ಐಪಿಎಲ್ 2024: ಸೂರ್ಯಕುಮಾರ್, ಶಮಿ, ಮಧುಶಂಕ; ಇಲ್ಲಿದೆ ತಂಡವಾರು ಗಾಯಗೊಂಡ ಆಟಗಾರರ ಪಟ್ಟಿ, ಕಂಬ್ಯಾಕ್ ದಿನಾಂಕ
IPL 2024: ಗಾಯದಿಂದಾಗಿ ಐಪಿಎಲ್ 2024ರಿಂದ ಹೊರಗುಳಿಯಲಿರುವ ಆಟಗಾರರ ಪಟ್ಟಿ ಮತ್ತು ತಂಡಕ್ಕೆ ಮರಳಬಹುದಾದ ಸಂಭಾವ್ಯ ದಿನಾಂಕ ಇಲ್ಲಿದೆ. ಕೆಲವು ಫ್ರಾಂಚೈಸಿಗಳು ಎರಡೆರಡು ಬಲಿಷ್ಠ ಆಟಗಾರರ ಸೇವೆಯನ್ನು ಕಳೆದುಕೊಳ್ಳಲಿದೆ.
ಬಹುನಿರೀಕ್ಷಿತ ಐಪಿಎಲ್ ಪಂದ್ಯಾವಳಿಯ ಆರಂಭಕ್ಕೆ ಇನ್ನೇನು ಒಂದು ವಾರ ಕೂಡಾ ಉಳಿದಿಲ್ಲ. ಮಾರ್ಚ್ 22ರಂದು ಅದ್ಧೂರಿ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ರೋಚಕ ಹಣಾಹಣಿಗೆ ಸಜ್ಜಾಗುತ್ತಿದೆ. ಆದರೆ, ಪಂದ್ಯಾವಳಿಯ ಆರಂಭಕ್ಕೂ ಮುನ್ನ ಹಲವು ತಂಡಗಳಿಗೆ ಗಾಯದ ಹೊಡೆತ ಬಿದ್ದಿದೆ. ಬಲಿಷ್ಠ ಆಟಗಾರರ ಸೇವೆಯನ್ನೇ ಹಲವು ತಂಡಗಳು ಕಳೆದುಕೊಳ್ಳುತ್ತಿವೆ. ಇವರಲ್ಲಿ ಹೆಚ್ಚಿನ ಆಟಗಾರರು ಪಂದ್ಯಾವಳಿಯುದ್ದಕ್ಕೂ ಮರಳುವ ಸಾಧ್ಯತೆ ಇಲ್ಲ. ಉಳಿದಂತೆ ಕೆಲವು ಆಟಗಾರರು ದ್ವಿತಿಯಾರ್ಧದ ವೇಳೆ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.
ತಂಡವಾರು ಗಾಯಗೊಂಡ ಆಟಗಾರರು ಹಾಗೂ ಅವರು ಮತ್ತೆ ತಂಡ ಸೇರಿಕೊಳ್ಳಬಹುದಾದ ಸಂಭಾವ್ಯ ಸಮಯ ಹೀಗಿದೆ.
ಮೊಹಮ್ಮದ್ ಶಮಿ (ಗುಜರಾತ್ ಟೈಟಾನ್ಸ್)
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ, ಇತ್ತೀಚೆಗೆ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಪರ 17 ಪಂದ್ಯಗಳಲ್ಲಿ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದ ಶಮಿ, ಈ ಬಾರಿ ತಂಡದಿಂದ ಹೊರಗುಳಿಯಲಿದ್ದಾರೆ. ಅವರ ಬದಲಿ ಆಟಗಾರನನ್ನು ತಂಡವು ಇನ್ನೂ ಘೋಷಿಸಿಲ್ಲ.
ರಾಬಿನ್ ಮಿನ್ಜ್ (ಗುಜರಾತ್ ಟೈಟಾನ್ಸ್)
3.6 ಕೋಟಿ ರೂಪಾಯಿಗೆ ಗುಜರಾತ್ ಫ್ರಾಂಚೈಸಿ ಪಾಲಾದ ರಾಬಿನ್ ಮಿಂಜ್, ಐಪಿಎಲ್ 2024ರ ಸಂಪೂರ್ಣ ಅವಧಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಮುಖ್ಯ ಕೋಚ್ ಆಶಿಶ್ ನೆಹ್ರಾ ತಿಳಿಸಿದ್ದಾರೆ. ಮಿನ್ಜ್ ಕಳೆದ ತಿಂಗಳು ರಾಂಚಿಯಲ್ಲಿ ಸಣ್ಣ ಬೈಕ್ ಅಪಘಾತಕ್ಕೆ ಒಳಗಾಗಿದ್ದರು. ಹೀಗಾಗಿ ಜಾರ್ಖಂಡ್ ಮೂಲದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಅನ್ನು ಕೂಡಾ ಟೈಟಾನ್ಸ್ ಕಳೆದುಕೊಳ್ಳಲಿದೆ.
ಇದನ್ನೂ ಓದಿ | ಆರ್‌ಸಿಬಿ ಅಭಿಮಾನಿಗಳಿಗೆ ಶುಭಸುದ್ದಿ; ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್, ಬಿಳಿ ಗಡ್ಡ ಕಂಡು ಅಚ್ಚರಿ
ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್)
ಕಳೆದ ತಿಂಗಳು ಎಡ ಪ್ರಾಕ್ಸಿಮಲ್ ಕ್ವಾಡ್ರಿಸೆಪ್ಸ್ ಸ್ನಾಯುವಿನ ಶಸ್ತ್ರಚಿಕಿತ್ಸೆಗೆ ಒಳಗಾದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ, ಸಂಪೂರ್ಣ ಐಪಿಎಲ್ 2024 ಆವೃತ್ತಿಯಿಂದ ಹೊರಗುಳಿದಿದ್ದಾರೆ. ಕಳೆದ ಋತುವಿನಲ್ಲಿ ರಾಯಲ್ಸ್ ಪರ 17 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದ ಪ್ರಸಿದ್ಧ್, ಉತ್ತಮ ಪ್ರದರ್ಶನ ನೀಡಿದ್ದರು.
ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್)
ವಿಶ್ವದ ಅಗ್ರ ಶ್ರೇಯಾಂಕಿತ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಕಳೆದ ಡಿಸೆಂಬರ್‌ನಲ್ಲಿ ಗಾಯಕ್ಕೊಳಗಾದರು. ಅವರು ಇನ್ನೂ ಚೇತರಿಸಿಕೊಳ್ಳುತ್ತಿರುವುದರಿಂದ ಐಪಿಎಲ್ ಕಂಬ್ಯಾಕ್ ಕುರಿತು ಅವರಿನ್ನೂ ತಿಳಿಸಿಲ್ಲ. ದ್ವಿತಿಯಾರ್ಧಕ್ಕೆ ಲಭ್ಯವಾಗುವ ಕುರಿತು ಖಚಿತ ಮಾಹಿತಿ ಇಲ್ಲ.
ದಿಲ್ಶಾನ್ ಮಧುಶಂಕಾ (ಮುಂಬೈ ಇಂಡಿಯನ್ಸ್)
2023ರ ಏಕದಿನ ವಿಶ್ವಕಪ್‌ನಲ್ಲಿ ಲಂಕಾ ಪರ ಅದ್ಭುತ ಪ್ರದರ್ಶನ ನೀಡಿ ಮುಂಬೈ ತಂಡಕ್ಕೆ ಸೇರ್ಪಡೆಯಾದ ಶ್ರೀಲಂಕಾ ವೇಗಿ ದಿಲ್ಶಾನ್ ಮಧುಶಂಕಾ, ಬಾಂಗ್ಲಾದೇಶ ಪ್ರವಾಸದ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಐಪಿಎಲ್ 2024 ರ ಆರಂಭದಿಂದ ಹೊರಗುಳಿಯಲಿದ್ದಾರೆ.
ಲುಂಗಿ ಎನ್ಗಿಡಿ (ಡೆಲ್ಲಿ ಕ್ಯಾಪಿಟಲ್ಸ್)
ಡೆಲ್ಲಿ ಫ್ರಾಂಚೈಸಿಯು ಲುಂಗಿ ಅವರನ್ನು ಹರಾಜಿಗೂ ಮುನ್ನವೇ ರಿಟೈನ್ ಮಾಡಿಕೊಂಡಿತ್ತು. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಈ ವರ್ಷದ ಆರಂಭದಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಪಾದದ ಗಾಯಕ್ಕೊಳಗಾದರು. ಸದ್ಯ ಚೇತರಿಸಿಕೊಳ್ಳದ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಕ್ ಫ್ರೇಸರ್ ಮೆಕ್ಗುರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಡೆವೊನ್ ಕಾನ್ವೇ (ಚೆನ್ನೈ ಸೂಪರ್ ಕಿಂಗ್ಸ್)
ಹೆಬ್ಬೆರಳಿನ ಶಸ್ತ್ರಚಿಕಿತ್ಸೆಯಿಂದಾಗಿ ಕನಿಷ್ಠ ಎಂಟು ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಬಿದ್ದಿರುವ ನ್ಯೂಜಿಲ್ಯಾಡ್ ಆರಂಭಿಕ ಆಟಗಾರ ಕಾನ್ವೆ, ಐಪಿಎಲ್ 2024ರ ಮೊದಲ ಹಂತದಿಂದ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಟಿ20 ಪಂದ್ಯದ ಸಮಯದಲ್ಲಿ ಅವರು ಗಾಯಗೊಂಡರು. ಕಳೆದ ಋತುವಿನಲ್ಲಿ ಸಿಎಸ್‌ಕೆ ಪರ ಇನ್ನಿಂಗ್ಸ್ ಆರಂಭಿಸಿದ್ದ ಕಾನ್ವೇ, 140ರ ಸ್ಟ್ರೈಕ್ ರೇಟ್‌ನಲ್ಲಿ 672 ರನ್ ಗಳಿಸಿದ್ದರು.
ಮಥೀಶಾ ಪತಿರಾನಾ (ಚೆನ್ನೈ ಸೂಪರ್ ಕಿಂಗ್ಸ್)
ಸಿಎಸ್‌ಕೆ ತಂಡವು ಇಬ್ಬರು ಆಟಗಾರರ ಸೇವೆ ಕಳೆದುಕೊಂಡಿದೆ. ಕಳೆದ ಋತುವಿನಲ್ಲಿ ಸಿಎಸ್‌ಕೆ ಪರ 8.01 ಎಕಾನಮಿ ರೇಟ್‌ನಲ್ಲಿ ಬೌಲಿಂಗ್ ಮಾಡಿ 19 ವಿಕೆಟ್ ಪಡೆದಿದ್ದ ಪತಿರಾನಾ ಟೂರ್ನಿಯ ಮೊದಲಾರ್ಧದಲ್ಲಿ ಆಡಲ್ಲ ಎಂದು ವರದಿಯಾಗಿದೆ. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಶ್ರೀಲಂಕಾದ ವೇಗಿ ಗಾಯಕ್ಕೆ ಒಳಗಾದರು.