ವಿಶ್ವಕಪ್‌ ಇತಿಹಾಸದಲ್ಲೇ ಅತಿ ಹೆಚ್ಚು ರನ್; ಪಾಂಟಿಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ ಇತಿಹಾಸದಲ್ಲೇ ಅತಿ ಹೆಚ್ಚು ರನ್; ಪಾಂಟಿಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ

ವಿಶ್ವಕಪ್‌ ಇತಿಹಾಸದಲ್ಲೇ ಅತಿ ಹೆಚ್ಚು ರನ್; ಪಾಂಟಿಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ

ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧ ಶತಕ ಗಳಿಸಿರುವ ವಿರಾಟ್ ಕೊಹ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ವೀವ್ ಸ್ಮಿತ್ ವಿಕೆಟ್ ಪತನವಾದಾಗ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ
ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ವೀವ್ ಸ್ಮಿತ್ ವಿಕೆಟ್ ಪತನವಾದಾಗ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ (REUTERS)

ಅಹಮಬಾದಾದ್ (ಗುಜರಾತ್): ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಟೀಂ ಇಂಡಿಯಾದ (Team India) ಮಾಜಿ ನಾಯಕ, ಹಾಲಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ನೂತನ ದಾಖಲೆ ಬರೆದಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿರಾಟ್ 54 ರನ್ ಬಾರಿಸುವುದರೊಂದಿಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಪಟ್ಟಿಯಲ್ಲಿ ಆಸೀಸ್‌ನ ಮಾಜಿ ಕ್ರಿಕೆಟರ್ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

35 ವರ್ಷದ ಕಿಂಗ್ ಕೊಹ್ಲಿ 37 ಪಂದ್ಯಗಳಿಂದ 1,792 ರನ್ ಬಾರಿಸಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 45 ಪಂದ್ಯಗಳಿಂದ 56.95 ಸರಾಸರಿ ಮತ್ತು 88.98ರ ಸ್ಟ್ರೈಕ್ ರೇಟ್‌ನಲ್ಲಿ 2,278 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಹಾಗೂ 11 ಅರ್ಧ ಶತಕಗಳು ಸೇರಿವೆ. ಸಚಿನ್ ಅಗ್ರ ಸ್ಥಾನದಲ್ಲಿ ಇದ್ದಾರೆ.

2011ರಲ್ಲಿ ಕೊನೆಯ ಬಾರಿ ವಿಶ್ವಕಪ್ ಆಡಿದ್ದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 46 ಪಂದ್ಯಗಳಿಂದ 45.86 ಸರಾಸರಿ, 79.95 ಸ್ಟ್ರೈಕ್ ರೇಟ್ ನೊಂದಿಗೆ 1,743 ರನ್‌ ಗಳಿಸಿದ್ದಾರೆ. 5 ಶತಕ ಮತ್ತು 6 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

2023ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ ಪ್ರವೇಶಿಸಲು ವಿರಾಟ್ ಕೊಹ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒಡಿಐ ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2023ರ ವಿಶ್ವಕಪ್‌ನಲ್ಲಿ 11 ಪಂದ್ಯಗಳಿಂದ ಕೊಹ್ಲಿ 765 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 6 ಅರ್ಧ ಶತಕಗಳು ಸೇರಿವೆ. ಅಷ್ಟೇ ಅಲ್ಲದೆ, ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳ ಸಾಧನೆ ಮಾಡಿದ್ದಾರೆ.

Whats_app_banner