ಟಿ20 ವಿಶ್ವಕಪ್: ಭಾರತ ತಂಡದ ಅತ್ಯುತ್ತಮ ಫೀಲ್ಡರ್ ಯಾರು? ಫೀಲ್ಡಿಂಗ್ ಕೋಚ್ ದಿಲೀಪ್ ಉತ್ತರ ಹೀಗಿದೆ
India vs Canada: ಭಾರತೀಯ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಟೀಮ್ ಇಂಡಿಯಾದ 'ಅತ್ಯುತ್ತಮ ಫೀಲ್ಡರ್' ಯಾರು ಎಂಬುದನ್ನು ಆಯ್ಕೆ ಮಾಡಿದ್ದಾರೆ. ಆ ಆಟಗಾರ ಯಾರು ಎಂದು ತಿಳಿಯಲು ಈ ಸುದ್ದಿ ಓದಿ.

ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಈಗಾಗಲೇ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. ಈ ನಡುವೆ ಜೂನ್ 15ರ ಶನಿವಾರ ಲಾಡರ್‌ಹಿಲ್‌ನಲ್ಲಿ ನಡೆಯಲಿರುವ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಕೆನಡಾ (India vs Canada) ತಂಡವನ್ನು ಎದುರಿಸಲಿದೆ. ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಆದರೆ, ತಂಡದ ಬೌಲಿಂಗ್ ದಾಳಿಯು ಪ್ರಶಂಸನೀಯವಾಗಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ತಂಡವು ಬೌಲಿಂಗ್ ಮತ್ತು ಫೀಲ್ಡಿಂಗ್‌ನಲಿ ನಿರ್ಣಾಯಕ ಪ್ರದರ್ಶನ ನೀಡಿದೆ. ಕೊನೆಯ ಪಂದ್ಯಕ್ಕೂ ಮುನ್ನ ತಂಡವು ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಿಸಬೇಕಿದೆ.
ಆರಂಭಿಕ ಆಟಗಾರನಾಗಿ ಸತತ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ಒಂದಂಕಿ ಮೊತ್ತ ದಾಖಲಿಸಿ ನಿರಾಶೆ ಮೂಡಿಸಿದ್ದಾರೆ. ಸತತ ವೈಫಲ್ಯಗಳ ಹೊರತಾಗಿಯೂ ಭಾರತವು ಫೀಲ್ಡಿಂಗ್‌ನಲ್ಲಿ ಉತ್ತಮವಾಗಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ತಂಡದ ಯಶಸ್ಸಿನಲ್ಲಿ ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಪಾತ್ರ ದೊಡ್ಡದು.
ಫ್ಲೋರಿಡಾದಲ್ಲಿ ನಡೆಯಲಿರುವ ಕೆನಡಾ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮಾತನಾಡಿದ ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು, ಟೀಮ್ ಇಂಡಿಯಾದ ಅತ್ಯುತ್ತಮ ಫೀಲ್ಡರ್ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
“ಇದು ಕಠಿಣ ಪ್ರಶ್ನೆ. ಇದಕ್ಕೆ ಉತ್ತರ ಕೊಡುವುದು ಕೂಡಾ ಕಷ್ಟ. ತಾತ್ತ್ವಿಕವಾಗಿ ಒಂದು ಘಟಕವಾಗಿ ನಾವು ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದೇವೆ. ಆದರೆ ನಾನು ನಿರ್ದಿಷ್ಟವಾಗಿ ಹೇಳಬೇಕೆಂದರೆ, ತಂಡದ ಬೌಲರ್‌ಗಳು ನಿಜಕ್ಕೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡುವುದು ಹೃದಯಕ್ಕೆ ಹಿತವೆನಿಸುತ್ತಿದೆ,” ಎಂದು ಅವರು ಹೇಳಿದ್ದಾರೆ.
ಭಾರತದ ಬೆಸ್ಟ್ ಫೀಲ್ಡರ್ ಯಾರು?
“ಹೌದು, ಫೀಲ್ಡಿಂಗ್‌ನಲ್ಲಿ ರವೀಂದ್ರ ಜಡೇಜಾ, ಕೊಹ್ಲಿ, ರೋಹಿತ್ ಶರ್ಮಾ ಉತ್ತಮವಾಗಿದ್ದಾರೆ. ಆದರೆ ಬೌಲರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡುವುದು ಸಂತೋಷವಾಗುತ್ತಿದೆ. ನಾವು ಒಂದು ತಂಡವಾಗಿ ಆಡುತ್ತಿದ್ದೇವೆ. ಬೌಲರ್‌ಗಳು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇದು ನಾಯಕ ರೋಹಿತ್ ಶರ್ಮಾಗೆ ಎಲ್ಲಾ ಸಮಯದಲ್ಲೂ ಫೀಲ್ಡರ್‌ಗಳನ್ನು ಉತ್ತಮ ಸ್ಥಾನಗಳಲ್ಲಿ ಇರಿಸುವಲ್ಲಿ ಬಹುಮುಖ ಅವಕಾಶ ನೀಡುತ್ತದೆ,” ಎಂದು ಅವರು ಹೇಳಿದ್ದಾರೆ.
ಗುಂಪು ಹಂತದ ಕೊನೆಯ ಪಂದ್ಯವಾಗಿರುವುದರಿಂದ, ಪಂದ್ಯದಲ್ಲಿ ಭಾರತ ತಂಡವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಿದೆ. ಕೆನಡಾ ವಿರುದ್ಧ ಸೋತರೂ ಭಾರತದ ಸೂಪರ್ 8 ಪ್ರವೇಶಕ್ಕೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಇಂದಿನ ಪಂದ್ಯಕ್ಕೆ ತಂಡದ ಆಡುವ ಬಳಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಇಂದಿನ ಪಂದ್ಯ ಮುಗಿದ ಬೆನ್ನಲ್ಲೇ ತಂಡ ವೆಸ್ಟ್ ಇಂಡೀಸ್‌ಗೆ ಹಾರಲಿದೆ. ಆಗ ಪ್ರಬಲ ಹಾಗೂ ಸ್ಥಿರ ಆಡುವ ಬಳಗಕ್ಕೆ ತಂಡ ಒಗ್ಗಿಕೊಳ್ಳಬೇಕಿದೆ.
ಕೆನಡಾ ವಿರುದ್ಧ ಆಡುವ ಬಳಗವನ್ನು ಅಂತಿಮಗೊಳಿಸುವುದು ತಂಡದ ಗುರಿ. ತಂಡಕ್ಕೆ ಪ್ರಮುಖ ಚಿಂತೆ ಕೊಹ್ಲಿ ಫಾರ್ಮ್. ಶನಿವಾರ ಅವರು ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ರಾಹುಲ್ ದ್ರಾವಿಡ್ ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು. ಕೊಹ್ಲಿಯನ್ನು 3ನೇ ಕ್ರಮಾಂಕಕ್ಕೆ ಕಳುಹಿಸಿ, ಯಶಸ್ವಿ ಜೈಸ್ವಾಲ್ ಆರಂಭಿಕ ಸ್ಥಾನದಲ್ಲಿ ಅವಕಾಶ ಪಡೆಯಬಹುದು.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಭಾರತ vs ಕೆನಡಾ ಟಿ20 ವಿಶ್ವಕಪ್ ಪಂದ್ಯಕ್ಕೆ ಮಳೆ ಆತಂಕ; ಫ್ಲೋರಿಡಾ ಹವಾಮಾನ ವರದಿ, ಪಂದ್ಯ ರದ್ದಾದರೂ ಭಾರತಕ್ಕಿಲ್ಲ ಚಿಂತೆ
