Darshan on film Career: ಪಾಲಿಶ್ ಅಕ್ಕಿ ರುಚಿ ಕಡಿಮೆ, ಅನ್ ಪಾಲಿಶ್ ಅಕ್ಕಿ ರುಚಿ ಹೆಚ್ಚು..ನಾನು ಹೇಗಿರಬೇಕು ನೀವೇ ಯೋಚಿಸಿ: ದರ್ಶನ್
ನಾನು ಎಷ್ಟೋ ಹಿಟ್ ಚಿತ್ರಗಳನ್ನು ಕೊಟ್ಟಿದ್ದೇನೆ, ಎಷ್ಟೋ ಫ್ಲಾಪ್ ಹಾಗೂ ಡಬ್ಬಾ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್ ಮಾರ್ಕ್ ಇರುವವರು ಯಾರೂ ಇಲ್ಲ, ನಾನೇ ಹೇಳುತ್ತಿದ್ದೇನೆ, ಇದು ನನ್ನ ಬ್ಯಾಡ್ ಲಕ್ ಏನೋ ಗೊತ್ತಿಲ್ಲ.
ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಇನ್ನು ವಾರವಷ್ಟೇ ಬಾಕಿ ಉಳಿದಿದೆ. ಡಿ ಬಾಸ್ ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದರ್ಶನ್ ಹಾಗೂ ಚಿತ್ರತಂಡ ಬಹಳ ದಿನಗಳ ಹಿಂದಿನಿಂದಲೇ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಈ ನಡುವೆ ದರ್ಶನ್, ತಮ್ಮ ಅಭಿಮಾನಿಗಳಿಗೆ ಮೈಸೂರಿನ ಫಾರ್ಮ್ ಹೌಸ್ ದರ್ಶನ ಮಾಡಿಸಿದ್ದಾರೆ.
ಸಂಕ್ರಾಂತಿಯಂದು ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲೇ ಉಳಿದುಕೊಂಡಿದ್ದ ದರ್ಶನ್, ಅಲ್ಲಿ ತಮ್ಮ ಸ್ನೇಹಿತರು, ಫಾರ್ಮ್ ಹೌಸ್ ಕೆಲಸಗಾರರೊಂದಿಗೆ ಹಬ್ಬ ಆಚರಿಸಿದ್ದಾರೆ. ಜಾನುವಾರುಗಳನ್ನು ತೊಳೆದು ಅವುಗಳಿಗೆ ಮೇವು ನೀಡಿ, ಹಸುಗಳಿಗೆ ಕಿಚ್ಚು ಹಾಯಿಸಿದ್ದಾರೆ. ಇದೇ ವೇಳೆ ಅವರು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಇಂಟರ್‌ವ್ಯೂ ನೀಡಿದ್ದಾರೆ. ಈ ವಿಡಿಯೋ ಈಗ ರಿವೀಲ್ ಆಗಿದೆ. ದರ್ಶನ್, ಬೆಳಗ್ಗೆ ಏಳುತ್ತಿದ್ದಂತೆ, ಫ್ರೆಷ್ ಆಗದೇ, ಉಟ್ಟ ಬಟ್ಟೆಯಲ್ಲೇ ನಿರೂಪಕನೊಂದಿಗೆ ಮಾತನಾಡಿ ಗಮನ ಸೆಳೆದಿದ್ದಾರೆ. ದರ್ಶನ್ ಅವರ ಸರಳತೆ ಅಭಿಮಾನಿಗಳನ್ನು ಮತ್ತಷ್ಟು ಸೆಳೆದಿದೆ. ನೀವು ಇದೇ ಕಾರಣಕ್ಕೆ ನಮಗೆ ಇಷ್ಟವಾಗೋದು ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಫಾರ್ಮ್ ಹೌಸ್‌ನಲ್ಲಿರುವ ಪ್ರಾಣಿ, ಪಕ್ಷಿಗಳನ್ನು ನೋಡಿ ಎಲ್ಲರೂ ಥ್ರಿಲ್ ಆಗಿದ್ದಾರೆ.
ಇದೇ ಸಮಯದಲ್ಲಿ ದರ್ಶನ್ ತಮ್ಮ ಸಿನಿಕರಿಯರ್ ಬಗ್ಗೆ ಕೂಡಾ ಮಾತನಾಡಿದ್ದಾರೆ. ''ನಾನು ಎಷ್ಟೋ ಹಿಟ್ ಚಿತ್ರಗಳನ್ನು ಕೊಟ್ಟಿದ್ದೇನೆ, ಎಷ್ಟೋ ಫ್ಲಾಪ್ ಹಾಗೂ ಡಬ್ಬಾ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್ ಮಾರ್ಕ್ ಇರುವವರು ಯಾರೂ ಇಲ್ಲ, ನಾನೇ ಹೇಳುತ್ತಿದ್ದೇನೆ, ಇದು ನನ್ನ ಬ್ಯಾಡ್ ಲಕ್ ಏನೋ ಗೊತ್ತಿಲ್ಲ. ಜನರು ನನ್ನನ್ನು ಹೇಗೆ ಇಷ್ಟಪಡ್ತಾರೋ ನಾನು ಅದೇ ರೀತಿ ಇರಲು ಇಷ್ಟಪಡುತ್ತೇನೆ. ಸೆಲೆಬ್ರಿಟಿಗಳು (ಅಭಿಮಾನಿಗಳು) ಹಾಗೂ ನನ್ನ ನಡುವೆ ಫಿಲ್ಟರ್ ಇಲ್ಲ. ಈಗಲೂ ನೋಡಿ ನಾನು ಸ್ನಾನ ಮಾಡಿಲ್ಲ, ಬ್ರೆಷ್ ಕೂಡಾ ಮಾಡಿಲ್ಲ, ಹೇಗೆ ಇರುತ್ತೇನೋ ಹಾಗೇ ಇಂಟರ್‌ವ್ಯೂ ಕೊಡುತ್ತಿದ್ದೇನೆ. ನಿಮಗೆ ಪಾಲಿಶ್ ಆಗಿರಬೇಕಾ? ಅನ್ ಪಾಲಿಶ್ ಆಗಿರಬೇಕಾ? ಪಾಲಿಶ್ ರೈಸ್‌ನಲ್ಲಿ ಟೇಸ್ಟ್ ಕಡಿಮೆ, ಅನ್ ಪಾಲಿಶ್ ರೈಸ್‌ನಲ್ಲೇ ರುಚಿ ಹೆಚ್ಚು, ನೀವೇ ಯೋಚಿಸಿ'' ಎಂದ್ ದರ್ಶನ್ ನಗುತ್ತಾ ಹೇಳಿದ್ದಾರೆ.
ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ನಿಮ್ಮ ಸರಳತೆಗೆ ನಾನು ನಿಮ್ಮ ಅಭಿಮಾನಿಯಾದೆ ಎಂದು ಒಬ್ಬರು ಅಭಿಮಾನಿ ಕಮೆಂಟ್ ಮಾಡಿದರೆ, ನೀವು ನಿಜವಾದ ಮಣ್ಣಿನ ಮಗ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್‌ಗೆ ಆಳಾಗಿ ದುಡಿಯೋಕೂ ಗೊತ್ತು ಅರಸನ ರೀತಿ ಮೆರೆಯಲು ಕೂಡಾ ಗೊತ್ತು ಎಂದು ಮತ್ತೊಬ್ಬ ಫ್ಯಾನ್ ಕಮೆಂಟ್ ಮಾಡಿದ್ದಾರೆ.
ಹೊಸಪೇಟೆ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ದರ್ಶನ್
ದರ್ಶನ್, ಕೆಲವು ದಿನಗಳಿಂದ 'ಕ್ರಾಂತಿ' ಸಿನಿಮಾ ವಿಚಾರವಾಗಿ ಇಂಟರ್‌ವ್ಯೂ ಕೊಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೊಸಪೇಟೆ ಘಟನೆ ಬಗ್ಗೆ ಬೇಸರ ಹಂಚಿಕೊಂಡಿದ್ದರು. ''ನಾನು ಹೊರಗೊಂದು, ಒಳಗೊಂದು ಮಾತನಾಡುವುದಿಲ್ಲ. ಮನಸ್ಸಿನಲ್ಲಿರುವ ಮಾತುಗಳನ್ನೇ ನಾನು ಆಡುವುದು. ಹಾಗೇ ಚಪ್ಪಲಿಯಲ್ಲಿ ಹೊಡೆಸಿಕೊಳ್ಳುವಂತ ಕೆಲಸ ಏನು ಮಾಡಿದ್ದೀನಿ ಎಂದು ನನಗೆ ಅರ್ಥ ಆಗಿಲ್ಲ. ಅದೇನೇ ಇರಲಿ, ಹಾರ ಹಾಕಿಸಿಕೊಳ್ಳುವಾಗ ನಾನು ಎಷ್ಟು ಖುಷಿಯಿಂದ ಇರುತ್ತೇನೋ ಈ ಘಟನೆಯನ್ನು ಕೂಡಾ ನಾನು ಸ್ವೀಕರಿಸುತ್ತೇನೆ'' ಎಂದಿದ್ದರು.