನ್‌ 24ರ ಸೋಮವಾರ) ನಡೆಯಲಿರುವ ಇಂಡೋ-ಆಸೀಸ್‌ ಕದನವು ಭಾರಿ ರೋಚಕತೆ ಮೂಡಿಸಿದೆ.

ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಆಸೀಸ್‌ ವಿರುದ್ಧ ಮೊಟ್ಟಮೊದಲ ಗೆಲುವು ದಾಖಲಿಸಿದೆ. ಕಿಂಗ್‌ಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 149 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, 19.2 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಸ್ಫೋಟಕ ಆಲ್‌ರೌಂಡರ್‌ ಗ್ಲೆನ್ ಮ್ಯಾಕ್ಸ್‌ವೆಲ್ 41 ಎಸೆತಗಳಲ್ಲಿ 59 ರನ್‌ ಗಳಿಸಿದ್ದು ಹೊರತುಪಡಿಸಿದರೆ, ಕಾಂಗರೂ ಬಳಗದಿಂದ ಯಾರಿಂದಲೂ ದಿಟ್ಟ ಹೋರಾಟ ವ್ಯಕ್ತವಾಗಲಿಲ್ಲ.

ಅಫ್ಘನ್‌ ಪರ ಗುಲ್ಬಾದಿನ್ ನೈಬ್ ಕೇವಲ 20 ರನ್‌ ಬಿಟ್ಟಕೊಟ್ಟು ಪ್ರಮುಖ 4 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅತ್ತ ನವೀನ್-ಉಲ್-ಹಕ್ ಪ್ರಮುಖ 3 ವಿಕೆಟ್‌ ಕಬಳಿಸಿದರು.

ಟ್ರೆಂಡಿಂಗ್​ ಸುದ್ದಿ

ಏಕದಿನ ವಿಶ್ವಕಪ್‌ ಸೋಲಿಗೆ ಸೇಡು!

ಕಳೆದ ವರ್ಷದ ನವೆಂಬರ್‌ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಕೊನೆಯ ಕ್ಷಣದಲ್ಲಿ ಅಫ್ಘಾನಿಸ್ತಾನ ಎಡವಿತ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಜೇಯ ದ್ವಿಶತಕ ಸಿಡಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಆ ಪಂದ್ಯದಲ್ಲಿಯೂ ಅಫ್ಘನ್‌ಗೆ ಮ್ಯಾಕ್ಸ್‌ವೆಲ್ ಕಂಟಕರಾಗಿದ್ದರು. ಆದರೆ, ಇಂದು ಮ್ಯಾಕ್ಸಿ ವಿಕೆಟ್‌ ಪಡೆಯುವುದರೊಂದಿಗೆ ತಂಡ ಲಯ ಕಂಡುಕೊಂಡಿತು. ಆ ಮೂಲಕ ಸುಮಾರು ಎಂಟು ತಿಂಗಳ ನಂತರ, ಇಂದು ಕಿಂಗ್‌ಸ್ಟನ್‌ನಲ್ಲಿ ಅಫ್ಘಾನಿಸ್ತಾನ ಸೇಡು ತೀರಿಸಿಕೊಂಡಿದೆ. ಮಾಜಿ ಚಾಂಪಿಯನ್‌ಗಳ ವಿರುದ್ಧ ಮೊಟ್ಟ ಮೊದಲ ಗೆಲುವು ದಾಖಲಿಸಿದೆ.

ಮುಂದೆ ಸೆಮಿಫೈನಲ್‌ನಲ್ಲಿ ಸ್ಥಾನ ವಶಪಡಿಸಿಕೊಳ್ಳಲು ಭಾರತ ವಿರುದ್ಧ ಆಸೀಸ್‌ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಏಕಾಂಗಿ ಹೋರಾಟ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘನ್‌ ಪರ, ಇಬ್ರಾಹಿಂ ಜದ್ರನ್ ಹಾಗೂ ಗುರ್ಬಾಜ್‌ ಶತಕದ ಜೊತೆಯಾಟವಾಡಿದರು. ಅಲ್ಲದೆ ಇವರಿಬ್ಬರು ತಲಾ ಅರ್ಧಶತಕ ದಾಖಲಿಸಿದರು. ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಅವರ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ವಿಕೆಟ್ ಸಾಧನೆಯಿಂದ, ಅಫ್ಘನ್‌ ಬ್ಯಾಟಿಂಗ್‌ ಲೈನಪ್‌ ಕುಸಿತಗೊಂಡಿತು.

ಚೇಸಿಂಗ್‌ ವೇಳೆ ಆಸೀಸ್‌ ಆರಂಭದಿಂದಲೇ ಕುಸಿಯಿತು. ಸ್ಫೋಟಕ ಆರಂಭಿಕ ಆಟಗಾರ ಟ್ರಾವಿಸ್‌ ಹೆಡ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರೆ, ವಾರ್ನರ್‌ ಗಳಿಕೆ 3 ರನ್‌ ಮಾತ್ರ. ತಂಡದ ಪರ ಹೋರಾಡಿದವರು ಗ್ಲೆನ್ ಮ್ಯಾಕ್ಸ್‌ವೆಲ್ ಒಬ್ಬರೇ. ಉಳಿದಂತೆ ತಂಡದ ಗರಿಷ್ಠ ಗಳಿಕೆ ನಾಯಕ ಮಾರ್ಷ್‌ ಅವರ 12 ರನ್.‌ ಸ್ಟೋಯ್ನಿಸ್‌ ಹೊರತಾಗಿ ಉಳಿದ ಎಲ್ಲಾ ಆಟಗಾರರ ಗಳಿಕೆ ಒಂದಂಕಿ ರನ್‌ ಮಾತ್ರ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಇತ್ತೀಚೆಗೆ ಅಮೋಘ ಪ್ರದರ್ಶನ ನೀಡುತ್ತಿದೆ. ಏಕದಿನ ವಿಶ್ವಕಪ್‌ನಲ್ಲಿ ತಂಡವು ಮೂರು ವಿಶ್ವ ಚಾಂಪಿಯನ್‌ಗಳನ್ನು ಸೋಲಿಸಿತ್ತು. ಇಂಗ್ಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧ ಗೆಲುವು ದಾಖಲಿಸಿತ್ತು. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಲವು ದಿನಗಳ ಹಿಂದೆ ನ್ಯೂಜಿಲ್ಯಾಂಡ್ ವಿರುದ್ಧ 74 ರನ್‌ಗಳ ಜಯಭೇರಿ ಬಾರಿಸಿತ್ತು.