ಕನ್ನಡ ಸುದ್ದಿ  /  ಚುನಾವಣೆಗಳು  /  Election Exit Poll: ಬಿಜೆಪಿ ತೆಕ್ಕೆಗೆ ತಿರುವನಂತಪುರ?, ಶಶಿ ತರೂರ್ ವಿರುದ್ಧ ರಾಜೀವ್ ಚಂದ್ರಶೇಖರ್ ಮೇಲುಗೈ, ಮತಗಟ್ಟೆ ಸಮೀಕ್ಷೆ ಸುಳಿವು

Election Exit poll: ಬಿಜೆಪಿ ತೆಕ್ಕೆಗೆ ತಿರುವನಂತಪುರ?, ಶಶಿ ತರೂರ್ ವಿರುದ್ಧ ರಾಜೀವ್ ಚಂದ್ರಶೇಖರ್ ಮೇಲುಗೈ, ಮತಗಟ್ಟೆ ಸಮೀಕ್ಷೆ ಸುಳಿವು

ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ಕೇರಳದ ಜಿದ್ದಾಜಿದ್ದಿನ ತಿರುವನಂತಪುರ ಕ್ಷೇತ್ರ ಈ ಬಾರಿ ಯಾರಿಗೆ? ಬಿಜೆಪಿ ಇಲ್ಲಿ ಖಾತೆ ತೆರೆಯುವ ಲಕ್ಷಣಗಳಿವೆ. ಶಶಿ ತರೂರ್ ವಿರುದ್ಧ ರಾಜೀವ್ ಚಂದ್ರಶೇಖರ್ ಮೇಲುಗೈ ಸಾಧಿಸಿದರೆ ಬಿಜೆಪಿ ತೆಕ್ಕೆಗೆ ತಿರುವನಂತಪುರ ಬೀಳಲಿದೆ. ಮತಗಟ್ಟ ಸಮೀಕ್ಷೆ ಈ ಕುರಿತು ಸುಳಿವು ನೀಡಿದ್ದು, ವಿಶ್ಲೇಷಣೆ ಇಲ್ಲಿದೆ.

ಬಿಜೆಪಿ ತೆಕ್ಕೆಗೆ ತಿರುವನಂತಪುರ?, ಶಶಿ ತರೂರ್ (ಬಲ ಚಿತ್ರ) ವಿರುದ್ಧ ರಾಜೀವ್ ಚಂದ್ರಶೇಖರ್ (ಎಡಚಿತ್ರ) ಮೇಲುಗೈ, ಮತಗಟ್ಟೆ ಸಮೀಕ್ಷೆ ಸುಳಿವು
ಬಿಜೆಪಿ ತೆಕ್ಕೆಗೆ ತಿರುವನಂತಪುರ?, ಶಶಿ ತರೂರ್ (ಬಲ ಚಿತ್ರ) ವಿರುದ್ಧ ರಾಜೀವ್ ಚಂದ್ರಶೇಖರ್ (ಎಡಚಿತ್ರ) ಮೇಲುಗೈ, ಮತಗಟ್ಟೆ ಸಮೀಕ್ಷೆ ಸುಳಿವು

ತಿರುವನಂತಪುರ: ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರ ಕಳೆದ ಚುನಾವಣೆಯಂತೆ ಈ ಸಲದ ಲೋಕಸಭಾ ಚುನಾವಣೆಯಲ್ಲೂ ಗಮನಸೆಳೆದಿದೆ. ಈ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಹಾಲಿ ಸಂಸದ ಶಶಿ ತರೂರ್ ಮೂರು ಅವಧಿಗೆ ಸಂಸದರಾಗಿ ದಾಖಲೆ ಬರೆದಿದ್ದಾರೆ. ಈ ಬಾರಿ ಅವರನ್ನು ಸೋಲಿಸಬೇಕು, ಅಲ್ಲಿ ಬಿಜೆಪಿಗೆ ಗೆಲವಿನ ದಾಖಲೆ ಬರೆಯಬೇಕು ಎಂದು ಕೇರಳದವರೇ ಆದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಕೇಂದ್ರ ಸಚಿವರೇ ತಿರುವನಂತಪುರದಲ್ಲಿ ಕಣಕ್ಕೆ ಇಳಿದಿರುವ ಕಾರಣ, ಆ ಕ್ಷೇತ್ರ ಬಹಳ ಜಿದ್ದಾಜಿದ್ದಿನ ಕ್ಷೇತ್ರವಾಗಿ ಗುರುತಿಸಲ್ಪಟ್ಟಿತ್ತು. ಶಶಿ ತರೂರ್‌ಗೆ ನಾಲ್ಕನೇ ಅವಧಿಗೆ ಗೆದ್ದು ತನ್ನ ಪ್ರಾಬಲ್ಯ ತೋರಿಸಬೇಕಾದ್ದು ಪ್ರತಿಷ್ಠೆಯ ವಿಚಾರ. ಇನ್ನು ರಾಜೀವ್ ಚಂದ್ರಶೇಖರ್ ಅವರಿಗೆ ತವರು ರಾಜ್ಯದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿ ತನ್ನ ಪ್ರಾಬಲ್ಯ ತೋರಿಸಬೇಕಾದ್ದು ಪ್ರತಿಷ್ಠೆಯ ವಿಚಾರ. ಹಾಗೆ ಲೋಕಸಭೆ ಚುನಾವಣೆಯ ಏಳೂ ಹಂತಗಳ ಮತದಾನ ಮುಗಿದು ಜೂನ್ 4 ಫಲಿತಾಂಶಕ್ಕೆ ಕಾಯುತ್ತಿರುವ ಹೊತ್ತು ಇದು. ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ.

ಎಕ್ಸಿಟ್ ಪೋಲ್ ಪ್ರಕಾರ ತಿರುವನಂತಪುರದಲ್ಲಿ ರಾಜೀವ್ ಚಂದ್ರಶೇಖರ್ ಗೆಲ್ಲುವ ಸಾಧ್ಯತೆ

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಕೇಂದ್ರ ಸಚಿವ, ತಿರುವನಂತಪುರಂನ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಹಿರಿಯ ಕಾಂಗ್ರೆಸ್ ನಾಯಕ, ಹಾಲಿ ಸಂಸದ ಶಶಿ ತರೂರ್ ವಿರುದ್ಧ ಗೆಲ್ಲುವ ಸಾಧ್ಯತೆ ಇದೆ.

ಕೇರಳದ ರಾಜಧಾನಿಯಾಗಿರುವ ತಿರುವನಂತಪುರ ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾರತದ ಪಶ್ಚಿಮ ಕರಾವಳಿಯ ಮುಖ್ಯ ಭೂಭಾಗದ ದಕ್ಷಿಣ ಭಾಗದಲ್ಲಿರುವ ತಿರುವನಂತಪುರಂ ಕೇರಳದ ಅತ್ಯಂತ ಜನನಿಬಿಡ ನಗರ ಮತ್ತು ಪ್ರಮುಖ ಮಾಹಿತಿ ತಂತ್ರಜ್ಞಾನ ಕೇಂದ್ರವೂ ಹೌದು. ಈ ಕ್ಷೇತ್ರವನ್ನು ವಿವಿಧ ಪಕ್ಷಗಳ ಪ್ರತಿನಿಧಿಗಳು ಇದುವರೆಗೆ ಪ್ರತಿನಿಧಿಸಿದ್ಧಾರೆ. ಕೇರಳದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶ ಇದಾಗಿದ್ದು, ಸಾಂಪ್ರದಾಯಿಕವಾದ ಯುಡಿಎಫ್, ಎಲ್‌ಡಿಎಫ್ ಕದನಕ್ಕೆ ನಡುವೆ ಮೂರನೇ ಪಕ್ಷವಾಗಿ ಬಿಜೆಪಿ ಅಸ್ತಿತ್ವವನ್ನು ಕಂಡುಕೊಳ್ಳಲಾರಂಭಿಸಿದೆ.

ಹಾಲಿ ಸಂಸದ ಶಶಿ ತರೂರ್‌ ಮತ್ತು ಚುನಾವಣೆ

ವಿಶ್ವಸಂಸ್ಥೆಯ ಮಾಜಿ ರಾಜತಾಂತ್ರಿಕ ಶಶಿ ತರೂರ್ ಅವರು 2009 ರಿಂದ ತಿರುವನಂತಪುರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಬಲವಾದ ಶೈಕ್ಷಣಿಕ ಹಿನ್ನೆಲೆ ಮತ್ತು ಅಂತಾರಾಷ್ಟ್ರೀಯ ಅನುಭವದ ಪರಿಣಾಮ ಸತತ ಮೂರು ಬಾರಿ ತಿರುವನಂತಪುರದಲ್ಲಿ ಗೆದ್ದಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ, ಶಶಿ ತರೂರ್ 416,131 ಮತಗಳೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಕುಮ್ಮನಂ ರಾಜಶೇಖರನ್ ಅವರು 316,142 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. 2014 ರ ಚುನಾವಣೆಯಲ್ಲಿ, ತರೂರ್ 297,806 ಮತಗಳನ್ನು ಗಳಿಸಿ ಗೆಲುವು ದಾಖಲಿಸಿದ್ದರು. ಅಂದು ಬಿಜೆಪಿ ಅಭ್ಯರ್ಥಿ ಓ ರಾಜಗೋಪಾಲ್ 282,336 ಮತಗಳನ್ನು ಮತ್ತು ಸಿಪಿಐ ಅಭ್ಯರ್ಥಿ ಬೆನೆಟ್ ಅಬ್ರಹಾಂ 248,941 ಮತಗಳನ್ನು ಪಡೆದಿದ್ದರು.

ಅದಕ್ಕೂ ಮೊದಲು, 2009 ರ ಲೋಕಸಭಾ ಚುನಾವಣೆಯಲ್ಲಿ ಶಶಿ ತರೂರ್ ಮೊದಲ ಬಾರಿಗೆ 3,26,725 ಮತಗಳನ್ನು ಗಳಿಸಿ ಗೆಲುವು ಕಂಡಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿಯಾಗಿ ಸಿಪಿಎಂ ಅಭ್ಯರ್ಥಿ ಪಿ ರಾಮಚಂದ್ರನ್ ನಾಯರ್ 2,26,727 ಮತಗಳನ್ನು ಪಡೆದರು.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು