ಬೌಲಿಂಗ್ ಕೊಡೋಕೆ ನಾಯಕನಲ್ಲಿ ಹೋಗಿ ಕೇಳು; 4ನೇ ಟೆಸ್ಟ್‌ಗೂ ಮುನ್ನ ಯಶಸ್ವಿ ಜೈಸ್ವಾಲ್‌ಗೆ ಅನಿಲ್ ಕುಂಬ್ಳೆ ಮನವಿ
Yashasvi Jaiswal: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡುವಂತೆ ಯಶಸ್ವಿ ಜೈಸ್ವಾಲ್‌ಗೆ ಅನಿಲ್ ಕುಂಬ್ಳೆ ಮನವಿ ಮಾಡಿದ್ದಾರೆ. ತಮ್ಮ ನೈಸರ್ಗಿಕ ಪ್ರತಿಭೆಯನ್ನು ಉಳಿಸಿಕೊಳ್ಳಲು ಸಲಹೆ ನೀಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ ಬಳಿಕ, ಪಂದ್ಯದಿಂದ ಪಂದ್ಯಕ್ಕೆ ಅವರ ಪ್ರದರ್ಶನ ಸುಧಾರಿಸುತ್ತಿದೆ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿಯೂ (India vs England), ಅಬ್ಬರಿಸುವುದರಲ್ಲಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ. ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಟ್ಟು 545 ರನ್ ಗಳಿಸಿದ್ದಾರೆ. ಆ ಮೂಲಕ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 209 ರನ್ ಗಳಿಸಿದ್ದ ಅವರು, ರಾಜ್ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಅಜೇಯ 214 ರನ್ ಸಿಡಿಸಿದರು. ಬ್ಯಾಟಿಂಗ್‌ನಲ್ಲಿ ಸತತ ಅಬ್ಬರಿಸುತ್ತಿರುವ ಅವರು, ಮುಂದಿನ ಪಂದ್ಯಗಳಲ್ಲಿ ತಮ್ಮ ಸ್ಥಾನ ದೃಢಪಡಿಸಿದ್ದಾರೆ.
ಇದನ್ನೂ ಓದಿ | ದ್ವಿಶತಕ ಸಿಡಿಸಿದರೂ ಯಶಸ್ವಿ ಜೈಸ್ವಾಲ್‌ಗೆ ಸಿಗಲಿಲ್ಲ ಪಂದ್ಯಶ್ರೇಷ್ಠ; ಹಾಗಾದರೆ ಈ ಪ್ರಶಸ್ತಿ ಗೆದ್ದಿದ್ಯಾರು?
ಈ ನಡುವೆ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ, ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯಗಳಿಗೂ ಮುನ್ನ ಜೈಸ್ವಾಲ್‌ಗೆ ವಿಶೇಷ ಮನವಿ ಮಾಡಿದ್ದಾರೆ. ಯುವ ಆಟಗಾರನಿಗೆ ತನ್ನಲ್ಲಿರುವ ಇತರ ನೈಸರ್ಗಿಕ ಪ್ರತಿಭೆಯನ್ನು ನೆನಪಿಸಿದ್ದಾರೆ.
ನಿರಂಜನ್ ಷಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡವು 434 ರನ್‌ಗಳಿಂದ ದಾಖಲೆಯ ಗೆಲುವು ಸಾಧಿಸಿತು. ಪಂದ್ಯದ ನಂತರ ನಡೆದ ಲಘು ಸಂವಾದದಲ್ಲಿ, ಜೈಸ್ವಾಲ್ ಜೊತೆಗೆ ಕುಂಬ್ಳೆ ಮಾತನಾಡಿದರು. ಲೆಗ್-ಸ್ಪಿನ್ ಬೌಲಿಂಗ್ ಮಾಡುವ ಯಶಸ್ವಿ ಅವರ ನೈಸರ್ಗಿಕ ಪ್ರತಿಭೆಯನ್ನು ಕುಂಬ್ಳೆ ಗುರುತಿಸಿದರು. ಅಲ್ಲದೆ ಆ ಬೌಲಿಂಗ್ ಪ್ರತಿಭೆಯನ್ನು ಬಿಟ್ಟುಕೊಡದಂತೆ ಒತ್ತಾಯಿಸಿದರು.
ಇದನ್ನೂ ಓದಿ | ಬುಮ್ರಾ, ಪಾಟೀದಾರ್ ಔಟ್; ಕೆಎಲ್ ರಾಹುಲ್ ಇನ್; ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ಈ ವೇಳೆ ಮಾತನಾಡಿದ ಜೈಸ್ವಾಲ್, ಮೂರನೇ ಟೆಸ್ಟ್ ಪಂದ್ಯದ ವೇಳೆ ಬೌಲಿಂಗ್ ಮಾಡಲು ಸಿದ್ಧರಾಗುವಂತೆ ನಾಯಕ ರೋಹಿತ್ ಶರ್ಮಾ ಹೇಳಿದ್ದರು ಎಂದು ಬಹಿರಂಗಪಡಿಸಿದರು. ಹೀಗಾಗಿ ಸರಣಿಯುದ್ದಕ್ಕೂ ತಮ್ಮ ಬೌಲಿಂಗ್ ಸಾಮರ್ಥ್ಯ ತೋರಿಸಲು ಆಸಕ್ತಿ ಹೊಂದಿರುವುದಾಗಿ ಎಡಗೈ ಆರಂಭಿಕ ಆಟಗಾರ ಹೇಳಿದ್ದಾರೆ.
ಅನಿಲ್ ಕುಂಬ್ಳೆ ಹೇಳಿದ್ದೇನು?
“ನಿಮ್ಮ ಬ್ಯಾಟಿಂಗ್ ಉತ್ತಮವಾಗಿದೆ. ಆದರೆ, ನೀವು ಒಂದು ವಿಷಯದಲ್ಲಿ ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ನೀವು ನೈಸರ್ಗಿಕ ಲೆಗ್ ಸ್ಪಿನ್ ಕೌಶಲ ಹೊಂದಿದ್ದೀರಿ. ಹೀಗಾಗಿ ಅದನ್ನು ಬಿಟ್ಟುಕೊಡಬೇಡಿ. ಏಕೆಂದರೆ ಅದು ಯಾವಾಗ ಉಪಯುಕ್ತವಾಗುತ್ತದೆ ಎಂಬ ಬಗ್ಗೆ ನಿಮಗಿನ್ನೂ ತಿಳಿದಿಲ್ಲ. ಕೆಲವು ಓವರ್‌ಗಳನ್ನು ಬೌಲಿಂಗ್ ಮಾಡಲು ಅವಕಾಶ ನೀಡುವಂತೆ ನಾಯಕನಿಗೆ ಹೇಳಿ,” ಎಂದು ಕುಂಬ್ಳೆ ಜಿಯೋ ಸಿನೆಮಾದಲ್ಲಿ ಹೇಳಿದ್ದಾರೆ.
“ನಾನು ಯಾವಾಗಲೂ ಬೌಲಿಂಗ್ ಮಾಡಲು ಹೋಗುತ್ತೇನೆ. ರೋಹಿತ್ ಅವರು ನನಗೆ ಸಿದ್ಧರಾಗಿರಲು ಹೇಳಿದ್ದರು. ನಾನು ಕೂಡಾ ಬೌಲಿಂಗ್ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದೆ” ಎಂದು ಜೈಸ್ವಾಲ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Jasprit Bumrah: ಭಾರತ vs ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ
ಯಶಸ್ವಿ ಜೈಸ್ವಾಲ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಯಾವುದೇ ವಿಕೆಟ್ ಪಡೆಯದಿದ್ದರೂ, 3.5ರ ಎಕಾನಮಿ ರೇಟ್ ಕಾಯ್ದುಕೊಂಡಿದ್ದಾರೆ. ಅತ್ತ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 13 ಇನ್ನಿಂಗ್ಸ್‌ಗಳಲ್ಲಿ 5.41ರ ಎಕಾನಮಿಯಲ್ಲಿ ಏಳು ವಿಕೆಟ್ ಕಬಳಿಸಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)