ಬಾಬರ್ ಅಜಮ್ ದೇಶೀಯ ಕ್ರಿಕೆಟ್ ಆಡಲಿ; ಕಳಪೆ ಫಾರ್ಮ್‌ನಲ್ಲಿರುವ ಪಾಕ್ ಮಾಜಿ ನಾಯಕನಿಗೆ ವೀರೇಂದ್ರ ಸೆಹ್ವಾಗ್ ಸಲಹೆ
Virender Sehwag on Babar Azam: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಅಜಮ್ ಅವರ ಕಳಪೆ ಫಾರ್ಮ್‌ಗೆ ಅವರ ಮಾನಸಿಕ ಸ್ಥಿತಿಯೇ ಕಾರಣ. ಆಟದ ವಿಚಾರವಾಗಿ ಯಾವುದೇ ತಾಂತ್ರಿಕ ಕೊರತೆಗಳಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 152 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಪಾಕಿಸ್ತಾನವು ತವರು ನೆಲದಲ್ಲಿ ಸೋಲಿನ ಸರಣಿಯನ್ನು ಕೊನೆಗೊಳಿಸುವಲ್ಲಿ ಕೊನೆಗೂ ಯಶಸ್ವಿಯಾಯ್ತು. ಇದಕ್ಕಾಗಿ ತಂಡದ ಮ್ಯಾನೇಜ್‌ಮೆಂಟ್ ಅನುಸರಿಸಿದ ತಂತ್ರವೇ ಭಿನ್ನ. ಅನುಭವಿ ಹಾಗೂ ಪಾಕ್‌ನ ಬಲಿಷ್ಠ ಆಟಗಾರರು ಎನಿಸಿಕೊಂಡ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರನ್ನು ತಂಡದಿಂದ ಕೈಬಿಡುವ ಮೂಲಕ ತಂಡಕ್ಕೆ ಗೆಲುವು ದಕ್ಕಿತು. ಪಂದ್ಯಕ್ಕೆ ಮುಂಚಿತವಾಗಿ ಆಟಗಾರರ ಆಯ್ಕೆಗಳು ಸಾಕಷ್ಟು ಹುಬ್ಬೇರುವಂತೆ ಮಾಡಿತ್ತು. ಇದಲ್ಲದೆ ಈ ಮೂವರಿಗೆ ತವರಿನಿಂದ ಹೊರಗೆ ನಡೆಯಲಿರುವ ಪಾಕಿಸ್ತಾನದ ಮುಂಬರುವ ವೈಟ್ ಬಾಲ್ ಪ್ರವಾಸಗಳಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಸಹಾಯಕ ಕೋಚ್ ಅಜರ್ ಮಹಮೂದ್ ಹೇಳಿರುವುದು ಹೆಚ್ಚು ಅಚ್ಚರಿ ಮೂಡಿಸಿದೆ.
ಪಾಕಿಸ್ತಾನದ ಟೆಸ್ಟ್ ಗೆಲುವಿನೊಂದಿಗೆ, ಮ್ಯಾನೇಜ್‌ಮೆಂಟ್ ತೆಗೆದುಕೊಂಡ ನಿರ್ದಾರಗಳು ಸ್ವಲ್ಪಮಟ್ಟಿಗೆ ಸಮರ್ಥಿಸಿಕೊಂಡಂತಾಗಿದೆ. ಆದರೆ ಈ ನಿರ್ಧಾರವು ಬಾಬರ್ ಅವರ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಈ ಋತುವಿನಲ್ಲಿ ಬಾಬರ್ ಅಜಮ್ ಫಾರ್ಮ್ ಕಳೆದುಕೊಂಡಿರುವುದು ನಿಜ. ಭಾರಿ ಕುಸಿತ ಕಂಡಿರುವ ಅವರು ಬ್ಯಾಟ್ ಬೀಸಲು ಪರದಾಡುತ್ತಿದ್ದಾರೆ. ಅವರು ಕಳೆದ ವರ್ಷ ಆಡಿದ ಐದು ಟೆಸ್ಟ್‌ಗಳಲ್ಲಿ 22.66 ಮತ್ತು 2024ರಲ್ಲಿ ನಾಲ್ಕು ಪಂದ್ಯಗಳಲ್ಲಿ 18.50ರ ಸರಾಸರಿ ಹೊಂದಿದ್ದಾರೆ. ಇದು ಫಾರ್ಮ್ ಕುಸಿತಕ್ಕೆ ಹಿಡಿದ ಕೈಗನ್ನಡಿ.
ಪಾಕ್ ಮಾಜಿ ನಾಯಕನಿಗೆ ಹಲವರಿಂದ ಸಲಹೆ ಸೂಚನೆಗಳು ಬಂದಿದೆ. ಅವರಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಗ್ರಗಣ್ಯರು. ಫಾರ್ಮ್ ಮರಳಿ ಪಡೆಯಲು ಬಾಬರ್ ಈಗ ಪಾಕಿಸ್ತಾನದ ಪರ ದೇಶೀಯ ಕ್ರಿಕೆಟ್ ಆಡಬೇಕು ಎಂದು ಭಾರತದ ಮಾಜಿ ಬ್ಯಾಟರ್ ಹೇಳಿದ್ದಾರೆ.
ಬಾಬರ್ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು
“ಬಾಬರ್ ಅಜಮ್ ಈಗ ದೇಶೀಯ ಕ್ರಿಕೆಟ್ ಆಡಬೇಕು. ಅವರು ತಮ್ಮ ಫಿಟ್ನೆಸ್ ವಿಚಾರವಾಗಿ ಕೆಲಸ ಮಾಡಬೇಕು. ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕು. ನಂತರ ದೈಹಿಕವಾಗಿ ಸದೃಢರಾಗಬೇಕು. ಮಾನಸಿಕವಾಗಿ ಸಂಪೂರ್ಣ ಹಿಗ್ಗಿದ ಬಳಿಕ ಮತ್ತೆ ಆಟಗಾರನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕು” ಎಂದು ಸೆಹ್ವಾಗ್ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಮಾನಸಿಕವಾಗಿ ಹೆಚ್ಚು ಕುಗ್ಗಿದ್ದಾರೆ
2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಅಭಿಯಾನದ ನಂತರ ಬಾಬರ್ ಅವರನ್ನು ಪಾಕಿಸ್ತಾನದ ನಾಯಕ ಸ್ಥಾನದಿಂದ ವಜಾ ಮಾಡಲಾಯಿತು. ಆ ನಂತರ ಶಾಹೀನ್ ಅಫ್ರಿದಿ ಅವರನ್ನು ಪಾಕಿಸ್ತಾನ ಟಿ20 ತಂಡ ನಾಯಕನಾಗಿ ನೇಮಿಸಲಾಯ್ತು. ಆ ಬಳಿಕ ಮತ್ತೆ ಬಾಬರ್ ನಾಯಕನಾಗಿ ಕಾಣಿಸಿಕೊಂಡರು.
ಆಗಾಗ ನಾಯಕತ್ವ ಬದಲಾವಣೆ ಸೇರಿದಂತೆ ಹಲವು ಅಂಶಗಳು ಬಾಬರ್ ಮೇಲೆ ಪರಿಣಾಮ ಬೀರಿವೆ ಎಂದು ಸೆಹ್ವಾಗ್ ಹೇಳಿದರು. ಅವರ ಕಳಪೆ ಫಾರ್ಮ್ ಹಿಂದೆ ಅವರ ಮಾನಸಿಕ ಸ್ಥಿತಿಯೇ ಪ್ರಮುಖ ಕಾರಣ ಹೊರತು ಯಾವುದೇ ತಾಂತ್ರಿಕ ಕೊರತೆಯಲ್ಲ ಎನ್ನುವುದು ವೀರು ಅಭಿಪ್ರಾಯ.
“ಬಾಬರ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರದೇ ಇರುವುದರಿಂದ ಮತ್ತು ನಾಯಕತ್ವಕ್ಕೆ ರಾಜೀನಾಮೆ ನೀಡಿರುವುದರಿಂದ, ಅವರು ತಾಂತ್ರಿಕತೆಗಿಂತ ಹೆಚ್ಚು ಮಾನಸಿಕವಾಗಿ ಪ್ರಭಾವಿತರಾಗಿದ್ದಾರೆ ಎಂದು ತೋರುತ್ತದೆ. ಹೀಗಾಗಿ ಅವರು ಮಾನಸಿಕವಾಗಿ ಹೆಚ್ಚು ಸದೃಢರಾಗಿರಬೇಕು. ಅವರೊಬ್ಬ ಪ್ರತಿಭಾವಂತ ಆಟಗಾರ. ಅವರಂತಹ ಆಟಗಾರರು ಬೇಗನೆ ಪುಟಿದೇಳುತ್ತಾರೆ,” ಎಂದು ಸೆಹ್ವಾಗ್ ಭರವಸೆ ವ್ಯಕ್ತಪಡಿಸಿದರು.