3ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿದ ಸನ್ರೈಸರ್ಸ್, ರಾಜಸ್ಥಾನ್ ಕನಸು ಭಗ್ನ; ಕೆಕೆಆರ್ vs ಎಸ್ಆರ್ಹೆಚ್ ಫೈನಲ್ ಫೈಟ್
SRH vs RR Qualifier 2 Highlights: 17ನೇ ಆವೃತ್ತಿಯ ಐಪಿಎಲ್ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 36 ರನ್ಗಳಿಂದ ಸೋಲಿಸಿದ ಸನ್ರೈಸರ್ಸ್ ಹೈದರಾಬಾದ್ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತು.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಂತರ ಸನ್ರೈಸರ್ಸ್ ಹೈದರಾಬಾದ್ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 2008ರಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು 36 ರನ್ಗಳಿಂದ ಮಣಿಸಿದ ಪ್ಯಾಟ್ ಕಮಿನ್ಸ್ ಪಡೆಯು ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟಿತು. ಬ್ಯಾಟಿಂಗ್ನಲ್ಲಿ ವಿಫಲವಾದರೂ ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಗೆಲುವಿನ ನಗೆ ಬೀರಿತು.
2016ರಲ್ಲಿ ಚಾಂಪಿಯನ್ ಮತ್ತು 2018ರಲ್ಲಿ ರನ್ನರ್ಅಪ್ ಆಗಿದ್ದ ಆರೆಂಜ್ ಆರ್ಮಿ, 6 ವರ್ಷಗಳ ನಂತರ ಎರಡನೇ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ಮತ್ತೊಂದೆಡೆ ಸೋತ ಆರ್ಆರ್, ಎರಡನೇ ಟ್ರೋಫಿಕನಸು ಭಗ್ನಗೊಂಡಿತು. ಅಲ್ಲದೆ, ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದರೊಂದಿಗೆ 2008 ಮತ್ತು 2022ರ ನಂತರ ಮೂರನೇ ಬಾರಿಗೆ ಪ್ರಶಸ್ತಿಗೇರಲು ವಿಫಲವಾಯಿತು.
ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಸನ್ರೈಸರ್ಸ್ ನೀರಸ ಬ್ಯಾಟಿಂಗ್ ಮಾಡಿತು. ಆರ್ಆರ್ ಕಟ್ಟುನಿಟ್ಟಾದ ಬೌಲಿಂಗ್ ದಾಳಿಗೆ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲಷ್ಟೇ ಸಾಧ್ಯವಾಯಿತು. ಟ್ರೆಂಟ್ ಬೋಲ್ಟ್-ಆವೇಶ್ ಖಾನ್ ತಲಾ 3 ವಿಕೆಟ್ ಪಡೆದು ಮಿಂಚಿದ್ದರ ನಡುವೆ ಹೆನ್ರಿಚ್ ಕ್ಲಾಸೆನ್ ಅರ್ಧಶತಕ (50) ಸಿಡಿಸಿದರು. ಎಸ್ಆರ್ಹೆಚ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸಂಜು ಪಡೆ, ಬ್ಯಾಟಿಂಗ್ನಲ್ಲಿ ರನ್ ಗಳಿಸಲು ವಿಫಲವಾಯಿತು. ಸ್ಪಿನ್ ಟ್ರ್ಯಾಕ್ನಲ್ಲಿ ಎಸ್ಆರ್ಹೆಚ್ ಸ್ಪಿನ್ನರ್ಗಳ ಎದುರು ಆರ್ಆರ್ ಬ್ಯಾಟರ್ಗಳು ಮಂಕಾದರು. ಶಹಬಾಜ್ ಅಹ್ಮದ್ ಮತ್ತು ಅಭಿಷೇಕ್ ಶರ್ಮಾ ದಾಳಿಗೆ ನಲುಗಿದ ಆರ್ಆರ್, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ139 ರನ್ ಗಳಿಸಿತು. ಧ್ರುವ್ ಜುರೆಲ್ ಅರ್ಧಶತಕ ಸಿಡಿಸಿ ಪ್ರತಿರೋಧ ತೋರಿದರೂ ಗೆಲುವು ದಕ್ಕಲಿಲ್ಲ.
ಫೈನಲ್ನಲ್ಲಿ ಕೆಕೆಆರ್ vs ಎಸ್ಆರ್ಹೆಚ್ ಮುಖಾಮುಖಿ
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನೇರವಾಗಿ ಫೈನಲ್ ಪ್ರವೇಶಿಸಿತು. ಇದೀಗ ಕ್ವಾಲಿಫೈಯರ್ ಪಂದ್ಯದಲ್ಲಿ ದಿಗ್ವಿಜಯ ಸಾಧಿಸಿದ ಪ್ಯಾಟ್ ಕಮಿನ್ಸ್ ಪಡೆ 3ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಮೇ 26ರಂದು ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಸಂಜೆ 7.30ಕ್ಕೆ ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ಪ್ರಶಸ್ತಿಗೆ ಹೋರಾಟ ನಡೆಸಲಿವೆ. ಶ್ರೇಯಸ್ ಅಯ್ಯರ್ ಪಡೆ ತಮ್ಮ 3ನೇ ಹಾಗೂ ಕಮಿನ್ಸ್ ಪಡೆ ತಮ್ಮ 2ನೇ ಪ್ರಶಸ್ತಿಯೊಂದಿಗೆ ಸಂಭ್ರಮಿಸಲು ಕಾಯುತ್ತಿದೆ.
ಸ್ಪಿನ್ನರ್ಗಳ ದಾಳಿಗೆ ನಲುಗಿದ ಆರ್ಅರ್
ಈ ಗುರಿ ಬೆನ್ನಟ್ಟಿದ ಆರ್ಆರ್ ಉತ್ತಮ ಆರಂಭ ಪಡೆಯಲಿಲ್ಲ. ಟಾಮ್ ಕೊಹ್ಲರ್-ಕ್ಯಾಡ್ಮೋರ್ (10) ತನ್ನ ಮೂರನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಇದರ ನಡುವೆಯೂ ಯಶಸ್ವಿ ಜೈಸ್ವಾಲ್, ಮಿಂಚಿದರು. ಆದರೆ ಅರ್ಧಶತಕದ ಅಂಚಿನಲ್ಲಿ ಎಡವಿದರು. ರನ್ ಸೋರಿಕೆಯಾಗುತ್ತಿದ್ದ ಅವಧಿಯಲ್ಲಿ ಸ್ಪಿನ್ನರ್ಗಳನ್ನು ಕಣಕ್ಕಿಳಿಸಿದ ಪ್ಯಾಟ್ ಕಮಿನ್ಸ್, ಬ್ಯಾಟ್ ಟು ಬ್ಯಾಕ್ 5 ವಿಕೆಟ್ ಪಡೆದರು. ಜೈಸ್ವಾಲ್ (42), ರಿಯಾನ್ ಪರಾಗ್ಗೆ (6), ಅಶ್ವಿನ್ಗೆ (0) ಶಹಬಾಜ್ ಗೇಟ್ ಪಾಸ್ ಕೊಟ್ಟರು.
ಮತ್ತೊಬ್ಬ ತಾತ್ಕಲಿಕ ಸ್ಪಿನ್ನರ್ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ಗೆ (10) ಮತ್ತು ಶಿಮ್ರಾನ್ ಹೆಟ್ಮೆಯರ್ (4) ಅವರನ್ನು ಆಘಾತ ನೀಡಿದರು. ಇದರೊಂದಿಗೆ ಆರ್ಆರ್ ಸಂಕಷ್ಟಕ್ಕೆ ಸಿಲುಕಿತು. ಮತ್ತೆ ಧ್ರುವ್ ಜುರೆಲ್ ಪ್ರತಿರೋಧ ತೋರಿದರೂ ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ ತಂಡದ ಹಿನ್ನಡೆಗೆ ಕಾರಣವಾಯಿತು. ಶಹಬಾಜ್ 3, ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದು ತಂಡಕ್ಕೆ ತಿರುವು ಕೊಟ್ಟರು.
ಎಸ್ಆರ್ಹೆಚ್ ನೀರಸ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಎಸ್ಆರ್ಹೆಚ್, ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಟೂರ್ನಿಯುದ್ದಕ್ಕೂ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ (12) ಆರ್ಆರ್ ಬೌಲರ್ಗಳ ಎದುರು ಪರದಾಡಿದರು. ಏಡನ್ ಮಾರ್ಕ್ರಮ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ರಾಹುಲ್ ತ್ರಿಪಾಠಿ ಕೆಲ ಹೊತ್ತು ಅಬ್ಬರಿಸಿ (37) ಔಟಾದರು. ಟ್ರೆಂಟ್ ಬೋಲ್ಟ್ ಈ ಮೂವರನ್ನು ಹೊರದಬ್ಬಿದರು. ಬಳಿಕ ತಂಡಕ್ಕೆ ಆಸರೆಯಾಗುತ್ತಿದ್ದ ಟ್ರಾವಿಸ್ ಹೆಡ್ (34), ಸಂದೀಶ್ ಶರ್ಮಾಗೆ ಬಲಿಯಾದರು.
ಆ ಬಳಿಕ ಹೆನ್ರಿಚ್ ಕ್ಲಾಸೆನ್ ತಂಡಕ್ಕೆ ಆಸರೆಯಾದರು. ಸತತ ವಿಕೆಟ್ಗಳ ನಡುವೆಯೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ ಏರಿಸಿ ಅರ್ಧಶತಕವನ್ನೂ ಪೂರೈಸಿದರು. ಆದರೆ ನಿತೀಶ್ ರೆಡ್ಡಿ (5), ಅಬ್ದುಲ್ ಸಮದ್ (0), ಶಹಬಾಜ್ ಅಹ್ಮದ್ (18) ಯಾರೂ ಉತ್ತಮ ಸಾಥ್ ಕೊಡಲಿಲ್ಲ. ಆರಂಭದಲ್ಲಿ ಬೋಲ್ಟ್ ಮಿಂಚಿದರೆ, ಕೊನೆಯಲ್ಲಿ ಆವೇಶ್ ಖಾನ್ 3 ವಿಕೆಟ್ ಪಡೆದು ಬ್ಯಾಟರ್ಗಳ ಆರ್ಭಟಕ್ಕೆ ಬ್ರೇಕ್ ಹಾಕಿದರು. ಪ್ಯಾಟ್ ಕಮಿನ್ಸ್ ಮತ್ತು ಜಯದೇವ್ ಉನಾದ್ಕತ್ ತಲಾ 5 ರನ್ ಗಳಿಸಿ ಅಜೇಯರಾದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)