ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ ವಿರುದ್ಧ 2 ವಿಕೆಟ್ ಕಬಳಿಸಿ ಇರ್ಫಾನ್ ಪಠಾಣ್, ಉಮರ್​ ಗುಲ್ ದಾಖಲೆ ಅಳಿಸಿ ಹಾಕಿದ ಹಾರ್ದಿಕ್ ಪಾಂಡ್ಯ

ಪಾಕಿಸ್ತಾನ ವಿರುದ್ಧ 2 ವಿಕೆಟ್ ಕಬಳಿಸಿ ಇರ್ಫಾನ್ ಪಠಾಣ್, ಉಮರ್​ ಗುಲ್ ದಾಖಲೆ ಅಳಿಸಿ ಹಾಕಿದ ಹಾರ್ದಿಕ್ ಪಾಂಡ್ಯ

Hardik Pandya : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 2 ವಿಕೆಟ್ ಉರುಳಿಸಿ ಎರಡು ಪ್ರಮುಖ ದಾಖಲೆ ನಿರ್ಮಿಸಿದ್ದಾರೆ.

ಪಾಕಿಸ್ತಾನ ವಿರುದ್ಧ 2 ವಿಕೆಟ್ ಕಬಳಿಸಿ ಇರ್ಫಾನ್ ಪಠಾಣ್, ಉಮರ್​ ಗುಲ್ ದಾಖಲೆ ಅಳಿಸಿ ಹಾಕಿದ ಹಾರ್ದಿಕ್ ಪಾಂಡ್ಯ
ಪಾಕಿಸ್ತಾನ ವಿರುದ್ಧ 2 ವಿಕೆಟ್ ಕಬಳಿಸಿ ಇರ್ಫಾನ್ ಪಠಾಣ್, ಉಮರ್​ ಗುಲ್ ದಾಖಲೆ ಅಳಿಸಿ ಹಾಕಿದ ಹಾರ್ದಿಕ್ ಪಾಂಡ್ಯ

ಜೂನ್ 9ರಂದು ನ್ಯೂಯಾರ್ಕ್​​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ 2024 ಪಂದ್ಯದ ವೇಳೆ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ದಾಖಲೆಯ ಇತಿಹಾಸ ಪುಸ್ತಕದಲ್ಲಿ ಹೊಸ ಪುಟವೊಂದು ತೆರೆದಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ 119 ರನ್​​ ರಕ್ಷಿಸಲು ನೆರವಾದ ವೇಗದ ಆಲ್​ರೌಂಡರ್​, ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ 4 ಓವರ್​ ಬೌಲಿಂಗ್ ಮಾಡಿದ ಹಾರ್ದಿಕ್ ಕೇವಲ 24 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರು. ಫಖಾರ್ ಜಮಾನ್ ಮತ್ತು ಶಾದಾಬ್ ಖಾನ್ ಅವರನ್ನು ಹಾರ್ದಿಕ್ ಔಟ್ ಮಾಡಿದರು. ಫಖಾರ್ ಅವರನ್ನು ಔಟ್ ಮಾಡಿದ ಬೆನ್ನಲ್ಲೇ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ದೀರ್ಘಾವಧಿಯ ದಾಖಲೆ ಮುರಿದರು. ಟಿ20 ವಿಶ್ವಕಪ್​ನಲ್ಲಿ ಭಾರತದ ಅತ್ಯಂತ ಯಶಸ್ವಿ ವೇಗದ ಬೌಲರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ ವೇಗಿ

ಪ್ರಮುಖ ಎರಡು ವಿಕೆಟ್ ಕಿತ್ತ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಅಧಿಕ ವಿಕೆಟ್‌ ಪಡೆದ ವೇಗದ ಬೌಲರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇರ್ಫಾನ್ ಪಠಾಣ್ 2007ರ ವಿಶ್ವಕಪ್‌ನ ಫೈನಲ್‌ನಲ್ಲಿ ಮೂರು ವಿಕೆಟ್ ಸೇರಿದಂತೆ ಟಿ20 ವಿಶ್ವಕಪ್‌ನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಹಾರ್ದಿಕ್ ಈ ದಾಖಲೆ ಮುರಿದು ಮುಂದೆ ಸಾಗಿದ್ದು, ಟಿ20 ವಿಶ್ವಕಪ್‌ನಲ್ಲಿ ತಮ್ಮ 15 ಇನ್ನಿಂಗ್ಸ್‌ಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ.

ರೇಸ್​​​ನಲ್ಲಿದ್ದಾರೆ ಜಸ್ಪ್ರೀತ್ ಬುಮ್ರಾ

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪ್ರಸ್ತುತ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ 5 ವಿಕೆಟ್ ಕಿತ್ತಿದ್ದಾರೆ. ಐರ್ಲೆಂಡ್ ಎದುರು ಮೂರು ವಿಕೆಟ್ ಪಡೆದಿದ್ದ ಹಾರ್ದಿಕ್, ಪಾಕ್ ಎದುರು 2 ವಿಕೆಟ್ ಕಿತ್ತಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ಉರುಳಿಸಿದವರ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಸಹ ರೇಸ್​​ನಲ್ಲಿದ್ದಾರೆ. ಅವರು 12 ಇನ್ನಿಂಗ್ಸ್​​ಗಳಲ್ಲಿ 16 ವಿಕೆಟ್ ಕಿತ್ತಿದ್ದಾರೆ.

ಪ್ರಸ್ತುತ ಟೂರ್ನಿಯಲ್ಲಿ ಬುಮ್ರಾ ಕೂಡ ಎರಡು ಇನ್ನಿಂಗ್ಸ್​​ಗಳಲ್ಲಿ 5 ವಿಕೆಟ್ ಪಡೆದಿದ್ದಾರೆ. 16 ಮಂದಿಯನ್ನು ಔಟ್ ಮಾಡಿರುವ ಜಸ್ಪ್ರೀತ್, ಇರ್ಫಾನ್ ಪಠಾಣ್ 16 ವಿಕೆಟ್​ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಐರ್ಲೆಂಡ್ ವಿರುದ್ಧ ಇಬ್ಬರನ್ನು ಔಟ್ ಮಾಡಿದ್ದ ಬುಮ್ರಾ, ಪಾಕಿಸ್ತಾನ ವಿರುದ್ಧ ಮೂವರಿಗೆ ಗೇಟ್ ಪಾಸ್ ನೀಡಿದ್ದರು. ಬುಮ್ರಾ ಕೇವಲ 12 ಇನ್ನಿಂಗ್ಸ್‌ಗಳಲ್ಲಿ 5.86ರ ಎಕಾನಮಿಯಲ್ಲಿ 16 ವಿಕೆಟ್‌ ಪಡೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಭಾರತ ವೇಗದ ಬೌಲರ್ಸ್

ಹಾರ್ದಿಕ್ ಪಾಂಡ್ಯ - 15 ಇನ್ನಿಂಗ್ಸ್‌ಗಳಲ್ಲಿ 18 ವಿಕೆಟ್

ಜಸ್ಪ್ರೀತ್ ಬುಮ್ರಾ - 12 ಇನ್ನಿಂಗ್ಸ್‌ಗಳಲ್ಲಿ 16 ವಿಕೆಟ್

ಇರ್ಫಾನ್ ಪಠಾಣ್ - 14 ಇನ್ನಿಂಗ್ಸ್‌ಗಳಲ್ಲಿ 16 ವಿಕೆಟ್

ಆಶಿಶ್ ನೆಹ್ರಾ - 10 ಇನ್ನಿಂಗ್ಸ್‌ಗಳಲ್ಲಿ 15 ವಿಕೆಟ್

ಆರ್‌ಪಿ ಸಿಂಗ್ - 8 ಇನ್ನಿಂಗ್ಸ್‌ಗಳಲ್ಲಿ 14 ವಿಕೆಟ್

ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ಬೌಲರ್​​ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಶ್ವಿನ್ 24 ಇನ್ನಿಂಗ್ಸ್‌ಗಳಲ್ಲಿ 32 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಇದುವರೆಗಿನ ಟೂರ್ನಿಯ ಇತಿಹಾಸದಲ್ಲಿ 24 ಇನ್ನಿಂಗ್ಸ್‌ಗಳಲ್ಲಿ 21 ವಿಕೆಟ್ ಪಡೆದಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತೊಂದು ದಾಖಲೆ

ಹಾರ್ದಿಕ್ ಪಾಂಡ್ಯ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20ಐ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಉಭಯ ದೇಶಗಳ ನಡುವಿನ ಟಿ20ಐ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಕಿತ್ತಿದ್ದ ಉಮರ್​ ಗುಲ್ ದಾಖಲೆಯನ್ನು ಅಳಿಸಿದ್ದಾರೆ. ಪಾಕ್ ಮಾಜಿ ವೇಗಿ ಉಮರ್ ಗುಲ್ ಮತ್ತು ಭಾರತದ ಭುವನೇಶ್ವರ್​ ಕುಮಾರ್​​ ಆರು ಇಂಡೋ-ಪಾಕ್​ ಟಿ20ಐಗಳಲ್ಲಿ 11 ವಿಕೆಟ್‌ ದಾಖಲೆ ಬರೆದಿದ್ದರು. ಇದೀಗ ಪಾಂಡ್ಯ ಈ ಇಬ್ಬರ ದಾಖಲೆ ಹಿಂದಿಕ್ಕಿದ್ದಾರೆ.

ಬಲಗೈ ಮಧ್ಯಮ ವೇಗಿ 4 ಓವರ್‌ 24 ರನ್‌ಗೆ 2 ವಿಕೆಟ್‌ ಪಡೆದ ಪಾಂಡ್ಯ, ಉಭಯ ದೇಶಗಳ ನಡುವಿನ 7 ಟಿ20ಐಗಳಲ್ಲಿ ತನ್ನ ವಿಕೆಟ್‌ಗಳ ಸಂಖ್ಯೆ 13ಕ್ಕೆ ವಿಸ್ತರಿಸಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಆಡಿದ ಚುಟುಕು ಸ್ವರೂಪದ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಉಮರ್​ ಗುಲ್ ಮತ್ತು ಭುವನೇಶ್ವರ್​​ ಕುಮಾರ್​ ದಾಖಲೆ ಹಿಂದಿಕ್ಕಿದ ಹಾರ್ದಿಕ್ ಪಾಂಡ್ಯ, ಅಗ್ರಸ್ಥಾನಕ್ಕೇರಿದ್ದಾರೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024