ದ್ವಿಶತಕ ಸಿಡಿಸಿದರೂ ಯಶಸ್ವಿ ಜೈಸ್ವಾಲ್ಗೆ ಸಿಗಲಿಲ್ಲ ಪಂದ್ಯಶ್ರೇಷ್ಠ; ಹಾಗಾದರೆ ಈ ಪ್ರಶಸ್ತಿ ಗೆದ್ದಿದ್ಯಾರು?
India vs England 3rd Test : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದರೂ ಯಶಸ್ವಿ ಜೈಸ್ವಾಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿಲ್ಲ. ಹಾಗಾದರೆ ಈ ಪ್ರಶಸ್ತಿ ಗೆದ್ದಿದ್ಯಾರು?
ರಾಜ್‌ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ನಾಲ್ಕೇ ದಿನಕ್ಕೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ (India vs England 3rd Test) ದಾಖಲಿಸಿದೆ. 557 ರನ್ ಗುರಿ ಬೆನ್ನಟ್ಟಿದ ಪ್ರವಾಸಿ ತಂಡವನ್ನು 122 ರನ್ಗಳಿಗೆ ಆಲೌಟ್ ಮಾಡಿದ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದಿದೆ.
ಪಂದ್ಯದ ಮೊದಲ ದಿನದಾಟದ ಆರಂಭದಿಂದ ನಾಲ್ಕನೇ ದಿನದಾಟದ ಅಂತ್ಯವರೆಗೂ ಇಂಗ್ಲೆಂಡ್ ವಿರುದ್ಧ ಹಿಡಿತ ಸಾಧಿಸಿದ ಭಾರತ, 434 ರನ್ಗಳ ಅತಿದೊಡ್ಡ ಗೆಲುವನ್ನು ತನ್ನದಾಗಿಸಿಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 445 ರನ್ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 319ಕ್ಕೆ ಆಲೌಟ್ ಆಗಿ 126 ರನ್ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 430 ರನ್ ಗಳಿಸಿ ಡಿಕ್ಲೇರ್ ಘೋಷಿಸಿ 557 ರನ್ ಟಾರ್ಗೆಟ್ ನೀಡಿತ್ತು.
ಜೈಸ್ವಾಲ್ಗೆ ನೀಡಿಲ್ಲ ಪಂದ್ಯಶ್ರೇಷ್ಠ
ಎರಡನೇ ಇನ್ನಿಂಗ್ಸ್ನಲ್ಲಿ ಬೆಂಕಿ ಬಿರುಗಾಳಿ ಪ್ರದರ್ಶನ ನೀಡಿದ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ದೊಡ್ಡ ಮೊತ್ತವನ್ನು ಟಾರ್ಗೆಟ್ ನೀಡಲು ನೆರವಾದರು. ಡಬಲ್ ಸೆಂಚುರಿ ಸಿಡಿಸಿ ಹಲವು ರೆಕಾರ್ಡ್ಗಳನ್ನು ಧ್ವಂಸ ಮಾಡಿದರು. 235 ಎಸೆತಗಳಲ್ಲಿ 14 ಬೌಂಡರಿ, 12 ಸಿಕ್ಸರ್ ಸಹಿತ 214 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಬೌಲರ್ಗಳಿಗೆ ಸುಸ್ತು ಮಾಡಿದ ಯುವ ಬ್ಯಾಟರ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗುವ ನಿರೀಕ್ಷೆ ಇತ್ತು. ಆದರೆ ರವೀಂದ್ರ ಜಡೇಜಾಗೆ ಈ ಪ್ರಶಸ್ತಿ ಒಲಿಯಿತು.
ರವೀಂದ್ರ ಜಡೇಜಾಗೆ ಪಂದ್ಯಶ್ರೇಷ್ಠ ಕೊಟ್ಟಿದ್ದೇಕೆ?
ಪಂದ್ಯದ ನಂತರ ರವೀಂದ್ರ ಜಡೇಜಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿದರು. ಜಡ್ಡು ನೀಡಿದ ಆಲ್ರೌಂಡ್ ಪ್ರದರ್ಶನಕ್ಕೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಒಲಿಯಿತು. ಮೊದಲ ಇನ್ನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜಡೇಜಾ, ಆಕರ್ಷಕ ಶತಕ ಸಿಡಿಸಿದರು. ಅಲ್ಲದೆ, 2 ವಿಕೆಟ್ ಕೂಡ ಕಬಳಿಸಿದ್ದರು. ಇನ್ನು 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆಡುವ ಅವಕಾಶ ದೊರೆಯದಿದ್ದರೂ ಖಡಕ್ ಸ್ಪಿನ್ ಬೌಲಿಂಗ್ ದಾಳಿ ನಡೆಸಿ 5 ವಿಕೆಟ್ ಗಮನ ಸೆಳೆದರು. ಈ ಅದ್ಭುತ ಪ್ರದರ್ಶನದ ಕಾರಣಕ್ಕೆ ಜಡೇಜಾಗೆ ಪಂದ್ಯಶ್ರೇಷ್ಠ ನೀಡಲಾಯಿತು.
ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ ವೈಫಲ್ಯ
ಮೂರನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಮೊದಲ ಇನ್ನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದರು. ಆದರೆ ಜಡೇಜಾ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪರಾಕ್ರಮ ಮೆರೆದಿದ್ದರು. ಒಟ್ಟು 7 ವಿಕೆಟ್ ಮತ್ತು 112 ರನ್ ಕಲೆ ಹಾಕಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೈಸ್ವಾಲ್ ಎರಡನೇ ಪಂದ್ಯದಲ್ಲೂ ದ್ವಿಶತಕ ದಾಖಲಿಸಿದ್ದರು. ಆಗಲು ಅವರಿಗೆ ಪಂದ್ಯಶ್ರೇಷ್ಠ ಸಿಕ್ಕಿರಲಿಲ್ಲ. ಬೌಲಿಂಗ್ನಲ್ಲಿ ಧೂಳೆಬ್ಬಿಸಿದ್ದ ಜಸ್ಪ್ರೀತ್ ಬುಮ್ರಾಗೆ ಈ ಪ್ರಶಸ್ತಿ ದೊರಕಿತ್ತು.