ಆ್ಯಪ್ ಮೂಲಕ ಸಾರಾ ಹಣ ಗಳಿಸುತ್ತಾಳೆ ಎಂಬ ಡೀಪ್‌ಫೇಕ್ ವಿಡಿಯೋ ಭೇದಿಸಿದ ಸಚಿನ್ ತೆಂಡೂಲ್ಕರ್; ಕ್ರಮಕ್ಕೆ ಆಗ್ರಹ
ಕನ್ನಡ ಸುದ್ದಿ  /  ಕ್ರಿಕೆಟ್  /  ಆ್ಯಪ್ ಮೂಲಕ ಸಾರಾ ಹಣ ಗಳಿಸುತ್ತಾಳೆ ಎಂಬ ಡೀಪ್‌ಫೇಕ್ ವಿಡಿಯೋ ಭೇದಿಸಿದ ಸಚಿನ್ ತೆಂಡೂಲ್ಕರ್; ಕ್ರಮಕ್ಕೆ ಆಗ್ರಹ

ಆ್ಯಪ್ ಮೂಲಕ ಸಾರಾ ಹಣ ಗಳಿಸುತ್ತಾಳೆ ಎಂಬ ಡೀಪ್‌ಫೇಕ್ ವಿಡಿಯೋ ಭೇದಿಸಿದ ಸಚಿನ್ ತೆಂಡೂಲ್ಕರ್; ಕ್ರಮಕ್ಕೆ ಆಗ್ರಹ

Sachin Tendulkar: ತಮ್ಮ ಮಗಳು ಸಾರಾ ತೆಂಡೂಲ್ಕರ್‌ ಆನ್‌ಲೈನ್ ವಿಡಿಯೋ ಗೇಮ್‌ಗಳ ಮೂಲಕ ಹಣ ಗಳಿಸುತ್ತಾಳೆ ಎಂಬ ನಕಲಿ ವಿಡಿಯೋದ ನಿಜಬಣ್ಣವನ್ನು ಸಚಿನ್‌ ತೆಂಡೂಲ್ಕರ್‌ ಬಯಲು ಮಾಡಿದ್ದಾರೆ. ಜನರು ತಂತ್ರಜ್ಞಾನದ ಒಳಿತು ಕೆಡುಕುಗಳ ಕುರಿತು ಎಚ್ಚರದಿಂದಿರಬೇಕು ಎಂದು ಹೇಳಿದ್ದಾರೆ.

ಸಾರಾ ಮತ್ತು ಸಚಿನ್‌ ತೆಂಡೂಲ್ಕರ್
ಸಾರಾ ಮತ್ತು ಸಚಿನ್‌ ತೆಂಡೂಲ್ಕರ್

ಕೃತಕ ಬುದ್ಧಿಮತ್ತೆ ಯುಗದಲ್ಲಿ ಡೀಫ್‌ ಫೇಕ್‌ ವಿಡಿಯೋಗಳು ಹಲವರ ನಿದ್ದೆಗೆಡಿಸಿದೆ. ಇಂಥಾ ನಕಲಿ ವಿಡಿಯೋಗಳು ಸೆಲೆಬ್ರಿಟಿಗಳ ಪಾಲಿಗೆ ಹೆಚ್ಚು ಮುಳುವಾಗುತ್ತಿವೆ. ಈಗಾಗಲೇ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕುಟುಂಬದ ಕುರಿತ ಡೀಪ್‌ಫೇಕ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿ ಕುಟುಂಬದ ನೆಮ್ಮದಿ ಹಾಳು ಮಾಡಿತ್ತು. ಇದೀಗ ಮತ್ತೊಮ್ಮೆ ಕ್ರಿಕೆಟ್ ದೇವರ ಮನೆ ಮಗಳ ಕುರಿತಾದ ಡೀಪ್ ಫೇಕ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ಸತ್ಯಾಸತ್ಯತೆಯನ್ನು ಖುದ್ದು ಸಚಿನ್‌ ಅವರೇ ಭೇದಿಸಿದ್ದು, ಜನರನ್ನು ಎಚ್ಚರಿಸಿದ್ದಾರೆ.

ತಮ್ಮ ಮಗಳು ಸಾರಾ ತೆಂಡೂಲ್ಕರ್‌ ಆನ್‌ಲೈನ್ ವಿಡಿಯೋ ಗೇಮ್‌ಗಳ ಮೂಲಕ ಹಣ ಗಳಿಸುತ್ತಾಳೆ ಎಂಬ ನಕಲಿ ವಿಡಿಯೋದ ನಿಜಬಣ್ಣವನ್ನು ಸಚಿನ್‌ ಬಯಲು ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಅವರು, ಇದು ನಕಲಿ ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೆ ಜನರು ತಂತ್ರಜ್ಞಾನದ ಒಳಿತು ಕೆಡುಕುಗಳನ್ನು ಸರಿಯಾಗಿ ತಿಳಿದುಕೊಂಡು ಮುಂದುವರೆಯಬೇಕೆಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ | Video: ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಮುಟ್ಟಿ ತಬ್ಬಿಕೊಂಡ ಅಭಿಮಾನಿ; ಭದ್ರತೆ ಉಲ್ಲಂಘಿಸಿದ ಫ್ಯಾನ್ ಅರೆಸ್ಟ್

ಎಕ್ಸ್‌ನಲ್ಲಿ (ಟ್ವಿಟರ್) ಸುದೀರ್ಘ ಸಂದೇಶದೊಂದಿಗೆ ಟ್ವೀಟ್‌ ಮಾಡಿರುವ ಸಚಿನ್, ಸುಳ್ಳು ಮಾಹಿತಿಯನ್ನು ಹಂಚುವುದನ್ನು ತಡೆಯಲು ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. “ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಇಂಥಾ ವಿಚಾರದಲ್ಲಿ ಜಾಗರೂಕವಾರಬೇಕು. ಜನರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಅಲ್ಲದೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳ ಹರಡುವಿಕೆ ತಡೆಯುವಲ್ಲಿ ನಿರ್ಣಾಯಕವಾಗಿದೆ” ಎಂದು ಸಚಿನ್ ಬರೆದುಕೊಂಡಿದ್ದಾರೆ.

ಡೀಪ್‌ಫೇಕ್‌ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಿರುವ ವಿಡಿಯೋವನ್ನು ಸಚಿನ್‌ ಹಂಚಿಕೊಂಡಿದ್ದಾರೆ. ಇದರಲ್ಲಿ ಸಚಿನ್ ಅವರೇ ಮಾತನಾಡುತ್ತಿರುವಂತೆ ವಿಡಿಯೋ ಸೃಷ್ಟಿಸಲಾಗಿದೆ. ಅಪ್ಲಿಕೇಶನ್ ಒಂದರ ಜಾಹೀರಾತು ಮಾದರಿಯಲ್ಲಿ ವಿಡಿಯೋ ಮಾಡಲಾಗಿದೆ. ತನ್ನ ಮಗಳು ಸುಲಭವಾಗಿ ಹಣ ಸಂಪಾದಿಸಲು ಆ ಅಪ್ಲಿಕೇಶನ್‌ ಹೇಗೆ ಸಹಾಯ ಮಾಡಿದೆ ಎಂಬುದನ್ನು ಸಚಿನ್‌ ವಿವರಿಸುತ್ತಿರುವಂತೆ ವಿಡಿಯೋ ಇದೆ. ಹಣ ಸಂಪಾದಿಸುವುದು ತುಂಬಾ ಸುಲಭ ಎಂಬುದು ತನಗೆ ತಿಳಿದಿರಲ್ಲ ಎಂದು ಸಚಿನ್ ಹೇಳಿರುವಂತೆ ವಿಡಿಯೋ ಮಾಡಲಾಗಿದೆ.

ಸಚಿನ್ ಈ ವಿಡಿಯೋವನ್ನು ‘ಡಿಸ್ಟರ್ಬಿಂಗ್’ ಎಂದು ಕರೆದಿದ್ದಾರೆ. ಅಲ್ಲದೆ ಇದು ತಂತ್ರಜ್ಞಾನದ ದುರುಪಯೋಗ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. “ಈ ವಿಡಿಯೋಗಳು ನಕಲಿ(ಫೇಕ್). ತಂತ್ರಜ್ಞಾನದ ದುರುಪಯೋಗ ಮಾಡಲಾಗಿದೆ. ಈ ರೀತಿಯ ವಿಡಿಯೋಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಿಪೋರ್ಟ್ ಮಾಡಬೇಕಾಗಿ ಪ್ರತಿಯೊಬ್ಬರಲ್ಲೂ ವಿನಂತಿಸುತ್ತೇನೆ,” ಎಂದು ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ.

ಇದನ್ನೂ ಓದಿ | ಗೆಲುವಿನ ಹೊಸ್ತಿಲಲ್ಲಿ ಎಡವಿದ ಕರ್ನಾಟಕ, ರಣಜಿ ಪಂದ್ಯದಲ್ಲಿ 6 ರನ್‌ಗಳ ಆಘಾತಕಾರಿ ಸೋಲು; ರೋಚಕ ಪಂದ್ಯ ಗೆದ್ದ ಗುಜರಾತ್

ವಿಡಿಯೊದಲ್ಲಿ ಬಳಸಲಾದ ಆಡಿಯ ಕೂಡಾ ತೆಂಡೂಲ್ಕರ್ ಅವರ ಧ್ವನಿಗೆ ಹೊಂದಿಕೆಯಾಗಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಲಿಪ್ ಸಿಂಕಿಂಗ್ ಕೂಡಾ ಸರಿಯಾಗಿ ಮಾಡಲಾಗಿದೆ. ಹೀಗಾಗಿ ಯಾರಿಗೂ ಗೊಂದಲ ಹಾಗೂ ಅನುಮಾನ ಬರದ ರೀತಿಯಲ್ಲಿ ವಿಡಿಯೋ ಮಾಡಲಾಗಿದೆ.

Whats_app_banner