ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಕನಸಿನಲ್ಲಿ ಅಫ್ಘಾನಿಸ್ತಾನ-ಸೌತ್ ಆಫ್ರಿಕಾ; ಯಾರಿಗೆ ಒಲಿಯಲಿದೆ ಅದೃಷ್ಟ?
ಕನ್ನಡ ಸುದ್ದಿ  /  ಕ್ರಿಕೆಟ್  /  ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಕನಸಿನಲ್ಲಿ ಅಫ್ಘಾನಿಸ್ತಾನ-ಸೌತ್ ಆಫ್ರಿಕಾ; ಯಾರಿಗೆ ಒಲಿಯಲಿದೆ ಅದೃಷ್ಟ?

ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಕನಸಿನಲ್ಲಿ ಅಫ್ಘಾನಿಸ್ತಾನ-ಸೌತ್ ಆಫ್ರಿಕಾ; ಯಾರಿಗೆ ಒಲಿಯಲಿದೆ ಅದೃಷ್ಟ?

South Africa vs Afghanistan: 2024ರ ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ.

ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಕನಸಿನಲ್ಲಿ ಅಫ್ಘಾನಿಸ್ತಾನ-ಸೌತ್ ಆಫ್ರಿಕಾ; ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ?
ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಕನಸಿನಲ್ಲಿ ಅಫ್ಘಾನಿಸ್ತಾನ-ಸೌತ್ ಆಫ್ರಿಕಾ; ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ?

ಟಿ20 ವಿಶ್ವಕಪ್ 2024ರ ಟೂರ್ನಿಯು ಕೊನೆಯ ಹಂತಕ್ಕೆ ತಲುಪಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಸೌತ್ ಆಫ್ರಿಕಾ (South Africa vs Afghanistan) ತಂಡಗಳು ಮುಖಾಮುಖಿ ಆಗುತ್ತಿವೆ. ವೇಳಾಪಟ್ಟಿಯ ಪ್ರಕಾರ ಜೂನ್ 26ರಂದು ಮೊದಲ ಸೆಮಿಫೈನಲ್ ನಡೆಯಲಿದ್ದು, ಭಾರತೀಯ ಕಾಲಮಾನದಂತೆ ಜೂನ್ 27ರ ಬೆಳಿಗ್ಗೆ 6ಕ್ಕೆ ಪಂದ್ಯ ಪ್ರಸಾರವಾಗಲಿದೆ. ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಕ್ರಿಕೆಟ್ ಮೈದಾನ ಈ ಹೈವೋಲ್ಟೇಜ್ ಕದನಕ್ಕೆ ಆತಿಥ್ಯ ವಹಿಸಲಿದೆ.

ಮತ್ತೊಂದು ಸೆಮೀಸ್​ನಲ್ಲಿ ಜೂನ್ 27ರ ರಾತ್ರಿ 8 ಗಂಟೆಗೆ ಇಂಗ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ. ಅಂದರೆ ವೆಸ್ಟ್​ ಇಂಡೀಸ್​​ನಲ್ಲಿ​ ಮಧ್ಯಾಹ್ನ 1 ಗಂಟೆ. ವಿಶ್ವಕಪ್​​ನಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ತಂಡಗಳನ್ನೇ ಮಣಿಸಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ಅಫ್ಘಾನಿಸ್ತಾನ ಚೊಚ್ಚಲ ಐಸಿಸಿ ಫೈನಲ್​ಗೆ ಎಂಟ್ರಿಕೊಡಲು ಸಜ್ಜಾಗಿದೆ. ಮತ್ತೊಂದೆಡೆ ಅಜೇಯವಾಗಿ ಸೆಮಿಫೈನಲ್ ಸೇರಿರುವ ಸೌತ್ ಆಫ್ರಿಕಾ ಕೂಡ ಮೊದಲ ಬಾರಿಗೆ ಫೈನಲ್​ಗೇರಲು ಪಣತೊಟ್ಟಿದೆ.

ಸೌತ್ ಆಫ್ರಿಕಾ ತನ್ನ ಮೇಲಿರುವ ಚೋಕರ್ಸ್ ಪಟ್ಟಿಯನ್ನು ಕಳಚಿ ಮೊದಲ ಐಸಿಸಿ ಟ್ರೋಫಿ ಗೆಲ್ಲಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಸೌತ್ ಆಫ್ರಿಕಾ ತಂಡದಂತೆಯೇ ಆಫ್ಘನ್ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್​​ ವಿಭಾಗದಲ್ಲಿ ಬಲಿಷ್ಠವಾಗಿದೆ. ಹೀಗಾಗಿ ಮೊದಲ ಐಸಿಸಿ ಟ್ರೋಫಿ ಗೆಲ್ಲಲು ಸಜ್ಜಾದ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ರೆಡ್​ ಹಾಟ್ ಫಾರ್ಮ್​ನಲ್ಲಿರುವ ಎರಡೂ ತಂಡಗಳು ಅದೇ ಲಯ ಮುಂದುವರೆಸಲು ಮುಂದಾಗಿವೆ.

ಪ್ರಸಕ್ತ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಸೋಲುವ ಪಂದ್ಯಗಳನ್ನೂ ಗೆದ್ದು ಸೂಪರ್​-8 ಪ್ರವೇಶಿಸಿತ್ತು. ಆಫ್ಘನ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸೂಪರ್​​-8ಕ್ಕೇರಿತ್ತು. ಐಸಿಸಿ ಟೂರ್ನಿಗಳಲ್ಲಿ ಲೀಗ್​​ನಲ್ಲೇ ಹೊರಬಿದ್ದಿದ್ದ ಆಫ್ಘನ್​, ಆಸೀಸ್​ ತಂಡವನ್ನೇ ಹಿಂದಿಕ್ಕಿ ಮೊದಲ ಬಾರಿಗೆ ಸೆಮಿ ಟಿಕೆಟ್ ಪಡೆದಿದೆ. ಚೋಕರ್ಸ್ ಹಣೆಪಟ್ಟಿ ಕಳಚಲು ಸೌತ್ ಆಫ್ರಿಕಾ ಸಜ್ಜಾಗಿದ್ದು, ಚೊಚ್ಚಲ ಐಸಿಸಿ ಪ್ರಶಸ್ತಿ ಗೆಲ್ಲಲು ಯೋಜನೆ ರೂಪಿಸಿದೆ. ಲೀಗ್​​​ ಮತ್ತು ಸೂಪರ್-8 ಹಂತದಲ್ಲಿ ಎರಡು ತಂಡಗಳ ಪ್ರದರ್ಶನ ಹೇಗಿದೆ ಎಂಬುದರ ಒಂದು ನೋಟ ಇಲ್ಲಿದೆ.

ಗುಂಪು ಹಂತದಲ್ಲಿ ಸೌತ್ ಆಫ್ರಿಕಾ ಪ್ರದರ್ಶನ

  • ಶ್ರೀಲಂಕಾ ವಿರುದ್ಧ 6 ವಿಕೆಟ್​ಗಳ ಗೆಲುವು
  • ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್​ಗಳ ಜಯ
  • ಬಾಂಗ್ಲಾದೇಶ ಎದುರು 4 ವಿಕೆಟ್​ಗಳ ಜಯ
  • ನೇಪಾಳ ಎದುರು 1 ರನ್ನಿಂದ ರೋಚಕ ಗೆಲುವು

ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ಪ್ರದರ್ಶನ

  • ಯುಎಸ್​ಎ ವಿರುದ್ಧ 18 ರನ್ ಜಯ
  • ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಗೆಲುವು
  • ವೆಸ್ಟ್ ಇಂಡೀಸ್ ಎದುರು 3 ವಿಕೆಟ್ ಜಯ

ಗುಂಪು ಹಂತದಲ್ಲಿ ಅಫ್ಘಾನಿಸ್ತಾನ ಪ್ರದರ್ಶನ

  • ಉಗಾಂಡ ವಿರುದ್ಧ 125 ರನ್​ಗಳ ಗೆಲುವು
  • ನ್ಯೂಜಿಲೆಂಡ್ ವಿರುದ್ಧ 84 ರನ್​ಗಳ ಗೆಲುವು
  • ಪಪುವಾ ನ್ಯೂಗಿನಿಯಾ ವಿರುದ್ಧ 7 ವಿಕೆಟ್​ಗಳ ಗೆಲುವು
  • ವೆಸ್ಟ್ ಇಂಡೀಸ್ ವಿರುದ್ಧ 104 ರನ್​ಗಳ ಸೋಲು

ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ಪ್ರದರ್ಶನ

  • ಭಾರತ ತಂಡದ ವಿರುದ್ಧ 47 ರನ್​​ಗಳ ಸೋಲು
  • ಆಸ್ಟ್ರೇಲಿಯಾ ಎದುರು 21 ರನ್​ಗಳ ಜಯ
  • ಬಾಂಗ್ಲಾದೇಶ ವಿರುದ್ಧ 8 ರನ್​ಗಳ ಗೆಲುವು

ಉಭಯ ತಂಡಗಳ ಬಲಾಬಲ

ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್​ನಲ್ಲಿ ಕ್ವಿಂಟನ್ ಡಿ ಕಾಕ್-ಡೇವಿಡ್ ಮಿಲ್ಲರ್​ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆದರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರ ಬರುತ್ತಿಲ್ಲ. ಹಾಗೆಯೇ ಬೌಲಿಂಗ್​​ನಲ್ಲಿ ತಬ್ರೈಜ್ ಶಂಸಿ ಮತ್ತು ಆನ್ರಿಚ್ ನೋಕಿಯಾ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಕಗಿಸೋ ರಬಾಡ ಇಬ್ಬರಿಗೂ ಸಾಥ್ ನೀಡುತ್ತಿದ್ದಾರೆ. ಉಳಿದವರು ಸಹ ಮಿಂಚಿದರೆ, ಸೌತ್ ಆಫ್ರಿಕಾ ಆರ್ಭಟಕ್ಕೆ ಆಫ್ಘನ್​ ಕೊಚ್ಚಿಹೋಗುವುದು ಖಚಿತ.

ಮತ್ತೊಂಡೆದೆ ಅಫ್ಘಾನಿಸ್ತಾನ ತಂಡದ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಬ್ಯಾಟಿಂಗ್​​ನಲ್ಲಿ ಬಹುತೇಕ ಆಟಗಾರರು ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಉತ್ತಮ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್​ನಲ್ಲೂ ಆಫ್ಘನ್ ತುಂಬಾ ಬಲಿಷ್ಠವಾಗಿದೆ. ರಶೀದ್ ಖಾನ್, ಫಜಲ್ಹಕ್ ಫಾರೂಕಿ ಮತ್ತು ಗುಲ್ಬದೀನ್ ನೈಬ್ ವಿಕೆಟ್ ಬೇಟೆಯಾಡುತ್ತಿದ್ದಾರೆ. ಇವರೆಲ್ಲರು ಮತ್ತೆ ಮಿಂಚಿದರೆ​ ಆಫ್ರಿಕಾ ಸೆಮೀಸ್​ಗೆ ಪ್ರಯಾಣ ಕೊನೆಗೊಳಿಸಲಿದೆ.

ಆಫ್ರಿಕಾ ವಿರುದ್ಧ ಗೆದ್ದೇ ಇಲ್ಲ ಆಫ್ಘನ್

ಅಫ್ಘಾನಿಸ್ತಾನ ಮತ್ತು ಸೌತ್ ಆಫ್ರಿಕಾ ತಂಡಗಳು ಈವರೆಗೂ ಎರಡು ಬಾರಿ ಮಾತ್ರ ಮುಖಾಮುಖಿಯಾಗಿವೆ. ಎರಡರಲ್ಲೂ ಸೌತ್ ಆಫ್ರಿಕಾವೇ ಗೆದ್ದಿರುವುದು ವಿಶೇಷ. ಹಾಗಾಗಿ ಈ ಬಾರಿಯೂ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಇದರ ನಡುವೆಯೂ ಅಪಾಯಕಾರಿ ಆಫ್ಘನ್​ ಸವಾಲನ್ನು ಸುಲಭವಾಗಿ ಪರಿಗಣಿಸಬಾರದು. ಈಗಾಗಲೇ ಬಲಿಷ್ಠ ತಂಡಗಳನ್ನೇ ಮನೆಗೆ ಕಳುಹಿಸಿದೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

Whats_app_banner