ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಥಾನ ತುಂಬಲು ಆರು ಯುವ ಆಟಗಾರರ ನಡುವೆ ತೀವ್ರ ಪೈಪೋಟಿ; ಯಾರವರು?
Who replaces Rohit Sharma and Virat Kohli: ಟಿ20ಐ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಸ್ಥಾನ ತುಂಬಲು ಭಾರತದ ತಂಡದ ಆರು ಆಟಗಾರರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಅವರು ಯಾರು?
ಭಾರತ ತಂಡಕ್ಕೆ ಟಿ20 ವಿಶ್ವಕಪ್ 2024 ಗೆದ್ದುಕೊಟ್ಟ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20ಐ ಕ್ರಿಕೆಟ್ನಿಂದ ನಿವೃತ್ತರಾದರು. ರೋಹಿತ್ (4231 ರನ್) ಅಂತಾರಾಷ್ಟ್ರೀಯ ಟಿ20ಐಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ತಮ್ಮ ವೃತ್ತಿಜೀವನ ಕೊನೆಗೊಳಿಸಿದರು. ಕೊಹ್ಲಿ (4188 ರನ್) ಎರಡನೇ ಸ್ಥಾನದಲ್ಲಿದ್ದಾರೆ. ಭಾರತೀಯ ಕ್ರಿಕೆಟ್ಗೆ ಅಪಾರ ಕೊಡುಗೆ ನೀಡಿದ ಈ ದಿಗ್ಗಜರ ಸ್ಥಾನಕ್ಕೆ ಬದಲಿ ಆಟಗಾರರನ್ನು ಹುಡುಕುವುದು ಅಷ್ಟು ಸುಲಭವಲ್ಲ. ಆದರೆ, ಅವರ ಸ್ಥಾನಕ್ಕೆ 6 ಮಂದಿ ಪೈಪೋಟಿ ನಡೆಸುತ್ತಿದ್ದಾರೆ. ಅವರ ಪಟ್ಟಿ ಇಲ್ಲಿದೆ ನೋಡಿ.
ಯಶಸ್ವಿ ಜೈಸ್ವಾಲ್
ಭಾರತ ಟಿ20ಐ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿ ಜೈಸ್ವಾಲ್ ಮುಂಚೂಣಿಯಲ್ಲಿದ್ದಾರೆ. 17 ಪಂದ್ಯಗಳಲ್ಲಿ 502 ರನ್ ಸಿಡಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 33.46, ಸ್ಟ್ರೈಕ್-ರೇಟ್ 161.93, ಗರಿಷ್ಠ ಸ್ಕೋರ್ 100. ಪ್ರಸ್ತುತ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದಿದ್ದ ಜೈಸ್ವಾಲ್ ಭವಿಷ್ಯದ ಸೂಪರ್ಸ್ಟಾರ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ತನಗೆ ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ನಿರೂಪಿಸಿದ ಜೈಸ್ವಾಲ್ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಅವರ ಸೇರ್ಪಡೆಯು ಅಗ್ರಕ್ರಮಾಂಕದ ಎಡ-ಬಲ ಸಂಯೋಜನೆ ಖಚಿತಪಡಿಸುತ್ತದೆ.
ಶುಭ್ಮನ್ ಗಿಲ್
ಟಿ20ಐ ಕ್ರಿಕೆಟ್ನಲ್ಲಿ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 335 ರನ್ಗಳನ್ನು ಗಳಿಸಿದ್ದಾರೆ. 25.76ರ ಬ್ಯಾಟಿಂಗ್ ಸರಾಸರಿ ಹಾಗೂ ಸ್ಟ್ರೈಕ್ರೇಟ್ 147.57 ಹೊಂದಿದ್ದಾರೆ. ಗರಿಷ್ಠ ಸ್ಕೋರ್ 126. ಕ್ಲಾಸಿ ಬಲಗೈ ಬ್ಯಾಟರ್ ಕಳೆದ ಕೆಲವು ವರ್ಷಗಳಿಂದ ಭಾರತೀಯ ವೈಟ್-ಬಾಲ್ ಸೆಟಪ್‌ನಲ್ಲಿ ನಿಯಮಿತವಾಗಿದ್ದಾರೆ. 2023 ಕ್ರಿಕೆಟ್ ವಿಶ್ವಕಪ್‌ನಲ್ಲಿ ರೋಹಿತ್‌ನ ಆರಂಭಿಕ ಪಾಲುದಾರರಾಗಿದ್ದರು. ಗಿಲ್ ಕೂಡ ಕೊಹ್ಲಿ ಅವರಂತೆಯೇ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
ಅಭಿಷೇಕ್ ಶರ್ಮಾ
2018ರಲ್ಲಿ ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯ ಅಭಿಷೇಕ್ ಶರ್ಮಾ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕಿದೆ. ಆಕ್ರಮಣಕಾರಿ ಸ್ಟ್ರೋಕ್‌ಪ್ಲೇಗೆ ಹೆಸರುವಾಸಿಯಾಗಿದ್ದರು. ಆದಾಗ್ಯೂ, 2024ರ ಐಪಿಎಲ್ ಆವೃತ್ತಿಯಲ್ಲಿ ಎಸ್ಆರ್ಹೆಚ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದರು. 16 ಪಂದ್ಯಗಳಲ್ಲಿ 204.21ರ ಸ್ಟ್ರೈಕ್ ರೇಟ್‌ನಲ್ಲಿ 484 ರನ್ ಗಳಿಸಿದ್ದರು. ಅವರು ಟಿ20ಐ ಕ್ರಿಕೆಟ್ಗೆ ಪಕ್ಕಾ ಸೂಟ್ ಆಗುವ ಆಟಗಾರನಾಗಿದ್ದಾರೆ.
ಕೆಎಲ್ ರಾಹುಲ್
ರಾಹುಲ್ 72 ಪಂದ್ಯಗಳಲ್ಲಿ 37.75ರ ಬ್ಯಾಟಿಂಗ್ ಸರಾಸರಿಯಲ್ಲಿ 2265 ರನ್ ಗಳಿಸಿದ್ದಾರೆ. ಸ್ಟ್ರೈಕ್ರೇಟ್ 139.12 ಹಾಗೂ ಗರಿಷ್ಠ ಸ್ಕೋರ್ 110 ಆಗಿದೆ. ಕೆಎಲ್ ರಾಹುಲ್ ಅವರನ್ನು ಟಿ20 ವಿಶ್ವಕಪ್‌ಗೆ ಸೆಲೆಕ್ಟರ್ಗಳು ಆಯ್ಕೆ ಮಾಡದಿದ್ದರೂ ಅನುಭವಿ ಆಟಗಾರನಾಗಿ ಅಗ್ರಕ್ರಮಾಂಕದಲ್ಲಿ ಆಡುವ ಅವಕಾಶ ಪಡೆಯುವ ನಿರೀಕ್ಷೆ ಇದೆ. ಆದರೆ, ನಿಧಾನಗತಿಯ ಬ್ಯಾಟಿಂಗ್ ಟೀಕೆಗೂ ಗುರಿಯಾಗಿದ್ದಾರೆ. ಒಂದು ವೇಳೆ ಟಿ20ಐ ಕ್ರಿಕೆಟ್ಗೆ ಮರಳಿದರೆ ಅಗ್ರಕ್ರಮಾಂಕದಲ್ಲಿ ಅವಕಾಶ ಪಡೆಯುವುದು ಖಚಿತ.
ಋತುರಾಜ್ ಗಾಯಕ್ವಾಡ್
ಭಾರತದ ಪರ 19 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 35.71ರ ಸ್ಟ್ರೈಕ್ರೇಟ್ನಲ್ಲಿ 500 ರನ್ ಸಿಡಿಸಿದ್ದಾರೆ. ಸ್ಟ್ರೈಕ್-ರೇಟ್ 140.05, ಗರಿಷ್ಠ ಸ್ಕೋರ್ 123* ಹೊಂದಿದ್ದಾರೆ. ಇದೀಗ ರೋಹಿತ್-ಕೊಹ್ಲಿ ಸ್ಥಾನ ತುಂಬಲು ಋತುರಾಜ್ ಗಾಯಕ್ವಾಡ್ ಮುಂಚೂಣಿಯಲ್ಲಿದ್ದಾರೆ. ಭಾರತದ ಜಿಂಬಾಬ್ವೆ ಪ್ರವಾಸದಲ್ಲಿ ಗಾಯಕ್ವಾಡ್‌ಗೆ ನಿಯಮಿತ ಸ್ಥಾನವನ್ನು ಮುದ್ರೆಯೊತ್ತಲು ಅವಕಾಶವಿದೆ. ಈ ಸರಣಿಯಲ್ಲಿ ಅಬ್ಬರಿಸಿದರೆ ಮುಂದಿನ ಸರಣಿಗಳಲ್ಲೂ ಅವಕಾಶ ಪಡೆಯಲಿದ್ದಾರೆ.
ಇಶಾನ್ ಕಿಶನ್
ಇಶಾನ್ ಕಿಶನ್ 32 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿಸಿದ್ದು 796 ರನ್ ಸಿಡಿಸಿದ್ದಾರೆ. 25.67 ಬ್ಯಾಟಿಂಗ್ ಸರಾಸರಿ, 124.37ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಗರಿಷ್ಠ ಸ್ಕೋರ್ 89. ಆದರೆ, ಇಶಾನ್ ಇತ್ತೀಚೆಗೆ ತೋರಿದ ದುರ್ವತನೆಯಿಂದ ಬಿಸಿಸಿಐ, ಆತನಿಗೆ ಮತ್ತೆ ಅವಕಾಶ ನೀಡದಿರಲು ಚಿಂತಿಸಿದೆ. ಪ್ರಸ್ತುತ ಭಾರತೀಯ ತಂಡದ ಭಾಗವಾಗಿಲ್ಲ. ಒಂದು ವೇಳೆ ತಂಡಕ್ಕೆ ಮರಳಿದರೆ ಕಿಶನ್ ಪ್ರಮುಖ ಆಯ್ಕೆಯಾಗುತ್ತಾರೆ.