ಸಹ ಆಟಗಾರರನ್ನು 'ಘೇಂಡಾ' ಎಂದು ಕರೆದ ಬಾಬರ್ ಅಜಮ್; ಪರ-ವಿರೋಧ ಚರ್ಚೆ ಹುಟ್ಟುಹಾಕಿದ ಹೇಳಿಕೆ, ವಿಡಿಯೋ
Babar Azam: ತನ್ನ ಸಹ ಆಟಗಾರ ಅಜಮ್ ಖಾನ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರು ಘೇಂಡಾಮೃಗ ಎಂದು ಕರೆದಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ಜೂನ್ 6ರಂದು ಸಹ ಆತಿಥೇಯ ಅಮೆರಿಕ ತಂಡದ ವಿರುದ್ಧ ಕಾದಾಟ ನಡೆಸುವುದಕ್ಕೂ ಮುನ್ನ ಪಾಕಿಸ್ತಾನ ತಂಡ (Pakistan vs USA) ಭರ್ಜರಿ ಸಮರಾಭ್ಯಾಸ ನಡೆಸುತ್ತಿದೆ. ಮೊದಲ ಪಂದ್ಯದಲ್ಲೇ ಗೆದ್ದು ಅಭಿಯಾನ ಆರಂಭಿಸುವ ಲೆಕ್ಕಾಚಾರದಲ್ಲಿದೆ ಬಾಬರ್ (Babar Azam) ಪಡೆ. ಉಭಯ ತಂಡಗಳ ನಡುವಿನ ಪಂದ್ಯ ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೂ ಮುನ್ನ ತಂಡದ ಕ್ಯಾಪ್ಟನ್ ಬಾಬರ್ ಅಜಮ್ ಅವರು ಹೊಸ ವಿವಾದಕ್ಕೆ ಸಿಲುಕಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ತನ್ನ ಆರಂಭಿಕ ಪಂದ್ಯಕ್ಕೂ ಮುನ್ನ ಸಿದ್ಧತೆಯ ಭಾಗವಾಗಿ ಫುಟ್ಬಾಲ್ ಆಡುತ್ತಿದ್ದ ಅವಧಿಯಲ್ಲಿ ತನ್ನ ಸಹ ಆಟಗಾರರನನ್ನು ಬಾಬರ್ ಅಜಮ್ ಹೀಯಾಳಿಸಿದ್ದಾರೆ. ಅಭ್ಯಾಸ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಅಜಮ್ ಖಾನ್ ಅವರನ್ನು ಪಾಕಿಸ್ತಾನ ಕ್ಯಾಪ್ಟನ್ ಘೇಂಡಾ ಎಂದು ಕರೆದಿದ್ದಾರೆ. ಘೇಂಡಾ ಅಂದರೆ ಘೇಂಡಾಮೃಗ ಎಂದರ್ಥ. ಹೀಗೆ ಕರೆದು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ದಡೂತಿ ದೇಹವನ್ನು ಹೊಂದಿರುವ ಕಾರಣ ಅಜಮ್ರನ್ನು ಹೀಗೆ ಕರೆದು ಘೇಂಡಾಮೃಗಕ್ಕೆ ಹೋಲಿಸಿದ್ದಾರೆ.
ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶರವೇಗದಲ್ಲಿ ವೈರಲ್ ಆಗಿದೆ. ಪಾಕ್ ನಾಯಕ ಬಾಬರ್ ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದಿಷ್ಟು ಮಂದಿ ಬಾಬರ್ ಬೆಂಬಲಕ್ಕೆ ನಿಂತಿದ್ದಾರೆ. ಅವರು ತಮಾಷೆಯಾಗಿ ಹೀಗೆ ಕರೆದಿರಬಹುದು. ಆದರೆ, ಇದನ್ನೇ ದೊಡ್ಡದು ಮಾಡುವ ಅಗತ್ಯ ಇಲ್ಲ. ತಂಡದಲ್ಲಿ ಆಟಗಾರರು ಅಡ್ಡಹೆಸರು ಇಟ್ಟುಕೊಂಡಿರುತ್ತಾರೆ, ಅದರಂತೆ ಕರೆದಿದ್ದಾರೆ ಎಂದಿದ್ದಾರೆ.
ಪಾಕ್ ತಂಡದ ಮೊದಲ ಪಂದ್ಯ ಯಾವಾಗ?
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಜೂನ್ 6ರಂದು ಆಡಲಿದೆ. ತದನಂತರ ಜೂನ್ 9ರಂದು ಟೀಮ್ ಇಂಡಿಯಾ ವಿರುದ್ಧ ಹೈವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬ್ಲಾಕ್ಬಸ್ಟರ್ ಪಂದ್ಯವು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಆ ಬಳಿಕ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಪಾಕ್ ಸೆಣಸಾಟ ನಡೆಸಲಿದೆ.
ಮೊದಲ ಪಂದ್ಯಕ್ಕೂ ಮುನ್ನ ಆಘಾತ
ಟಿ20 ವಿಶ್ವಕಪ್ನಲ್ಲಿ ತನ್ನ ಆರಂಭಿಕ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡವು ಆಘಾತಕ್ಕೆ ಒಳಗಾಗಿದೆ. ಪ್ರಮುಖ ಸ್ಪಿನ್ನರ್ ಇಮಾದ್ ವಾಸೀಂ ಇಂಜುರಿಗೆ ತುತ್ತಾಗಿದ್ದು, ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜೂನ್ 5ರಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇಂಗ್ಲೆಂಡ್ ವಿರುದ್ಧದ 4ನೇ ಪಂದ್ಯಕ್ಕೆ ಬ್ಯಾಟಿಂಗ್ ಪ್ರಾಕ್ಟೀಸ್ ವೇಳೆ ಇಮಾದ್, ಬಲ ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡಿತ್ತು.
ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಆಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕಾರ್ ಅಹ್ಮದ್, ಇಮಾದ್ ವಾಸೀಂ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ