ನಿಯಮ ಉಲ್ಲಂಘಿಸಿದ ವಿರಾಟ್​ ಕೊಹ್ಲಿಗೆ ಬಿಸಿಸಿಐ ಖಡಕ್ ವಾರ್ನಿಂಗ್; ಅಷ್ಟಕ್ಕೂ ಆಗಿದ್ದೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  ನಿಯಮ ಉಲ್ಲಂಘಿಸಿದ ವಿರಾಟ್​ ಕೊಹ್ಲಿಗೆ ಬಿಸಿಸಿಐ ಖಡಕ್ ವಾರ್ನಿಂಗ್; ಅಷ್ಟಕ್ಕೂ ಆಗಿದ್ದೇನು?

ನಿಯಮ ಉಲ್ಲಂಘಿಸಿದ ವಿರಾಟ್​ ಕೊಹ್ಲಿಗೆ ಬಿಸಿಸಿಐ ಖಡಕ್ ವಾರ್ನಿಂಗ್; ಅಷ್ಟಕ್ಕೂ ಆಗಿದ್ದೇನು?

Virat Kohli: ಯೋ-ಯೋ ಅಂಕಗಳನ್ನು ಬಹಿರಂಗಪಡಿಸಿದ ವಿರಾಟ್​ ಕೊಹ್ಲಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಅಲ್ಲದೆ, ಭಾರತ ತಂಡದ ಉಳಿದ ಆಟಗಾರರಿಗೂ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದು ಸೂಚಿಸಿದೆ.

ಯೋ-ಯೋ ಟೆಸ್ಟ್​ ಅಂಕ ಬಹಿರಂಗಪಡಿಸಿ ಒಪ್ಪಂದ ಉಲ್ಲಂಘಿಸಿದ ಕೊಹ್ಲಿಗೆ ಎಚ್ಚರಿಕೆ
ಯೋ-ಯೋ ಟೆಸ್ಟ್​ ಅಂಕ ಬಹಿರಂಗಪಡಿಸಿ ಒಪ್ಪಂದ ಉಲ್ಲಂಘಿಸಿದ ಕೊಹ್ಲಿಗೆ ಎಚ್ಚರಿಕೆ

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಯೋ-ಯೋ ಫಿಟ್‌ನೆಸ್ ಟೆಸ್ಟ್ ಸ್ಕೋರ್ ಬಹಿರಂಗಪಡಿಸಿದ ಭಾರತದ ಆಟಗಾರ ವಿರಾಟ್ ಕೊಹ್ಲಿಗೆ (Virat Kohli) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCi) ಖಡಕ್ ಎಚ್ಚರಿಕೆ ನೀಡಿದೆ. ಏಷ್ಯಾಕಪ್ ಟೂರ್ನಿಗೆ ಸಿದ್ಧತೆಯ ಭಾಗವಾಗಿ ಬೆಂಗಳೂರಿನ ಆಲೂರಿನಲ್ಲಿ ಆಯೋಜಿಸಿರುವ ಶಿಬಿರದಲ್ಲಿ ಭಾರತದ ಆಟಗಾರರಿಗೆ ಯೋ-ಯೋ ಟೆಸ್ಟ್​​​ ನಡೆಸಲಾಗಿತ್ತು. ಈ ಟೆಸ್ಟ್​​​ನಲ್ಲಿ ಉತ್ತೀರ್ಣರಾದ ವಿರಾಟ್​​, ತಾನು ಪಡೆದಿರುವ ಅಂಕಗಳನ್ನು ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಬಹಿರಂಗಪಡಿಸಿದ್ದರು.

ಈ ಪೋಸ್ಟ್​ ಕೆಲವೇ ಕ್ಷಣಗಳಲ್ಲಿ ವೈರಲ್​ ಆಗಿತ್ತು. ಗುತ್ತಿಗೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಬಹಿರಂಗಪಡಿಸಿದ ವಿರಾಟ್​ ಕೊಹ್ಲಿಗೆ ಮೌಖಿಕವಾಗಿ ಬಿಸಿಸಿಐ ಉನ್ನತ ಮಟ್ಟದ ಮುಖ್ಯಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೊಹ್ಲಿಗೆ ಮಾತ್ರವಲ್ಲದೆ, ಗೌಪ್ಯ ಮಾಹಿತಿಯ ಅಡಿಯಲ್ಲಿ ಬರುವ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡದಂತೆ ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಬಹಿರಂಗಪಡಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.

ಬಿಸಿಸಿಐನ ಉನ್ನತ ಆಡಳಿತದಿಂದ ಈ ನಿರ್ದೇಶನ ಬಂದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಿರಾಟ್ ಇನ್‌ಸ್ಟಾಗ್ರಾಮ್ ಸ್ಟೋರಿ ವೈರಲ್ ಆದ ಕೆಲವೇ ಗಂಟೆಗಳ ನಂತರ ಭಾರತ ತಂಡದ ಕ್ರಿಕೆಟಿಗರಿಗೆ ಕಟ್ಟು ನಿಟ್ಟಾದ ಮಾರ್ಗಸೂಚಿಗಳನ್ನು ಜಾರಿಗೆ ಮಾಡಲಾಗಿದೆ. ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆಟಗಾರರಿಗೆ ಬಿಸಿಸಿಐ ಸೂಚಿಸಿದೆ. ಕೊಹ್ಲಿ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಯೋ-ಯೋ ಪರೀಕ್ಷೆಯಲ್ಲಿ 17.2 ಅಂಕ ಪಡೆದಿದ್ದು, ಉತ್ತೀರ್ಣರಾಗಿರುವ ಕುರಿತು ಇತ್ತು.

ಬಿಸಿಸಿಐ ಅಧಿಕಾರಿ ಪ್ರತಿಕ್ರಿಯೆ

ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್​​ ಅಂಕಗಳ ಕುರಿತ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಕ್ಕೆ ಬಿಸಿಸಿಐ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವುದು 'ಒಪ್ಪಂದದ ಉಲ್ಲಂಘನೆ'ಗೆ ಕಾರಣ. ಯಾವುದೇ ಗೌಪ್ಯ ವಿಷಯ ಪೋಸ್ಟ್ ಮಾಡಬಾರದೆಂದು ಆಟಗಾರರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದೆ. ತರಬೇತಿ ಚಿತ್ರಗಳನ್ನು ಪೋಸ್ಟ್ ಮಾಡಬಹುದು. ಆದರೆ ಸ್ಕೋರ್ ಪೋಸ್ಟ್ ಮಾಡುವುದರಿಂದ ಒಪ್ಪಂದದ ಷರತ್ತು ಉಲ್ಲಂಘನೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಏಷ್ಯಾಕಪ್‌ಗೂ ಮುನ್ನ ತರಬೇತಿ ಶಿಬಿರ

ಏಷ್ಯಾಕಪ್‌ಗೂ ತೆರಳುವುದಕ್ಕೂ ಮುನ್ನ ಆಲೂರಿನಲ್ಲಿ 7 ದಿನಗಳ ತರಬೇತಿ ಶಿಬಿರದಲ್ಲಿ ಭಾರತದ ಆಟಗಾರರು ಪಾಲ್ಗೊಂಡಿದ್ದಾರೆ. ಶಿಬಿರದ ಮೊದಲ ದಿನದಂದು ಕೊಹ್ಲಿ ಜೊತೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಯೋ-ಯೋ ಟೆಸ್ಟ್ ತೆಗೆದುಕೊಂಡಿದ್ದರು. ಅವರು ಕೂಡ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಐರ್ಲೆಂಡ್​ ಸರಣಿಗೆ ಪ್ರವಾಸ ಕೈಗೊಂಡಿದ್ದ ಕೆಲ ಆಟಗಾರರು ಇಂದು ಶಿಬಿರ ಸೇರಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇಂದು ಶಿಬಿರವನ್ನು ಸೇರುವ ನಿರೀಕ್ಷೆಯಿದೆ.

ಯೋ-ಯೋ ಟೆಸ್ಟ್​ ಎಂದರೇನು?

ಇದು ತಂತ್ರಾಂಶ ಆಧಾರಿತ ಪ್ರಕ್ರಿಯೆ. 20 ಮೀಟರ್​​ ಗುರಿ ಓಡುವ ಗುರಿ ಇರಲಿದೆ. ಆರಂಭ ಹಾಗೂ ಕೊನೆಯ ಗುರಿಯನ್ನು ನಿಗದಿತ ಅವಧಿಯಲ್ಲಿ ಓಡುವ ಮೂಲಕ ಪೂರ್ಣಗೊಳಿಸಬೇಕಿದೆ. ಬೀಪ್ ಆರಂಭದೊಡನೆ ಓಟದ ಆರಂಭ ಹಾಗೂ ಅಂತ್ಯಕ್ಕೆ ಸಮಯ ನಿಗದಿಯಾಗಿರುತ್ತದೆ. ಹಾಗೆಯೇ ಅಂಕಗಳೂ ಇರುತ್ತವೆ. ಈ ಫಿಟ್​ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದರೆ, 16.1 ರಷ್ಟಿದ್ದ ಉತ್ತೀರ್ಣ ಅಂಕ ಈಗ 16.5ಕ್ಕೆ ಹೆಚ್ಚಿಸಲಾಗಿದೆ.

ಐರ್ಲೆಂಡ್ ಎದುರು ಟೀಮ್ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಏಷ್ಯಾಕಪ್​​ ಟೂರ್ನಿಯು ಆಗಸ್ಟ್​ 30 ರಿಂದ ಪ್ರಾರಂಭವಾಗಲಿದೆ. ಆದರೆ ಭಾರತ ತಂಡವು ಸೆಪ್ಟೆಂಬರ್​ 2ರಂದು ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಟೂರ್ನಿ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ ಸರಣಿ ಮತ್ತು ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಟೂರ್ನಿ ಪ್ರಾರಂಭವಾಗಲಿದೆ. ಈ ಎರಡು ಮಹತ್ವದ ಟೂರ್ನಿಗೆ ಭಾರತ ತಂಡವು ಸಜ್ಜಾಗುತ್ತಿದೆ.

Whats_app_banner