ಕೆಕೆಆರ್ ವಿರುದ್ಧ ಆರ್‌ಸಿಬಿಯ 1 ರನ್ ಸೋಲಿಗೆ ಅಂಪೈರ್‌ಗಳು ಕಾರಣವೇ? ಸುಯಾಶ್ ಸಿಡಿಸಿದ್ದು ಸಿಕ್ಸರ್ ಎಂಬ ಫ್ಯಾನ್ಸ್ ವಾದಕ್ಕೆ ಕಾರಣವಿದು
ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ನಡುವಿನ ಐಪಿಎಲ್ ಪಂದ್ಯದಲ್ಲಿ ಸುಯಾಶ್ ಪ್ರಭುದೇಸಾಯಿ ಬಾರಿಸಿದ ಬೌಂಡರಿ ವಿವಾದಕ್ಕೆ ಕಾರಣವಾಯ್ತು. ಅದು ಬೌಂಡರಿ ಅಲ್ಲ ಸಿಕ್ಸರ್ ಎಂಬುದು ಫ್ಯಾನ್ಸ್ ವಾದ. ಹಾಗಿದ್ದರೆ, ಅಂಪೈರ್‌ಗಳು ತಪ್ಪು ನಿರ್ಧಾರ ಮಾಡಿದ್ದು ಹೌದಾ? ಇಲ್ಲಿದೆ ಸತ್ಯ ಮಾಹಿತಿ.
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2024ರ 36ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (KKR vs RCB) ತಂಡವು ಕೇವಲ 1 ರನ್‌ಗಳಿಂದ ಸೋತಿತು. ಮಿಚೆಲ್ ಸ್ಟಾರ್ಕ್ ಎಸೆದ ಅಂತಿಮ ಓವರ್‌ನಲ್ಲಿ ಕರಣ್ ಶರ್ಮಾ ಮೂರು ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ಭರವಸೆ ಕೊಟ್ಟರು. ಆದರೆ, ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಕೊರತೆಯಿಂದ ತಂಡವು ಸೋಲೊಪ್ಪಿಕೊಳ್ಳಬೇಕಾಯ್ತು. ಪಂದ್ಯದಲ್ಲಿ ಎರಡೆರಡು ಅಂಶಗಳು ನಾಟಕೀಯ ಬೆಳವಣಿಗೆಗೆ ಕಾರಣವಾಯ್ತು. ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಔಟಾಗಿದ್ದು ಮೊದಲನೆಯದಾಗಿ ಚರ್ಚೆಗೆ ಕಾರಣವಾದರೆ, ಸುಯಾಶ್ ಪ್ರಭುದೇಸಾಯಿ ಸಿಡಿಸಿದ ಸಿಕ್ಸರ್ ಎರಡನೇ ವಿವಾದಕ್ಕೆ ಕಾರಣವಾಯ್ತು.
ಪಂದ್ಯದ ಬಳಿಕ ಆರ್‌ಸಿಬಿಯ ಸೋಲು ಹಾಗೂ ಕೆಕೆಆರ್ ಗೆಲುವಿನ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಪಂದ್ಯದಲ್ಲಿ ಫಾಫ್ ಪಡೆಯ ಸೋಲಿಗೆ ಅಂಪೈರಿಂಗ್ ದೋಷವೇ ಕಾರಣ ಎಂದು ನೆಟ್ಟಿಗರು ದೂರಿದ್ದಾರೆ. ಸುಯಾಶ್ ಪ್ರಭುದೇಸಾಯಿ ಸಿಡಿಸಿದ್ದು ಸಿಕ್ಸರ್ ಆಗಿತ್ತು. ಆದರೆ, ಅಂಪೈರ್‌ಗಳು ತರಾತುರಿಯಲ್ಲಿ ನಿರ್ಧಾರ ಪ್ರಕಟಿಸಿ ಆರ್‌ಸಿಬಿ ಸೋಲಿಗೆ ಕಾರಣರಾದರು ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಆರ್‌ಸಿಬಿ ತಂಡದ ಚೇಸಿಂಗ್ ವೇಳೆ, ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸುಯಾಶ್ ಪ್ರಭುದೇಸಾಯಿ, 17ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದರು. ಅಂಪೈರ್ ಅದನ್ನು ಫೋರ್ ಎಂದು ಘೋಷಿಸಿದರು. ಆದರೆ, ಆರ್‌ಸಿಬಿ ಅಭಿಮಾನಿಗಳ ವಾದವೇ ಬೇರೆ. ನಿಜವಾಗಿ ಅದು 'ಸಿಕ್ಸರ್' ಆಗಿತ್ತು. ಆದರೆ ತರಾತುರಿಯ ನಿರ್ಧಾರದ ವೇಳೆ ಅಂಪೈರ್‌ಗಳು ಸರಿಯಾಗಿ ಗಮಿನಿಸದೆ ಅದನ್ನು ಫೋರ್ ಎಂದು ಘೋಷಿಸಿದ್ದಾರೆ ಎಂಬುದು ಫ್ಯಾನ್ಸ್ ಆರೋಪ.
ಅಸಲಿಗೆ ಆಗಿದ್ದೇನು?
ವರುಣ್ ಚಕ್ರವರ್ತಿ ಕಾಲಿನ ಭಾಗಕ್ಕೆ ಚೆಂಡು ಎಸೆದಾಗ, ಪ್ರಭುದೇಸಾಯಿ ಸ್ವಲ್ಪ ತಿರುಗಿ ಅದನ್ನು ತಮ್ಮ ಲೆಗ್ ಸೈಡ್‌ನತ್ತ ಬಾರಿಸಿದರು. ಅಭಿಮಾನಿಗಳು ಅದು ಬೌಂಡರಿ ದಾಟಿ ಸಿಕ್ಸರ್ ಹೋಗಿದೆ ಎಂದು ವಾದಿಸಿದ್ದಾರೆ. ಆದರೆ, ಆ ಚೆಂಡು ಬೌಂಡರಿ ಲೈನ್ ದಾಟಿದೆಯೇ ಅಥವಾ ಒಳಗೆ ಬಿದ್ದು ಪಿಚ್ ಆಗಿದೆಯೇ ಎಂಬುದನ್ನು ಅಂಪೈರ್‌ಗಳು ಸರಿಯಾಗಿ ಪರಿಶೀಲಿಸಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಕೇಳಿ ಬಂದಿದೆ.
ನಿರ್ಧಾರದಲ್ಲಿ ಅಂಪೈರ್‌ಗಳ ನಿಜಕ್ಕೂ ತಪ್ಪಿದೆಯೇ?
ಆರಂಭದಲ್ಲಿ ಅಂಪೈರ್‌ಗಳು ಬೌಂಡರಿ ಎಂಬುದಾಗಿ ಹೇಳಿಲ್ಲ. ಹೀಗಾಗಿ ಪಂದ್ಯದ ವೀಕ್ಷಕ ವಿವರಣೆಗಾರರು ಸಹ ಅದು ಸಿಕ್ಸರ್ ಎಂದೇ ಲೆಕ್ಕಹಾಕಿದ್ದರು. ಈ ವೇಳೆ ಆನ್-ಫೀಲ್ಡ್ ಅಂಪೈರ್ ಮೂರನೇ ಅಂಪೈರ್‌ನಿಂದ ತ್ವರಿತ ದೃಢೀಕರಣ ಪಡೆದರು. ಈ ವೇಳೆ ಅದು ಸಿಕ್ಸರ್ ಅಲ್ಲ, ಫೋರ್ ಎಂಬುದಾಗಿ ಅಂಪೈರ್ ಹೇಳಿದರು.
ಗೊಂದಲಕ್ಕೆ ಕಾರಣವೇನು?
ಇಲ್ಲಿ ಗೊಂದಲ ಹಾಗೂ ಚರ್ಚೆಗೆ ಹೆಚ್ಚಾಗಲು ಕಾರಣವಿದೆ. ಚೆಂಡು ಬೌಂಡರ್ ಲೈನ್ ದಾಟಿದ ರಿಪ್ಲೇಯನ್ನು (ಮರುಪ್ರಸಾರ) ಪ್ರಸಾರಕರು ಸರಿಯಾಗಿ ತೋರಿಸಲಿಲ್ಲ ಎಂಬುದು ಅಭಿಮಾನಿಗಳಿಗೆ ಕೋಪ ತರಿಸಿದೆ. ಒಂದು ವೇಳೆ ಅದೇ ದೃಶ್ಯವನ್ನು ಮತ್ತೆ ತೋರಿಸಿದ್ದರೆ ಇಂಥಾ ಗೊಂದಲ ಏಳುತ್ತಿರಲಿಲ್ಲ. ಮೇಲ್ನೋಟಕ್ಕೆ ದೃಶ್ಯ ಒಂದು ಬಾರಿ ನೋಡಿದಾಗ ಚೆಂಡು ಪಿಚ್ ಆಗುತ್ತಿರುವುದು ಕಾಣಿಸುವುದಿಲ್ಲ. ಅಂಪೈರ್‌ಗಳು ಅದನ್ನು ಬೌಂಡರಿ ಎಂದು ದೃಢೀಕರಿಸುವ ಮೊದಲು ಸೈಡ್ ಆನ್ ವೀಕ್ಷಣೆ ಮಾತ್ರ ಮಾಡಿದ್ದಾರೆ. ಹೀಗಾಗಿ ರಿಪ್ಲೇ ತೋರಿಸದೆ ಅಭಿಮಾನಿಗಳು ಗೊಂದಲಕ್ಕೊಳಗಾದರು.