ಔಟಾದ ಹತಾಶೆಯಲ್ಲಿ ಬ್ಯಾಟ್‌ನಿಂದ ಸ್ಟಂಪ್‌ಗೆ ಬಡಿದು ಕೈಸುಟ್ಟುಕೊಂಡ ಹೆಟ್ಮಾಯರ್;‌ ಬಿತ್ತು ಭಾರಿ ದಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಔಟಾದ ಹತಾಶೆಯಲ್ಲಿ ಬ್ಯಾಟ್‌ನಿಂದ ಸ್ಟಂಪ್‌ಗೆ ಬಡಿದು ಕೈಸುಟ್ಟುಕೊಂಡ ಹೆಟ್ಮಾಯರ್;‌ ಬಿತ್ತು ಭಾರಿ ದಂಡ

ಔಟಾದ ಹತಾಶೆಯಲ್ಲಿ ಬ್ಯಾಟ್‌ನಿಂದ ಸ್ಟಂಪ್‌ಗೆ ಬಡಿದು ಕೈಸುಟ್ಟುಕೊಂಡ ಹೆಟ್ಮಾಯರ್;‌ ಬಿತ್ತು ಭಾರಿ ದಂಡ

ಶಿಮ್ರಾನ್ ಹೆಟ್ಮೆಯರ್‌ಗೆ ಬಿಸಿಸಿಐ ದಂಡ ವಿಧಿಸಿದೆ. ಬ್ಯಾಟ್‌ನಿಂದ ಸ್ಟಂಪ್ಸ್‌ಗೆ ಬಡಿದ ಕಾರಣಕ್ಕೆ, ರಾಜಸ್ಥಾನ್‌ ರಾಯಲ್ಸ್‌ ಆಟಗಾರ ಪಂದ್ಯದ ಶುಲ್ಕದ 10 ಶೇಕಡದಷ್ಟು ಮೊತ್ತವನ್ಮು ದಂಡವಾಗಿ ತೆರಬೇಕಾಗಿದೆ.

ಬ್ಯಾಟ್‌ನಿಂದ ಸ್ಟಂಪ್‌ಗೆ ಬಡಿದು ಕೈಸುಟ್ಟುಕೊಂಡ ಹೆಟ್ಮಾಯರ್‌ಗೆ ದಂಡ
ಬ್ಯಾಟ್‌ನಿಂದ ಸ್ಟಂಪ್‌ಗೆ ಬಡಿದು ಕೈಸುಟ್ಟುಕೊಂಡ ಹೆಟ್ಮಾಯರ್‌ಗೆ ದಂಡ (AP)

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ (SRH vs RR) ಸೋಲೊಪ್ಪಿತು. ಇದರೊಂದಿಗೆ ಐಪಿಎಲ್ 2024ರಿಂದ ಹೊರಬಿದ್ದಿತು. ಪಂದ್ಯದಲ್ಲಿ ಆರ್‌ಆರ್‌ ಇನ್ನಿಂಗ್ಸ್‌ ವೇಳೆ ಔಟಾಗಿ ಆಕ್ರೋಶದಿಂದ ನಡೆದುಕೊಂಡ ವಿಂಡೀಸ್‌ ಆಟಗಾರ ಶಿಮ್ರಾನ್‌ ಹೆಟ್ಮಾಯರ್‌, ತಂಡ ಸೋಲಿನ ಬೆನ್ನಲ್ಲೇ ದಂಡ ತೆರಬೇಕಾಗಿ ಬಂದಿದೆ. ಎಸ್‌ಆರ್‌ಎಚ್‌ ಎಡಗೈ ಸ್ಪಿನ್ನರ್ ಅಭಿಷೇಕ್ ಶರ್ಮಾ ಎಸೆತದಲ್ಲಿ ಶಿಮ್ರಾನ್‌ ಕ್ಲೀನ್‌ ಬೋಲ್ಡ್‌ ಆದರು. ಔಟಾದ ಕೋಪದಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟರ್‌ ತಮ್ಮ ಬ್ಯಾಟ್‌ನಿಂದ ಸ್ಟಂಪ್‌ಗಳಿಗೆ ಬಡಿದಿದ್ದಾರೆ. ಹೀಗಾಗಿ ಅನುಚಿತ ವರ್ತನೆ ತೋರಿದ ಶಿಮ್ರಾನ್ ಹೆಟ್ಮೆಯರ್‌ಗೆ ಬಿಸಿಸಿಐ ಶಿಕ್ಷಿಸಿದೆ.

ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಹೆಟ್ಮೆಯರ್ ಲೆವೆಲ್ 1 ಅಪರಾಧದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಹೀಗಾಗಿ ಪಂದ್ಯದ ಶುಲ್ಕದ 10 ಶೇಕಡದಷ್ಟು ದಂಡ ವಿಧಿಸಲಾಗಿದೆ. “ಮೇ 24ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದ ಸಂದರ್ಭದಲ್ಲಿ, ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಶಿಮ್ರಾನ್ ಹೆಟ್ಮೆಯರ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 10ರಷ್ಟು ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ತಿಳಿಸಿದೆ.

ಎರಡನೇ ಕ್ವಾಲಿಫೈಯರ್‌ ಪಂದ್ಯದ ಮ್ಯಾಚ್ ರೆಫರಿಯಾಗಿದ್ದ ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಈ ನಿರ್ಬಂಧ ವಿಧಿಸಿದ್ದಾರೆ. “ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಹೆಟ್ಮೆಯರ್ ಲೆವೆಲ್ 1 ಅಪರಾಧ ಎಸಗಿದ್ದಾರೆ. ಈ ನಿಯಮ ಉಲ್ಲಂಘನೆಗಾಗಿ ಶಿಕ್ಷೆ ವಿಧಿಸಲಾಗಿದೆ” ಎಂದು ಬಿಸಿಸಿಐ ಹೇಳಿದೆ.

ಕ್ಲೀನ್‌ ಬೋಲ್ಡ್‌ ಆಗಿದ್ದಕ್ಕೆ ಹೆಟ್ಮಾಯರ್‌ ಹತಾಶೆ

ರಾಜಸ್ಥಾನ ತಂಡದ ಚೇಸಿಂಗ್‌ನ 14ನೇ ಓವರ್‌ನಲ್ಲಿ ಇದು ಸಂಭವಿಸಿತು. ಸತತ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜಸ್ಥಾನಕ್ಕೆ, ಶಿಮ್ರಾನ್‌ ಆಸರೆಯಾಗಲು ಬಂದರು. ಆದರೆ, ಎಸ್ಆರ್‌ಎಚ್ ಎಡಗೈ ಸ್ಪಿನ್ನರ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಶಹಬಾಜ್ ಅಹ್ಮದ್ ತಂಡಕ್ಕೆ ಕಂಟಕರಾದರು. ಸತತ ವಿಕೆಟ್‌ ಕಬಳಿಸುವ ಮೂಲಕ ಬ್ಯಾಟರ್‌ಗಳ ಆರ್ಭಟವನ್ನು ನಿಗ್ರಹಿಸುತ್ತಿದ್ದರು. ನಿರ್ಣಾಯಕ ಹಂತದಲ್ಲಿ ಹೆಟ್ಮಾಯರ್‌ ವಿಕೆಟ್‌ ಪಡೆದ ಅಭಿಷೇಕ್‌ ಸಂಭ್ರಮಿಸಿದರು. ಹೀಗಾಗಿ ಔಟಾದ ತಕ್ಷಣವೇ ಆಕ್ರೋಶಗೊಂಡ ಹೆಟ್ಮಾಯರ್‌ ಸ್ಟಂಪ್‌ಗಳಿಗೆ ಬ್ಯಾಟ್‌ನಿಂದ ಬಡಿದು ತಮ್ಮ ಹತಾಶೆ ಹೊರಹಾಕಿದರು.

ಇದನ್ನೂ ಓದಿ | ಡಬ್ಲ್ಯುಟಿಸಿ-ವಿಶ್ವಕಪ್‌ ಬಳಿಕ ಐಪಿಎಲ್‌ ಫೈನಲ್;‌ ನಾಯಕನಾಗಿ ಹ್ಯಾಟ್ರಿಕ್ ಗೆಲುವಿನತ್ತ ಪ್ಯಾಟ್‌ ಕಮಿನ್ಸ್‌

ಪಂದ್ಯದಲ್ಲಿ 10 ಎಸೆತ ಎದುರಿಸಿದ ಅವರು 4 ರನ್ ಮಾತ್ರ ಗಳಿಸಿದರು. ಅಲ್ಪ ಮೊತ್ತಕ್ಕೆ ಔಟಾಗಿ ಪೆವಿಲಿಯನ್‌ಗೆ ಹಿಂತಿರುಗಿದರು. ಈ ವಿಕೆಟ್‌ ಪತನವಾದ ಬಳಿಕ ಧ್ರುವ್ ಜುರೆಲ್ ಅಬ್ಬರಿಸಿ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ ತಂಡದ ಗೆಲುವು ಸಾಧ್ಯವಾಗಲಿಲ್ಲ.

ಫೈನಲ್‌ಗೆ ಎಸ್‌ಆರ್‌ಎಚ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌, ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕ ( 34 ಎಸೆತಗಳಲ್ಲಿ 50 ರನ್), ಟ್ರಾವಿಸ್ ಹೆಡ್ (34) ಮತ್ತು ರಾಹುಲ್ ತ್ರಿಪಾಠಿ (37) ಅವರ ಅಮೂಲ್ಯ ಕೊಡುಗೆಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಚೆಪಾಕ್‌ ಪಿಚ್‌ನಲ್ಲಿ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ರಾಜಸ್ಥಾನ್, ಯಶಸ್ವಿ ಜೈಸ್ವಾಲ್ (42) ಮತ್ತು ಧ್ರುವ್ ಜುರೆಲ್ (ಅಜೇಯ 56) ಆಟದ ಹೊರತಾಗಿಯೂ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಫೈನಲ್‌ ಆಸೆ ಕಮರಿತು. ಅತ್ತ ಭರ್ಜರಿ ಜಯದೊಂದಿಗೆ ಹೈದರಾಬಾದ್‌ ತಂಡವು ಮೂರನೇ ಬಾರಿ ಐಪಿಎಲ್‌ ಫೈನಲ್‌ಗೆ ಲಗ್ಗೆ ಹಾಕಿತು.

ಇದನ್ನೂ ಓದಿ | ಐಪಿಎಲ್​ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್​ vs ಎಸ್​ಆರ್​ಹೆಚ್​ ಫೈನಲ್​ ಎಲ್ಲಿ, ಯಾವಾಗ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner