ಕನ್ನಡ ಸುದ್ದಿ  /  Cricket  /  Hardik Pandya Captain Rohit Sharma Ishan Kishan To Open Mumbai Indians Strongest Playing Xi Against Gujarat Titans Prs

ಹಾರ್ದಿಕ್ ಪಾಂಡ್ಯ ನಾಯಕ, ರೋಹಿತ್-ಇಶಾನ್ ಆರಂಭಿಕರು; ಗುಜರಾತ್ ಟೈಟಾನ್ಸ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI

Mumbai Indians Playing XI: ಗುಜರಾತ್ ಟೈಟಾನ್ಸ್ ವಿರುದ್ಧದ ಕದನಕ್ಕೆ ಮುಂಬೈ ಇಂಡಿಯನ್ಸ್‌ ತಂಡದ ಆಡುವ 11 ಬಳಗ ಹೇಗಿರಲಿದೆ ಎಂಬುದನ್ನು ಈ ಮುಂದೆ ನೋಡೋಣ.

ಗುಜರಾತ್ ಟೈಟಾನ್ಸ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ಗುಜರಾತ್ ಟೈಟಾನ್ಸ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

ಹೊಸ ನಾಯಕ, ಹಲವು ಬದಲಾವಣೆ, ಹೊಸ ಮುಖಗಳು, ತುಸು ಮುನಿಸು, ಅಭಿಮಾನಿಗಳ ಆಕ್ರೋಶದೊಂದಿಗೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲು ಮುಂಬೈ ಇಂಡಿಯನ್ಸ್​ ಸಜ್ಜಾಗಿದೆ. 2020ರ ನಂತರ ಒಂದು ಬಾರಿಯೂ ಫೈನಲ್ ಪ್ರವೇಶಿಸದ ಮುಂಬೈ, ಐಪಿಎಲ್​ 2024ರ ಆವೃತ್ತಿಯಲ್ಲಿ​ ಐದು ಬಾರಿಯ ಚಾಂಪಿಯನ್, ಆರನೇ ಟ್ರೋಫಿ ಗೆಲ್ಲುವ ಪಣತೊಟ್ಟಿದೆ.

ಮಾರ್ಚ್ 24ರಂದು ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡದ ಸವಾಲಿಗೆ ಸಿದ್ಧವಾಗಿದ್ದು ಹೈವೋಲ್ಟೇಜ್ ಕದನಕ್ಕೆ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. 2022ರಲ್ಲಿ ಮುಂಬೈ ತೊರೆದು ಗುಜರಾತ್ ಟೈಟಾನ್ಸ್ ತಂಡ ಸೇರಿದ್ದ ಹಾರ್ದಿಕ್ ಪಾಂಡ್ಯ​, ಈಗ ಮತ್ತೆ ಅದೇ ತಂಡಕ್ಕೆ ವಾಪಸ್ ಆಗಿದ್ದಾರೆ.

ಗುಜರಾತ್ ತಂಡವನ್ನು ಎರಡು ವರ್ಷ ಮುನ್ನಡೆಸಿದ್ದ ಪಾಂಡ್ಯ ಒಂದು ಬಾರಿ ಪ್ರಶಸ್ತಿ ಗೆದ್ದುಕೊಟ್ಟು, ಒಂದು ಬಾರಿ ರನ್ನರ್​ಅಪ್​ ಮಾಡಿದ್ದರು. ಸದ್ಯ ಅವರು ಟ್ರೇಡ್​ ಮೂಲಕ ಮುಂಬೈ ಸೇರಿದ್ದಲ್ಲದೆ, ನಾಯಕತ್ವ ಕೂಡ ಪಡೆದಿರುವುದು ವಿಶೇಷ. ಐದು ಬಾರಿ ಟ್ರೋಫಿ ಜಯಿಸಿದ ರೋಹಿತ್​​ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್​ಗೆ ಕ್ಯಾಪ್ಟನ್ಸಿಯನ್ನು ಮುಂಬೈ ಫ್ರಾಂಚೈಸಿ ನೀಡಿದೆ.

ರೋಹಿತ್ ಐಪಿಎಲ್ 2024ರಲ್ಲಿ ಹಾರ್ದಿಕ್ ನೇತೃತ್ವದಲ್ಲಿ ಆಡಲಿದ್ದು, ಐಪಿಎಲ್ ಮುಗಿದ ಒಂದು ವಾರದ ನಂತರ 2024ರ ಟಿ20 ವಿಶ್ವಕಪ್​​ನಲ್ಲಿ ರೋಹಿತ್ ನೇತೃತ್ವದಲ್ಲಿ ಹಾರ್ದಿಕ್ ಆಡಲಿದ್ದಾರೆ. ಎಂಐ ಹರಾಜು ಬಳಿಕ ತಮ್ಮ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಸದ್ಯ ಗುಜರಾತ್ ಟೈಟಾನ್ಸ್ ವಿರುದ್ಧದ ಕದನಕ್ಕೆ ಮುಂಬೈ ಇಂಡಿಯನ್ಸ್‌ನ ಪ್ರಬಲ ಆಟಗಾರರ 11 ಬಳಗ ಹೇಗಿರಲಿದೆ ಎಂಬುದನ್ನು ಈ ಮುಂದೆ ನೋಡೋಣ.

ಆರಂಭಿಕರು

ಅಗ್ರ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಜೋಡಿ ಮುಂಬೈ ಇಂಡಿಯನ್ಸ್ ಪರ ಮತ್ತೆ ಕಮಾಲ್ ಮಾಡಲು ಸಜ್ಜಾಗಿದೆ. ನಾಯಕತ್ವ ಕಳೆದುಕೊಂಡ ಒತ್ತಡ ಮುಕ್ತರಾಗಿ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರೂ ಅಚ್ಚರಿ ಇಲ್ಲ. ಐಪಿಎಲ್​ನಲ್ಲಿ ದುಬಾರಿ ಆಟಗಾರರ ಪೈಕಿ ಒಬ್ಬರಾದ ಇಶಾನ್, ನಿರೀಕ್ಷೆಗೆ ತಕ್ಕಂತೆ ಆಡುವ ಅಗತ್ಯ ಇದೆ. 2023ರಿಂದ ಇಶಾನ್ ಯಾವುದೇ ಕ್ರಿಕೆಟ್ ಆಡಿಲ್ಲ.

ಮಧ್ಯಮ ಕ್ರಮಾಂಕ

ಮೂರನೇ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಆಯ್ಕೆಯಾಗಿದ್ದರೆ, ತಿಲಕ್ ವರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಟಿಮ್ ಡೇವಿಡ್ ಮುಂಬೈನ ಮಧ್ಯಮ ಕ್ರಮಾಂಕದ ಆಸ್ತಿಯಾಗಿದ್ದಾರೆ. ಅವರು ಪಂದ್ಯದ ಚಿತ್ರಣ ಬದಲಿಸುವ ತಾಕತ್ತು ಅವರಲ್ಲಿದೆ. ಈ ಮೂವರ ಪೈಕಿ ಯಾರೇ ಕ್ರೀಸ್​ನಲ್ಲಿದ್ದರೂ ತಂಡದ ಸ್ಕೋರ್ ಸುಲಭವಾಗಿ ಏರುವುದು ಖಚಿತ.

ಆಲ್​ರೌಂಡರ್

ಹಾರ್ದಿಕ್ ಪಾಂಡ್ಯ ನಾಯಕತ್ವದ ಜೊತೆಗೆ ಆಲ್​​ರೌಂಡರ್ ಕೆಲಸ ಕೂಡ ನಿಭಾಯಿಸಲಿದ್ದಾರೆ. ಎರಡು ವಿಭಾಗಗಳಲ್ಲಿ ಕೊಡುಗೆ ನೀಡುವ ನಿರೀಕ್ಷೆಯಿದೆ. ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡವು ಪಾಂಡ್ಯ ಲಭ್ಯತೆಗೆ ಹೆಚ್ಚು ಒತ್ತು ನೀಡಿರುವ ಕಾರಣ ಹಾರ್ದಿಕ್, ಐಪಿಎಲ್ 2024ರಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕಾಗಿದೆ. ಮತ್ತೊಬ್ಬ ಆಲ್​ರೌಂಡರ್​​ ಸ್ಥಾನಕ್ಕೆ ಮೊಹಮ್ಮದ್ ನಬಿ ಅವಕಾಶ ಪಡೆದರೂ ಅಚ್ಚರಿ ಇಲ್ಲ.

ಬೌಲರ್‌ಗಳು

ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ ಕಳೆದ ಐಪಿಎಲ್​ ತಪ್ಪಿಸಿಕೊಂಡಿದ್ದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ವೇಗಿ ದಾಳಿಯನ್ನು ಮುನ್ನಡೆಸುವುದು ಖಚಿತವಾಗಿದೆ. ಭರ್ಜರಿ ಫಾರ್ಮ್​​ನಲ್ಲಿರುವ ಬುಮ್ರಾಗೆ ಜೆರಾಲ್ಡ್ ಕೊಯೆಟ್ಜಿ ಜೋಡಿಯಾಗಲಿದ್ದಾರೆ. ಅಲ್ಲದೆ, ಲೂಕ್​ ವುಡ್​ ಅವಕಾಶ ಪಡೆಯುವ ಸಾಧ್ಯತೆ ಇದೆ. ಅಲ್ಲದೆ. ಪಿಯೂಷ್ ಚಾವ್ಲಾ ಮತ್ತು ಕುಮಾರ್ ಕಾರ್ತಿಕೇಯ ಆಡುವ 11ರ ಬಳಗದ ಸ್ಪಿನ್ನರ್​​ಗಳಾಗಿದ್ದಾರೆ.

ಮುಂಬೈ ಇಂಡಿಯನ್ಸ್ ಆಡುವ 11ರ ಬಳಗ

ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ (ನಾಯಕ), ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೊಯೆಟ್ಜಿ, ಲೂಕ್ ವುಡ್.

ಇಂಪ್ಯಾಕ್ಟ್ ಪ್ಲೇಯರ್ಸ್

ಡೆವಾಲ್ಡ್ ಬ್ರೆವಿಸ್ ಮತ್ತು ನೆಹಾಲ್ ವಧೇರಾ ಇಂಪ್ಯಾಕ್ಟ್ ಪ್ಲೇಯರ್ಸ್ ಆಗುವ ಸಾಧ್ಯತೆ ಇದೆ. ಮುಂಬೈ ಪ್ರಬಲ ಆಟಗಾರರ 11ರಲ್ಲಿ ಮೂವರು ಸಾಗರೋತ್ತರ ಆಟಗಾರರು ಇರುವುದರಿಂದ, ಡೆವಾಲ್ಡ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು. ಐಪಿಎಲ್ 2023ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನೇಹಾಲ್, ಇಂಪ್ಯಾಕ್ಟ್ ಪ್ಲೇಯರ್ ಆಗಲಿದ್ದಾರೆ.

IPL_Entry_Point