Video: ಕೋವಿಡ್ ಸೋಂಕಿಗೆ ಒಳಗಾದರೂ ವಿಂಡೀಸ್ ವಿರುದ್ಧ ಆಡಿದ ಕ್ಯಾಮರೂನ್ ಗ್ರೀನ್; ಸಂಭ್ರಮಾಚರಣೆ ವೇಳೆ ಸಾಮಾಜಿಕ ಅಂತರ
Cameron Green: ಕೋವಿಡ್ ಸೋಂಕಿಗೆ ಒಳಗಾದರೂ, ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾ ಪರ ಮೈದಾನಕ್ಕಿಳಿದಿದ್ದಾರೆ. ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಆಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವ ಕ್ಯಾಮರೂನ್ ಗ್ರೀನ್ (Cameron Green) ಕೂಡಾ ಆಡಿದ್ದಾರೆ. ಸೋಂಕಿಗೆ ತುತ್ತಾದರೂ ಆಲ್‌ರೌಂಡರ್‌ಗೆ ಮೈದಾನಕ್ಕೆ ಇಳಿಯಲು ಅವಕಾಶ ನೀಡುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ.
ಕೊರೊನಾ ಪಾಸಿಟಿವ್ ಹೊರತಾಗಿಯೂ, ಗ್ರೀನ್ ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಮೈದಾನಕ್ಕಿಳಿದು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಬ್ಯಾಟಿಂಗ್ ಕ್ರಮಾಂಕದಲ್ಲಿ 4ನೇ ಸ್ಥಾನಕ್ಕೆ ಬಡ್ತಿ ಪಡೆದ ಗ್ರೀನ್, ವಿಂಡೀಸ್ ವಿರುದ್ಧ ಆಡಿ ಗಮನ ಸೆಳೆದಿದ್ದಾರೆ.
ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಮತ್ತು ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಜನವರಿ 24ರ ಬುಧವಾರ ಸ್ಪಷ್ಟಪಡಿಸಿತ್ತು. ಕೋವಿಡ್ ಪಾಸಿಟಿವ್ ಬಂದರೂ, ಅವರಿಗೆ ಟೆಸ್ಟ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು.
ಇದನ್ನೂ ಓದಿ | ಭಾರತದ ಸ್ಪಿನ್ ತ್ರಿವಳಿಗಳ ದಾಳಿಗೆ ಉಸಿರೆತ್ತದ ಇಂಗ್ಲೆಂಡ್; ಮೊದಲ ಇನ್ನಿಂಗ್ಸ್ನಲ್ಲಿ 246ಕ್ಕೆ ಆಲೌಟ್
ಕ್ರಿಕೆಟ್ ಆಸ್ಟ್ರೇಲಿಯಾದ ಹಂಚಿಕೊಂಡಿರುವ ವಿಡಿಯೋದಲ್ಲಿ, ಕ್ಯಾಮರೂನ್ ಗ್ರೀನ್ ರಾಷ್ಟ್ರಗೀತೆಯ ಸಮಯದಲ್ಲಿ ಆಸ್ಟ್ರೇಲಿಯಾ ತಂಡದ ಇತರ ಸದಸ್ಯರಿಗಿಂತ ದೂರ ನಿಂತಿರುವುದನ್ನು ನೋಡಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ಮೈದಾನದಲ್ಲಿ ಆಡುವ ಮೂಲಕ, ತಂಡದೊಳಗೆ ಯಾವುದೇ ಆಟಗಾರರಿಗೆ ಸಂಕು ತಗುಲುವ ಸಂಭಾವ್ಯತೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ವಿಕೆಟ್ ಪಡೆದ ನಂತರ ಆಟಗಾರರು ಸಂಭ್ರಮಿಸುವಾಗ, ಗ್ರೀನ್ ದೂರದಿಂದಲೇ ಸಂಬ್ರಮಿಸುತ್ತಾರೆ. ಈ ವೇಳೆ ಹೇಜಲ್‌ವುಡ್ ತಮಾಷೆ ಮಾಡುತ್ತಾರೆ. ಇತರರಿಂದ ದೂರ ಉಳಿಯುವಂತೆ ಎರಡೂ ಕೈಗಳಿಂದ ಸನ್ನೆ ಮಾಡುತ್ತಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಕೋವಿಡ್ ಪಾಸಿಟಿವ್ ಬಂದ ಆಟಗಾರನನ್ನು ಆಡಿಸುತ್ತಿರುವುದು ಇದೇ ಮೊದಲಲ್ಲ. 2022ರ ಕಾಮನ್ವೆಲ್ತ್ ಗೇಮ್ಸ್ ಫೈನಲ್ ಪಂದ್ಯದ ಸಮಯದಲ್ಲಿ, ಸೋಂಕಿಗೆ ತುತ್ತಾಗಿದ್ದ ಆಟಗಾರ್ತಿ ತಹ್ಲಿಯಾ ಮೆಕ್‌ಗ್ರಾತ್ ಅವರಿಗೆ ಭಾರತ ವಿರುದ್ಧ ಆಡಲು ಅವಕಾಶ ನೀಡಲಾಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಒಂಬತ್ತು ರನ್ ಗಳಿಂದ ಗೆದ್ದು ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ | ಆಂಗ್ಲರಿಗೆ ತಿರುಮಂತ್ರವಾದ ಬಜ್‌ಬಾಲ್ ತಂತ್ರ; ಜೈಸ್ವಾಲ್ ಆಕ್ರಮಣಕಾರಿ ಆಟಕ್ಕೆ ಮಂಕಾದ ಇಂಗ್ಲೆಂಡ್, ಮೊದಲ ಟೆಸ್ಟ್‌ನಲ್ಲಿ ಮುನ್ನಡೆ
ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡವು 266 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ 10 ವಿಕೆಟ್‌ಗಳಿಂದ ಸೋತಿತ್ತು. ಹೀಗಾಗಿ ಆಸೀಸ್ ತಂಡವು ಸರಣಿಯಲ್ಲಿ ಈಗಾಗಲೇ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.