ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತರೂ ಭಾರತ ತಂಡ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಬಹುದು, ಹೇಗೆ?
India WTC Final Qualification: ನ್ಯೂಜಿಲೆಂಡ್ ಎದುರು ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ನೋಡಿ ವಿವರ.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ, ಹೀನಾಯ ಸೋಲು ಕಂಡಿತು. 2012ರಲ್ಲಿ ಕೊನೆಯದಾಗಿ ತವರಿನಲ್ಲಿ ಪರಾಭವಗೊಂಡಿದ್ದ ಭಾರತ, 12 ವರ್ಷಗಳ ನಂತರ ಅಂದರೆ ಸತತ 18 ಸರಣಿಗಳನ್ನು ಗೆದ್ದ ಬಳಿಕ ಮೊದಲ ಟೆಸ್ಟ್ ಸಿರೀಸ್ ಕಳೆದುಕೊಂಡಿದೆ. ಬೆಂಗಳೂರಿನಲ್ಲಿ 8 ವಿಕೆಟ್ಗಳ ಸೋಲು, ಪುಣೆಯಲ್ಲಿ 113 ರನ್ಗಳಿಂದ ಮುಗ್ಗರಿಸಿದ ರೋಹಿತ್ ಪಡೆ, ಅಂತಿಮ ಟೆಸ್ಟ್ಗೂ ಮುನ್ನವೇ ಸರಣಿಯನ್ನು ಸೋತಿದೆ.
ಕಳೆದ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಅಬ್ಬರಿಸಿದ್ದ ಭಾರತದ ಬ್ಯಾಟರ್ಗಳು, ಕಿವೀಸ್ ಎದುರು ಅತ್ಯಂತ ಕೆಟ್ಟ ಪ್ರದರ್ಶನ ನೀಡಿದರು. ಪುಣೆ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 259 ರನ್ ಗಳಿಸಿತು. ಆದರೆ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 156 ರನ್ ಬಾರಿಸಿತು. ಇದರೊಂದಿಗೆ 103 ರನ್ಗಳ ಹಿನ್ನಡೆ ಅನುಭವಿಸಿತು. ಕಿವೀಸ್ 2ನೇ ಇನ್ನಿಂಗ್ಸ್ನಲ್ಲಿ 255 ರನ್ ಕಲೆ ಹಾಕಿತು. ಆ ಮೂಲಕ 359 ರನ್ಗಳ ಗುರಿ ನೀಡಿತು. ಆದರೆ ಭಾರತ ಗಳಿಸಿದ್ದು 245 ಕಲೆ ಹಾಕಿತು.
ಈ ಸೋಲಿನೊಂದಿಗೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ದುರ್ಗಮಗೊಂಡಿದೆ. ಸೋತರೂ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಗೆಲುವಿನ ಪ್ರಮಾಣದಲ್ಲಿ ಶೇ 68ರಿಂದ 62.82ಕ್ಕೆ ಕುಸಿದಿದೆ. ಆಸ್ಟ್ರೇಲಿಯಾ 62.50ರಷ್ಟು ಹೊಂದಿದ್ದು, 2ನೇ ಸ್ಥಾನದಲ್ಲಿದೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ 13 ಪಂದ್ಯಗಳಿಂದ 98 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಡಿರುವ 13 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು, 4ರಲ್ಲಿ ಸೋಲು ಕಂಡಿದೆ, ಆದರೆ 1 ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಹಾಗಾದರೆ ಭಾರತ ಫೈನಲ್ ಪ್ರವೇಶಿಸಬೇಕೆಂದರೆ ಎಷ್ಟು ಪಂದ್ಯ ಗೆಲ್ಲಬೇಕು?
ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ಹೇಗೆ ಅರ್ಹತೆ ಪಡೆಯಬಹುದು?
ನ್ಯೂಜಿಲೆಂಡ್ ಎದುರಿನ ಸೋಲು ಭಾರತದ ಡಬ್ಲ್ಯುಟಿಸಿ ಫೈನಲ್‌ಗೆ ತಲುಪುವ ಕನಸಿಗೆ ಅಡ್ಡಿಪಡಿಸಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಫೈನಲ್‌ಗೆ ಹೋಗುವ ಹಾದಿ ತುಂಬಾ ಕಠಿಣವಾಗಿದೆ. ಸರಣಿಗೂ ಮುನ್ನ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು 4 ಗೆಲುವು, 2 ಡ್ರಾ ಆಗಿದ್ದರೆ ಸಾಕಾಗಿತ್ತು. ಕಿವೀಸ್ ವಿರುದ್ಧ 3-0 ಅಂತರದ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿತ್ತು. ಆದರೀಗ 2-0 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಇದೀಗ ಉಳಿದ 6 ಪಂದ್ಯಗಳಲ್ಲಿ 4 ಗೆಲುವು, 2 ಡ್ರಾ ಸಾಧಿಸುವುದು ಅನಿವಾರ್ಯವಾಗಿದೆ. ಉಳಿದ ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಸೋಲಬಾರದು.
ನ್ಯೂಜಿಲೆಂಡ್ ವಿರುದ್ಧ ಉಳಿದ 1 ಪಂದ್ಯ ಗೆಲ್ಲಬೇಕು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡುವ 5 ಪಂದ್ಯಗಳ ಪೈಕಿ ಕನಿಷ್ಠ 3 ಪಂದ್ಯ ಗೆಲ್ಲಲೇಬೇಕು. ಅಲ್ಲದೆ, 2 ಪಂದ್ಯಗಳಲ್ಲಿ ಡ್ರಾ ಸಾಧಿಸಬೇಕು. ಆಗ ಮಾತ್ರ ಭಾರತದ ಫೈನಲ್ ಕನಸು ನನಸಾಗಲಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಭಾರತ ಗೆಲ್ಲುವುದು ಸುಲಭವಲ್ಲ. ಏಕೆಂದರೆ ಆಸೀಸ್ ತಂಡದ ಗುಣಮಟ್ಟ, ಫಾಸ್ಟ್ ಅಂಡ್ ಟ್ರ್ಯಾಕ್ನಲ್ಲಿ ಬ್ಯಾಟಿಂಗ್ ನಡೆಸುವುದು ತುಂಬಾ ಸವಾಲಿನದಾಯಕ. ಭಾರತ ಫೈನಲ್ಗೇರಲು ರೇಸ್ನಲ್ಲಿರುವ ತಂಡಗಳು ಸಹ ಸೋಲು ಕಾಣಬೇಕು. ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳು ಸಹ ಫೈನಲ್ ರೇಸ್ನಲ್ಲಿವೆ. ಆದರೆ ಈ ತಂಡಗಳು ಸೋತರೆ ಭಾರತ, ಫೈನಲ್ ಪ್ರವೇಶಿಸಲು ಹಾದಿ ಸುಗಮವಾಗಲಿದೆ. ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕ್ರ,ಸಂ | ತಂಡ | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ | PCT |
---|---|---|---|---|---|---|---|
1 | ಭಾರತ | 12 | 8 | 3 | 1 | 98 | 62.8 |
2 | ಆಸ್ಟ್ರೇಲಿಯಾ | 12 | 8 | 3 | 1 | 90 | 62.50 |
3 | ಶ್ರೀಲಂಕಾ | 9 | 5 | 4 | 0 | 60 | 55.56 |
4 | ದಕ್ಷಿಣ ಆಫ್ರಿಕಾ | 7 | 3 | 3 | 1 | 40 | 47.62 |
5 | ನ್ಯೂಜಿಲೆಂಡ್ | 9 | 4 | 5 | 0 | 48 | 44.44 |
6 | ಇಂಗ್ಲೆಂಡ್ | 19 | 9 | 9 | 1 | 93 | 40.79 |
7 | ಪಾಕಿಸ್ತಾನ | 10 | 4 | 6 | 0 | 40 | 33.33 |
8 | ಬಾಂಗ್ಲಾದೇಶ | 8 | 3 | 5 | 0 | 33 | 34.38 |
9 | ವೆಸ್ಟ್ ಇಂಡೀಸ್ | 9 | 1 | 6 | 2 | 20 | 18.52 |