ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ ಅನ್ಯಾಯ; ಏಷ್ಯಾಕಪ್​​ಗೆ ಯಾರಿಗೆಲ್ಲಾ ಸಿಕ್ಕಿಲ್ಲ ಅವಕಾಶ?
ಕನ್ನಡ ಸುದ್ದಿ  /  ಕ್ರಿಕೆಟ್  /  ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ ಅನ್ಯಾಯ; ಏಷ್ಯಾಕಪ್​​ಗೆ ಯಾರಿಗೆಲ್ಲಾ ಸಿಕ್ಕಿಲ್ಲ ಅವಕಾಶ?

ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ ಅನ್ಯಾಯ; ಏಷ್ಯಾಕಪ್​​ಗೆ ಯಾರಿಗೆಲ್ಲಾ ಸಿಕ್ಕಿಲ್ಲ ಅವಕಾಶ?

ಏಷ್ಯಾಕಪ್ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಕೆಲವರಿಗೆ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿದ್ದರೆ, ಇನ್ನೂ ಆಯ್ಕೆಯ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಆಟಗಾರರಿಗೆ ನಿರಾಸೆಯಾಗಿದೆ. ಅಂತಹ ಆಟಗಾರರು ಯಾರು?

ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ ಅನ್ಯಾಯ; ಏಷ್ಯಾಕಪ್​ನಲ್ಲಿ ಯಾರಿಗೆಲ್ಲಾ ಸಿಕ್ಕಿಲ್ಲ ಅವಕಾಶ.
ಆಯ್ಕೆಯ ನಿರೀಕ್ಷೆಯಲ್ಲಿದ್ದವರಿಗೆ ಅನ್ಯಾಯ; ಏಷ್ಯಾಕಪ್​ನಲ್ಲಿ ಯಾರಿಗೆಲ್ಲಾ ಸಿಕ್ಕಿಲ್ಲ ಅವಕಾಶ.

ಆಗಸ್ಟ್​ 30ರಿಂದ ಶುರುವಾಗುವ ಏಕದಿನ ಕ್ರಿಕೆಟ್​​ ಮಾದರಿಯ ಏಷ್ಯಾಕಪ್ ಟೂರ್ನಿಗೆ (Asia Cup 2023) ಬಲಿಷ್ಠ ಭಾರತ ತಂಡವು (Team India) ಪ್ರಕಟವಾಗಿದೆ. 17 ಸದಸ್ಯರ ಈ ತಂಡವನ್ನು ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ. ನಿರೀಕ್ಷೆಯಂತೆ ಗಾಯದಿಂದ ಚೇತರಿಸಿಕೊಂಡಿದ್ದ ಕೆಎಲ್​ ರಾಹುಲ್ (KL Rahul) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಸ್​ಪ್ರಿತ್ ಬೂಮ್ರಾ (Jasprit Bumrah) ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಿದೆ. ಆದರೆ ಕೆಲ ಆಟಗಾರರಿಗೆ ಅನ್ಯಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಂತಹ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

ತಿಲಕ್ ಅಚ್ಚರಿ ಆಯ್ಕೆ, ಸಂಜುಗಿಲ್ಲ ಅವಕಾಶ

ಯಾರೂ ಊಹಿಸದ ರೀತಿ ತಂಡದಲ್ಲಿ ಅವಕಾಶ ಪಡೆದಿರುವುದು ಅಂದರೆ ಯುವ ಎಡಗೈ ಆಟಗಾರ ತಿಲಕ್ ವರ್ಮಾ (Tilak Varma). ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಲು ಒಬ್ಬ ಎಡಗೈ ಆಟಗಾರ ಬೇಕು ಎಂದು ಚರ್ಚೆ ನಡೆದಿತ್ತು. ಆದರೆ, ಬಿಸಿಸಿಐ ವಲಯದಲ್ಲಿ ಈ ಬಗ್ಗೆ ಚರ್ಚೆ ನಡೆದಿರಲಿಲ್ಲ. ವೆಸ್ಟ್​ ಇಂಡೀಸ್ ಸರಣಿಯಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ತಿಲಕ್ ವರ್ಮಾ ಆಡಿರುವುದು 7 ಟಿ20 ಮಾತ್ರ.

ಮತ್ತೊಂದೆಡೆ ಆಯ್ಕೆಯ ನಿರೀಕ್ಷೆಯಲ್ಲಿದ್ದ ಸಂಜು ಸ್ಯಾಮ್ಸನ್ (Sanju Samson) ಅವರಿಗೆ ಅವಕಾಶ ಸಿಗುತ್ತದೆ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆಗಿದ್ದೇ ಬೇರೆ. ಪ್ರಮುಖ ತಂಡದಲ್ಲಿ ಅವಕಾಶ ನೀಡದೆ, ಮೀಸಲು ಆಟಗಾರನ ಸ್ಥಾನಕ್ಕೆ ತಳ್ಳಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಏಕದಿನದಲ್ಲಿ ಆಡಿರುವುದು ಕಡಿಮೆ ಪಂದ್ಯಗಳೇ ಆದರೂ ಅದ್ಭುತ ಅಂಕಿ-ಅಂಶ ಹೊಂದಿದ್ದಾರೆ. ಆದರೂ ಅವಕಾಶ ನೀಡದೆ ತಿಲಕ್​ಗೆ ಮಣೆ ಹಾಕಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಸೂರ್ಯಕುಮಾರ್ ಫಾರ್ಮ್​ನಲ್ಲಿ ಇಲ್ಲದಿದ್ದರೂ, ಅವರಿಗೆ ಅವಕಾಶ ಕೊಟ್ಟಿರುವುದು ಸಂಜು ಸ್ಯಾಮ್ಸನ್ ಅಸಮಾಧಾನಕ್ಕೆ ಕಾರಣವಾಗಿದೆ.

ಶಿಖರ್​ ಧವನ್

ಶಿಖರ್​ ಧವನ್ (Shikhar Dhawan)​ ಆರಂಭಿಕರಾಗಿ ಟೀಮ್​ ಇಂಡಿಯಾ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್​​ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಿದ ಧವನ್ ಅವರನ್ನು ಏಷ್ಯಾಕಪ್ ಟೂರ್ನಿಗೆ ಮೊದಲಿಂದಲೂ​​, ಆಯ್ಕೆಗೆ ಪರಿಗಣಿಸಲೇ ಇರಲಿಲ್ಲ. ಯುವ ಆಟಗಾರರ ಆರ್ಭಟದಿಂದ, ಕಳಪೆ ಫಾರ್ಮ್​ ಸಮಸ್ಯೆಯಿಂದ ತಂಡದಲ್ಲಿ ಸ್ಥಾನ ಕಳೆದುಕೊಂಡ ಧವನ್, ಏಕದಿನ ಕ್ರಿಕೆಟ್​ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ.

167 ಏಕದಿನ ಪಂದ್ಯಗಳನ್ನಾಡಿರುವ ಧವನ್, 44.11ರ ಬ್ಯಾಟಿಂಗ್ ಸರಾಸರಿಯಲ್ಲಿ 17 ಶತಕ, 39 ಅರ್ಧಶತಕಗಳ ಸಹಾಯದಿಂದ 6793 ರನ್ ಗಳಿಸಿದ್ದಾರೆ. ಅಪಾರ ಅನುಭವ ಹೊಂದಿರುವ ಧವನ್​ಗೆ ಮಹತ್ವದ ಟೂರ್ನಿಗೆ ಅವಕಾಶ ನೀಡಬೇಕಿತ್ತು. ಧವನ್​ಗೆ ಯಾಕೆ ಚಾನ್ಸ್​ ಕೊಟ್ಟಿಲ್ಲ ಎಂದರೆ ಅವರ ಬ್ಯಾಟಿಂಗ್​​ನಲ್ಲಿ ಹಳೆಯ ಖದರ್ ಇಲ್ಲ. ಶುಭ್ಮನ್ ಗಿಲ್ ಆರಂಭಿಕರಾಗಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಹಾಗಾಗಿ ಅವಕಾಶ ಪಡೆಯಲು ವಿಫಲರಾದರು.

ಯುಜ್ವೇಂದ್ರ ಚಹಲ್

ತಮ್ಮ ಸ್ಪಿನ್ ಮೋಡಿಯಿಂದಲೇ ಎದುರಾಳಿ ಬ್ಯಾಟರ್​​ಗಳನ್ನು ಮಂತ್ರಮುಗ್ಧಗೊಳಿಸುವ ಯುಜ್ವೇಂದ್ರ ಚಹಲ್ (Yuzvendra Chahal) ಈಗ ಏಷ್ಯಾಕಪ್ ಟೂರ್ನಿಗೆ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಹತ್ವದ ಟೂರ್ನಿಗಳಲ್ಲಿ ಅವಿಸ್ಮರಣೀಯ ಗೆಲುವು ತಂದುಕೊಟ್ಟ, ಒತ್ತಡದ ಸಂದರ್ಭದಲ್ಲಿ ಪಂದ್ಯಗಳಿಗೆ ತಿರುವು ಕೊಟ್ಟ ಸ್ಪಿನ್ ಮಾಂತ್ರಿಕನಿಗೆ ಅವಕಾಶ ನೀಡಬೇಕಿತ್ತು ಎನ್ನುತ್ತಿದ್ದಾರೆ.

ಚಹಲ್ ಆಡಿರುವುದು ಕೇವಲ 72 ಏಕದಿನ ಪಂದ್ಯಗಳೇ ಆದರೂ ವಿಕೆಟ್​ ಪಡೆದಿರುವುದು 121. ಪ್ರತಿ ಓವರ್​ಗೆ 5.27ರಂತೆ ರನ್ ಬಿಟ್ಟುಕೊಡುವ ಚಹಲ್​, ಒಬ್ಬ ಚಾಣಾಕ್ಷ ಸ್ಪಿನ್ನರ್ ಎನಿಸಿದ್ದರು. ತಂಡಕ್ಕೆ ಇವರ ಅಗತ್ಯ ಇತ್ತು ಎನಿಸುವುದರಲ್ಲಿ ಸಂದೇಹವೇ ಇಲ್ಲ. ಚಹಲ್​ ಜಾಗದಲ್ಲಿ ಅಕ್ಷರ್​ ಪಟೇಲ್​ ಅವಕಾಶ ಪಡೆದಿದ್ದಾರೆ. ಆದರೆ ಚಹಲ್​ಗೆ ಮಣೆ ಹಾಕದಿರಲು ಕಾರಣ ಏನೆಂದರೆ ಅಕ್ಷರ್​ ಪಟೇಲ್​ ಬ್ಯಾಟಿಂಗ್​ ಕೂಡ ನಡೆಸುತ್ತಾರೆ ಎಂಬುದಕ್ಕೆ.

ಭುವನೇಶ್ಬರ್ ಕುಮಾರ್​

ಸ್ವಿಂಗ್​ ಕಿಂಗ್​ ಎಂದೇ ಹೆಸರು ಪಡೆದಿರುವ ವೇಗಿ ಭುವನೇಶ್ವರ್​ ಕುಮಾರ್ (Bhuvneshwar Kumar) ಕೂಡ ಕಡೆಗಣನೆಗೆ ಒಳಗಾಗಿದ್ದಾರೆ. ಮೊದಲ ಓವರ್​​ನಲ್ಲಿ ವಿಕೆಟ್​​ ಉರುಳಿಸಿ ತಂಡಕ್ಕೆ ಮುನ್ನಡೆ ತಂದುಕೊಡುತ್ತಿದ್ದ ಈ ಸ್ವಿಂಗ್ ಮಾಸ್ಟರ್​ ಬೌಲಿಂಗ್​ ಎದುರಿಸುವುದು ಅಷ್ಟು ಸುಲಭವಲ್ಲ. ಆದರೆ, ಇತ್ತೀಚೆಗೆ ಅವರನ್ನು ಏಕದಿನ ಕ್ರಿಕೆಟ್​​ಗೆ ಆಯ್ಕೆ ಮಾಡಲಾಗುತ್ತಿಲ್ಲ.

ಭುವನೇಶ್ವರ್ ಕೊನೆಯದಾಗಿ ಕಳೆದ ವರ್ಷ ಜನವರಿಯಲ್ಲಿ ದಕ್ಷಿಣ ಪ್ರವಾಸದಲ್ಲಿ ಏಕದಿನ ಪಂದ್ಯವನ್ನಾಡಿದ್ದಾರೆ. ಜೊತೆಗೆ ಬೂಮ್ರಾ, ಶಮಿ ಜೊತೆಗೆ ಭುವಿ ಕಾಂಬಿನೇಷನ್ ಅದ್ಭುತವಾಗಿತ್ತು. ಭುವಿ ಈವರೆಗೂ 121 ಏಕದಿನಗಳಲ್ಲಿ 141 ವಿಕೆಟ್ ಬೇಟೆಯಾಡಿದ್ದಾರೆ. ಅವರ ಬೌಲಿಂಗ್ ಎಕಾನಮಿ ಕೇವಲ 5.08. ಪ್ರಸಿದ್ಧ್​ ಕೃಷ್ಣ ಬದಲಿಗೆ ಭುವಿಗೆ ಅವಕಾಶ ನೀಡಬೇಕಿತ್ತು ಎಂಬುದು ಕೆಲವರ ವಾದ.

ಆರ್​ ಅಶ್ವಿನ್​ಗೂ ಅವಕಾಶ ನೀಡಬಹುದಿತ್ತು?

ಭಾರತದ ಸ್ಪಿನ್​ ಮಾಸ್ಟರ್​​ ರವಿಚಂದ್ರನ್ ಅಶ್ವಿನ್​ (Ravichandran Ashwin), ಈಗ ಟೆಸ್ಟ್​ ಕ್ರಿಕೆಟ್​​ಗಷ್ಟೇ ಸೀಮಿತಗೊಂಡಿದ್ದಾರೆ. ಆದರೆ, ಸೀಮಿತ ಓವರ್​​ಗಳಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್​ ಹೊಂದಿದ್ದಾರೆ. ಇದೇ ಕಾರಣಕ್ಕೆ ಕಳೆದ ವರ್ಷ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಟೆಸ್ಟ್ ಕ್ರಿಕೆಟ್​​​​​ನಲ್ಲಿ ವಿಕೆಟ್​ ಬೇಟೆಯಾಡುತ್ತಾ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಅಶ್ವಿನ್ ಈಗ ಏಕದಿನ ಕ್ರಿಕೆಟ್​ನಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ಮಾತಿತ್ತು. 113 ಏಕದಿನ ಪಂದ್ಯಗನ್ನಾಡಿರುವ ಅಶ್ವಿನ್, 151 ವಿಕೆಟ್​ ಪಡೆದಿದ್ದಾರೆ. ಮಧ್ಯಮ ಓವರ್​ಗಳಲ್ಲಿ ರನ್​ ನಿಯಂತ್ರಣದ ಜೊತೆಗೆ ತಂಡಕ್ಕೆ ಮುನ್ನಡೆ ತಂದುಕೊಡುತ್ತಿದ್ದರು.

ಉಮೇಶ್​ ಯಾದವ್

ಟೆಸ್ಟ್​​​ ಕ್ರಿಕೆಟ್​ಗೆ ಸೀಮಿತವಾಗಿರುವ ಉಮೇಶ್​ ಯಾದವ್ (Umesh Yadav)​, ಆಗಾಗ್ಗೆ ಏಕದಿನ ಕ್ರಿಕೆಟ್​​​ನಲ್ಲೂ ಅವಕಾಶ ಪಡೆಯಲಿದ್ದಾರೆ ಎಂಬ ಚರ್ಚೆ ಇತ್ತು. ಆದರೆ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. 75 ಏಕದಿನ ಪಂದ್ಯಗಳನ್ನಾಡಿರುವ ಉಮೇಶ್​ 101 ವಿಕೆಟ್​ ಪಡೆದಿದ್ದಾರೆ.

ಅರ್ಷ್​​ದೀಪ್​​, ಉಮ್ರಾನ್ ಮಲಿಕ್​ಗೂ ಇಲ್ಲ ಅವಕಾಶ

ಅನುಭವಿ ಆಟಗಾರರನ್ನು ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕೆಂಬುದು ಬಿಸಿಸಿಐ ಉದ್ದೇಶವಾಗಿದೆ. ಇದೀಗ ಡೆತ್​ ಓವರ್​ಗಳಲ್ಲಿ ಮ್ಯಾಜಿಕ್ ಮಾಡುವ ಮತ್ತು ಸ್ವಿಂಗ್​ ಬೌಲಿಂಗ್ ಮಾಡುವ ಆರ್ಷ್​ದೀಪ್ ಸಿಂಗ್ (Arshdeep Singh) ಮತ್ತು 150ಕ್ಕೂ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಉಮ್ರಾನ್​ ಮಲಿಕ್ (Umran Malik)​ ಕೂಡ ಅವಕಾಶ ಪಡೆಯುವಲ್ಲಿ ವಂಚಿತರಾಗಿದ್ದಾರೆ.

Whats_app_banner