ಹರಾಜಿಗೆ ನಿಂತರೆ ಕೊಹ್ಲಿ 42, ಬುಮ್ರಾಗೆ 35 ಕೋಟಿ ಪಡೆಯೋದು ಪಕ್ಕಾ ಎಂದ ಆಕಾಶ್ ಚೋಪ್ರಾ
Aakash Chopra: ಐಪಿಎಲ್ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ 20 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದರೆ, ಕೊಹ್ಲಿ ಮತ್ತು ಬುಮ್ರಾ ಅವರಂಥಾ ಪ್ರತಿಭಾವಂತ ಆಟಗಾರರು ಭಾರಿ ಮೊತ್ತಕ್ಕೆ ಅರ್ಹರು ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳುತ್ತಾರೆ.
ಐಪಿಎಲ್ ಮಿನಿ ಹರಾಜಿನಲ್ಲಿ ಆಸೀಸ್ ಆಟಗಾರರಾದ ಮಿಚೆಲ್ ಸ್ಟಾರ್ಕ್ (Mitchell Starc) ಮತ್ತು ಪ್ಯಾಟ್ ಕಮ್ಮಿನ್ಸ್ (Pat Cummins) ಖರೀದಿಗೆ ಫ್ರಾಂಚೈಸಿಗಳು ಭಾರಿ ಬಿಡ್ ಮಾಡಿದವು. ಅಂತಿಮವಾಗಿ ಉಭಯ ಆಟಗಾರರು ದಾಖಲೆಯ ಮೊತ್ತಕ್ಕೆ ಕ್ರಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಾಲಾದರು. ಇವರಿಬ್ಬರಿಗಾಗಿ ಒಟ್ಟು 45.25 ಕೋಟಿ ರೂಪಾಯಿಗಳನ್ನು ಫ್ರಾಂಚೈಸಿ ಸುರಿಯಿತು. ಇದು ದಾಖಲೆ ನಿರ್ಮಿಸಿರುವುದು ಒಂದು ಕಡೆಯಾದರೆ, ಈ ಖರೀದಿಯು ತರ್ಕವಿಲ್ಲದ್ದು ಎಂಬ ಚರ್ಚೆಯನ್ನೂ ಹಟ್ಟುಹಾಕಿದೆ.
ಇದನ್ನೂ ಓದಿ | ಕೆಲವೇ ನಿಮಿಷಗಳಲ್ಲಿ ಕಮಿನ್ಸ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್; 24.75 ಕೋಟಿ ಸುರಿದ ಈ ಫ್ರಾಂಚೈಸಿ
ಒಬ್ಬ ಆಟಗಾರನಿಗೂ ಇಷ್ಟೊಂದು ಕೋಟಿ ಸುರಿಯುವ ಅಗತ್ಯತೆಯ ಬಗ್ಗೆ ಪ್ರಶ್ನೆಗಳು ಏಳುವುದು ಸಾಮಾನ್ಯ. ಸ್ಟಾರ್ಕ್ ಮತ್ತು ಕಮ್ಮಿನ್ಸ್ ನಿಜವಾಗಿಯೂ ಇಷ್ಟು ದೊಡ್ಡ ಮೊತ್ತಕ್ಕೆ ಅರ್ಹರೇ? ವಿಶ್ವದ ಪ್ರಬಲ ವೇಗಿಗಳಾಗಿದ್ದರೂ, ಕುರಿಡಾಗಿ ಬಿಡ್ಡಿಂಗ್ ಜಿದ್ದಿಗೆ ಇಳಿಯುವುದು ಅಷ್ಟೊಂದು ಸರಿಯಲ್ಲ ಎಂಬುದು ಹಲವು ದಿಗ್ಗಜ ಕ್ರಿಕೆಟಿಗರ ವಾದ.
ಸ್ಟಾರ್ಕ್ ಮತ್ತು ಕಮಿನ್ಸ್‌ನ ಅವರು ಬಿಡ್ ಆದ ಮೊತ್ತವು ಆಧುನಿಕ ಕ್ರಿಕೆಟ್‌ನ ಇತರ ಶ್ರೇಷ್ಠ ಆಟಗಾರರಿಗೆ ಹೋಲಿಸಿದರೆ ಸಂಪೂರ್ಣ ಅಸಂಬದ್ಧ ಎಂಬುದಾಗಿ ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಅಭಿಪ್ರಾಯ ಹೊರಹಾಕಿದ್ದಾರೆ. ಆಸ್ಟ್ರೇಲಿಯಾದ ಈ ಜೋಡಿಯು 45 ಕೋಟಿಗೂ ಹೆಚ್ಚು ಮೊತ್ತ ಗಳಿಸುತ್ತದೆ ಎಂದಾದರೆ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂಥಾ ಬಲಿಷ್ಠ ಆಟಗಾರರು ಹರಾಜಿಗೆ ನಿಂತರೆ ಐಪಿಎಲ್ ಹರಾಜಿನ ಎಲ್ಲಾ ದಾಖಲೆಗಳನ್ನು ಒಂದೇ ಬಾರಿ ಛಿದ್ರಗೊಳ್ಳುತ್ತದೆ ಎಂದು ಚೋಪ್ರಾ ಹೇಳಿದ್ದಾರೆ.
“ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್‌ನ ಎಲ್ಲಾ 14 ಪಂದ್ಯಗಳನ್ನು ಆಡಿ, ಅದರಲ್ಲಿ ಅವರು ಪ್ರತಿ ಪಂದ್ಯಗಳಲ್ಲೂ ನಾಲ್ಕು ಓವರ್‌ಗಳ ಕೋಟಾವನ್ನು ಸಂಪೂರ್ಣ ಬೌಲ್ ಮಾಡಿದರೆ; ಪ್ರತಿ ಎಸೆತಕ್ಕೆ 7,60,000 ರೂಪಾಯಿ ಖರ್ಚಾದಂತಾಗುತ್ತದೆ. ಇದು ಆಶ್ವರ್ಯಕರ. ಇಲ್ಲೊಂದು ಪ್ರಶ್ನೆ ಇದೆ. ವಿಶ್ವದ ಅತ್ಯುತ್ತಮ ಬೌಲರ್ ಯಾರು? ಐಪಿಎಲ್‌ನ ಉತ್ತಮ ಬೌಲರ್ ಯಾರು? ಅವರ ಹೆಸರು ಜಸ್ಪ್ರೀತ್ ಬುಮ್ರಾ. ಅವರು ಪಡೆಯುತ್ತಿರುವುದು ಬರೀ 12 ಕೋಟಿ. ಆದರೆ ಸ್ಟಾರ್ಕ್ ಬೆಲೆ ಬರೋಬ್ಬರಿ 25 ಕೋಟಿ. ಅದು ತಪ್ಪು. ನನಗೆ ಯಾರೊಬ್ಬರು ಪಡೆಯುವ ಹಣದ ಬಗ್ಗೆ ತಕರಾರಿಲ್ಲ. ಆದರೆ, ಎಲ್ಲರಿಗೂ ಅರ್ಹ ಪ್ರಮಾಣದಲ್ಲಿ ಸಂಭಾವನೆ ಸಿಗಬೇಕು ಎಂದು ನಾನು ಬಯಸುತ್ತೇನೆ. ಆದರೆ ಇದು ಹೇಗೆ ನ್ಯಾಯಯುತವಾಗಿರಲು ಸಾಧ್ಯ?” ಎಂದು ಭಾರತದ ಮಾಜಿ ಕ್ರಿಕೆಟಿಗ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಸೇಲಾದ ಕಮಿನ್ಸ್; ಸ್ಯಾಮ್ ಕರನ್ ಹಿಂದಿಕ್ಕಿ 20.50 ಕೋಟಿ ಪಡೆದ ಆಸೀಸ್ ನಾಯಕ
“ಒಂದು ವೇಳೆ ಮುಂದೆ ಬುಮ್ರಾ ಅವರು ಹರಾಜಿಗೆ ನಿಲ್ಲುತ್ತೇನೆ ಎಂದು ಹೇಳಿದರೆ ಹೇಗಾಗುತ್ತದೆ. ಅಥವಾ ಕೊಹ್ಲಿ ಕೂಡಾ ಆರ್‌ಸಿಬಿ ಬಿಟ್ಟು ಹರಾಜಿಗೆ ನಿಂತರೆ ಅವರ ಬೆಲೆ ಕೂಡಾ ಏರುತ್ತದೆ ಅಲ್ಲವೆ. ಈ ಹರಾಜಿನಿಂದ ಸ್ಟಾರ್ಕ್ ಅವರ ಮಾರುಕಟ್ಟೆಯು ಬೆಲೆಯು 25 ಕೋಟಿ ಎಂದು ನಿರ್ಧಾರವಾದರೆ, ಕೊಹ್ಲಿಯ ಬೆಲೆ 42 ಕೋಟಿ ಮತ್ತು ಬುಮ್ರಾ ಮೌಲ್ಯ 35 ಕೋಟಿ ಎಂಬುದಾಗಿ ಖಂಡಿತಾ ನಿರ್ಧರಿಸುತ್ತದೆ. ಒಂದು ವೇಳೆ ಹಾಗೆ ಸಂಭವಿಸದಿದ್ದರೆ, ಈ ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂದರ್ಥ,” ಎಂದು ಆಕಾಶ್ ವಿವರಿಸಿದ್ದಾರೆ.